ಶನಿವಾರ, ಜನವರಿ 25, 2020
19 °C

ಕೊಟ್ಟೂರೇಶ್ವರ ಸ್ವಾಮಿ ಭವ್ಯ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಇದೇ 16ರಂದು ಕೊಟ್ಟೂ­ರಿನಲ್ಲಿ ನಡೆಯುವ ಗುರು ಕೊಟ್ಟೂ­ರೇಶ್ವರ ಕಾರ್ತಿಕೋತ್ಸವದ ಹಿನ್ನೆಲೆ­ಯಲ್ಲಿ, ಗುರುವಾರ ಪಟ್ಟಣದ ಗುರು ಮಾಲಾವೃಂದದ ವತಿಯಿಂದ ಕೊಟ್ಟೂರೇಶ್ವರ ಸ್ವಾಮಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.ಇಲ್ಲಿನ ಕೆವಿಓಆರ್‌ಕಾಲೋನಿಯ ಪತ್ರಿಬಸ­ವೇಶ್ವರ ದೇಗುಲದಿಂದ ಪ್ರಮುಖ ಬೀದಿಗಳ ಮೂಲಕ ಹಗರಿ ಆಂಜನೇಯ ದೇಗುಲ­ದವರೆಗೂ ವಿಜೃಂಭಣೆಯಿಂದ ಮೆರವಣಿಗೆ ಸಾಗಿ ಬಂದಿತು. ನೂರಾರು ಮಹಿಳೆಯರು ಕಳಸದೊಂದಿಗೆ ಪಾಲ್ಗೊಂಡಿದ್ದರು.ಕಳೆದ ಕೆಲವು ದಿನಗಳಿಂದ ಕೊಟ್ಟೂರೇಶ್ವರರ ಮಾಲೆ ಧರಿಸಿ ವ್ರತಾಚಾರಣೆಯಲ್ಲಿರುವ ಮಾಲಾಧಾರಿಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು. ‘ಕೊಟ್ಟೂರು ದೊರೆಯೆ, ನಿನಗಾರು ಸರಿಯೆ ಸರಿ ಎಂದವರ ಹಲ್ಲು ಮುರಿಯೇ’... ಎಂದು ಜಯಘೋಷ ಹಾಕಿದರು. ಐಕ್ಯಧರಾಯ, ಕೊಟ್ಟವರಾಯ, ಕೊಡುಗೈ ಪತಿಯೆ ಎಂಬಿತ್ಯಾದಿ ನೂರೆಂಟು ನಾಮಾವಳಿಗಳನ್ನು ಮೆರವಣಿಗೆಯುದಕ್ಕೂ ಶ್ರದ್ಧಾ ಭಕ್ತಿಯಿಂದ ಪಠಿಸಿದರು.ಮೆರವಣಿಗೆಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಸಮಾರಂಭದ ಸಾನಿಧ್ಯ ವಹಿಸಿದ್ದ ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿ, ಯುವ ಜನತೆ ಧಾರ್ಮಿಕ ಶ್ರೀಮಂತಿಕೆ ಹೊಂದಿದರೆ ಸಮಾಜದ ನೈತಿಕ ಮೌಲ್ಯಗಳು ಗಟ್ಟಿಗೊಳ್ಳುತ್ತವೆ ಎಂದು ನುಡಿದರು,ಹಾಲಶಂಕರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕ್ಷೇತ್ರ ಅತಂತ್ರಗೊಂಡಿರುವ ಸಂಕೀರ್ಣ ಸಂದರ್ಭದಲ್ಲಿ ಮಾಲಾಧಾರಿಗಳು ವರ್ಷ­ದುದ್ದಕ್ಕೂ ಸತ್ಸಂಗಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಧಾರ್ಮಿಕ ಶಿಸ್ತು ಬೆಳೆಸಲು ಶ್ರಮಿಸುವಂತೆ ಸಲಹೆ ನೀಡಿದರು.ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೇಮರಾಜ ನಾಯ್ಕ ಸಮಾಳ ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕಳೆದ ಬಾರಿ ಕೊಟ್ಟೂರೇಶ್ವರರ ಪತಾಕೆ ಪಡೆದಿದ್ದ ಎಂ.ಪಿ.ಎಂ.ಮಂಜುನಾಥ ₨ 51ಸಾವಿರ ಕಾಣಿಕೆ ಸಲ್ಲಿಸಿದರು. ಈ ಬಾರಿ ಬೆಣ್ಣೆದೋಸೆ ಹೊಟೇಲ್ ಪ್ರಕಾಶ್ ₨ 31ಸಾವಿರ ಗಳಿಗೆ ಪತಾಕೆ ಪಡೆದರು.ಮಾಲಾವೃಂದದ ಬಸವರಾಜ ಅಯ್ಯನಗೌಡ, ಕಡ್ಲಬಾಳು ಕೊಟ್ರೇಶ್, ಎ.ಎಂ.ನಾಗಯ್ಯ, ಅಕ್ಕಿ ಮಲ್ಲಿಕಾರ್ಜುನ, ಬಾಳೆಕಾಯಿ ಸಿದ್ದೇಶ್, ಹೋಟೆಲ್‌್ ಗಣೇಶ್, ಕೆ.ಧನಂಜಯ, ಸಿ.ಶಿವಾನಂದ, ಬಲ್ಲಾಹುಣ್ಸಿ ಗುರು, ಕಿರಾಣಿ ಕೊಟ್ರೇಶ್, ಫೈನಾನ್ಸ್ ಮಂಜುನಾಥ,  ಸುರೇಶ್, ಉಜ್ಜನಗೌಡ, ಮಹಾಂತೇಶ್, ಹೊಟೇಲ್ ಜಾತಪ್ಪ, ಸಂಗಯ್ಯಸ್ವಾಮಿ, ನಾಗರಾಜ, ಹಾಗೂ ಡಿ.ಕೊಟ್ರೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)