ಸೋಮವಾರ, ಏಪ್ರಿಲ್ 12, 2021
23 °C

ಕೊಂಚಾವರಂ ತಾಂಡಾ: ಮಕ್ಕಳ ಮಾರಾಟಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಹುಟ್ಟಿದ ಹೆಣ್ಣು ಶಿಶುಗಳನ್ನು ಸಾಕಲಾಗದೇ ಬಡತನದಿಂದ ಬಸವಳಿದ ಲಂಬಾಣಿಗರು ತಮ್ಮ ಕರುಳು ಬಳ್ಳಿಗಳನ್ನೇ ಮಾರಾಟ ಮಾಡಲು ಮುಂದಾದಾಗ ಬುಧವಾರ ತಾಲ್ಲೂಕು ಆಡಳಿತ ಮಧ್ಯಪ್ರವೇಶ ಮಾಡಿ ಶಿಶುಗಳ ಮಾರಾಟ ತಡೆಯುವಲ್ಲಿ ಯಶಸ್ವಿಯಾಗಿದೆ.ತಾಲ್ಲೂಕಿನ ಕೊಂಚಾವರಂ ಸುತ್ತಮುತ್ತ ಬರುವ ಒಂಟಿಚಿಂತಾ, ಒಂಟಿಗುಡ್ಸಿ ಹಾಗೂ ಭಿಕ್ಕು ನಾಯಕ ತಾಂಡಾದಲ್ಲಿ ಕ್ರಮವಾಗಿ ಕವಿತಾ ಒಂಟಿಚಿಂತಾ, ಕವಿತಾ ತಾರಾಸಿಂಗ್ ಹಾಗೂ ಸೋನಾಬಾಯಿ ವಿನೋದ ಅವರು ತಮ್ಮ ಕಂದಮ್ಮಗಳನ್ನು ಮಾರಾಟ ಮಾಡಲು ಮುಂದಾಗಿದ್ದರು.ಈ ಕುರಿತು ಮಕ್ಕಳನ್ನು ಮಾರುವುದಕ್ಕಾಗಿ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ಮಾಹಿತಿ ತಿಳಿದ ತಹಶೀಲ್ದಾರ ಡಾ. ರಮೇಶ ಬಾಬು ಹಾಲು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ರಫಿ ಶಕಾಲೆ, ಕೊಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹಮದ್ ಗಫಾರ್, ಶಿವಶರಣಪ್ಪ ಕಾಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ಕೆ. ಬಸವರಾಜ, ಸಬ್ ಇನ್ಸ್‌ಪೆಕ್ಟರ್ ಅಡಿವೆಪ್ಪ ಬನ್ನಿ ಹಾಗೂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಮೇಲಿನ ತಾಂಡಾಗಳಿಗೆ ತೆರಳಿ ಆ ಕುಟುಂಬದವರನ್ನು ತಿಳಿಹೇಳಿ ಮಾರಾಟ ತಡೆದಿದ್ದಾರೆ.ಕವಿತಾ ಒಂಟಿಗುಡ್ಸಿ(ಪತಿಯ ಹೆಸರು ಗೊತ್ತಾಗಿಲ್ಲ), ಕವಿತಾ ತಾರಾಸಿಂಗ್ ಮತ್ತು ಸೋನಾಬಾಯಿ ವಿನೋದ್ ಅವರಿಗೆ ಹೆಣ್ಣು ಮಗು ಹುಟ್ಟಿದ್ದರಿಂದ ನೊಂದ ಅವರು ಮಾರಾಟಕ್ಕೆ ಮುಂದಾಗಿದ್ದರು. ಇದಕ್ಕಾಗಿ ಅವರು ಖರೀದಿದಾರರೊಂದಿಗೆ ವ್ಯವಹಾರ ಕುದುರಿಸಿದ್ದರು ಎಂದು ತಿಳಿದು ಬಂದಿದೆ. ತಾಲ್ಲೂಕು ಆಡಳಿತ ಆ ದಂಪತಿಗಳ ಮನವೊಲಿಸಿ ಶಿಶುಗಳ ಮಾರಾಟ ತಡೆದು ಶಿಶುಗಳನ್ನು ಮರಳಿ ಮಾತೆಯರ ಮಡಿಲಿಗೆ ಒಪ್ಪಿಸಿರುವುದು ಶ್ಲಾಘನೀಯ.ಆದರೆ ಸೋನಾಬಾಯಿ ವಿನೋದ ದಂಪತಿಯ ಮಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಪಾಲನ ಕೇಂದ್ರಕ್ಕೆ ಸೇರಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಇದಕ್ಕೆ ದಂಪತಿಗಳ ಬಳಿ ಒಮ್ಮತವಿಲ್ಲ ಹೀಗಾಗಿ ಶುಕ್ರವಾರ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಸಧ್ಯ ತಾಲ್ಲೂಕು ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇರಿಸಿ ಮಾರಾಟ ತಡೆದಿದ್ದು ನೋಡಿದರೆ ಇಲ್ಲಿನ ಲಂಬಾಣಿ ತಾಂಡಾಗಳಲ್ಲಿ ಮಕ್ಕಳ ಮಾರಾಟ ಈಗಲೂ ಜೀವಂತವಾಗಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಇಲ್ಲಿನ ತಾಂಡಾಗಳಲ್ಲಿ ಬಡತನದ ಕಾರಣದಿಂದಲೇ ದಶಕದ ಹಿಂದೆ ನಡೆದ ಹೆಣ್ಣು ಶಿಶುಗಳ ಮಾರಾಟ ಮತ್ತೆ ಮರುಕಳಿಸುವ ಆತಂಕವಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.