ಕೊಕ್ಕೊ: ಚಿನ್ನದ ಪದಕ ಗೆದ್ದ ನಿರಂಜನ

7

ಕೊಕ್ಕೊ: ಚಿನ್ನದ ಪದಕ ಗೆದ್ದ ನಿರಂಜನ

Published:
Updated:
ಕೊಕ್ಕೊ: ಚಿನ್ನದ ಪದಕ ಗೆದ್ದ ನಿರಂಜನ

ರಾಷ್ಟ್ರೀಯ ಶಾಲಾ ಕ್ರೀಡಾಕೂಟದ ಕೊಕ್ಕೊ ಪಂದ್ಯಾವಳಿಯ ಮೂರು ದಶಕದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ತಂಡಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ಕೀರ್ತಿ ಮಧುಗಿರಿ ಮೂಲದ ನಿರಂಜನ್ ಅವರಿಗೆ ಸಲ್ಲುತ್ತದೆ.ವಿಜಾಪುರದಲ್ಲಿ 2008ರಲ್ಲಿ ನಡೆದ 53ನೇ ರಾಷ್ಟ್ರೀಯ ಶಾಲಾ ಕೊಕ್ಕೊ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಮುನ್ನಡೆಸಿ, ವಿಜಯದ ಹೂಮಾಲೆ ಧರಿಸಿದ ನಿರಂಜನ್ ನೇತೃತ್ವದ ರಾಜ್ಯ ತಂಡಕ್ಕೆ ಸಿಕ್ಕ ಗೌರವ ಸ್ಮರಣೀಯ. ಅಂತಿಮ ಹಣಾಹಣಿ ಪಂದ್ಯದಲ್ಲಿ ರಾಜ್ಯ ತಂಡ ರೋಚಕ ಗೆಲುವು ಪಡೆಯುತ್ತಿದ್ದಂತೆ ವಿಜಾಪುರ ಜಿಲ್ಲಾ ಆಡಳಿತ ಸಂಭ್ರಮಿಸಿತು.ಮೊದಲ ಬಾರಿಗೆ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮಿಂಚಿದ ಬಳಿಕ ಇಂದಿನವರೆಗೂ ಹಿಂದಿರುಗಿ ನೋಡಿಲ್ಲ. ಈ ಅವಧಿಯಲ್ಲಿ ಈತ ಪಡೆದ ಪ್ರಶಸ್ತಿಗಳು ಹಲವು. ಮೂರು ಬಾರಿ ಜಿಲ್ಲಾ ಕ್ರೀಡಾ ಪ್ರಶಸ್ತಿ ಲಭಿಸಿದೆ.ಈತನ ಆಟಕ್ಕೆ ಮಾರು ಹೋಗದವರಿಲ್ಲ. ತಂತ್ರಗಳಿಗೆ ಬೆರಗಾಗದವರಿಲ್ಲ. ಎದುರಾಳಿ ಹಿಡಿಯಲು ಹೊಡೆಯುವ ಡೈವಿಂಗ್ ರೋಮಾಂಚನ. ಇದರಿಂದ ಹೋದೆಡೆಯೆಲ್ಲ ಅಭಿಮಾನಿಗಳ ಬೆಂಬಲ. ಎಲ್ಲೇ ಆಡುತ್ತಿದ್ದರೂ ತವರಿನ ಅನುಭವ. ಇದು ಒಂದೆಡೆ ಸಿಕ್ಕ ಅಭಿಮಾನವಲ್ಲ. ಕಳೆದ ಆರು ವರ್ಷದಿಂದ ಎಲ್ಲೆಡೆ ದೊರೆತ ಮನ್ನಣೆ ಎಂಬ ಹೆಮ್ಮೆ ನಿರಂಜನ್‌ರದ್ದು.ಮೊದಲ ವರ್ಷದ ಬಿಬಿಎಂ ಪದವಿ ಮುಗಿಸಿರುವ ಈತ ಎಸ್‌ಎಸ್‌ಐಬಿಎಂ ಕಾಲೇಜು ವಿದ್ಯಾರ್ಥಿ. ಕೊಕ್ಕೊ ಆಟದಲ್ಲೇ ದಾಖಲೆ ನಿರ್ಮಿಸುವ ಕನಸು ಹೊತ್ತಿದ್ದಾನೆ. ನಾಯಕನಾಗಿ ಇಡೀ ತಂಡವನ್ನು ಒಟ್ಟಾಗಿ ಕರೆದೊಯ್ಯುವ ಛಾತಿ ಈತನಿಗೆ ಸಿದ್ಧಿಸಿದೆ. ರಾಷ್ಟ್ರೀಯ ಶಾಲಾ ಕೊಕ್ಕೊ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಪ್ರಥಮ ಚಿನ್ನ ಗೆದ್ದು ಕೊಟ್ಟಿದ್ದಾರೆ. ಆ ಕ್ರೀಡಾಕೂಟದಲ್ಲಿ ಈತನ ಒಟ್ಟಾರೆ ಸಾಧನೆಗೆ ರಾಷ್ಟ್ರಮಟ್ಟದ `ಸರ್ವೋತ್ತಮ ಆಟಗಾರ~ ಪ್ರಶಸ್ತಿಯ ಗೌರವ ಸಿಕ್ಕಿತು.ಕೊಕ್ಕೊ ತವರು ಮಹಾರಾಷ್ಟ್ರದ ಪೂನಾದಲ್ಲಿ ನಡೆದ 54ನೇ ರಾಷ್ಟ್ರೀಯ ಶಾಲಾ ಕೊಕ್ಕೊ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದರೂ; ಈತನ ಪ್ರದರ್ಶನ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ನೆರೆದಿದ್ದ ತರಬೇತುದಾರರು `ಕೊಕ್ಕೊ ತಾರೆ~ ಎಂದು ಬಣ್ಣಿಸಿದರು.ಆಂಧ್ರಪ್ರದೇಶದ ಆರ್ಮುರ್‌ನಲ್ಲಿ 2009ರಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿಯಲ್ಲಿ ಪ್ರಥಮ, ಮಧ್ಯಪ್ರದೇಶದ ಬೃಹಾನ್‌ಪುರ್‌ನಲ್ಲಿ 2010ರಲ್ಲಿ ನಡೆದ 55ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ತೃತೀಯ, ಆಂಧ್ರದ ನಿಜಾಮಾಬಾದ್‌ನಲ್ಲಿ 2010ರಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಥಮ, ತಮಿಳುನಾಡಿನಲ್ಲಿ 2012ರಲ್ಲಿ ನಡೆದ ಅಂತರ ವಿ.ವಿ. ಕೊಕ್ಕೊ ಪಂದ್ಯಾವಳಿಯಲ್ಲಿ ತುಮಕೂರು ವಿ.ವಿ. ಪ್ರತಿನಿಧಿಸಿದ ಹೆಗ್ಗಳಿಕೆ ಈತನದ್ದು.ಹಾವೇರಿ, ತುಮಕೂರು, ತುಮಕೂರು, ಜಮಖಂಡಿಯಲ್ಲಿ 2006ರಿಂದ 2009ರಲ್ಲಿ ನಡೆದ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ತುಮಕೂರು ಜಿಲ್ಲಾ ತಂಡದ ನಾಯಕನಾಗಿ ನಾಲ್ಕು ಬಾರಿಯೂ ಪ್ರಥಮ, ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಗಳಿಸಿದ ಸಾಧನೆಯ ಹಿರಿಮೆ ನಿರಂಜನ್ ಅವರದ್ದು.2008ರಲ್ಲಿ ಮಂಡ್ಯದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ತುಮಕೂರು ತಂಡದ ನಾಯಕ. 2009ರಲ್ಲಿ ಪೂನಾದಲ್ಲಿ ನಡೆದ 19 ವರ್ಷ ವಯೋಮಿತಿಯ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿಯಲ್ಲಿ ಸರ್ವ ಶ್ರೇಷ್ಠ ಪ್ರದರ್ಶನ ನೀಡಿ, ಥೈಲೆಂಡ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಶಾಲಾ ಕೊಕ್ಕೊ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಗೊಂಡಿದ್ದ. ಆದರೆ ಪರೀಕ್ಷೆ ಕಾರಣದಿಂದ ಪಾಲ್ಗೊಳ್ಳಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry