ಕೊಡಗಿನಲ್ಲಿ 3000 ಕೋಟಿ ಹೂಡಿಕೆ: ಚಿದ್ವಿಲಾಸ್

7
ಕೊಡಗು ವ್ಯಾಪಾರ ಅಭಿವೃದ್ಧಿ ಶೃಂಗಸಭೆ

ಕೊಡಗಿನಲ್ಲಿ 3000 ಕೋಟಿ ಹೂಡಿಕೆ: ಚಿದ್ವಿಲಾಸ್

Published:
Updated:

ಮಡಿಕೇರಿ: ನಗರದಲ್ಲಿ ನಡೆದ ಕೊಡಗು ವ್ಯಾಪಾರ ಅಭಿವೃದ್ಧಿ ಶೃಂಗ ಸಭೆಯಲ್ಲಿ ನಿರೀಕ್ಷೆಗೂ ಮೀರಿ 286 ಉದ್ಯಮಿಗಳು ಅಂದಾಜು 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿದ್ದಾರೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಚಿದ್ವಿಲಾಸ್ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಬಂಡವಾಳ ಹೂಡಿಕೆಯ ಒಡಂಬಡಿಕೆಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಹೂಡಿಕೆ ಮೊತ್ತ ರೂ.4 ಸಾವಿರ ಕೋಟಿಗೆ ತಲುಪುವ ವಿಶ್ವಾಸವಿದೆ ಎಂದರು.ಇವರೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 102 ಉದ್ಯಮಿಗಳು 867 ಕೋಟಿ ರೂಪಾಯಿ, ಶಿಕ್ಷಣ ಕ್ಷೇತ್ರದಲ್ಲಿ 14 ಉದ್ಯಮಿಗಳು 170 ಕೋಟಿ, ಆರೋಗ್ಯ ಕ್ಷೇತ್ರದಲ್ಲಿ 15 ಉದ್ಯಮಿಗಳು 500 ಕೋಟಿ, ಸಣ್ಣ ಕೈಗಾರಿಕೆ ಕ್ಷೇತ್ರ 139 ಉದ್ಯಮಿಗಳು 2000 ಕೋಟಿ, ಇತರೆ ಕ್ಷೇತ್ರದಲ್ಲಿ 16 ಉದ್ಯಮಿಗಳು 86 ಕೋಟಿ ರೂಪಾಯಿಯ ಬಂಡವಾಳ ಒಡಂಬಡಿಕೆಗೆ ಸಹಿ ಹಾಕಿರುವುದಾಗಿ ತಿಳಿಸಿದರು.ಅತಿ ಹೆಚ್ಚು ಹೂಡಿಕೆದಾರರು ಸ್ಥಳೀಯರಾಗಿದ್ದು, ಸ್ವಂತ ಜಾಗದಲ್ಲಿಯೇ ತಮ್ಮ ಯೋಜನೆಗಳನ್ನು ಆರಂಭಿಸಲು ಮುಂದಾಗಿದ್ದಾರೆ. ಇದು ಪರಿಸರ ಪೂರಕ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡಗಿನಲ್ಲಿ ಬಂಡವಾಳ ಹೂಡಿಕೆಯ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಜಂಟಿ ನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ನೇಮಕಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಚೆಂಬರ್ ವತಿಯಿಂದ 5 ಜನ ಸದಸ್ಯರ ತಂಡ ರಚಿಸಲಾಗಿದ್ದು, ಇವರು ಪ್ರತಿ ತಿಂಗಳು ಹೂಡಿಕೆ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ರಾಜ್ಯ ಚೇಂಬರ್ ಆಫ್ ಕಾಮರ್ಸ್‌ನ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಜಿಲ್ಲಾ ಚೇಂಬರ್‌ನ ಕಾರ್ಯದರ್ಶಿ ಅಂಬೆಕಲ್ ನವೀನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾಜರಿದ್ದರು.  ಬಂಡವಾಳಶಾಹಿಗಳ ಪರ ಸಮಾವೇಶ: ಆರೋಪ

ಮಡಿಕೇರಿ:
ನಗರದಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಶೃಂಗ ಸಭೆಯು ಬಂಡವಾಳಶಾಹಿಗಳ ಪರವಾಗಿದ್ದು, ಇದು ಪರಿಸರಕ್ಕೆ ಮಾರಕವಾಗಲಿದೆ ಎಂದು ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಪರಿಸರ ಪೂರಕ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುವುದು ಎಂಬ ಸಭ್ಯ ಹೇಳಿಕೆ ನೀಡಿದ್ದರು. ಆದರೆ ಇದೀಗ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಶೃಂಗ ಸಭೆಯ ಬಾಧಕಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲು ಪೊಲೀಸರು ಅನುವು ಮಾಡಿಕೊಡಲಿಲ್ಲ. ಇದರ ಹಿಂದೆ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಆರೋಪಿಸಿದರು.ಕೊಡಗು ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಮೇಜರ್ (ನಿವೃತ್ತ) ಬಿ.ಸಿ. ನಂಜಪ್ಪ ಮಾತನಾಡಿ, ಕೊಡಗಿನಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಇಲ್ಲಿನ ಪರಿಸರ ಹಾಳು ಮಾಡಿ, ರೈತಾಪಿ ವರ್ಗಕ್ಕೆ ತೊಂದರೆ ಉಂಟಾಮಾಡುವ ಉದ್ದೇಶವಾಗಿದೆ ಎಂದು ಆರೋಪಿಸಿದರು.ಶೃಂಗಸಭೆಯಲ್ಲಿ ಕೆಲ ಬಂಡವಾಳದಾರರ ಯೋಜನೆಗಳ ಅನುಷ್ಠಾನಕ್ಕೆ ಇಲ್ಲಿನ ಕೃಷಿಕರ ಭೂಮಿಯನ್ನು ಕಸಿದು ಕೊಳ್ಳಲು ಸರ್ಕಾರ ಮುಂದಾಗಿದ್ದು, ಇದರಿಂದ ಸ್ಥಳೀಯ ಜನತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ತಿಳಿಸಿದರು. ಮುಂದಿನ ಚುನಾವಣೆಗೆ ಹಣ ಮಾಡುವ ಹುನ್ನಾರದಿಂದ ಜಿಲ್ಲೆಯ ಜನಪ್ರತಿನಿಧಿಗಳು ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ್ದಾರೆಂದು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry