ಭಾನುವಾರ, ಜನವರಿ 19, 2020
26 °C

ಕೊಚ್ಚೆಗುಂಡಿಯಾದ ರಸ್ತೆ; ರೋಗದ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಚರಂಡಿಯ ತ್ಯಾಜ್ಯ ನೀರು ಗ್ರಾಮದಿಂದ ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಇದರ ಪರಿಣಾಮ ಮನೆಗಳ ಮುಂಭಾಗವೇ ಕೊಚ್ಚೆ ಗುಂಡಿ ಸೃಷ್ಟಿಯಾಗಿವೆ. ಸೊಳ್ಳೆಗಳ ಹಾವಳಿಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.-ಇದು ಸಮೀಪದ ತೆಂಕಲಮೋಳೆ ಗ್ರಾಮದ ಚಿತ್ರಣ. ಈ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಸ್ವಾತಂತ್ರ್ಯ ಬಂದು ದಶಕಗಳು ಉರುಳಿದ್ದರೂ ಈ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಚುನಾವಣೆ ವೇಳೆ ಗ್ರಾಮಕ್ಕೆ ಬಂದು ಮೈಮುಗಿದು ಓಟು ಕೇಳಿದ್ದ  ಜನಪ್ರತಿನಿಧಿಗಳು ಈಗ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕಿದ್ದಾರೆ ಎಂಬುದು ಜನರ ದೂರು.ಎಲ್ಲೆಡೆ ತೆರೆದ ಚರಂಡಿ ವ್ಯವಸ್ಥೆಯಿದೆ. ಪಕ್ಕದಲ್ಲಿಯೇ ಜಾಲಿಮುಳ್ಳಿನ ಗಿಡಗಳು ಚರಂಡಿಯನ್ನು ಆವರಿಸಿಕೊಂಡಿವೆ. ಕಸ-ಕಡ್ಡಿ ಕಟ್ಟಿಕೊಂಡು ಚರಂಡಿ ನೀರು ಹೊರಹೋಗಲು ತೊಂದರೆಯಾಗಿದೆ. ಹೀಗಾಗಿ, ಕಲ್ಮಶ ವಾತಾವರಣ ಸೃಷ್ಟಿಯಾಗಿದೆ. ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ಮುಂದಾಗಿಲ್ಲ.ಕೆಲವರು ಮನೆಯ ಮುಂಭಾಗ ತೋಡಿರುವ ಗುಂಡಿಗೆ ಕಲ್ಮಷ ನೀರು ಬಿಡುತ್ತಾರೆ. ಮತ್ತೆ ಕೆಲವರು ನೀರು ಹರಿಯಲು ಬಿಟ್ಟಿದ್ದಾರೆ. ಮನೆಯ ಗೋಡೆಗಳ ಪಕ್ಕದಲ್ಲಿಯೇ ನೀರು ಹರಿಯುವುದರಿಂದ ಗೋಡೆಗಳು ಶಿಥಿಲಗೊಂಡಿವೆ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗವೇ ಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಶಾಲೆಯ ಮುಂಭಾಗವೇ ಕೊಚ್ಚೆಗುಂಡಿ ನಿರ್ಮಾಣವಾಗಿ ಸೊಳ್ಳೆ ಸಂತತಿ ಹೆಚ್ಚಿದೆ. ಮಕ್ಕಳು ಪ್ರಾರ್ಥನೆ ಸಲ್ಲಿಸುವಾಗ ಹಾಗೂ ಬಿಸಿಯೂಟ ಸೇವಿಸುವ ವೇಳೆ ಸೊಳ್ಳೆ ಕಚ್ಚುವುದು ಮಾಮೂಲಿನ ಸಂಗತಿ.

ಕುದೇರು ಗ್ರಾಮ ಪಂಚಾಯಿತಿಗೆ ಸೇರಿರುವ ಈ ಗ್ರಾಮದಲ್ಲಿ ಸುಮಾರು 750 ಜನಸಂಖ್ಯೆ ಇದೆ. ಬಹಳಷ್ಟು ಮಂದಿ ಕಡುಬಡರಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ ಹಗ್ಗಹೊಸೆದು ಮಾರಾಟ ಮಾಡಿ ಜೀವನದ ಬಂಡಿ ನೂಕುತ್ತಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮುಂದಾಗಿಲ್ಲ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಒಟ್ಟು 5 ಕೈಪಂಪ್‌ಗಳಿದ್ದು, ಒಂದರಲ್ಲಿ ಮಾತ್ರ ಸಾಧಾರಣವಾಗಿ ನೀರು ಬರುತ್ತಿದೆ. ಉಳಿದ ಕೈಪಂಪ್‌ಗಳು ದುರಸ್ತಿಗಾಗಿ ಕಾಯುತ್ತಿವೆ. ಕಿರುನೀರು ಸರಬರಾಜು ಯೋಜನೆ ಯಡಿ 2 ತೊಂಬೆ ಅಳವಡಿಸಲಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಲಭಿಸುತ್ತಿಲ್ಲ. ಹೆಚ್ಚುವರಿಯಾಗಿ ಕೊಳವೆ ಬಾವಿ ಕೊರೆಯಿಸಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.ಸಮರ್ಪಕ ರಸ್ತೆ ಸೌಲಭ್ಯವೂ ಇಲ್ಲ. ಕಚ್ಚಾ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಜನರು ಸಂಚರಿಸಲು ತೀವ್ರ ತೊಂದರೆಯಾಗುತ್ತದೆ. ದುರಸ್ತಿಗೆ ಕ್ರಮಗೊಂಡಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥ ಪುಟ್ಟಸ್ವಾಮಿ.  `ಸಮಸ್ಯೆ ಹೇಳಿಕೊಳ್ಳಲು ಗ್ರಾಮ ಪ್ರತಿನಿಧಿಸುವ ಗ್ರಾಮ ಪಂಚಾಯಿತಿ ಸದಸ್ಯರು ಇಲ್ಲ. ಸ್ವಚ್ಛತೆಗೂ ಒತ್ತು ನೀಡುತ್ತಿಲ್ಲ. ಇದರಿಂದ ತೊಂದರೆ ಅನುಭವಿ ಸುವಂತಾಗಿದೆ. ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳೀಯ ಆಡಳಿತ ಮುಂದಾಗಬೇಕು~ ಎಂಬುದು ಯಜಮಾನ ನಾಗಶೆಟ್ಟಿ ಅವರ ಒತ್ತಾಯ.

 

ಪ್ರತಿಕ್ರಿಯಿಸಿ (+)