ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶಿವಪ್ಪ, ಉಪಾಧ್ಯಕ್ಷರಾಗಿ ಉಷಾ ಆಯ್ಕೆ

7

ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶಿವಪ್ಪ, ಉಪಾಧ್ಯಕ್ಷರಾಗಿ ಉಷಾ ಆಯ್ಕೆ

Published:
Updated:
ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶಿವಪ್ಪ, ಉಪಾಧ್ಯಕ್ಷರಾಗಿ ಉಷಾ ಆಯ್ಕೆ

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿ.ಶಿವಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿದ್ದಂಡ ಉಷಾ ದೇವಮ್ಮ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದು, 2014ರ ಜೂನ್ 6ರವರೆಗೆ ಇವರ ಅಧಿಕಾರಾವಧಿ ಇರುತ್ತದೆ.ನಗರದ ಕೋಟೆ ವಿಧಾನಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ವಹಿಸಿದ್ದರು. ಅವರೊಂದಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಂಜನಪ್ಪ ಉಪಸ್ಥಿತರಿದ್ದರು.ಬಿ.ಶಿವಪ್ಪ ಅವರ ಹೆಸರನ್ನು ಹಾಲಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಉಷಾ ದೇವಮ್ಮ ಅವರ ಹೆಸರನ್ನು ಹಾಲಿ ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಅವರು ಸೂಚಿಸಿದ್ದರು. ಕಳೆದ ವರ್ಷದಂತೆ ಈ ವರ್ಷವೂ ಕೂಡ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಯಾವುದೇ ಅಭ್ಯರ್ಥಿಗಳು ಕಣಕ್ಕಿಳಿಯಲಿಲ್ಲ.ಸರ್ಕಾರವು ಪ್ರಕಟಿಸಿರುವ ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ (ಎಸ್.ಸಿ) ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ಇಡಲಾಗಿತ್ತು.ಇದರನ್ವಯ ಅಬ್ಬೂರುಕಟ್ಟೆ ಕ್ಷೇತ್ರದ ಸದಸ್ಯ ಅಧ್ಯಕ್ಷರಾಗಿ ಬಿ.ಶಿವಪ್ಪ ಆಯ್ಕೆ ಖಚಿತವಾಗಿತ್ತು. ಆದರೆ, ಉಪಾಧ್ಯಕ್ಷರ ಸ್ಥಾನಕ್ಕೆ ಚೋಡುಮಾಡ ಶರೀನ್ ಸುಬ್ಬಯ್ಯ, ಮಣಿ ನಂಜಪ್ಪ, ಬಿದ್ದಂಡ ಉಷಾ ದೇವಮ್ಮ, ಅಲ್ಲಾರಂಡ ಬೀನಾ ಬೊಳ್ಳಮ್ಮ ಆಕಾಂಕ್ಷೆಗಳಾಗಿದ್ದರಿಂದ ತೀವ್ರ ಪೈಪೋಟಿ ಕಂಡುಬಂದಿತ್ತು.

ಕೊನೆಯ ಗಳಿಗೆಯಲ್ಲಿ ಪಕ್ಷದ ವರಿಷ್ಠರು ಚೆಯ್ಯಂಡಾಣೆ ಕ್ಷೇತ್ರದ ಬಿದ್ದಂಡ ಉಷಾ ದೇವಮ್ಮ ಪರ ಒಲವು ತೋರಿದರು.ಪ್ರಸ್ತುತ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರಾವಧಿಯು ಅ.7ರಂದು ಕೊನೆಯಾಗಲಿದ್ದು, ಬಿ.ಶಿವಪ್ಪ ಹಾಗೂ ಬಿದ್ದಂಡ ಉಷಾ ದೇವಮ್ಮ ಅವರು ಅ.8ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಅಭಿನಂದನೆ:
ಸದಸ್ಯ ಕೊಡಂದೇರ ಪಿ. ಗಣಪತಿ, ಅಲ್ಲಾರಂಡ ಬೀನಾ ಬೊಳ್ಳಮ್ಮ ಹಾಗೂ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅಧ್ಯಕ್ಷ- ಉಪಾಧ್ಯಕ್ಷರಿಗೆ ಅಭಿನಂದನೆ ನುಡಿಗಳನ್ನಾಡಿದರು.ಕಾಂಗ್ರೆಸ್ಸಿನ ಪರವಾಗಿ ಶಕುಂತಲಾ ರವೀಂದ್ರ, ಮೂಕಳೇರ ಕುಶಾಲಪ್ಪ ಮಾತನಾಡಿದರು. ಕಾಂಗ್ರೆಸ್ಸಿನ ಬಾನಂಡ ಎನ್. ಪ್ರತ್ಯು, ಬಿ.ಪಿ. ಧನ್ಯರತಿ, ಸುಲೋಚನ ಹಾಗೂ ಜೆ.ಡಿ.ಎಸ್. ಗೀತಾ ಸಭೆಯಲ್ಲಿ ಭಾಗವಹಿಸಿದ್ದರು.ಸದಸ್ಯರಾದ ಇಂದಿರಮ್ಮ, ಎಸ್.ಎನ್. ರಾಜಾರಾವ್, ಕಾಂತಿ ಬೆಳ್ಯಪ್ಪ, ಬಬ್ಬೀರ ಸರಸ್ವತಿ, ಬಿ.ಬಿ.ಭಾರತೀಶ್, ಡಿ.ಬಿ.ಧರ್ಮಪ್ಪ, ಮಣಿನಂಜಪ್ಪ, ಸುಲೋಚನಾ, ವೆಂಕಪ್ಪ ಪೂಜಾರಿ,  ಟಿ.ಪಿ.ಸಂದೇಶ್, ಶರೀನ್ ಸುಬ್ಬಯ್ಯ, ಚಂದ್ರೀಕಾ ಯೋಗೇಶ್ ಮತ್ತಿತರರು ಇದ್ದರು. ಪಕ್ಷದ ವರಿಷ್ಠರಾದ ಎಸ್.ಜಿ. ಮೇದಪ್ಪ, ಬಿ.ಡಿ. ಮಂಜುನಾಥ್, ಮನು ಮುತ್ತಪ್ಪ, ರೀನಾ ಪ್ರಕಾಶ್, ಇತರರು ಉಪಸ್ಥಿತರಿದ್ದರು.`ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಒತ್ತು~


`ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾದ ಕಾರಣ ಸಾಕಷ್ಟು ಪೈಪೋಟಿ ಇತ್ತು. ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಪಕ್ಷದ ವರಿಷ್ಠರಿಗೆ ಚಿರಋಣಿ~ ಎಂದು ಬಿದ್ದಂಡ ಉಷಾ ದೇವಮ್ಮ ಪ್ರತಿಕ್ರಿಯಿಸಿದರು.ಜಿಲ್ಲೆಯ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹಾಗೂ ಹಿಂದಿನ ಆಡಳಿತವು ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.

 

`ಕಡ್ಡಿ ಸುಂದರ ಗೈರು~


ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಡ್ಡಿಸುಂದರ ಅವರು ಸಭೆಗೆ ಗೈರುಹಾಜರಾಗಿದ್ದು, ಎಲ್ಲರ ಗಮನ ಸೆಳೆಯಿತು.`ಕನಸಿನಲ್ಲೂ ಊಹಿಸಿರಲಿಲ್ಲ~

ಮಡಿಕೇರಿ:
`ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ~ ಎಂದು ನೂತನ ಅಧ್ಯಕ್ಷ ಬಿ.ಶಿವಪ್ಪ ನುಡಿದರು.ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದು ಹಾಗೂ ಉತ್ತಮ ಆಡಳಿತ ಕೊಡಬೇಕುಎನ್ನುವುದು ತಮ್ಮ ಉದ್ದೇಶವೆಂದು ಹೇಳಿದರು. ಪಕ್ಷದ ಮುಖಂಡರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಪಕ್ಷದ ವರಿಷ್ಠರಾದ ಕೆ.ಜಿ. ಬೋಪಯ್ಯ, ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.1977ರಲ್ಲಿ ಜನಿಸಿದ ಬಿ.ಶಿವಪ್ಪ ಅವರು ಮೊಗೇರ ಸಮಾಜಕ್ಕೆ ಸೇರಿದವರು. ಸೋಮವಾರಪೇಟೆ ತಾಲ್ಲೂಕಿನ ಅಬ್ಬೂರುಕಟ್ಟೆ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ತಂದೆ ಬಾಬು, ತಾಯಿ ಕಮಲಾ, ಪತ್ನಿ ರತ್ನಾ ಮತ್ತು ಒಂದು ತಿಂಗಳ ಹಿಂದೆಯಷ್ಟೇ ಜನಿಸಿರುವ ಹೆಣ್ಣು ಮಗುವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry