ಕೊಡಗಿನಲ್ಲಿ ಕಿತ್ತಳೆಗೆ ಕೊರತೆ

7

ಕೊಡಗಿನಲ್ಲಿ ಕಿತ್ತಳೆಗೆ ಕೊರತೆ

Published:
Updated:
ಕೊಡಗಿನಲ್ಲಿ ಕಿತ್ತಳೆಗೆ ಕೊರತೆ

ಕೊಡಗಿನ ಕಿತ್ತಳೆ ಅತ್ಯಂತ ಜನಪ್ರಿಯ. ಸ್ವಾದ,ಗಾತ್ರ, ಬಣ್ಣಗಳನ್ನು ಉಳಿಸಿಕೊಂಡಿರುವ ಕೊಡಗಿನ ಕಿತ್ತಳೆಗೆ  ವರ್ಷದಲ್ಲಿ ಎರಡು ಸೀಸನ್. ಮಳೆಗಾಲದ ಕಿತ್ತಳೆ ಸೀಸನ್ ಮುಗಿದಿದ್ದು, ಈಗ ಚಳಿಗಾಲದ ಕಿತ್ತಳೆ ಮಾರುಕಟ್ಟೆಗೆ ಬರುತ್ತಿದೆ.ಈ ವರ್ಷ ಕಿತ್ತಳೆಯ ಫಸಲಿನ ಪ್ರಮಾಣ ಕಡಿಮೆ ಇದೆ. ಕೊರತೆಯ ನಡುವೆಯೂ ನೆರೆಯ ಕೇರಳದ ಮಾರುಕಟ್ಟೆಗಳಲ್ಲಿ ಕೊಡಗಿನ ಕಿತ್ತಳೆಗೆ ಭಾರೀ ಬೇಡಿಕೆ ಕಂಡುಬಂದಿದೆ. ಈಗ ಹಣ್ಣುಗಳ ಕೊಯ್ಲು ಆರಂಭವಾಗಿದೆ. ಜಿಲ್ಲೆಯ ವಿವಿಧ ಭಾಗಗಳ ವ್ಯಾಪಾರಿಗಳು ಹಣ್ಣುಗಳನ್ನು ಖರೀದಿಸಿ  ಮಾರಾಟ ಮಾಡುತ್ತಿದ್ದಾರೆ. ಕಾಫಿ  ತೋಟಗಳಿಂದ ಸಂಗ್ರಹಿಸಿದ ಕಿತ್ತಳೆ ಹಣ್ಣುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದಾರೆ. ಚಳಿಗಾಲದ ಕಿತ್ತಳೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಜಿಲ್ಲೆಯ ವ್ಯಾಪಾರಿಗಳು ಇಲ್ಲಿ ಲಭ್ಯವಿರುವ   ಕಿತ್ತಳೆ ಹಣ್ಣುಗಳನ್ನು ಖರೀದಿಸಿ ಜಿಲ್ಲೆಯ ಹೊರಭಾಗಕ್ಕೆ ಕಳಿಸುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಕಿತ್ತಳೆ ಹಣ್ಣುಗಳಿಲ್ಲ.

 

ಒಂದೆರಡು ದಶಕಗಳ ಹಿಂದೆ ಹಲವಾರು ಲೋಡುಗಳಷ್ಟು ಹಣ್ಣುಗಳನ್ನು ಮಾರುತ್ತಿದ್ದ ಎಸ್ಟೇಟುಗಳಲ್ಲಿ ಈಗ ಒಂದೆರಡು ಲೋಡು ಹಣ್ಣು ಸಿಗುವುದು ಕಷ್ಟವಾಗಿದೆ.ಸಣ್ಣ ಕಾಫಿ ತೋಟಗಳಲ್ಲಿ ಕಿತ್ತಳೆ ಹಣ್ಣು ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ ಪ್ರಮಾಣದಲ್ಲಿದೆ. ಕಳೆದ ಸಾಲಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೊಡಗಿನ ಕಿತ್ತಳೆ ಗಿಡಗಳಲ್ಲಿದ್ದ ಹೂವುಗಳು ಉದುರಿ ಹೋದ ಪರಿಣಾಮ ಗಿಡಗಳಲ್ಲಿ ಮಿಡಿ ಕಚ್ಚಲಿಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಕಿತ್ತಳೆ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ನಿರೀಕ್ಷಿಸಿದಷ್ಟು  ಪ್ರಮಾಣದ ಹಣ್ಣುಗಳು ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಕಿತ್ತಳೆ ಕೊಯ್ಲು ಈಗ ಬಿರುಸಾಗಿ ನಡೆಯುತ್ತಿದೆ. ಕೆ.ಜಿ.ಗೆ 30 ರಿಂದ 40ರೂ ಬೆಲೆ ಇದೆ. ಇತ್ತೀಚಿನ ವರ್ಷಗಳಲ್ಲಿ ಹಣ್ಣಿನ ಗಾತ್ರ ಸಣ್ಣದಾಗಿದೆ.ಆದರೂ  ಕಿತ್ತಳೆಗೆ ಬೇಡಿಕೆ ಇದ್ದೇ ಇದೆ. ಎನ್ನುತ್ತಾರೆ ನಾಪೋಕ್ಲುವಿನ ಕಿತ್ತಳೆ ವ್ಯಾಪಾರಿ ಹಂಸ. ಗೋಣಿಕೊಪ್ಪಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘವೂ ಕಿತ್ತಳೆ ಹಣ್ಣಿನ ಅಭಾವ ಎದುರಿಸುತ್ತಿದೆ. ಇಲ್ಲಿನ  ಕಿತ್ತಳೆ ಸಂಸ್ಕರಣಾ ಘಟಕದಲ್ಲೂ ಹಣ್ಣಿನ ಕೊರತೆ ಇದೆ. ಐದು ಮೆಟ್ರಿಕ್‌ಟನ್ ಹಣ್ಣುಉತ್ಪನ್ನಗಳ ಉತ್ಪಾದನಾ ಸಾಮರ್ಥ್ಯವನ್ನು ಘಟಕ ಹೊಂದಿದ್ದು ಕಿತ್ತಳೆ ಕೊರತೆಯಿಂದಾಗಿ ಅನಾನಾಸ್, ಫ್ಯಾಷನ್ ಫ್ರೂಟ್, ಟೊಮೆಟೊ, ನಿಂಬೆ, ಮಾವು ಮುಂತಾದ ಹಣ್ಣುಗಳನ್ನು ಅವಲಂಬಿಸಬೇಕಾಗಿದೆ ಎನ್ನುತ್ತಾರೆ ಕಿತ್ತಳೆ ಬೆಳೆಗಾರರ  ಸಂಘದ ಅಧ್ಯಕ್ಷ ಅರುಣ್ ಮಾಚಯ್ಯ.ಕಾಫಿ ತೋಟಗಳಲ್ಲಿನ  ಕಿತ್ತಳೆ ಮರಗಳು ಹಳದಿ ಎಲೆರೋಗಕ್ಕೆ ತುತ್ತಾಗಿದ್ದು ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ಹಣ್ಣಿನ ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಕುಸಿತ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry