ಶುಕ್ರವಾರ, ಜೂನ್ 25, 2021
30 °C

ಕೊಟ್ಟೂರು–ಹರಿಹರ ರೈಲು ಸಂಚಾರ ಇಂದಿನಿಂದ

ಬಸವರಾಜ ಮರಳಿಹಳ್ಳಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು (ಬಳ್ಳಾರಿ ಜಿಲ್ಲೆ): ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಕೊಟ್ಟೂರು–ಹರಿಹರ ರೈಲು ಮಾರ್ಗದಲ್ಲಿ ಸಂಚಾರಕ್ಕೆ ಸೋಮವಾರ ಚಾಲನೆ ದೊರೆಯಲಿದ್ದು, ಈ ಭಾಗದ ಜನರ ಅನೇಕ ದಿನಗಳ ಕನಸು ನನಸಾಗುತ್ತಿದೆ.ಲೋಕಸಭೆ ಚುನಾವಣೆಗೆ ಮುನ್ನ ಯುಪಿಎ ಸರ್ಕಾರ ನೀಡುತ್ತಿರುವ ಕೊಡುಗೆಗಳಲ್ಲಿ ಒಂದು ಎಂದೇ ಹೇಳಲಾಗುತ್ತಿರುವ ಈ ಯೋಜನೆಗೆ ಕಳೆದ ಎರಡು ದಶಕಗಳ ಹಿಂದೆಯೇ ರೈಲ್ವೆ ಸಚಿವರಾಗಿದ್ದ ಸಿ.ಕೆ.ಜಾಫರ್‌ ಶರೀಫ್‌  ಶಂಕುಸ್ಥಾಪನೆ ನೆರವೇರಿಸಿದ್ದರು.ಈಗಾಗಲೇ ಈ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದ್ದು, 65  ಕಿ.ಮೀ. ಅಂತರದ ಈ ಮಾರ್ಗದಲ್ಲಿ ಪ್ರತಿದಿನ ಒಂದು ಪ್ಯಾಸೆಂಜರ್‌ ರೈಲು (ಸಂಖ್ಯೆ 56529, 56530) ಸಂಚರಿಸಲಿದೆ.ರಸ್ತೆ ಮಾರ್ಗದ ಮೂಲಕ ಈ ಅಂತರವನ್ನು ಕೇವಲ ಒಂದೂವರೆ ಗಂಟೆ ಅವಧಿಯಲ್ಲಿ ಕ್ರಮಿಸಬಹುದಾಗಿದೆ. ಆದರೆ, ಆರಂಭಿಕ ಹಂತದಲ್ಲಿ ರೈಲಿನ ಮೂಲಕ ಹರಿಹರ ತಲುಪಲು ನಾಲ್ಕು ಗಂಟೆ ಬೇಕು.ಉದ್ದೇಶಿತ ರೈಲು ಸಂಚಾರ ಆರಂಭವಾಗುವುದರಿಂದ ಹೈದರಾಬಾದ್‌– ಕರ್ನಾಟಕದ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು ಸೇರಿದಂತೆ ಈ ಭಾಗದ ಕೈಗಾರಿಕೆಗಳ ಬೆಳವಣಿಗೆಗೂ ಕಾರಣವಾಗಲಿದೆ ಎನ್ನಲಾಗುತ್ತಿದೆ.ಹೊಸಪೇಟೆ ಮಾರ್ಗ ನೆನೆಗುದಿಗೆ: ಮೀಟರ್‌ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತನೆಯಾಗಿರುವ ಕೊಟ್ಟೂರು–ಹೊಸಪೇಟೆ ರೈಲು ಮಾರ್ಗ ಪ್ರಯಾಣಿಕ ರೈಲು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ಕಾರಣ­ದಿಂದ ನೆನಗುದಿಗೆ ಬಿದ್ದಿದೆ. ಈ ಮಾರ್ಗದಲ್ಲೂ ರೈಲು ಸಂಚಾರ ಪುನರ್‌ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಬಲವಾಗಿ ಕೇಳತೊಡಗಿದೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್‌ ಜೈನ್‌, ‘ಕೊಟ್ಟೂರು– ಹರಿಹರ ನೂತನ ರೈಲು ಮಾರ್ಗ ಆರಂಭವಾಗುತ್ತಿರುವುದು ಹರ್ಷದ ಸಂಗತಿ. ಆದರೆ, ಆದಾಯ ಮತ್ತು ಅನುಕೂಲದ ದೃಷ್ಟಿಯಿಂದ ಈ ಮಾರ್ಗವನ್ನು ಹೊಸಪೇಟೆವರೆಗೂ ವಿಸ್ತರಿಸಬೇಕು’ ಎಂಬ ಸಲಹೆ ನೀಡಿದ್ದಾರೆ.  24 ವರ್ಷಗಳ ನಂತರ ರೈಲು: 24 ವರ್ಷಗಳ ನಂತರ ಕೊಟ್ಟೂರು ಪಟ್ಟಣಕ್ಕೆ ರೈಲು ಬರುತ್ತಿದೆ. 1904ರಲ್ಲಿ ಆರಂಭವಾದ ಕೊಟ್ಟೂರು– ಹೊಸಪೇಟೆ ರೈಲು ಮಾರ್ಗವನ್ನು ಆದಾಯದ ನೆಪವೊಡ್ಡಿ 1990ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಅಲ್ಲಿಂದ ಇದುವರೆಗೂ ಕೊಟ್ಟೂರು– ಹರಿಹರ ನೂತನ ರೈಲು ಮಾರ್ಗ ಹಾಗೂ ಕೊಟ್ಟೂರು–ಹೊಸಪೇಟೆ ಬ್ರಾಡ್‌ಗೇಜ್‌ ಕಾಮಗಾರಿಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಮುಂಜಾನೆ 11ಕ್ಕೆ ಕೊಟ್ಟೂರು–ಹರಿಹರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.