ಕೊಡಗಿಗೆ ಕಾಲಿಡದಂತೆ ಅಶೀಸರಗೆ ಬೆದರಿಕೆ

7

ಕೊಡಗಿಗೆ ಕಾಲಿಡದಂತೆ ಅಶೀಸರಗೆ ಬೆದರಿಕೆ

Published:
Updated:
ಕೊಡಗಿಗೆ ಕಾಲಿಡದಂತೆ ಅಶೀಸರಗೆ ಬೆದರಿಕೆ

ಮಡಿಕೇರಿ: ಜೀವ ವೈವಿಧ್ಯ ಸಂರಕ್ಷಣೆ ಕುರಿತು ಅಧಿಕಾರಿಗಳ ಸಭೆ ನಡೆಸಲು ಬಂದಿದ್ದ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರನ್ನು  ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹೀನಾಯವಾಗಿ ನಿಂದಿಸಿ, ಇನ್ನೆಂದಿಗೂ ಕೊಡಗು ಜಿಲ್ಲೆಗೆ ಕಾಲಿಡದಂತೆ ಬೆದರಿಕೆ ಹಾಕಿ ನಗರದಿಂದ ಓಡಿಸಿದ ಘಟನೆ  ಬುಧವಾರ ನಡೆಯಿತು.ಇಲ್ಲಿಯ ಕೋಟೆ ಸಭಾಂಗಣದಲ್ಲಿ ಬೆಳಿಗ್ಗೆ ಅಧಿಕಾರಿಗಳ ಸಭೆ ನಡೆಸಿದ ಅಶೀಸರ ಅವರು, ಕೊಡಗು ಜಿಲ್ಲೆಯಲ್ಲಿರುವ ಜೀವವೈವಿಧ್ಯ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಭಾಂಗಣ ಪ್ರವೇಶಿಸಿದ ಬಿಜೆಪಿ ಕಾರ್ಯಕರ್ತರು ಅಶೀಸರ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸಭೆಗೆ ಅಡ್ಡಿಪಡಿಸಿದರು.ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಗೆ ಜಿಲ್ಲೆಯ 16 ಹೋಬಳಿಗಳನ್ನು ಸೇರ್ಪಡೆಗೊಳಿಸಬೇಕೆಂದು ಅಶೀಸರ ಅವರು ವರದಿ ನೀಡಿದ್ದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಕೊಡಗು ಜಿಲ್ಲೆಯನ್ನು ಅರಣ್ಯ ಪ್ರದೇಶವೆಂದು ಘೋಷಿಸಿ ಇಲ್ಲಿಂದ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.`ವಿದೇಶಿ ಕಂಪೆನಿಗಳಿಂದ ಹಣ ಪಡೆಯಲು ಡೋಂಗಿ ಪರಿಸರವಾದಿಗಳ ಜೊತೆ ಕೈಜೋಡಿಸಿ ಇಂತಹ ಹೇಳಿಕೆಗಳನ್ನು ನೀಡುತ್ತ್ದ್ದಿದೀರಿ. ಜಿಲ್ಲೆಗೆ ಮಾರಕವಾಗುವಂತಹ ಹೇಳಿಕೆ ನೀಡಿರುವ ನೀವು ಇನ್ನು ಮುಂದೆ ಕೊಡಗು ಜಿಲ್ಲೆಗೆ ಕಾಲಿಡಬಾರದು' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಅಶೀಸರ ಅವರು ಮಾತನಾಡಲು ಯತ್ನಿಸಿದಾಗ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. `ತಕ್ಷಣವೇ ಜಿಲ್ಲೆಯಿಂದ ಹೊರಟುಹೋಗಿ, ಇನ್ನೆಂದಿಗೂ ಈ ಕಡೆ ತಲೆ ಹಾಕಬೇಡಿ' ಎಂದು ಬೆದರಿಕೆ ಹಾಕಿದರು.ನಂತರ ಅಶೀಸರ ಅವರು ವಿಶ್ರಮಿಸಲು ನಗರದ ಹೊರವಲಯದಲ್ಲಿರುವ ಅರಣ್ಯ ಇಲಾಖೆಯ ಅತಿಥಿಗೃಹಕ್ಕೆ ಹೋದರು. ಪ್ರತಿಭಟನಾಕಾರರು ಅಲ್ಲಿಗೂ ಬಂದು ಪ್ರತಿಭಟನೆ ಮುಂದುವರಿಸಿದರು. `ತಕ್ಷಣವೇ ಹೊರಡಿ, ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಬೇಡಿ' ಎಂದು ಎಚ್ಚರಿಕೆ ನೀಡಿದರು.ಅಶೀಸರ ಅವರ ಜೊತೆ ಸುದ್ದಿಗಾರರು ಮಾತನಾಡಲು ಪ್ರಯತ್ನಿಸಿದಾಗ ಇದಕ್ಕೆ ಅವಕಾಶ ಕೊಡದ ಪ್ರತಿಭಟನೆಕಾರರು, `ನಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಪತ್ರಿಕೆಗಳಿಗೆ ಹೇಳಿಕೆ ನೀಡಬೇಡಿ. ಹೊರಟುಹೋಗಿ' ಎಂದು ತೀವ್ರ ಗದ್ದಲ ಎಬ್ಬಿಸಿದರು. ನಂತರ ಅಶೀಸರ ಪೊಲೀಸರ ಬೆಂಗಾವಲಿನಲ್ಲಿ ಮೈಸೂರಿನತ್ತ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry