ಕೊಂಚಾವರಂ ತಾಂಡಾಕ್ಕೆ ಪ್ಯಾಕೇಜ್

7

ಕೊಂಚಾವರಂ ತಾಂಡಾಕ್ಕೆ ಪ್ಯಾಕೇಜ್

Published:
Updated:
ಕೊಂಚಾವರಂ ತಾಂಡಾಕ್ಕೆ ಪ್ಯಾಕೇಜ್

ಗುಲ್ಬರ್ಗ: ಚಿಂಚೋಳಿ ತಾಲ್ಲೂಕಿನ ಕೊಂಚಾವರಂ ತಾಂಡಾಕ್ಕೆ ಇತ್ತೀಚಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಲಾಗಿದೆ. ಆ ತಾಂಡಾಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೆ.ಡಿ.ಪಿ. 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಂಚಾವರಂ ತಾಂಡಾದಲ್ಲಿ ಶೈಕ್ಷಣಿಕ ಮಟ್ಟ ಕಡಿಮೆ ಇದೆ. ಸಮಾಜ ಕಲ್ಯಾಣ ಇಲಾಖೆಯಿಂದ ತಾಂಡಾದಲ್ಲಿ ಶಾಲೆಯೊಂದನ್ನು ತೆರೆಯಬೇಕಿದೆ. ಅಲ್ಲಿನ ಸ್ಥಿತಿಗತಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ನೀಡುವಂತೆ ಕೋರಲಾಗುವುದು ಎಂದು ಹೇಳಿದರು.`ಗಂಗಾಕಲ್ಯಾಣ~ ಯೋಜನೆಯಡಿ ಕೊಂಚಾವರಂ ತಾಂಡಾದಲ್ಲಿ ಕೊಳವೆಬಾವಿ ಕೊರೆಸಲು, ತಾಂಡಾದಲ್ಲಿ ವಾಸಿಸುವ ಜನರ ಪುನರುಜ್ಜೀವನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಸೂಚಿಸಿದರು.ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಸಂಬಂಧಿಸಿದ ಕಾಮಗಾರಿಗಳನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಇದೇ 18ರಂದು ನಗರದಲ್ಲಿ ನಡೆಯುವ ಸಚಿವ ಸಂಪುಟದ ಅನುಮೋದನೆಗೆ ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಪ್ರಸ್ತಾವ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಕುರಿಕೋಟಾ ಸೇತುವೆ ದುರಸ್ತಿ ಕಾಮಗಾರಿ ರೂ. 6.32 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದ್ದು, ಈ ಕುರಿತಂತೆ ಅಕ್ಟೋಬರ್ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಮುಂದಿನ 30 ದಿನಗಳಲ್ಲಿ ಸೇತುವೆ ದುರಸ್ತಿ ಮಾಡಲಾಗುವುದು. ಲಘು ವಾಹನ ಸಂಚಾರ ಆರಂಭವಾಗುವುದು ಎಂದು ತಿಳಿಸಿದ ಸಚಿವ ಬೆಳಮಗಿ, ಹೊಸ ಸೇತುವೆ ನಿರ್ಮಾಣ ಕುರಿತಂತೆ ಇದ್ದ ವಿವಾದ ಅಂತ್ಯವಾಗಿದೆ.ನ್ಯಾಯಾಲಯದಿಂದ ತಡೆಯಾಜ್ಞೆ ತೆರವಾಗಿದೆ. ಹೊಸ ಸೇತುವೆ ನಿರ್ಮಾಣ ಸಹ ಕೈಗೊಳ್ಳಲಾಗುವುದೆಂಬ ಭರವಸೆ ನೀಡಿದರು.ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಮಾತನಾಡಿ, ಜಿಲ್ಲೆಯ 73 ಕಾಮಗಾರಿಗಳ ರೂ. 1,200 ಕೋಟಿ ಪ್ಯಾಕೇಜ್ ಅನ್ನು ನೀಡುವ ಕುರಿತಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಪಾಟೀಲ್, ಉಪಾಧ್ಯಕ್ಷೆ ಪಾರ್ವತಿ ಶಂಕರ ಚವ್ಹಾಣ, ಜಿಪಂ ಸಿಇಓ ಪಲ್ಲವಿ ಅಕುರಾತಿ, ಶಾಸಕರಾದ ಖಮರುಲ್ ಇಸ್ಲಾಂ, ವಾಲ್ಮೀಕ ನಾಯಕ, ಅಲ್ಲಮಪ್ರಭು ಪಾಟೀಲ್, ಕೆ.ಬಿ.ಶಾಣಪ್ಪ, ಸುಭಾಷ ಗುತ್ತೇದಾರ ಮತ್ತು ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry