ಭಾನುವಾರ, ಮಾರ್ಚ್ 7, 2021
19 °C

ಕೊಕ್ಕರೆಗಳ ಸಂತಾನ ಸಂಭ್ರಮ

ಪ್ರಜಾವಾಣಿ ವಾರ್ತೆ/ ಅಂಬರಹಳ್ಳಿ ಸ್ವಾಮಿ Updated:

ಅಕ್ಷರ ಗಾತ್ರ : | |

ಕೊಕ್ಕರೆಗಳ ಸಂತಾನ ಸಂಭ್ರಮ

ಭಾರತೀನಗರ:  ಸಮೀಪದ ಕೊಕ್ಕರೆ ಬೆಳ್ಳೂರು ರಾಜ್ಯದ ವಿಶಿಷ್ಟ ಪಕ್ಷಿಧಾಮಗಳಲ್ಲಿ ಒಂದು. ಇಲ್ಲಿ ಬರುವ ಕೊಕ್ಕರೆಗಳು ಪುಟ್ಟ ಹಳ್ಳಿ ಮಧ್ಯೆ, ಜನರ ವಾಸಸ್ಥಾನದ ನಡುವೆಯೇ  ಬದುಕು ಕಟ್ಟಿಕೊಂಡಿರುವುದು ವಿಶೇಷ. ದೇಶದ 21 ಪಕ್ಷಿ ಸಂತಾನಾಭಿವೃದ್ಧಿ ತಾಣಗಳಲ್ಲಿ ಕೊಕ್ಕರೆ ಬೆಳ್ಳೂರು ಸಹ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರತೀ ವರ್ಷ ನವೆಂಬರ್‌ ತಿಂಗಳಿನಲ್ಲಿ ಸಂತಾನಾಭಿವೃದ್ಧಿಯ ಸಲುವಾಗಿಯೇ ಇಲ್ಲಿಗೆ ಆಗಮಿಸುವ ಕೊಕ್ಕರೆಗಳು, ಜುಲೈ ಅಂತ್ಯದ ವೇಳೆಗೆ ತಮ್ಮ ಮರಿಗಳ ಜೊತೆ  ಜಾಗ ಖಾಲಿ ಮಾಡುತ್ತವೆ.ಜುಲೈ ತಿಂಗಳ ಅಂತ್ಯದ ವೇಳೆಗೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೊಕ್ಕರೆ ಮರಿಗಳ ಕಲರವವನ್ನು ಮನಸಾರೆ ಕಣ್ತುಂಬಿ ಕೊಳ್ಳಬಹುದು.

ಬಣ್ಣದ ಕೊಕ್ಕರೆ (ಪೇಂಟೆಂಡ್‌ ಸ್ಟಾರ್ಕ್), ಬೂದುಕೊಕ್ಕರೆ (ಹೆರಾನ್ಸ್), ಹೆಜ್ಜಾರ್ಲೆ (ಪೆಲಿಕಾನ್ಸ್), ಕೊಳದ ಬಕ (ಪಾಂಡ್‌ ಹೆರಾನ್ಸ್) ಸೇರಿದಂತೆ ಹತ್ತಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಂದ ಆವರಿಸಿವೆ.ಈ ಕೊಕ್ಕರೆ ಬೆಳ್ಳೂರಿನಲ್ಲಿ ಈಗ ಸಂತಾನದ ಸಂಭ್ರಮ. ಕೊಕ್ಕರೆಮರಿಗಳ ಕಲರವ ಕಿವಿಗೆ ಮುದ ನೀಡುತ್ತಿದೆ. ಗುಟುಕು ನೀಡುವ ತಾಯಿ ಕೊಕ್ಕರೆಗಳ ವಾತ್ಸಲ್ಯ ವೀಕ್ಷಣೆ ಆನಂದವಾಗುತ್ತದೆ.ಬೆಳಿಗ್ಗೆ ಆಹಾರ ಅರಸುತ್ತಾ ಇಲ್ಲಿಂದ ಹೊರಡುವ ಪಕ್ಷಿಗಳು ಸುತ್ತಮುತ್ತಲ ವಿವಿಧ ಹಳ್ಳಿಗಳ ಕೆರೆಗಳಲ್ಲಿ, ಗದ್ದೆಗಳಲ್ಲಿ ಮೀನು, ಹುಳು,ಹುಪ್ಪಟೆ ಹಿಡಿದು ತಿಂದು ಸಂಜೆ ವೇಳೆಗೆ ಸ್ವಸ್ಥಾನಕ್ಕೆ ಮರಳುತ್ತವೆ.ಮಧ್ಯೆ ಮಧ್ಯೆ ಬಂದು ತನ್ನ ಮರಿಗಳಿಗೆ ಗುಟುಕು ನೀಡುವುದನ್ನು ಮರೆಯುವುದಿಲ್ಲ. ಹಾಗಾಗಿ ಈಗ ಕೊಕ್ಕರೆಗಳ ಮಾತೃವಾತ್ಸಲ್ಯ ಮೇರೆ ಮೀರಿದೆ. ಊರಿನಲ್ಲಿ ಹುಣಸೆ, ಅರಳಿ,ಆಲ, ಬೇವು, ಹುಲಚಿ  ಸೇರಿದಂತೆ ಹಲವು ಬಗೆಯ  ನೂರಕ್ಕೂ ಹೆಚ್ಚು ದೈತ್ಯ ಮರಗಳಿವೆ. ಈ ಮರಗಳ ಮೇಲೆ ಗೂಡು ಕಟ್ಟಿ ಸಂಸಾರ ನಡೆಸುತ್ತಿರುವುದು ಇಲ್ಲಿನ ವಿಶೇಷ.ಊರಿನ ಜನರೂ ಅಷ್ಟೇ ತಮ್ಮ ಬದುಕಿನ ಭಾಗ ಎಂಬಂತೆ ಈ ಪಕ್ಷಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಪಕ್ಷಿಗಳನ್ನು ಬೇಟೆಯಾಡುವ,ಪಕ್ಷಿಗಳ ಮೊಟ್ಟೆಗಳನ್ನು ಕದಿಯುವ ಮಾತು ಇಲ್ಲಿ ಇಲ್ಲವೇ ಇಲ್ಲ.ಇವುಗಳ ರಕ್ಷಣೆಗೆ ಗ್ರಾಮದ ಹಲವರು ಸೇರಿ  ‘ಹೆಜ್ಜಾರ್ಲೆ ಬಳಗ’ ರಚಿಸಿಕೊಂಡಿದ್ದಾರೆ. ಕೊಕ್ಕರೆಗಳ ಉಳಿವಿಗೆ ಪಣತೊಟ್ಟಿದ್ದಾರೆ. ಮರದಿಂದ ಆಯ ತಪ್ಪಿ ಬಿದ್ದ ಕೊಕ್ಕರೆ ಮರಿಗಳಿಗೆ ಆಹಾರ ನೀಡಿ ಸಲಹುತ್ತಾರೆ.ಕೊಕ್ಕರೆಗಳ ಹಿಕ್ಕೆಗಳನ್ನು ಗ್ರಾಮಸ್ಥರು ತಮ್ಮ ಹೊಲಗದ್ದೆಗಳಿಗೆ ಗೊಬ್ಬರವಾಗಿಯೂ ಸಹ ಬಳಸುತ್ತಾರೆ. ಇಲ್ಲಿ ಇರುವ ಈ ಪಕ್ಷಿಗಳನ್ನು ನೋಡುವುದೇ ಒಂದು ಆನಂದ.ಕೊಕ್ಕರೆ ಬೆಳ್ಳೂರು ಮದ್ದೂರಿನಿಂದ 12ಕಿ.ಮೀ ದೂರ ಇದೆ. ರಸ್ತೆ ಸಂಪರ್ಕ ಚೆನ್ನಾಗಿದೆ. ಭಾರತೀನಗರದಿಂದಲೂ ಅಲ್ಲಿಗೆ ತಲುಪಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.