ಕೊಚ್ಚಿಯಲ್ಲಿ ಕ್ರಿಕೆಟ್ ಕಲರವ

7
ಫುಟ್‌ಬಾಲ್ ಪ್ರಿಯರ ನಾಡಿನಲ್ಲಿ ನಾಳೆ ಭಾರತ- ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ

ಕೊಚ್ಚಿಯಲ್ಲಿ ಕ್ರಿಕೆಟ್ ಕಲರವ

Published:
Updated:
ಕೊಚ್ಚಿಯಲ್ಲಿ ಕ್ರಿಕೆಟ್ ಕಲರವ

ಕೊಚ್ಚಿ: ಕೇರಳದ ಕ್ರೀಡಾಪ್ರಿಯರು ಫುಟ್‌ಬಾಲ್ ಆಟದ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇಲ್ಲಿನ ಜನತೆಗೆ ಕಾಲ್ಚೆಂಡಾಟದ ಜೊತೆಗಿನ ನಂಟು ಅಪಾರ. ಐ.ಎಂ. ವಿಜಯನ್, ಜೋಪಾಲ್ ಅಂಚೇರಿ ಅವರಂತಹ ಫುಟ್‌ಬಾಲ್ ಆಟಗಾರರನ್ನು ದೇಶಕ್ಕೆ ನೀಡಿದ ನಾಡಿದು.ಫುಟ್‌ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೊ ಮರಡೋನಾ 2012ರ ಅಕ್ಟೋಬರ್ ತಿಂಗಳಲ್ಲಿ ಕೇರಳದ ಕಣ್ಣೂರಿಗೆ ಆಗಮಿಸಿದ್ದರು. ಅಂದು ಕಣ್ಣೂರು ನಗರ `ಮಿನಿ ಅರ್ಜೆಂಟೀನಾ' ಆಗಿ ಬದಲಾಗಿತ್ತು. ಎಲ್ಲೆಂದರಲ್ಲಿ ಮರಡೋನಾ ಕಟೌಟ್‌ಗಳು ರಾರಾಜಿಸಿದ್ದವು. ಅವರನ್ನು ನೋಡಲು ಸಮೀಪದ ಜಿಲ್ಲೆಗಳಿಂದಲೂ ಫುಟ್‌ಬಾಲ್ ಪ್ರೇಮಿಗಳು ಬಂದಿದ್ದರು.ಮರಡೋನಾ ಕಾಲ್ಚಳಕದ ಸೊಬಗನ್ನು ಸವಿಯಲು ಕಣ್ಣೂರು ಮುನಿಸಿಪಲ್ ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದರು. ಆ ಕ್ಷಣ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಇಂತಹ ಕೇರಳದ ಜನತೆ ಇದೀಗ ಕ್ರಿಕೆಟ್ ಜ್ವರದಲ್ಲಿ ಮುಳುಗಿದ್ದಾರೆ. ಅದಕ್ಕೆ ಕಾರಣವಾಗಿರುವುದು ಭಾರತ- ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯ.`ದೇವರ ಸ್ವಂತ ನಾಡು' ಎಂದೇ ಖ್ಯಾತಿ   ಪಡೆದಿರುವ ಈ ರಾಜ್ಯದ ಕೊಚ್ಚಿಯಲ್ಲಿ ಈಗ ಹಬ್ಬದ ವಾತಾವರಣ. ಕ್ರೀಡಾಪ್ರಿಯರು ಫುಟ್‌ಬಾಲ್ ಮೇಲಿನ ಪ್ರೀತಿಗೆ ಅಲ್ಪ ವಿರಾಮ ಹಾಕಿ ಕ್ರಿಕೆಟ್  ಬಗ್ಗೆ ಮಾತನ್ನಾಡುತ್ತಿದ್ದಾರೆ. ಭಾರತ- ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಕಲೂರ್‌ನಲ್ಲಿರುವ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದೆ.ಕ್ರೀಡೆ ಯಾವುದೇ ಆಗಿರಲಿ, ಅದನ್ನು ಮನಸಾರೆ ಪ್ರೀತಿಸುವುದು ಇಲ್ಲಿನ ಜನರ ವಿಶೇಷತೆಯಾಗಿದೆ. ಈ ಕಾರಣ ಮರಡೋನಾ ಭೇಟಿ ಕಣ್ಣೂರಿನಲ್ಲಿ ಯಾವ ರೀತಿಯಲ್ಲಿ ಸಂಚಲನ ಮೂಡಿಸಿತ್ತೋ, ಅಂತಹದೇ ವಾತಾವರಣ ಕೊಚ್ಚಿಯಲ್ಲಿ ಕಂಡುಬರುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ಆಟಗಾರರು ತೆರಳಿದ   ಕಡೆಯಲ್ಲೆಲ್ಲಾ, ಜನರು ಸಂಭ್ರಮದ ಕೇಕೆ ಹಾಕುತ್ತಿದ್ದಾರೆ.ಸುಮಾರು ಐವತ್ತು ಸಾವಿರದಷ್ಟು ಪ್ರೇಕ್ಷಕರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಿರುವ  ಕ್ರೀಡಾಂಗಣ ಮಂಗಳವಾರ ಭರ್ತಿಯಾಗುವುದು ಖಚಿತ. ಇಂಗ್ಲೆಂಡ್ ತಂಡದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು.`ಎಲ್ಲ ಟಿಕೆಟ್‌ಗಳೂ ಮಾರಾಟವಾಗಿದ್ದು, ಕ್ರೀಡಾಂಗಣ ಕಿಕ್ಕಿರಿದು ತುಂಬಲಿದೆ. ಕೇರಳ ಪ್ರವಾಸಕ್ಕೆ ಆಗಮಿಸಿರುವ  ಬ್ರಿಟಿಷ್ ಪ್ರಜೆಗಳು ಕೂಡಾ ಪಂದ್ಯ ನೋಡಲು ಆಗಮಿಸುವರು' ಎಂದು ಕೇರಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಟಿ.ಸಿ. ಮ್ಯಾಥ್ಯೂ ಹೇಳಿದ್ದಾರೆ.ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಹೊನಲು ಬೆಳಕಿನ ಪಂದ್ಯ ಇದಾಗಿದೆ. ಹಲವು ವರ್ಷಗಳ ಬಿಡುವಿನ ಬಳಿಕ ಇಲ್ಲಿ ಅಂತರರಾಷ್ಟ್ರೀಯ ಪಂದ್ಯವೊಂದು ನಡೆಯುತ್ತಿರುವ ಕಾರಣ ಜನರ ಕಾತರ, ಕುತೂಹಲ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. 2007 ರಲ್ಲಿ ಇಲ್ಲಿ ಕೊನೆಯದಾಗಿ ಪಂದ್ಯ ನಡೆದಿತ್ತು. ಅಂದು ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 84 ರನ್‌ಗಳ ಜಯ ಸಾಧಿಸಿತ್ತು.2010 ರ ಅಕ್ಟೋಬರ್‌ನಲ್ಲಿ ಇಲ್ಲಿ ನಡೆಯಬೇಕಿದ್ದ ಭಾರತ- ಆಸ್ಟ್ರೇಲಿಯಾ ಪಂದ್ಯ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆದ್ದರಿಂದ ಐದು ವರ್ಷಗಳ ಬಳಿಕ ಇಲ್ಲಿನ ಜನರಿಗೆ ಅಂತರರಾಷ್ಟ್ರೀಯ ಪಂದ್ಯ ನೋಡುವ ಅವಕಾಶ ದೊರೆತ ಹಾಗಾಗಿದೆ.1998 ರಿಂದ ಇಲ್ಲಿ ಒಟ್ಟು ಆರು ಏಕದಿನ ಪಂದ್ಯಗಳು ನಡೆದಿವೆ. ಭಾರತ ನಾಲ್ಕರಲ್ಲಿ ಜಯ ಸಾಧಿಸಿದೆ. 2002ರ ಮಾರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಜಿಂಬಾಬ್ವೆ ಎದುರು ಆರು ವಿಕೆಟ್‌ಗಳ ಆಘಾತ ಅನುಭವಿಸಿತ್ತು. ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಮಹೇಂದ್ರ ಸಿಂಗ್ ದೋನಿ ಬಳಗ ಇಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.ಸೆಹ್ವಾಗ್, ಸಚಿನ್ ಇಲ್ಲದ ಬೇಸರ:

ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಂಡದಲ್ಲಿ ಇಲ್ಲದೇ ಇರುವುದು ಅಭಿಮಾನಿಗಳಿಗೆ ಅಲ್ಪ ನಿರಾಸೆ ಉಂಟುಮಾಡಿದೆ. ಸಚಿನ್ ಈ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ಗಿಂತ, ಬೌಲಿಂಗ್‌ನಲ್ಲೇ ಸುದ್ದಿ ಮಾಡಿದ್ದಾರೆ.1998 ರಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ 32 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಅವರ ಶ್ರೇಷ್ಠ ಸಾಧನೆ ಇದಾಗಿದೆ. ನಿಗದಿತ ಓವರ್‌ಗಳ ಪಂದ್ಯದಿಂದ ನಿವೃತ್ತಿಯಾದ ಸಚಿನ್ ಹಾಗೂ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಸೆಹ್ವಾಗ್ ಆಟ ನೋಡಲು ಆಗದೇ ಇರುವುದು ಬೇಸರ ಉಂಟುಮಾಡಿದೆ ಎಂಬುದು ಕೆಲವು ಅಭಿಮಾನಿಗಳ ಹೇಳಿಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry