ಕೊಂಬೆ ಬಿದ್ದು ಬಿಬಿಎಂಪಿ ಅಧಿಕಾರಿ ಸಾವು

7

ಕೊಂಬೆ ಬಿದ್ದು ಬಿಬಿಎಂಪಿ ಅಧಿಕಾರಿ ಸಾವು

Published:
Updated:

ಬೆಂಗಳೂರು: ಮರದ ಕೊಂಬೆ ಮುರಿದು ತಲೆಯ ಮೇಲೆ ಬಿದ್ದ ಪರಿಣಾಮ ಬಿಬಿಎಂಪಿ ವರ್ಕ್ ಇನ್‌ಸ್ಪೆಕ್ಟರ್ ಲಕ್ಷ್ಮಿನರಸಿಂಹಯ್ಯ (57) ಅವರು ಸಾವನ್ನಪ್ಪಿದ್ದಾರೆ.ಅಜಾದ್‌ನಗರದ ಒಂದನೇ ಅಡ್ಡರಸ್ತೆ ನಿವಾಸಿಯಾದ ಲಕ್ಷ್ಮಿನರಸಿಂಹಯ್ಯ, ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಚಾಮರಾಜಪೇಟೆ ಮಾರ್ಗವಾಗಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಜಿಂಕೆಪಾರ್ಕ್ ಬಳಿ ರಸ್ತೆ ಬದಿಯಲ್ಲಿನ ಮರದ ಕೊಂಬೆ ಮುರಿದು ಅವರ ತಲೆ ಮೇಲೆ ಬಿದ್ದಿತು.ಘಟನೆಯಿಂದ ತೀವ್ರ ಗಾಯಗೊಂಡ ಅವರನ್ನು ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ (ಕಿಮ್ಸ) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ವೈದ್ಯರ ಶಿಫಾರಸಿನಂತೆ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿನೀಡಿದರು.`ತುಂಬಾ ಹಳೆಯ ಮರವಾಗಿದ್ದರಿಂದ ಕೊಂಬೆಗಳು ಒಣಗಿವೆ. ಶುಕ್ರವಾರ ಮಳೆ ಗಾಳಿಯಿಂದ ಕೊಂಬೆ ಮುರಿದು ಲಕ್ಷ್ಮಿನರಸಿಂಹಯ್ಯ ಅವರ ತಲೆ ಮೇಲೆ ಬಿದ್ದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ~ ಎಂದು ಕೆಂಪೇಗೌಡನಗರ ಪೊಲೀಸರು ಹೇಳಿದ್ದಾರೆ.ಅಪಘಾತ: ಸಾವು

ರಸ್ತೆ ದಾಟುತ್ತಿದ್ದ ವೇಳೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದು ರಾಜು (35) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಟ್ಟೂರು ಲೇಔಟ್ ಬಳಿಯ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರಾಜು, ಅಟ್ಟೂರು ಲೇಔಟ್ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಅಂಗಡಿಗೆ ಹೋಗುವ ಸಲುವಾಗಿ ರಸ್ತೆ ದಾಟುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಕೆಳಗೆ ಬಿದ್ದ ರಾಜು ಮೇಲೆ, ಅದೇ ವಾಹನದ ಚಕ್ರ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಚಾಲಕ ಪರಾರಿಯಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಸರಗಳವು

ಬೈಕ್‌ನಲ್ಲಿ ಬಂದ ವ್ಯಕ್ತಿ ಶಂಕರಪುರದ ಪಿ.ಎಂ.ಕೆ ರಸ್ತೆಯಲ್ಲಿ ಜಲಜ ಪಾಟೀಲ್ ಎಂಬುವರ ಮೂವತ್ತು ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ಗಿರಿನಗರದ 12ನೇ ಅಡ್ಡರಸ್ತೆ ನಿವಾಸಿಯಾದ ಜಲಜ ಪಾಟೀಲ್, ಉತ್ತರಾಧಿ ಮಠದಲ್ಲಿ ಪ್ರವಚನ ಮುಗಿಸಿಕೊಂಡು ರಾತ್ರಿ 9.30ರ ಸುಮಾರಿಗೆ ಮನೆಗೆ ನಡೆದು ಹೋಗುತ್ತಿದ್ದರು.ಈ ವೇಳೆ ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿದ ದುಷ್ಕರ್ಮಿ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಜಲಜ ಅವರು, ಶಂಕರಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸರದ ಮೌಲ್ಯ 66 ಸಾವಿರ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry