ಗುರುವಾರ , ಮಾರ್ಚ್ 4, 2021
20 °C

ಕೊಡಗಿನ ಕೀರುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನ ಕೀರುತಿ

ಎ.ವಿ.ಪುನೀತ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಕೀರ್ತಿ ಪೂವಯ್ಯ ಅವರಿಗೆ ಹಿರಿತೆರೆ ಹೊಸದಾದರೂ ಅಭಿನಯ ಹೊಸತಲ್ಲ. ಈ ಮೊದಲೇ ಕಿರುತೆರೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು. ಮಾಡೆಲಿಂಗ್ ಜಗತ್ತಿನಲ್ಲೂ ಸುತ್ತಾಡಿ ಬಂದ ಈ ಕೊಡಗಿನ ಬೆಡಗಿ ಹಿರಿ ತೆರೆಯಲ್ಲಿ ಹೊಸ ಹೊಸ ಅವಕಾಶಗಳ ಹುಡುಕಾಟದಲ್ಲಿದ್ದಾರೆ.ಕೀರ್ತಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಬಿ.ಕಾಂ ಓದು ಪೂರ್ಣಗೊಂಡ ಮೇಲೆ ಚೆನ್ನೈನತ್ತ ಮುಖ ಮಾಡಿದರು. ಅಲ್ಲಿ ಕೆಲ ಕಾಲ ಮಾಡೆಲಿಂಗ್ ಧ್ಯಾನ. ಅನಾಥರಿಗೆ, ಅಂಗವಿಕಲರಿಗೆ ದೇಣಿಗೆ ಹೊಂದಿಸಲು ವೇದಿಕೆಯಾದ ಸಮಾಜಮುಖಿ ರ‌್ಯಾಂಪ್ ಮೇಲೆ ಅವರ ನಡಿಗೆ. ಜೀವನದಲ್ಲಿ ಹೆಚ್ಚು ತೃಪ್ತಿಕೊಟ್ಟದ್ದು ಈ ಡೊಮೆಸ್ಟಿಕ್ ಮಾಡೆಲಿಂಗ್. ತುಂಡು ಬಟ್ಟೆಯಲ್ಲಿ ನಡೆಯಬೇಕಾದ ಫ್ಯಾಷನ್ ಲೋಕ ಇದಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು.ಸುವರ್ಣ ವಾಹಿನಿಯ `ಪ್ಯಾಟೆ ಮಂದಿ ಕಾಡಿಗೆ ಬಂದ್ರು~ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪ್ರವೇಶ. `ನೋಡಿ ಸ್ವಾಮಿ ನಾವಿರೋದೇ ಹೀಗೆ~ ಅವರು ಪಾಲ್ಗೊಂಡ ಮತ್ತೊಂದು ಟೀವಿ ಕಾರ್ಯಕ್ರಮ. ಅಲ್ಲಿಂದ `ಪ್ರೀತಿ ಪ್ರೇಮ~ ಧಾರಾವಾಹಿಯಲ್ಲಿ ನಟನೆ. ಕಸ್ತೂರಿ ವಾಹಿನಿಯ `ಸೈ~ ಗೇಮ್‌ಶೋನಲ್ಲೂ ಭಾಗಿ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ರವಿ ಆರ್. ಗರಣಿ ಅವರ `ಅಮೃತವರ್ಷಿಣಿ~ ಧಾರಾವಾಹಿ.ಸಿನಿಮಾ ನಂಟಿದ್ದರೂ ಕಿರುತೆರೆ ಮೇಲೆ ಅವರಿಗೆ ಅಪಾರ ಪ್ರೀತಿ. `ನನ್ನ ಮೂಲ ನೆಲೆ ಕಿರುತೆರೆ. ಅದರಿಂದಾಗಿ ಹಿರಿತೆರೆಯ ಬಾಗಿಲು ತೆರೆಯಿತು. ಬೆಳ್ಳಿತೆರೆ ಹಾಗೂ ಧಾರಾವಾಹಿ ಎರಡಕ್ಕೂ ಸಮಾನ ಆದ್ಯತೆ ನೀಡುತ್ತೇನೆ~ ಎನ್ನುವ ಅವರು ಕಿರುತೆರೆ ಹಾಗೂ ಹಿರಿತೆರೆಯ ಭಿನ್ನ ಸವಾಲುಗಳನ್ನು ಎದುರಿಸುವ ಪರಿ ಬಲ್ಲವರು.ಮೊದಲ ಚಿತ್ರ ಹೇಗೆ ಬರುತ್ತದೋ ಎಂಬ ಕುತೂಹಲದೊಂದಿಗೆ ಅಭಿನಯಕ್ಕೆ ಸಜ್ಜಾಗಿದ್ದಾರೆ. ನಟನೆ ಅಥವಾ ನೃತ್ಯವನ್ನೇನೂ ಅವರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತವರಲ್ಲ. ಗ್ರಹಿಕೆಯ ಮೂಲಕ ಕಲಿಕೆ ಎಂಬುದು ಅವರ ನೀತಿ.ಈ ಹಿಂದೆ ಕರಿನೆರಳು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದ ಆಕೆ ಅದೇಕೋ ಮನಸು ಬದಲಿಸಿದರು. ನಿರ್ದೇಶಕರು ಅಭಿನಯದಲ್ಲಿ ಸಾಕಷ್ಟು ಬದಲಾವಣೆ ಬಯಸಿದ್ದರಿಂದ ಸಿನಿಮಾದಿಂದ ಹಿಂದೆ ಸರಿಯಬೇಕಾಯಿತಂತೆ. ಪುನೀತ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅವರದು ಚೆಲ್ಲುಚೆಲ್ಲು ಹುಡುಗಿಯ ಪಾತ್ರ.

 

`ಎರಡನೆಯ ನಾಯಕಿಯ ಪಾತ್ರ ನನ್ನದು. ನನ್ನ ಸ್ವಭಾವಕ್ಕೆ ತಕ್ಕ ಪಾತ್ರ ಸಿಕ್ಕಿದೆ. ಹೀಗಾಗಿ ಅಭಿನಯ ಸವಾಲು ಎನಿಸದು~ ಎನ್ನುತ್ತಾರೆ ಅವರು.  ದರ್ಶನ್, ಸುದೀಪ್ ಅವರೊಂದಿಗೆ ನಟಿಸಬೇಕು ಹಾಗೂ ಪುನೀತ್ ಅವರೊಂದಿಗೆ ಡ್ಯಾನ್ಸ್ ಕಾರ್ಯಕ್ರಮ ನೀಡಬೇಕು ಎಂಬುದು ಇವರ ದೊಡ್ಡ ಕನಸು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.