ಕೊಂಕಣ ರೈಲ್ವೆ ಮಾದರಿಯಲ್ಲಿ ಯುಕೆಪಿ ಕಾಮಗಾರಿ

7

ಕೊಂಕಣ ರೈಲ್ವೆ ಮಾದರಿಯಲ್ಲಿ ಯುಕೆಪಿ ಕಾಮಗಾರಿ

Published:
Updated:

ವಿಜಾಪುರ: `ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ನೀರಾವರಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಇನ್ನು ಅಗತ್ಯ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ~ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ದೂರಿದರು.`ಜನ-ಜನಪ್ರತಿನಿಧಿಗಳು-ಮಠಾಧೀಶರು ಎಲ್ಲರೂ ಸೇರಿ ಒಟ್ಟಾಗಿ ಒತ್ತಡ ತಂದರೆ ಸರ್ಕಾರ ಮಣಿಯುತ್ತದೆ. ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದರೂ ಐದು ವರ್ಷಗಳ ಕಾಲಮಿತಿಯಲ್ಲಿ ಈ ಯೋಜನೆ ಮುಗಿಯುವುದಿಲ್ಲ~ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಈ ಯೋಜನೆಯಲ್ಲಿ ಬರುವ ಎಲ್ಲ ಕಾಮಗಾರಿಗಳ ಸಮೀಕ್ಷೆ ನಡೆಸಿ, ವಿಸ್ತೃತ ಯೋಜನಾ ವರದಿ ತಯಾರಿಸಿಟ್ಟುಕೊಳ್ಳುವಂತೆ ನ್ಯಾಯಮಂಡಳಿ ತೀರ್ಪು ಬರುವ ಮುನ್ನವೇ ನಾನು ಸಲಹೆ ನೀಡಿದ್ದೆ. ಆದರೆ, ಅದಕ್ಕೆ ಯಾರೂ ಸ್ಪಂದಿಸಲಿಲ್ಲ. ಈಗ ವಿಸ್ತೃತ ಯೋಜನಾ ವರದಿಯೇ ಸಿದ್ಧವಾಗಿಲ್ಲ. ಇನ್ನು ಕಾಮಗಾರಿಗಳ ಅನುಷ್ಠಾನ ಎಂದೋ?~ ಎಂದು ಪ್ರಶ್ನಿಸಿದರು.`ನಮ್ಮ ನೀರಾವರಿ ಕಾಮಗಾರಿಗೆ ಕೊಂಕಣ ರೈಲ್ವೆ ಯೋಜನೆ ಮಾದರಿಯಾಗಬೇಕು. ಯೋಜನೆಗೆ ಬೇಕಿರುವ ಹಣವನ್ನು ಬಾಂಡ್ ಮೂಲಕ ಆರಂಭದ ವರ್ಷದಲ್ಲಿಯೇ ಸಂಗ್ರಹಿಸಿ, ಐದು ವರ್ಷದಲ್ಲಿ ಯೋಜನೆ ಅನುಷ್ಠಾನಗೊಳಿಸಿದ ಆಗಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರಂತೆ ರಾಜ್ಯ ಸರ್ಕಾರ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು~ ಎಂದರು.`ಪುಡಿಗಾಸು ನೀಡಿ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಎಲ್ಲವನ್ನೂ ಅರ್ಧಕ್ಕೆ ನಿಲ್ಲಿಸಿಬಿಡುವುದು ಬೇಡ. ಮೈಸೂರು ಮಹಾರಾಜರ ಕಾಲದಿಂದಲೂ ಕಾವೇರಿ ಕಣಿವೆ ನೀರಾವರಿಗೆ ಆದ್ಯತೆ ದೊರೆಯುತ್ತಲೇ ಇದೆ. ರಾಜ್ಯ ಸರ್ಕಾರಕ್ಕೆ ಈಗ ಕೃಷ್ಣಾ ಕಣಿವೆ ಪ್ರದೇಶದ ನೀರಾವರಿ ಆದ್ಯತೆಯಾಗಬೇಕು. ಎಲ್ಲ ಹಣವನ್ನೂ ಈ ಭಾಗದ ಯೋಜನೆಗಳಿಗೇ ಮೀಸಲಿಡಬೇಕು. ಟರ್ನ ಕೀ ಆಧಾರದ ಮೇಲೆ ಷರತ್ತು ಬದ್ಧ ಗುತ್ತಿಗೆ ನೀಡಿ ಯುದ್ದೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.  ಬಾಂಡ್ ಸೇರಿದಂತೆ ಇತರ ಮೂಲಗಳಿಂದ ಹಣ ಹೊಂದಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.`ಎರಡು ವರ್ಷದಲ್ಲಿ ಕರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಐದು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. 100 ಕೋಟಿ ಖರ್ಚಾದರೂ ಇನ್ನೂ ಒಂದೇ ಒಂದು ಕೆರೆ ತುಂಬಿಲ್ಲ. ಕುಡಿಯಲೂ ನೀರು ಬಂದಿಲ್ಲ~ ಎಂದು ಟೀಕಿಸಿದರು.

`ಕುಡಿಯಲು ನೀರು ಪೂರೈಸುವ ಯೋಜನೆಗಳಿಗಿಂತಲೂ ಕೆರೆಗೆ ನೀರು ತುಂಬಿಸುವ ಯೋಜನೆ ದುಬಾರಿ.ಮುಳವಾಡ, ಗುತ್ತಿಬಸವಣ್ಣ, ಚಿಮ್ಮಲಗಿ ಮತ್ತಿತರ ಮೂಲ ಯೋಜನೆಗಳನ್ನು ಆದ್ಯತೆಯ ಮೇಲೆ ಮೊದಲು ಅನುಷ್ಠಾನಗೊಳಿಸಬೇಕು. ಈ ಯೋಜನೆಯ ವ್ಯಾಪ್ತಿಯಲ್ಲಿರುವ    ಕೆರೆಗಳಿಗೆ ಈ ಕಾಲುವೆಗಳಿಂದ ನೀರು ತುಂಬಿಸಬೇಕು. ಉಳಿದ ಕೆರೆಗಳಿಗೆ ನೀರು ತುಂಬಿಸಲು ಪ್ರತ್ಯೇಕ ಯೋಜನೆ ರೂಪಿಸಬೇಕು ಎಂದು ನಾನು ಹೇಳಿದ್ದೆ. ಯಾವುದೇ ಕಾರಣಕ್ಕೂ ನೀರು-ನೀರಾವರಿ ತರುವ ಮೂಲ ಯೋಜನೆಗಳು ನೆನೆಗುದಿಗೆ ಬೀಳಬಾರದು ಎಂಬುದು ನನ್ನ ಕಳಕಳಿಯಾಗಿತ್ತು. ಆದರೆ, ನನ್ನನ್ನು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿರೋಧಿ ಎಂಬಂತೆ ಬಿಂಬಿಸಲಾಯಿತು~ ಎಂದು ವಿಷಾದಿಸಿದರು.`ಏತ ನೀರಾವರಿಗಳೆಲ್ಲ ವಿದ್ಯುತ್ ಸಮಸ್ಯೆ ಎದುರಿಸುತ್ತಿವೆ. ಅದೇ ಕಾರಣಕ್ಕಾಗಿ ನೂರಾರು ಕೋಟಿ ಖರ್ಚಾದರೂ ಕೆಲವೊಂದು ಯೋಜನೆಗಳು ವಿಫಲಗೊಂಡಿವೆ~ ಎಂದರು.`ಬಿಜೆಪಿ ಸರ್ಕಾರ ರಾಜ್ಯದಲ್ಲಿಯ 11 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಲೀಜ್ ನೀಡಿದೆ. ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರವೂ ನಡೆದಿದೆ. ಇದು ಸಹಕಾರ ರಂಗದಲ್ಲಿಯೇ ಸ್ಥಾಪನೆಯಾಗಬೇಕು ಎಂಬುದು ನಮ್ಮ ಬೇಡಿಕೆ~ ಎಂದು ಹೇಳಿದರು.`ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ ನೀಡಿದೆ. ಉತ್ತರ ಕರ್ನಾಟಕದ ರೈತರ ಬಗ್ಗೆ ಮಲತಾಯಿ ಧೋರಣೆ ಬೇಡ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ರೈತರನ್ನು ರಕ್ಷಿಸುವ ಕೆಲಸ ಮಾಡಬೇಕು~ ಎಂದು ಮನವಿ ಮಾಡಿದರು.ರಾಜ್ಯದಲ್ಲಿ ಕೃಷಿ ಬಜೆಟ್‌ನ ಉದ್ದೇಶವೇ ಈಡೇರಿಲ್ಲ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಉತ್ತೇಜವನೇ ದೊರೆತಿಲ್ಲ. ಸಹಕಾರಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ 2100 ರೂಪಾಯಿ ದರ ನೀಡುತ್ತಿದ್ದರೆ, ಖಾಸಗಿ ಕಾರ್ಖಾನೆಗಳು 1800 ರೂಪಾಯಿ ದರ ನೀಡುತ್ತಿವೆ. ಇದೆಲ್ಲ ಗೊತ್ತಿದ್ದಿರೂ ಸರ್ಕಾರ ಮೌನ ವಹಿಸಿದೆ.ಉತ್ತರ ಪ್ರದೇಶದ ಮಾದರಿಯಲ್ಲಿ ಸಕ್ಕರೆ ಇಳುವರಿ ಆಧಾರದ ಮೇಲೆ ಕಬ್ಬಿಗೆ ಬೆಲೆ ನೀಡಬೇಕು ಎಂದು ಶಿವಾನಂದ ಪಾಟೀಲ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry