ಕೊಟ್ಟೂರೇಶ್ವರನಿಗೆ ಭಕ್ತರಿಂದ ಹರಕೆ ಮಹಾಪೂರ

7

ಕೊಟ್ಟೂರೇಶ್ವರನಿಗೆ ಭಕ್ತರಿಂದ ಹರಕೆ ಮಹಾಪೂರ

Published:
Updated:

ಕೊಟ್ಟೂರು: ವಿವಿಧ ಹರಕೆ ಹೊತ್ತ ಭಕ್ತರು ಶನಿವಾರ ಕೊಟ್ಟೂರೇಶ್ವರ ಸ್ವಾಮಿಗೆ ದೀಡ್ ನಮಸ್ಕಾರ ಹಾಕಿದರು.ರೋಗ ವಾಸಿಯಾಗಿದ್ದಕ್ಕೆ, ಸಮಸ್ಯೆ ಬಗೆಹರಿದಿದ್ದಕ್ಕೆ, ಇಷ್ಟಾರ್ಥ ನೆರವೇರಿದ್ದಕ್ಕೆ...., ಕೊಟ್ಟೂರೇಶನಿಗೆ ಚಿಕ್ಕ ಬಾಲಕರಿಂದ ವೃದ್ಧರವರೆಗೆ ವಯಸ್ಸಿನ ದೀಡ್ ನಮಸ್ಕಾರ ಹಾಕಿ ಭಕ್ತಿ ಪೂರ್ವಕವಾಗಿ ನಮಿಸಿದರು.ತಮ್ಮ ತಮ್ಮ ಮನೆಗಳಿಂದ ಈ ದೀಡ್ ನಮಸ್ಕಾರ ಆರಂಭವಾಗುತ್ತದೆ. ದೇಹವನ್ನು ಸಂಪೂರ್ಣವಾಗಿ ನೆಲಕ್ಕೆ ಮಲಗಿ ಭೂಮಿಗೆ ನಮಸ್ಕರಿಸುತ್ತಾ ಕೈಯಲ್ಲಿದ್ದ ಮೋಳ ಉದ್ದದ ಬಡಿಗೆಯಿಂದ ಗೀಟ್ ಹಾಕುತ್ತ ಮುಂದೆ ಸಾಗುತ್ತಾರೆ.ದೇವಸ್ಥಾನ ಸಮೀಪಿಸುವ ಸಮಯಕ್ಕೆ ಕೆಲವರು ನಿತ್ರಾಣಗೊಂಡಿರುತ್ತಾರೆ. ಆದರೂ ದೀಡ್ ನಮಸ್ಕಾರ ಹಾಕುವುದನ್ನು ನಿಲ್ಲಿಸುವಂತಿಲ್ಲ. ಕೊಟ್ಟೂರೇಶ್ವರ ಸ್ವಾಮಿಗೆ ಕೊನೆ ನಮಸ್ಕಾರ ಹಾಕಿ ದೀಡ್ ನಮಸ್ಕಾರವನ್ನು ನಿಲ್ಲಿಸುತ್ತಾರೆ. ಇದೇ ರೀತಿ ಗಚ್ಚಿನ ಮಠಕ್ಕೂ ಭಕ್ತರು ದೀಡ್ ನಮಸ್ಕಾರ ಹಾಕುತ್ತಿದ್ದ ದೃಶ್ಯ ಕಂಡು ಬಂತು.

ರೈತರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆ ಮಾಡುತ್ತಾ ಕೊಟ್ಟೂರೇಶ್ವರ ಸ್ವಾಮಿಗೆ ನಮಿಸಿದರು.ಆಕರ್ಷಕ ಮೈಮಾಟದ ಎತ್ತುಗಳಿಗೆ ಜೂಲ್ ಹಾಕಿ, ಹಣೆಪಟ್ಟಿ ಕಟ್ಟಿಕೊಂಡು ಹೊರಟ ಎತ್ತುಗಳ ಮೆರವಣಿಗೆ ಜಾತ್ರೆಗೆ ಮೆರುಗು ನೀಡಿತ್ತು.ಕೊಟ್ಟೂರೇಶ್ವರ ಸ್ವಾಮಿ ಹೆಸರೇಳಿ ಕೆಲ ರೈತರು ಸಣ್ಣ ಸಣ್ಣ ಹಸುಗಳು ಶ್ರೀ ಸ್ವಾಮಿಗೆ ಅರ್ಪಿಸಿದರು. ಇವುಗಳು ಕೊಟ್ಟೂರೇಶ್ವರ ಸ್ವಾಮಿಯ ಹೆಸರಿನಲ್ಲಿ ಸ್ವತಂತ್ರವಾಗಿ ಬದುಕುತ್ತವೆ.ಕಡಿಮೆ ಬೆಲೆಗೆ ಸಿಗುತ್ತಿದ್ದ ಘಮಘಮಿಸುವ ದವನವನ್ನು ಭಕ್ತರು ಖರೀದಿಸಿ ಸ್ನೇಹಿತರಿಗೆ ಬಂಧುಗಳಿಗೆ ಕೊಟ್ಟು ಶುಭಕೋರಿದರು.ಘಮಘಮಿಸುವ ದವನದಿಂದಾಗಿ ದೇವಸ್ಥಾನ ಮತ್ತು ತೇರು ಬಯಲು ದವನದ ಪರಿಮಳ ಭಕ್ತರನ್ನು ಸೆಳೆದಿತ್ತು.

ಇನ್ನೂ ರೈತರು ತಮ್ಮ  ವ್ಯವಸಾಯಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರೆ, ಗೃಹಿಣಿಯರು ಅಡುಗೆ ಮನೆ ಬೇಕಾದ ಸಾಮಗ್ರಿ, ಬಳೆ, ಮಕ್ಕಳಿಗೆ ಆಟದ ಸಾಮಾನುಗಳನ್ನು ಖರೀದಿಸುವ ಭರಾಟೆ ಜೋರಾಗಿತ್ತು. ಮೂರು ನಾಟಕ ಕಂಪನಿಗಳು ಹಲವಾರು ದಿನಗಳ ಕಲಾಭಿಮಾನಿಗಳನ್ನು ರಂಜಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry