ಭಾನುವಾರ, ನವೆಂಬರ್ 17, 2019
28 °C

ಕೊಂಗನಾಡು ಮಾರಿ ಹಬ್ಬ

Published:
Updated:

ಗಡಿನಾಡು ಚಾಮರಾಜನಗರ ತಾಲ್ಲೂಕಿನ ಕೆ.ಗುಡಿ-ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ, ಅಂದರೆ ಚಾಮರಾಜನಗರದಿಂದ ಕೇವಲ 10 ಕಿ.ಮೀ. ದೂರದಲ್ಲಿ ಇರುವ ಗ್ರಾಮ ನಾಗವಳ್ಳಿ.  ಈ ಗ್ರಾಮದ ವಿಶೇಷ ಕೊಂಗನಾಡು ಮಾರಮ್ಮನ ಹಬ್ಬ.ಹಬ್ಬ ಒಂದು ವಾರ ಇದೆ ಎನ್ನುವಾಗಲೇ ಯಾರು ಹಬ್ಬದ ಉಸ್ತುವಾರಿ ವಹಿಸಿದ್ದಾರೋ ಆ ಜನಾಂಗದವರು ಮನೆಗೊಬ್ಬರಂತೆ ಕಾಡಿಗೆ ತೆರಳಿ ಸುಮಾರು 100 ರಿಂದ 120 ಅಡಿಗಳಷ್ಟು ಎತ್ತರವಿರುವ 4 ಬಿದಿರು ತಟ್ಟೆಗಳನ್ನು ನಾಲ್ಕು ಜನಾಂಗಕ್ಕೂ ಸೇರಿ ಕಡಿದು ತರುತ್ತಾರೆ. ಹಾಗೆಯೇ ಹಬ್ಬ ಐದು ದಿನಗಳು ಮಾತ್ರ ಇದೆ ಎನ್ನುವಾಗಲೇ ಬೆಳಿಗ್ಗೆಯೇ ಕಾಡನ್ನು ಬಿಟ್ಟು ಸಾಯಂಕಾಲದ ವೇಳೆಗೆ ಊರಿನ ಕೆರೆ ಆವರಣಕ್ಕೆ ತಂದು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ವಾದ್ಯಮೇಳಗಳೊಂದಿಗೆ ದೇವಸ್ಥಾನದ ಬಳಿಗೆ ತಂದು ಆಯಾಯ ಜನಾಂಗಕ್ಕೆ ಸೇರಿದ ಮಾರಿತಟ್ಟೆ (ಬಿದಿರು ಬೊಂಬು)ಯನ್ನು ದೇವಸ್ಥಾನದ ಮುಂದೆ ಗುರುತು ಮಾಡಿರುವ ನಾಲ್ಕು ಮೂಲೆಯಲ್ಲಿಟ್ಟು ಇಲ್ಲಿಯೂ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ.ಈ ಹಬ್ಬದಲ್ಲಿ ದಲಿತರ ಪಾತ್ರ ವಿಶೇಷ. ಇವರು ಕಾಡಿಗೆ ತೆರಳಿ ಮಾರಿತಟ್ಟೆಯನ್ನು ತರುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆದರೆ ತಂದಂಥ ಮಾರಿತಟ್ಟೆಯಲ್ಲಿ ಒಂದನ್ನು ದಲಿತ ಜನಾಂಗಕ್ಕೆ ಮೀಸಲಿಟ್ಟಿರುತ್ತಾರೆ. ಈ ಸಂದರ್ಭದಲ್ಲಿ ನಾಲ್ಕು ಜನಾಂಗದವರಿಗೂ ಮಾರಿತಟ್ಟೆಯನ್ನು ಎತ್ತಿನಿಲ್ಲಿಸುವಲ್ಲಿ ಬಹಳ ಪೈಪೋಟಿಯೇ ನಡೆಯುತ್ತದೆ. ನಾಲ್ಕು ಜನಾಂಗದ ಮಾರಿತಟ್ಟೆಗಳನ್ನು ಸೇರಿಸಿ ಹಗ್ಗದಿಂದ ಕಟ್ಟಿ ಅದರ ಅಡಿಯಲ್ಲಿ ಬೆಂಕಿಯನ್ನು ಹಾಕಿ ತೂಗು ಹಾಕಿದ ಹಗ್ಗದಿಂದ ಉಯ್ಯಾಲೆ ಆಡುವುದು ಈ ಹಬ್ಬದ ವಿಶಿಷ್ಟ ಸಂಪ್ರದಾಯ.ಉಯ್ಯಾಲೆ ಆಟದ ಆಚರಣೆ ನಂತರ ಮೂರು ದಿನಗಳ ಬಳಿಕ ದೇವಸ್ಥಾನದ ಬಳಿಗೆ ದೇವರುಗಳ ಮೆರವಣಿಗೆ ಉತ್ಸವ, ತಂಪು ಸೇವೆ, ಮಡಿ ಸೇವೆ, ತಂಬಿಟ್ಟಿನ ಸೇವೆ ನಡೆಯುತ್ತದೆ. ತದನಂತರ ಮುಂಜಾನೆ 4 ಗಂಟೆಗೆ 101 ಜನರ ತಂಪಿನ ಮೆರವಣಿಗೆ, ವಿವಿಧ ಜಾನಪದ ಕಲಾ ಉತ್ಸವದೊಡನೆ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿಗಳನ್ನು ಇಟ್ಟು ವಾಪಸ್ಸು ಬರುವರು. ಇದಾದ ನಂತರ ರಂಗದ ಕಲ್ಲಿನ ಮುಂಭಾಗ ದೇವರಿಗೆ ಹರಕೆಗೆ ಬಿಟ್ಟಂತಹ ಕುರಿ, ಕೋಳಿಗಳನ್ನು ಬಲಿ ಕೊಡುವ ಕಾರ್ಯ ನಡೆಯುತ್ತದೆ.ಈ ಎಲ್ಲಾ ಕಾರ್ಯಗಳು ನಡೆದ ನಂತರ ಸಂಜೆ ನಾಲ್ಕು ಗಂಟೆ ವೇಳೆಗೆ ಇಲ್ಲಿ ಚಿಕ್ಕ ಜಾತ್ರೆಯೂ ನಡೆಯುತ್ತದೆ. ಈ ಸಂದರ್ಭದಲ್ಲಿ ಎತ್ತುಗಳು ಹೆದರದೇ ಇರಲಿ ಎಂದು ಒಂದು ಬಿದಿರುದೊಣ್ಣೆಗೆ ಆಡುಮರಿ ಚರ್ಮವನ್ನು ಕಟ್ಟಿಕೊಂಡು ಎತ್ತುಗಳ ಆಟವನ್ನು ಆಡಿಸಲಾಗುತ್ತದೆ.ಹಬ್ಬ 15-20 ದಿನಗಳು ಬಾಕಿ ಇದ್ದಾಗಲೇ ಮಕ್ಕಳಿಗೆ ಗೊಂದಟ್ಟು ಎನ್ನುವ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದರೆ ಇನ್ನೂ ಜಾಸ್ತಿ ಆಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಆದರೆ ಈ ಎಲ್ಲದಕ್ಕೂ ಪರಿಹಾರವೆಂದರೆ ಗಂಧವನ್ನು ತೇಯ್ದು ಹಚ್ಚಿಕೊಂಡು ಕೊಂಗನಾಡು ಮಾರಮ್ಮ ದೇವಸ್ಥಾನಕ್ಕೆ ತೆರಳಿ ಎಳನೀರು ಪೂಜೆ ಹಾಗೂ ದೇವಸ್ಥಾನದ ಮುಂಭಾಗದ ದೂಳನ್ನು ಮೈಗೆ ಸವರಿಕೊಂಡು ಅದರ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಮಾಡುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಪ್ರತೀತಿ ಇಲ್ಲಿ ಉಂಟು. ಈ ಬಾರಿಯ ಉತ್ಸವ ಇದೇ 3ರಂದು ಮುಕ್ತಾಯಗೊಂಡಿದೆ.

ಪ್ರತಿಕ್ರಿಯಿಸಿ (+)