ಕೊಂಚ ಸಮಸ್ಯೆಯ ನಡುವೆ ಅರಳಿತು ಭಾವ ಪ್ರಪಂಚ

7

ಕೊಂಚ ಸಮಸ್ಯೆಯ ನಡುವೆ ಅರಳಿತು ಭಾವ ಪ್ರಪಂಚ

Published:
Updated:

`ಹೌದು ಇತರರಿಗಿಂತ ನಮ್ಮ ಮಕ್ಕಳು ಸ್ವಲ್ಪ ಭಿನ್ನವಾಗಿರ‌್ತಾರೆ. ಸೆರೆಬ್ರಲ್ ಪಾಲ್ಸಿ ಅನ್ನೋದು ಕಾಯಿಲೆ ಅಲ್ಲ ಅಂತ ನಾವು ಅರ್ಥ ಮಾಡ್ಕೊಂಡಿದ್ದೇವೆ. ಆದರೆ ಜನ ಯಾಕೆ ನಮ್ ಪಾಡಿಗೆ ನಮ್ಮನ್ನು ಬಿಡೋದಿಲ್ಲ? ಅಯ್ಯೋ ನಿಮ್ಮ ಮಗು ಹೀಗೇನಾ? ಅಂತ ಕೇಳ್ತಾರೆ ನೋಡಿ.ಅದೇ ಒಂದು ರೋಗ. ನಮಗಾಗಲಿ, ನಮ್ ಮಗುವಿಗಾಗಲಿ ಯಾರೂ ಅಯ್ಯೋ ಎಂದು ಅನುಕಂಪ ತೋರಿಸೋದು ಬೇಕಾಗಿಲ್ಲ. ಯಾವಾಗ ಬುದ್ಧಿ ಕಲೀತಾರೋ~ ಅಂತಂದರು ಶ್ರೇಯಾ ತಾಯಿ ಸವಿತಾ ಕುಲಕರ್ಣಿ ಮತ್ತು ರಿಕಿಲ್ ತಾಯಿ ಸವಿತಾ.ಇದ್ಯಾವುದರ ಗೊಡವೆ ಇಲ್ಲದ ಏಳರ ಬಾಲೆ ವಿದ್ಯಾಭಾರತಿ, `ಅಯ್ಯೋ ಈ ಬಬಲ್ ನೋಡಿ. ಹೇಳಿದಂಗೆ ಕೇಳೋದೇ ಇಲ್ಲ. ಒಂದನ್ನು ಡಿಲಿಟ್ ಮಾಡೋಕ್ಕೆ ಹೋದ್ರೆ ಅಷ್ಟೂ ಡಿಲಿಟ್ ಆಗ್ತಾವೆ. ಛೆ...~ ಅಂತ ಮೊಬೈಲ್‌ನ ಬಬಲ್ ಗೇಮ್‌ನಿಂದ ಈಚೆ ಬಂದು ಅಲ್ಲಿದ್ದವರ ಗಮನ ಸೆಳೆದವಳೇ, ಸ್ಟಿಕ್‌ನಿಂದ ಮತ್ತಷ್ಟು ಗುಳ್ಳೆಗಳ ತಲೆಗೆ ಮೊಟಕಿದಳು. ಗುಳ್ಳೆಗಳ ಗುಡ್ಡೆಯೇ ಮೊಬೈಲ್ ಸ್ಕ್ರೀನ್ ತುಂಬಿತು. ಅಕ್ಕಪಕ್ಕದವರನ್ನು ಮರೆತು ಹೊಸ ಆಟಕ್ಕೆ ಅಣಿಯಾದಳು ಆ ತುಂಟಿ.ವಿಲ್ಸನ್ ಗಾರ್ಡನ್‌ನ ಪರಿಜ್ಮ ನ್ಯೂರೊ ಡಯಾಗ್ನಸ್ಟಿಕ್ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಹಾಗೂ ಅಲರ್ಗನ್ ಸಂಸ್ಥೆ ಈಚೆಗೆ ಸೆರೆಬ್ರಲ್ ಪಾಲ್ಸಿ ಬಗ್ಗೆ ಜನಜಾಗೃತಿ ಮೂಡಿಸಲಿಕ್ಕಾಗಿ ಹಮ್ಮಿಕೊಂಡಿದ್ದ ವಾಕಥಾನ್ ಹಾಗೂ ಚಿತ್ರ ರಚನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳದ್ದೇ ಒಂದು ಲೋಕವಾದರೆ, ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ಮಕ್ಕಳ ಅಪ್ಪ ಅಮ್ಮಂದಿರಿಗೆ ಈ ಆಧುನಿಕ ಯುಗದಲ್ಲೂ ವೈದ್ಯಕೀಯ ಸತ್ಯಗಳನ್ನು ಒಪ್ಪಿಕೊಳ್ಳದೆ `ಸೆರೆಬ್ರಲ್ ಪಾಲ್ಸಿ ಅಂದ್ರೆ ಹುಚ್ಚು ಇಲ್ಲವೇ ಅಂಗವೈಕಲ್ಯ~ ಎಂದು ವಾದಿಸುವ ಮಂದಿಯ ಬಗ್ಗೆ ರೋಷವಿತ್ತು.`ಪರಿಜ್ಮ~ದ ನಿರ್ದೇಶಕರೂ ಆಗಿರುವ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ. ಸುರೇಶ್ ರಾವ್ ಆರೂರು ಹೇಳಿದ್ದೂ, `ಸೆರೆಬ್ರಲ್ ಪಾಲ್ಸಿಗೆ ಕಾರಣ ನರಗಳ ದೌರ್ಬಲ್ಯ. ಕುಟುಂಬದಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ ವಂಶಪಾರಂಪರ‌್ಯವಾಗಿ ಬರಬಹುದು.ಇದನ್ನು ಗರ್ಭಿಣಿಗೆ ಆರನೇ ವಾರದಿಂದಲೇ ಚಿಕಿತ್ಸೆ ನೀಡಿದಲ್ಲಿ ತಡೆಗಟ್ಟಬಹುದು. ಅವಧಿಗೂ ಮೊದಲೇ ಅಥವಾ ಅವಧಿ ಮೀರಿ ಪ್ರಸವವಾಗುವುದೂ ಸೆರೆಬ್ರಲ್ ಪಾಲ್ಸಿಗೆ ಕಾರಣವಾಗಬಹುದು. ಮೆದುಳಿಗೆ ಹಾನಿಯಾದಾಗ ಸೆರೆಬ್ರಲ್ ಪಾಲ್ಸಿ ಕಾಣಿಸಿಕೊಳ್ಳುತ್ತದೆಯೇ ವಿನಾ ಇದು ಕಾಯಿಲೆಯಲ್ಲ~ ಎಂದು.`ಉಗ್ಗಿದಂತೆ ಮಾತನಾಡುವುದು, ಅತಿಯಾಗಿ ಮಾತನಾಡುವುದು, ಮಂಡಿಗಳು ಗಂಟುಹಾಕಿಕೊಂಡು ನಡೆಯಲು ಆಗದಿರುವುದು, ಜೊಲ್ಲು ಸುರಿಯುತ್ತಲೇ ಇರುವುದು, ಕತ್ತು, ಬೆನ್ನುಹುರಿ ನಿಯಂತ್ರಣದಲ್ಲಿಲ್ಲದಿರುವುದು, ಗ್ರಹಣಶಕ್ತಿ, ದೃಷ್ಟಿಯಲ್ಲಿ ದೋಷವಿರುವುದು, ಅಪಸ್ಮಾರ (ಫಿಟ್ಸ್) ಇತ್ಯಾದಿ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಫಿಸಿಯೋಥೆರಪಿ,  ಆರ್ಥೋಪೆಡಿಕ್ ತಜ್ಞರಿಂದ ಮಗು ಹುಟ್ಟಿದ ಆರನೇ ತಿಂಗಳಿಂದಲೇ ಚಿಕಿತ್ಸೆ ಕೊಡಿಸಿದಲ್ಲಿ ಮುಕ್ಕಾಲು ಭಾಗ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ~ ಎಂಬುದು ಅವರ ವಿವರಣೆ.                  ***

ಇದಕ್ಕೂ ಮೊದಲು ಲಾಲ್‌ಬಾಗ್‌ನಿಂದ ಡಬಲ್ ರೋಡ್‌ನ ಬಿಎಂಟಿಸಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆವರೆಗೂ ಕಾಲ್ನಡಿಗೆ (ವಾಕಥಾನ್)ಯಲ್ಲಿ ಪಾಲ್ಗೊಂಡು, ಚಿತ್ರ ರಚನೆಯಲ್ಲೂ ಉತ್ತಮ ನಿರ್ವಹಣೆ ತೋರಿದ ಶ್ರೇಯಾ ಮೊಬೈಲ್‌ನಲ್ಲಿ ಸ್ಕ್ರೀನ್ ಸೇವರ್‌ನ ಬಣ್ಣ ಬದಲಾಗುವ ಅಂದವನ್ನು ಕಣ್ತುಂಬಿಕೊಂಡು ಅವಳ ಪಾಡಿಗೆ ನಗುತ್ತಿದ್ದಳು.

                  ***

ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವೋಲ್ವೊ ಬಸ್‌ನ ಯಾಕೆ ಬಿಡಿಸಿದೆ ಎಂದು ಕೇಳಿದ್ರೆ, ಐದರ ಬಾಲಕ ರಿಕಿಲ್, `ನಂಗೆ ಆಟೊಮೊಬೈಲ್ಸ್ ಇಷ್ಟ ಅದಕ್ಕೆ~ ಅಂದ. ಅವನು ಓಡಾಡಿದ ವೋಲ್ವೊ ಬಸ್‌ನ ಪಡಿಯಚ್ಚು ಆ ಬಿಳಿಹಾಳೆಯಲ್ಲಿತ್ತು! ವಾಕಥಾನ್‌ನಲ್ಲಿ ವಾಕರ್‌ನ ಸಹಾಯದಿಂದ ಅವನು ಎಲ್ಲರಿಗಿಂತ ಮುಂದೆ ನಡೆದು ಬಂದ ಎಂದು ಹೆಮ್ಮೆಯಿಂದ ಹೇಳಿದ ಅಪ್ಪ ಸುರೇಶ್‌ಗೆ ಮೆತ್ತಗೆ ಒಂದೇಟು ಕೊಟ್ಟು ನಕ್ಕ.`ಆಂಟಿ ಇದೇನು ಹೇಳಿ ನೋಡೋಣ? ಬೆಕ್ಕು ನೋಡಿದ್ದೀರಾ? ನಿಮ್ಮ ಮನೇಲಿದ್ಯಾ? ನಮ್ ಮನೇಲಿದೆ. ಅದನ್ನೇ ಬಿಡಿಸಿದ್ದು. ನನಗೆ ಬೆಕ್ಕು ಅಂದ್ರೆ ಇಷ್ಟ. ಅದಕ್ಕೆ ಟೋಪಿನೂ ಹಾಕಿದ್ದೇನೆ~ ಅಂತ, ಕುಕ್ಕರುಗಾಲಲ್ಲಿ ಕುಳಿತ ಬೆಕ್ಕಿನ ಚಿತ್ರವನ್ನು ತೋರಿಸಿ ಕಣ್ಣರಳಿಸಿದಳು ವಿದ್ಯಾ.`ಇವಳು ಪ್ರಿಮೆಚ್ಯೂರ್ ಬೇಬಿ. ನನ್ನ ಅಂಗೈನಷ್ಟೇ ಉದ್ದವಿದ್ದಳು. ಉಳಿಯುವ ಭರವಸೆಯೇ ಇರಲಿಲ್ಲ. ಈ ಮಟ್ಟಕ್ಕೆ ಬರುತ್ತಾಳೇಂತ ಊಹಿಸಿರಲಿಲ್ಲ. ಈಗ ಅವಳ ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಸುಸ್ತಾಗಿ ಹೋಗುತ್ತೇನೆ. ಆದರೆ ಯಾವತ್ತೂ ಅವಳನ್ನು ನಿರಾಸೆಗೊಳಿಸದೆ ಉತ್ತರಿಸುತ್ತೇನೆ~ ಎಂದರು ವಿದ್ಯಾ ತಾಯಿ.ಗ್ರಾಫಿಕ್ ಡಿಸೈನರ್ ಆಗಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದುಡಿಯುತ್ತ್ದ್ದಿದ ರಿಕಿಲ್ ಅಮ್ಮ ಸವಿತಾ, ಮಗನ ಬೆಳವಣಿಗೆಯಲ್ಲಿ ಏನೋ ಲೋಪವಿದೆ ಎಂದು ಗೊತ್ತಾಗುತ್ತಲೇ ನೌಕರಿಗೆ ಗುಡ್‌ಬೈ ಹೇಳಿ ಗೃಹವಾರ್ತೆಯೊಂದಿಗೆ ಮಗುವಿನ ಚಿಕಿತ್ಸೆಗೆ ಸಂಬಂಧಿಸಿದ ನಿಗದಿತ ಕೆಲಸಗಳನ್ನೇ ದಿನಚರಿಯಾಗಿಸಿಕೊಂಡಿದ್ದಾರೆ.ಸೆರೆಬ್ರಲ್ ಪಾಲ್ಸಿ ಕಾಯಿಲೆಯಲ್ಲ ಎಂಬುದನ್ನು ಸುಶಿಕ್ಷಿತ ಮಂದಿಯಾದರೂ ಅರ್ಥಮಾಡಿಕೊಳ್ಳಬೇಕು ಎಂಬುದು ಪೋಷಕರ ಕಳಕಳಿ. ಸಾಮಾನ್ಯ ಮಕ್ಕಳ ಶಾಲೆಗೂ ಸೇರಿಸಿಕೊಳ್ಳದ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಈ ಪೋಷಕರಲ್ಲಿ ತೀವ್ರ ಅಸಮಾಧಾನವಿದೆ.ಮುಖ್ಯವಾಹಿನಿಯ ಶಿಕ್ಷಣ ಸಂಸ್ಥೆಗಳಲ್ಲಿ ಈ ಮಕ್ಕಳ ಬಗ್ಗೆ ನಿಗಾ ವಹಿಸಲು ಆಗುವುದಿಲ್ಲ. ಅವರಿಗೆಂದೇ ಒಬ್ಬರು ಸಹಾಯಕರು ಬೇಕಾಗುತ್ತಾರೆ. ಬೇರೆ ಮಕ್ಕಳೂ ಇವರನ್ನು ಶೋಷಣೆ ಮಾಡಬಹುದು. ಆದ್ದರಿಂದ ವಿಶೇಷ ಮಕ್ಕಳ ಶಾಲೆಗೇ ಸೇರಿಸಬೇಕಾದ ಅನಿವಾರ್ಯತೆ ನಮ್ಮದು~ ಎಂದು ಬೇಸರ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಷಕರು.ಚಿತ್ರ ಬರೆದು ಪರಿಜ್ಮ ಮತ್ತು `ಆಶ್ವಾಸನ್~ ಸಂಸ್ಥೆಯವರು ಕೊಟ್ಟ ಟೆಡ್ಡಿ ಬೇರ್‌ಗಳನ್ನು ಅಪ್ಪಿಕೊಂಡಿದ್ದ ಮಕ್ಕಳು ಮಾತ್ರ ಆ ಚಿಂತೆಗೂ ನಮಗೂ ಸಂಬಂಧವಿಲ್ಲವೆಂಬಂತೆ ತಮ್ಮದೇ ಭಾವಪ್ರಪಂದಲ್ಲಿ ಮುಳುಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry