ಕೊಡಗಿನ ಹುಡುಗನ ಕನಸಿನ ಕಥೆ...

7

ಕೊಡಗಿನ ಹುಡುಗನ ಕನಸಿನ ಕಥೆ...

Published:
Updated:

ಗನ್ ಅಥವಾ ಹಾಕಿ ಸ್ಟಿಕ್...!

   -ಇವು ಕೊಡಗಿನ ಮಂದಿಯ ಜೀವನಾಡಿಗಳು. ಪ್ರವಾಸಿಗಳ ಸ್ವರ್ಗ ಎನಿಸಿರುವ ಈ ಪ್ರದೇಶದ ಮಂದಿಯಲ್ಲಿ ಕೆಲವರು ಗನ್ ಹಿಡಿದು ದೇಶ ಕಾಯಲು ಹೊರಟರೆ, ಇನ್ನು ಕೆಲವರು ಹಾಕಿ ಸ್ಟಿಕ್ ಹಿಡಿದು ದೇಶಕ್ಕೆ ಹೆಮ್ಮೆ ತರುತ್ತಾರೆ ಎಂಬ ಮಾತಿದೆ.ಇಲ್ಲಿ ನಾವು ಹಾಕಿ ಸ್ಟಿಕ್ ಹಿಡಿದು ಸಾಧಿಸಿದವರ ಬಗ್ಗೆ ಮಾತನಾಡೋಣ. ಎಂ.ಎಂ.ಸೋಮಯ್ಯ, ಸಿ.ಎಸ್.ಪೂಣಚ್ಚ, ಎ.ಬಿ.ಸುಬ್ಬಯ್ಯ, ಬಿ.ಪಿ.ಗೋವಿಂದ, ಅರ್ಜುನ್ ಹಾಲಪ್ಪ ಅವರ ಬಗ್ಗೆ ಗೊತ್ತಿಲ್ಲದ ಹಾಕಿ ಅಭಿಮಾನಿಗಳು ಇರಲ್ಲಿಕ್ಕಿಲ್ಲ. ಅದ್ಭುತ ಆಟದ ಮೂಲಕ ದೇಶದ ಹಾಕಿ ಪ್ರಜ್ವಲಿಸಲು ಕಾರಣರಾದ ಆಟಗಾರರಿವರು.ಅಂತಹದ್ದೇ ಕನಸೊಂದನ್ನು ಹೊತ್ತು ರಾಷ್ಟ್ರ ತಂಡಕ್ಕೆ ಆಯ್ಕೆ ಆಗಿರುವ ಮತ್ತೊಬ್ಬ ಕೊಡಗಿನ ಹುಡುಗನ ಹೆಸರು ಎಸ್.ಕೆ.ಉತ್ತಪ್ಪ!ಈ ಹುಡುಗ ಕನಸು ಅಂತಿಂಥದ್ದಲ್ಲ. ತಾನೂ ಅವರಂತೆ ಆಗಬೇಕು ಎಂಬ ಕನಸು ಹೊತ್ತು 13ನೇ ವಯಸ್ಸಿನಲ್ಲೇ ಬೆಂಗಳೂರು ಬಸ್ಸು ಹತ್ತಿದ್ದ ಉತ್ತಪ್ಪ ಈಗ ಲಂಡನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.`ದೇಶಕ್ಕಾಗಿ ಆಡಬೇಕು ಎಂಬ ಕನಸು ಇದ್ದಿದ್ದು ನಿಜ. ಅದು ಹೇಗೆಂದರೆ ಭಾರತ ತಂಡದಲ್ಲಿ ಆಡುತ್ತಿರುವಂತೆ ಒಮ್ಮಮ್ಮೆ ನನಗೆ ಕನಸು ಬೀಳುತಿತ್ತು. ಆದರೆ ಒಮ್ಮೆಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತಯಾರಿ ನಡೆಸುತ್ತಿರುವ ತಂಡದಲ್ಲಿ ಆಡಲು ನನಗೆ ಅವಕಾಶ ಸಿಕ್ಕಿದ್ದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ~ ಎಂದು ಉತ್ತಪ್ಪ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.ಗೋಣಿಕೊಪ್ಪಲಿನ 20 ವರ್ಷ ವಯಸ್ಸಿನ ಉತ್ತಪ್ಪ ಹಾಕಿ ಸ್ಟಿಕ್ ಹಿಡಿಯಲು ಇನ್ನೊಂದು ಕಾರಣವಿದೆ. ಅಣ್ಣ ಚಿಣ್ಣಪ್ಪ ಕೂಡ ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಿದ್ದರು. ಆಗ ಉತ್ತಪ್ಪ ಅವರನ್ನು ಆಡುವಂತೆ ಪ್ರೇರೇಪಿಸುತ್ತಿದ್ದರು. ಹೆಚ್ಚು ಅವಕಾಶ ಸಿಗಲಿ ಎಂದು ಬೆಂಗಳೂರು ಬಸ್ಸು ಹತ್ತಿಸಿದ್ದೇ ಅವರು.`ಈ ನನ್ನ ಸಾಧನೆಗೆ ಕಾರಣ ನನ್ನ ಕುಟುಂಬದ ಬೆಂಬಲ. ಹಾಕಿಗಾಗಿ ನಾನು ಏನು ಮಾಡಿದರೂ ಪೋಷಕರು ನನ್ನನ್ನು ಕೇಳುತ್ತಿರಲಿಲ್ಲ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ನನ್ನ ಕನಸು ನನಸಾಗಲು ಕೋಚ್‌ಗಳು ಕಾರಣರಾದರು~ ಎನ್ನುತ್ತಾರೆ ಉತ್ತಪ್ಪ.ಅಕ್ಕಿತಿಮ್ಮನಹಳ್ಳಿಯ ಹಾಕಿ ಕ್ರೀಡಾಂಗಣದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತರಬೇತಿ ಕೇಂದ್ರದಲ್ಲಿ ಪ್ರಭಾಕರ್, ಮನೋಹರ್ ಕಟಕಿ ಅವರ ಮಾರ್ಗದರ್ಶನದಲ್ಲಿ ಮಿಡ್ ಫೀಲ್ಡರ್ ಉತ್ತಪ್ಪ ಬಹುಬೇಗನೇ ಪಳಗಿದರು. ಎಸ್‌ಎಐ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿ ಸ್ಥಳೀಯ ಪಂದ್ಯಗಳಲ್ಲಿ ಮಿಂಚತೊಡಗಿದರು.ಕಳೆದ ವರ್ಷ ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ `ಅತ್ಯುತ್ತಮ ಆಟಗಾರ~ ಎನಿಸಿದ್ದು ಟರ್ನಿಂಗ್ ಪಾಯಿಂಟ್ ಆಯಿತು.`ಈ ಚಾಂಪಿಯನ್‌ಷಿಪ್ ನನ್ನ ಬದುಕಿಗೆ ಮಹತ್ವದ ತಿರುವು ನೀಡಿತು. ಈಗ ರಾಷ್ಟ್ರೀಯ ತಂಡದಲ್ಲಿದ್ದೇನೆ. ದೇಶವನ್ನು ಪ್ರತಿನಿಧಿಸುವ ಅವಕಾಶಕ್ಕಿಂತ ಮತ್ತೊಂದು ಖುಷಿಯ ಕ್ಷಣ ಯಾವುದಿದೇ ಹೇಳಿ? ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕು. ಅಲ್ಲಿ ಯಶಸ್ಸು ಸಾಧಿಸಬೇಕು ಎಂಬುದು ನನ್ನ ಗುರಿ~ ಎಂದು ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಅಂತಿಮ ಬಿಕಾಂನಲ್ಲಿ ಓದುತ್ತಿರುವ ಉತ್ತಪ್ಪ ಹೇಳುತ್ತಾರೆ.ನವದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ಅವರು ಮೊದಲ ಯತ್ನದಲ್ಲೇ ಅವಕಾಶವನ್ನು ಹಣ್ಣಾಗಿಸಿಕೊಂಡರು. ಮುಖ್ಯ ಕೋಚ್ ಮೈಕಲ್ ನಾಬ್ಸ್ ಗಮನ ಸೆಳೆಯಲು ಅಷ್ಟೇ ಸಾಕಾಯಿತು.ಕೊಡಗಿಗೆ ಮತ್ತೊಮ್ಮೆ ಖುಷಿಯಾಗಿದೆ...!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry