ಕೊಡಗಿನ ಕಬ್ಬಿಣಸೇತುವೆ

7

ಕೊಡಗಿನ ಕಬ್ಬಿಣಸೇತುವೆ

Published:
Updated:
ಕೊಡಗಿನ ಕಬ್ಬಿಣಸೇತುವೆ

ಕೊಡಗಿನ ಸೋಮವಾರಪೇಟೆಯಿಂದ ಮಾದಾಪುರ ಮಾರ್ಗವಾಗಿ ಮಡಿಕೇರಿಗೆ ಹೋಗುವಾಗ `ಕಬ್ಬಿಣಸೇತುವೆ~ ಎಂಬ ನಾಮಧೇಯ ಹೊತ್ತ ಊರು ಸಿಗುತ್ತದೆ. ಇಲ್ಲಿ ಸುಮಾರು 200 ಮನೆಗಳಿವೆ.ಹೆಸರೇ ಹೇಳುವಂತೆ ಇಲ್ಲೊಂದು ಪುರಾತನ ಸೇತುವೆಯಿದೆ. ಚಾರನಹೊಳೆಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ಆರಂಭದಿಂದಲೂ ಯಾವುದೇ ರೀತಿಯ ರಿಪೇರಿಗೆ ಬಂದಿಲ್ಲ.ಲೋಕೋಪಯೋಗಿ ಇಲಾಖೆಯವರು ಆಗೊಮ್ಮೆ ಈಗೊಮ್ಮೆ ಬಣ್ಣ ಬಳಿದಾಗ ಫಳಫಳಿಸುವುದನ್ನು ಬಿಟ್ಟರೆ ಇದಕ್ಕೆ ಬೇರೆ ದುರಸ್ತಿಯ ಅಗತ್ಯವೇ ಬಿದ್ದಿಲ್ಲ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಕೊಡಗಿನ ಗಟ್ಟಿ ಮುಟ್ಟಾದ ಸೇತುವೆಗಳ ಪೈಕಿ ಇದೂ ಒಂದು. ಮಳೆಗಾಲದಲ್ಲೂ ಚಾರನಹೊಳೆಯ ನೀರಿನ ಮಟ್ಟ ಈ ಸೇತುವೆಯನ್ನು ಮುಟ್ಟುವುದಿಲ್ಲ.ಕಬ್ಬಿಣಸೇತುವೆ ಊರಿನ ಸುತ್ತಮುತ್ತ ಕಾಫಿ ತೋಟಗಳೇ ತುಂಬಿವೆ. ಕೆಳಗಳ್ಳಿ, ಡಿಬಿಡಿ, ಕಿರಗಂದೂರು, ಐಗೂರು, ಕಾಜೂರು, ಹೊಸತೋಟ, ಕಿಬಿರಿಬೆಟ್ಟ ಮುಂತಾದ ಸಣ್ಣ ಊರುಗಳಿಗೆ ಕಬ್ಬಿಣ ಸೇತುವೆಯೇ ರಾಜಧಾನಿ!ಕಾಫಿ ತೋಟಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರು ತುಳು, ತಮಿಳು, ಮಲಯಾಳಂ, ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ. ಈ ಮಂದಿಯೆಲ್ಲ ಕಬ್ಬಿಣಸೇತುವೆ ಎಂಬ ಹೆಸರನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸಿ ಸಂಭ್ರಮಿಸುತ್ತಾರೆ.ದಕ್ಷಿಣ ಕನ್ನಡದ ತುಳು ಮಾತನಾಡುವ ಜನ ಇದನ್ನು `ಕರ್ಬಸೇತ್ಮೆ~ ಎಂದು ಕರೆದರೆ, ತಮಿಳರು ಮತ್ತು ಮಲಯಾಳಿಗಳ ಬಾಯಲ್ಲಿ ಇದು `ಇರುಂಬುಪಾಲಂ~. ಕೆಲವು ಆಂಗ್ಲ ವ್ಯಾಮೋಹಿಗಳು `ಐರನ್‌ಬ್ರಿಜ್~ ಎಂದು ಕರೆದು ಕಾಲರ್ ಸರಿ ಮಾಡಿಕೊಳ್ಳುತ್ತಾರೆ.ಯಾವುದೇ ಕನ್ನಡ ಅಭಿಮಾನಿಯು ಇದನ್ನೆಲ್ಲಾ ಕಂಡು ಕೇಳಿ ಅಡ್ಡಿಪಡಿಸಿಲ್ಲ. ಬಸ್‌ನಲ್ಲಿ ಹೋಗುವಾಗ ಯಾವುದೇ ಭಾಷೆಯಲ್ಲಿ ಈ ಊರ ಹೆಸರು ಹೇಳಿದರೂ ಕಂಡಕ್ಟರ್ ಸರಿಯಾದ ಮೌಲ್ಯದ ಟಿಕೆಟನ್ನೇ ಹರಿಯುತ್ತಾನೆ.ನಾಮಪದವನ್ನೇ ಭಾಷಾಂತರಿಸಿ ತಮ್ಮ ಮಾತೃಭಾಷೆಗೆ ಶಬ್ದವೊಂದನ್ನು ಸೇರಿಸಿದ ಹೆಮ್ಮೆ ಈ ಊರಿನ ಅನ್ಯ ಭಾಷಿಗರಿಗೆ ಇದೆಯೋ ತಿಳಿಯದು. ಆದರೂ ಭಾಷಾ ಸಮನ್ವಯಕ್ಕೆ ಇದೊಂದು ಉದಾಹರಣೆ ಎನ್ನಬಹುದೇನೋ. ಹಾಗೆ ನೋಡಿದರೆ ಈ ಊರಿನಲ್ಲಿ ನೋಡುವಂತದ್ದೇನೂ ಇಲ್ಲ; ಕೇಳುವಂತದ್ದಿದೆ. ಅದೇ ಈ ಊರಿನ ಹೆಸರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry