ಕೊಡಗು ಕೊಡಗೇ; ಸ್ವಿಟ್ಜರ್‌ಲೆಂಡ್‌ ಅಲ್ಲ!

7

ಕೊಡಗು ಕೊಡಗೇ; ಸ್ವಿಟ್ಜರ್‌ಲೆಂಡ್‌ ಅಲ್ಲ!

Published:
Updated:

ಭಾರತೀಸುತ ವೇದಿಕೆ (ಮಡಿಕೇರಿ): ‘ಕೊಡಗನ್ನು ಅನೇಕರು ಸ್ವಿಟ್ಜರ್ಲೆಂಡ್‌ಗೆ ಹೋಲಿಸುತ್ತಾರೆ. ಆದರೆ,ನಾನು ನನ್ನ ನಾಡನ್ನು ಹೊಗಳಲು ಬೇರೊಂದು ದೇಶವನ್ನು ಎರವಲು ಪಡೆಯಲು ಹೋಗುವುದಿಲ್ಲ. ಕೊಡಗು ಕೊಡಗೇ; ಸಮುದ್ರಕ್ಕೆ ಸಮುದ್ರವೇ ಉಪಮೆಯಂತೆ. ಹಾಗೆಯೇ ಕೊಡಗಿಗೆ ಕೊಡಗೇ ಉಪಮೆ’ ಹೀಗೆ ತಂಪಾದ ಊರನ್ನು ಬಾಯಿತುಂಬಾ  ಹೊಗಳಿದವರು ನಾ.ಡಿಸೋಜ.ಎಂಬತ್ತನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಅವರು ಮಂಗಳವಾರ ತಮ್ಮ ಭಾಷಣದಲ್ಲಿ ಕೊಡಗನ್ನು ಮೆಚ್ಚಿ ಮಾತಾಡಿದರು. ಭಾಷಣದ ಪ್ರಾರಂಭದಲ್ಲೇ ಈ ಸುಂದರ ಪ್ರದೇಶವನ್ನು ನೋಡಬೇಕೆಂಬ ತಮ್ಮ ಬಹುಕಾಲದ ಬಯಕೆ ತಡವಾಗಿ ಈಡೇರಿದ್ದನ್ನು ಅವರು ನೆನಪಿಸಿಕೊಂಡರು. ಮಗಳ ಮದುವೆಯ ನಂತರ ಅಳಿಯನ ಜೊತೆ ಈ ಊರಿನ ಸ್ಥಳಗಳನ್ನು ಅವರು ನೋಡಿದ್ದು. ಅದರಿಂದ ತೃಪ್ತಿ ಆಗದ ಕಾರಣ ಇನ್ನೊಮ್ಮೆ ಪತ್ನಿಸಮೇತರಾಗಿ ಬಂದು ಇಲ್ಲಿನ ತಲಕಾವೇರಿ, ಭಾಗಮಂಡಲ, ರಾಜಾಸೀಟ್‌ ಕಣ್ತುಂಬಿಕೊಂಡರಂತೆ.ಮಲೆನಾಡಿನ ವಿಸ್ತಾರವಾದ ಬೆಟ್ಟಗುಡ್ಡಗಳು, ಕಣಿವೆಗಳನ್ನು ಕಾಣುತ್ತಾ ಬೆಳೆದಿದ್ದರೂ ಅವರಿಗೆ ಕೊಡಗಿನ ಸೌಂದರ್ಯ ಬೇರೆಯದೇ ರೀತಿ ಕಂಡಿದೆ. ಒಂದನ್ನೊಂದು ಒತ್ತಿ ನಿಂತಂಥ ಇಲ್ಲಿನ ಬೆಟ್ಟಗಳು ಮಲೆನಾಡಿನ ಪರಿಸರಕ್ಕಿಂತ ಭಿನ್ನವಾದದ್ದು ಎಂಬುದು ಅವರ ಅನಿಸಿಕೆ.

ಪಶ್ಚಿಮ ಘಟ್ಟದ ಶ್ರೇಣಿ ಪ್ರಾರಂಭವಾಗುವುದೇ ಕೊಡಗಿನಿಂದ ಎಂದು ಹೆಮ್ಮೆಯ ಭಾವದಿಂದ ಹೇಳಿದ ಅವರು, ಇಲ್ಲಿನ ಜನಜೀವನ, ಶ್ರೀಮಂತಿಕೆ, ಭಾಷೆ, ವೀರಯೋಧರನ್ನು ಸದಾ ದೇಶಕ್ಕೆ ಮೀಸಲಿಡುವ ಪರಂಪರೆ ಎಲ್ಲವನ್ನೂ ಮೆಚ್ಚಿಕೊಂಡರು. ಕ್ರೀಡಾಪಟುಗಳ ಜನ್ಮಭೂಮಿ ಇದು ಎಂದೂ ಅವರು ಮಾತು ಸೇರಿಸಿದರು.ನೆನಪಿನಲ್ಲಿ ಉಳಿಯುವಂಥ ಬರಹ ಕೊಟ್ಟ ಕೊಡಗಿನ ಗೌರಮ್ಮನವರನ್ನು ಸ್ಮರಿಸುವ ಮೂಲಕ ಇಲ್ಲಿನ ಸಂಸ್ಕೃತಿ, ಪರಂಪರೆಯ ಮೇಲೆ ಅವರು ಬೆಳಕು ಚೆಲ್ಲಿದರು. ಐತಿಹಾಸಿಕವಾಗಿ, ಜಾನಪದೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಹಾಗೂ ನೈಸರ್ಗಿಕವಾಗಿ ಶ್ರೀಮಂತವಾದ ಈ ಪ್ರದೇಶ ದೇಶದ ರಕ್ಷಣೆಯ ವಿಷಯ ಬಂದಾಗಲೂ ಮುಂಚೂಣಿಯಲ್ಲಿರುತ್ತದೆ ಎಂದರು.ಸೇನಾ ಹಿನ್ನೆಲೆಯಲ್ಲಿ ಪ್ರಭಾವಶಾಲಿಯಾದ ಯೋಧ ಜನರಲ್‌ ಕಾರ್ಯಪ್ಪನವರ ಬಗೆಗೆ ಒಂದು ಪುಸ್ತಕವನ್ನೂ ತಾವು ಬರೆದಿರುವುದಾಗಿ ನೆನಪಿಸಿಕೊಂಡ ಡಿಸೋಜ, ಇಲ್ಲಿನ ಕನ್ನಡತನವನ್ನೂ ಕೊಂಡಾಡಿದರು. ಕನ್ನಡ, ಮಲಯಾಳ, ತಮಿಳಿನಿಂದ ಪ್ರಭಾವಿತವಾಗಿದ್ದರೂ ಈ ನೆಲದ ಮೂಲ ಭಾಷೆ ಕನ್ನಡ ಎಂಬ ಪಂಡಿತರ ಮಾತನ್ನು ಉಲ್ಲೇಖಿಸಿದರು.ಸಣ್ಣ ಕತೆಗಳನ್ನು ನೀಡಿದ ಗೌರಮ್ಮ ಅವರನ್ನಷ್ಟೇ ಅಲ್ಲದೆ ಲೇಖಕರಾದ ಐ.ಮಾ.ಮುತ್ತಣ್ಣ, ಬಿ.ಗಣಪತಿ, ಎಸ್‌.ಚಿನ್ನಪ್ಪ ಮೊದಲಾದವರ ಹೆಸರುಗಳನ್ನು ಪ್ರಸ್ತಾಪಿಸಿದರು. ಎರಡನೇ ಶತಮಾನದಿಂದ ಪ್ರಾರಂಭವಾಗುವ ಕೊಡಗಿನ ಇತಿಹಾಸ ಅವರ ಪ್ರಕಾರ ರೋಮಾಂಚನ ಉಂಟುಮಾಡುವಂಥದ್ದು. ಕರ್ನಾಟಕದ ಮೊದಲ ದೊರೆಯೆಂದೇ ಹೆಸರಾದ ಕದಂಬ ಮಯೂರವರ್ಮನ ವಂಶಸ್ಥನಾದ ಚಂದ್ರವರ್ಮ ಕೊಡಗಿನ ಮೂಲಪುರುಷ ಎನ್ನುವಾಗ ಡಿಸೋಜ ಅವರ ಮುಖದಲ್ಲಿ ಹೆಮ್ಮೆಯ ಭಾವ ಸ್ಫುರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry