ಕೊಟ್ಟಿಗೆಗೂ ಸೊಳ್ಳೆಪರದೆ

7

ಕೊಟ್ಟಿಗೆಗೂ ಸೊಳ್ಳೆಪರದೆ

Published:
Updated:
ಕೊಟ್ಟಿಗೆಗೂ ಸೊಳ್ಳೆಪರದೆ

ರಾಯಚೂರು ಸುತ್ತಮುತ್ತ ಸಣ್ಣ, ಅತಿ ಸಣ್ಣ ರೈತರ ಸಂಖ್ಯೆ ಕಡಿಮೆ. ಅಧಿಕ ಭೂಮಿ ಉಳ್ಳ ರೈತರೇ ಹೆಚ್ಚು. ರಾಯಚೂರಿನ ಬಲ ಭಾಗದಲ್ಲಿ ತುಂಗಭದ್ರಾ, ಎಡ ಭಾಗದಲ್ಲಿ ಕೃಷ್ಣಾ ನದಿ ಹರಿಯುತ್ತಿರುವುದರಿಂದ ನೀರಿಗೇನೂ ಅಂಥ ಕೊರತೆ ಇಲ್ಲ.ಇಲ್ಲಿನ ರೈತರು ಮೊದಲೆಲ್ಲ ಮಳೆಯಾಶ್ರಿತ ವಿಧಾನದಲ್ಲಿ ಭತ್ತ ಬೆಳೆಯುತ್ತಿದ್ದರು. ಈಗ ನೀರಾವರಿ ಸೌಲಭ್ಯ ಇಲ್ಲದೆ ಬೆಳೆಯುವುದೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಕೆಲಸ ಅರಸಿಕೊಂಡು ಈ ಜಿಲ್ಲೆಗೆ ಆಂಧ್ರದಿಂದ ಬಂದ ವಲಸಿಗರು, ನೀರಾವರಿ ಭೂಮಿಯನ್ನು ಗುತ್ತಿಗೆ ಪಡೆದು ಭತ್ತದ ನಾಟಿ ಆರಂಭಿಸಿದರು.ಅನಂತರ ಭೂಮಿಯನ್ನು ಖರೀದಿಸಿ ಭತ್ತವನ್ನೆ ಮೂಲ ಬೆಳೆಯನ್ನಾಗಿ ಮಾಡಿಕೊಂಡರು. ಇವರೊಂದಿಗೆ ಸ್ಥಳಿಯ ರೈತರು ಕೂಡ ಭತ್ತವನ್ನೇ ಬೆಳೆಯಲು ಆರಂಭಿಸಿದರು. ಹೀಗಾಗಿ ಜಿಲ್ಲೆಯ ಸಿಂಧನೂರು, ಕಾರಟಗಿ, ಮಾನ್ವಿ ಭಾಗದ ಡೈಮಂಡ್ ಸೋನಾ ಭತ್ತ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಖ್ಯಾತಿ ಗಳಿಸಿದೆ.ಆದರೆ ಇದೆಲ್ಲದರ ಜತೆಗೆ ಜನಸಂಖ್ಯೆ ಬೆಳೆಯುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಬಯಲು ಶೌಚಾಲಯ, ಚರಂಡಿ ಸಮಸ್ಯೆಗಳು ಇವೆ. ವರ್ಷದ ಆರೆಂಟು ತಿಂಗಳು ಗದ್ದೆಯಲ್ಲಿ ನೀರಿರುವುದರಿಂದ ಬಯಲು ನೆಲ ಸಮೃದ್ಧ ಸೊಳ್ಳೆ ಉತ್ಪಾದನಾ ಘಟಕವಾಗಿದೆ.ಇನ್ನು ಸೊಳ್ಳೆಗಳ ಬಗ್ಗೆ ಯಾರಿಗೂ ಹೆಚ್ಚಿಗೆ ಹೇಳಬೇಕಾಗಿಲ್ಲ. ಅವು ನಮ್ಮ ನಿತ್ಯದ ಸಂಗಾತಿಗಳು. ಸೊಳ್ಳೆ ಕಡಿತದಿಂದ ನಿದ್ದೆಯಿಲ್ಲದೇ ಪೇಚಾಡುವವರಿಗೆ ಇದು ಅರ್ಥವಾಗುತ್ತದೆ. ರಾಯಚೂರಿನಲ್ಲಿ ಸೆಕೆಗಿಂತ ಸೊಳ್ಳೆ ಓಡಿಸಲು ಫ್ಯಾನ್ ತಿರುಗುವುದೇ ಹೆಚ್ಚು. ಸೊಳ್ಳೆಗಳ ಸಂಖ್ಯಾ ಸ್ಫೋಟದ ಪರಿಣಾಮಕ್ಕೆ ಇಲ್ಲಿ ವಿದ್ಯುತ್ ಬಿಲ್ ಏರಿದೆ.ಇವುಗಳ ಹಾವಳಿ ಜಾನುವಾರುಗಳನ್ನೂ ಬಿಟ್ಟಿಲ್ಲ. ಅದಕ್ಕಾಗೇ ರೈತರು ಉಪಾಯ ಕಂಡುಕೊಂಡಿದ್ದಾರೆ. ಅದೇನೆಂದು ತಿಳಿಯಲು ಗಂಗಾವತಿಯಿಂದ- ಸಿಂಧನೂರು ಅಥವಾ ಲಿಂಗಸಗೂರು- ಕವಿತಾಳ ಮಾರ್ಗವಾಗಿ ನೀವು ರಾಯಚೂರಿಗೆ ರಾತ್ರಿ ಪ್ರಯಾಣ ಮಾಡಬೇಕು.ರಸ್ತೆ ಅಂಚಿನ ದೊಡ್ಡಿಗಳಲ್ಲಿ ದನಕರುಗಳು ಸೊಳ್ಳೆಪರದೆ ಒಳಗೆ ನಿಂತಿರುವ ದೃಶ್ಯ ಕಾಣುತ್ತದೆ. ರಾಯಚೂರಿನ ರೈತರು ನೀರಾವರಿಯಿಂದ ಶ್ರೀಮಂತರಾಗಿ ದನಕರುಗಳಿಗೂ ಸೊಳ್ಳೆ ಪರದೆ ಹಾಕುವ ಹೈಟೆಕ್ ಹೈನುಗಾರಿಕೆ ಅಳವಡಿಸಿಕೊಂಡರೇನು ಎಂದು ಅಚ್ಚರಿ ಪಟ್ಟರೆ ಅದು ನಿಮ್ಮ ತಪ್ಪಲ್ಲ.ಜಿಲ್ಲೆಗೆ ನೀರಾವರಿ ಬರುವ ಮೊದಲು ನವಣೆ, ಜೋಳ, ಹತ್ತಿ, ಸೂರ್ಯಕಾಂತಿಯ ಜೊತೆಗೆ ಕೆಲ ರೈತರು ಅತಿ ಕಡಿಮೆ ನೀರು ಬಳಕೆಯ ದೇಸಿ ತಳಿ ಭತ್ತವನ್ನು ಬೆಳೆಯುತ್ತಿದ್ದರು. ನೀರಾವರಿ ಸೌಕರ್ಯ ಬಂದ ಮೇಲೆ ದೇಸಿ ಭತ್ತದ ಜಾಗದಲ್ಲಿ ರಸಗೊಬ್ಬರ, ಕೀಟನಾಶಕ ಬೇಡುವ  ಸುಧಾರಿತ  ತಳಿಗಳು ಬಂದವು. ವರ್ಷದ ಆರೆಂಟು ತಿಂಗಳು ಗದ್ದೆಯಲ್ಲಿ ನೀರು ನಿಂತಿರುತ್ತದೆ.

 

ಸುಧಾರಿತ ತಳಿಗೆ ಬಳಸಿದ ರಾಸಾಯನಿಕ ಗೊಬ್ಬರ, ಅತಿಯಾದ ಕೀಟನಾಶಕ ನಿಂತ ನೀರಿಗೆ ಸೇರುತ್ತದೆ. ಹೀಗಾಗಿ ನೀರು ಸರಾಗ ಇಂಗುವುದಿಲ್ಲ, ಹರಿದು ಹೋಗುವುದೂ ಇಲ್ಲ. ನಿಂತ ನೀರೆಲ್ಲ ಸೊಳ್ಳೆಗಳ ಸೃಷ್ಟಿ ಕೇಂದ್ರವಾಗಿದೆ. ಸೊಳ್ಳೆಗಳ ಜೊತೆಗೆ ಸಣ್ಣ ಕೀಟ, ಹುಳುಗಳು ಹುಟ್ಟಿಕೊಂಡಿವೆ.ಆರಂಭದ ವರ್ಷಗಳಲ್ಲಿ ಅಷ್ಟು ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೊಳ್ಳೆ ಬಾಧೆ ಹೆಚ್ಚಾಗಿದೆ. ಈ ಕಾಟ ತಪ್ಪಿಸಿಕೊಳ್ಳಲು ಜನ ಸೊಳ್ಳೆ ಬತ್ತಿ ಉರಿಸುತ್ತಾರೆ, ಹೊಗೆ ಹಾಕುತ್ತಾರೆ, ಸೊಳ್ಳೆ ಪರದೆ ಒಳಗೆ ಮಲಗುತ್ತಾರೆ. ಆದರೆ ಹಾರುವ ಕೀಟದ ಬಾಧೆಗೆ ಒಳಗಾದ ರೈತನ ಸಂಗಾತಿಗಳಾದ ಹಸು, ಎತ್ತು, ಎಮ್ಮೆ, ಕೊಣ, ಕುರಿ, ಕರುಗಳ ರಕ್ಷಣೆ ಹೇಗೆ?ಸಿಂಧನೂರಿನ ಹೊಸಳ್ಳಿ ಕ್ಯಾಂಪ್ ರೈತ ಚಿದಾನಂದಪ್ಪ ಹೇಳುವುದು ಹೀಗೆ. `ಮೊದಲೆಲ್ಲ ಸಾವಯವ ಕೃಷಿಯಲ್ಲಿ ಭತ್ತದ ದೇಸಿ ತಳಿಗಳನ್ನು ಬೆಳೆದು ಅದರ ಅಕ್ಕಿಯ ಅನ್ನವನ್ನೇ ಊಟ ಮಾಡುತ್ತಿದ್ದೆವು. ನಮ್ಮ ಹಳ್ಳಿಯ ಜನರೂ ದೇಸಿ ತಳಿ ಆಹಾರ ತಿಂದು ಗಟ್ಟಿಮುಟ್ಟಾಗಿದ್ದರು. ಹೀಗಾಗಿ ಆಸ್ಪತ್ರೆಯ ಅವಶ್ಯಕತೆ ಇರಲಿಲ್ಲ.ಜಾನುವಾರುಗಳಿಗೂ ರೋಗಬಾಧೆ ಇರಲಿಲ್ಲ. ಸೊಳ್ಳೆ ಕಾಟವೂ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಬಯಲಲ್ಲಿ, ಕೊಟ್ಟಿಗೆಯಲ್ಲಿ ಕಟ್ಟಿದ ದನಕರುಗಳಿಗೆ ಈ ಸೊಳ್ಳೆಗಳು ಕಚ್ಚುತ್ತವೆ. ಕಚ್ಚಿದ ಜಾಗದಲ್ಲಿ ರಕ್ತ ಜಿನುಗಿ ಗಾಯವಾಗುತ್ತದೆ. ಗಾಯದ ಮೇಲೆ ನೊಣಗಳು ಮುತ್ತುತ್ತವೆ. ಹೀಗಾಗಿ ರೋಗಬಾಧೆಗೆ ತುತ್ತಾಗುತ್ತಿವೆ. ಹಾಲು ಕೊಡುವುದನ್ನು ಕಡಿಮೆ ಮಾಡಿವೆ. ಚಿಕ್ಕಪುಟ್ಟ ಕರುಗಳು ಸೊಳ್ಳೆ ಕಡಿತದಿಂದ ಸಾವನ್ನಪ್ಪುತ್ತಿವೆ~.ಈ ಹಾವಳಿಯಿಂದ ದನಕರುಗಳನ್ನು ಪಾರು ಮಾಡಲು ಬಲೆಗಳು ಬಂದಿವೆ. ಶ್ರೀಮಂತ, ಮಧ್ಯಮ ವರ್ಗದ ರೈತರು ಕೊಟ್ಟಿಗೆಯಲ್ಲಿ ಸೊಳ್ಳೆ ಪರದೆಗಳನ್ನು ಉಪಯೋಗಿಸುತ್ತಿದ್ದಾರೆ. ಬಡ ರೈತರು ರಸಗೊಬ್ಬರದ ಖಾಲಿ ಚೀಲಗಳನ್ನು ಬಿಚ್ಚಿ ಹೊದಿಕೆ ಮಾಡಿ ದನಗಳಿಗೆ ಕಟ್ಟುತ್ತಿದ್ದಾರೆ.ಆದರೂ ಸಮಸ್ಯೆ ಬೆಂಬಿಡುವುದಿಲ್ಲ. ಈ ಪ್ರದೇಶದಲ್ಲಿ ಬದುಕುವ ಜನ, ಜಾನುವಾರುಗಳಿಗೆ ಸೊಳ್ಳೆ ಕಡಿತದಿಂದ ಬರುವ ರೋಗಕ್ಕೆ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಬಂದೊದಗಿದೆ. ದುರಂತವೆಂದರೆ ರಾಯಚೂರಿನ ಸೊಳ್ಳೆ ಸಮಸ್ಯೆ ಈಗ ಪಕ್ಕದ ಯಾದಗಿರಿ ಜಿಲ್ಲೆಗೂ ಕಾಲಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry