ಮಂಗಳವಾರ, ನವೆಂಬರ್ 12, 2019
26 °C

ಕೊಡಗಿನಲ್ಲೂ ಕುಡಿಯುವ ನೀರಿನ ಸಮಸ್ಯೆ!

Published:
Updated:

ಮಡಿಕೇರಿ: ಅತಿ ಹೆಚ್ಚು ಮಳೆ ಬೀಳುವ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೂ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಕೊರತೆ ನೀಗಿಸಲು ನಗರಸಭೆಯು ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದೆ.ಸದ್ಯಕ್ಕೆ ಇಲ್ಲಿನ `ಪುಟಾಣಿ ನಗರ'ದಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಆ ಪ್ರದೇಶದಲ್ಲಿ 12,000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆಕ್ಟ್ರಾಯ್ ನಗರ ಪ್ರದೇಶದಲ್ಲೂ ನೀರಿನ ಸಮಸ್ಯೆ ಕೇಳಿಬಂದಿದ್ದು, ಸದ್ಯದಲ್ಲಿಯೇ ಅಲ್ಲಿಗೂ ನೀರಿನ ಪೂರೈಕೆ ಆರಂಭಿಸಲಾಗುವುದು ಎಂದು ನಗರಸಭೆ ಆಯುಕ್ತ ಶಶಿಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.ಬೇಸಿಗೆಯಲ್ಲಿ ನೀರು ಪೂರೈಸಲು ರೂ. 40 ಲಕ್ಷ ಅಗತ್ಯ ಇರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರಬರೆದಿದ್ದೇವೆ. ಇದಕ್ಕೆ ತಗಲುವ ವೆಚ್ಚವನ್ನು ತಾನೇ ಭರಿಸಿಕೊಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ವರ್ಷ ರೂ 36 ಲಕ್ಷ ಹಣವನ್ನು ವ್ಯಯಿಸಲಾಗಿತ್ತು ಎಂದು ಅವರು ಹೇಳಿದರು.ನಗರದಲ್ಲಿ ಸುಮಾರು 33,000 ಜನಸಂಖ್ಯೆ ಇದ್ದು, ಪ್ರತಿದಿನ 4.4 ದಶಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಪ್ರಮುಖ ಜಲಮೂಲವಾಗಿರುವ ಕೂಟುಹೊಳೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಮಳೆಗಾಲದವರೆಗೆ ಈಗಿರುವ ನೀರನ್ನೇ ಬಳಸಬೇಕಾಗಿರುವುದರಿಂದ ನಗರದ ಹಲವು ಬಡಾವಣೆಗಳಿಗೆ ಎರಡು ದಿನಗಳಿಗೊಮ್ಮೆ, ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ.ಕಳೆದ ತಿಂಗಳು 2- 3 ಮಳೆ ಸುರಿದ ಪರಿಣಾಮವಾಗಿ ಒಂದಿಷ್ಟು ನೀರು ಕೂಟುಹೊಳೆಯಲ್ಲಿ ಸಂಗ್ರಹವಾಗಿತ್ತು. ಆ ನೀರು ಇಲ್ಲಿಯವರೆಗೆ ಬಳಕೆಗೆ ಬಂದಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಫೆಬ್ರುವರಿ ಮೊದಲ ವಾರದಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದ್ದನ್ನು ಸ್ಮರಿಸಬಹುದು.ಇತರೆಡೆಯೂ ಸಮಸ್ಯೆ

ಕಾವೇರಿ ದಡದಲ್ಲಿರುವ ಕುಶಾಲನಗರದಲ್ಲೂ ನೀರಿನ ಸಮಸ್ಯೆ ತುಂಬಾ ಇದೆ. ಹಲವು ಬಡಾವಣೆಗಳಲ್ಲಿ 3- 4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಪಕ್ಕದ  ಕೂಡಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ರಸ್ತೆ ಕಾಮಗಾರಿ ಕೈಗೊಳ್ಳಲು ಕೂಡ ನೀರಿನ ಕೊರತೆ ಕಂಡುಬರುತ್ತಿದೆ.ಪೊನ್ನಂಪೇಟೆ, ಗೋಣಿಕೊಪ್ಪಲಿನಲ್ಲಿ ಹಲವು ಕಡೆ ತೆರೆದ ಬಾವಿಗಳು, ಕೈಪಂಪುಗಳು ಬತ್ತಿಹೋಗಿವೆ. ರಸ್ತೆ ವಿಸ್ತರಣೆಯಿಂದಾಗಿ ನೀರಿನ ಪೈಪುಗಳು ಒಡೆದುಹೋಗಿದ್ದು, ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಲು ಕಾರಣವಾಗಿದೆ. ಹಲವು ಬಡಾವಣೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದೊಂದೇ ಮಾರ್ಗವಾಗಿದೆ.

ಪ್ರತಿಕ್ರಿಯಿಸಿ (+)