ಗುರುವಾರ , ಮಾರ್ಚ್ 4, 2021
29 °C

ಕೊಡಗು: ನಾಡಿಗೆ ನುಗ್ಗುತ್ತಿರುವ ವನ್ಯಪ್ರಾಣಿಗಳು

ಪ್ರಜಾವಾಣಿ ವಾರ್ತೆ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಕೊಡಗು: ನಾಡಿಗೆ ನುಗ್ಗುತ್ತಿರುವ ವನ್ಯಪ್ರಾಣಿಗಳು

ಮಡಿಕೇರಿ: ನಾಗರಹೊಳೆ ಹಾಗೂ ಕೊಡಗಿನ ಪ್ರಮುಖ ಅರಣ್ಯ ಪ್ರದೇಶವು ಕಾಡಿನ ಬೆಂಕಿಗೆ ಉರಿದುಹೋಗಿದೆ. ಅಲ್ಲೆಗ ಬೂದಿ ತುಂಬಿಕೊಂಡಿದೆ. ಪ್ರತಿ ವರ್ಷ ಯುಗಾದಿಯ ಸಮಯದಲ್ಲಿ ಬರುತ್ತಿದ್ದ ಮಳೆರಾಯ ಈ ಬಾರಿ ತಿರುಗಿ ಕೂಡ ನೋಡಿಲ್ಲ.ಮತ್ತೊಂದೆಡೆ ಕಾಡಿನಲ್ಲಿ ಕ್ಷಣ ಕ್ಷಣಕ್ಕೂ ತಾಪಮಾನ ಏರುತ್ತಿದೆ. ಬಿಸಿಲ ಧಗೆ ತಾಳಲಾರದೆ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ.ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಸಿಕೊಳ್ಳುವ ಮಡಿಕೇರಿಯಲ್ಲಿ ಈಗ 32 ಡಿಗಿ ್ರ ಸೆಲ್ಸಿಯಸ್‌ನಷ್ಟು ತಾಪಮಾನವಿದೆ. ಬಿರುಬಿಸಿಲು, ನೀರಿನ ಕೊರತೆ ಮತ್ತೀಗ ಕಾಡಿನ ಬೆಂಕಿ. ಇವುಗಳ ನಡುವೆ ಸಿಕ್ಕ ಪ್ರಾಣಿಗಳ ಸ್ಥಿತಿ ಅಯೋಮಯ. ಬಿಸಿಲಿನ ಝಳಕ್ಕೆ ಕಾಡಿಗೆ ಕಾಡೇ ಒಣಗಿ ಬೆಂಡಾಗಿ ನಿಂತಿದೆ. ಎತ್ತ ದೃಷ್ಟಿ ಹಾಯಿಸಿದರೂ ಹಸಿರು ಕಾಣೆಯಾಗಿದೆ. ನೀರಿನ ಒಂದು ಹನಿ ಕೂಡ ಅಪ್ಪಿತಪ್ಪಿ ಕಾಣಿಸುತ್ತಿಲ್ಲ. ಇದರ ಪರಿಣಾಮವಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ ಈಗ ಕಾಡಾನೆಗಳ ಹಾವಳಿ ಮತ್ತೆ ಉಲ್ಬಣಿಸಿದೆ.ಅರಣ್ಯದಲ್ಲಿ ಬಿದಿರು ಒಣಗಿದೆ. ನೀರಿನ ಹೊಂಡಗಳು ಬತ್ತಿ ಹೋಗಿವೆ. ಇತ್ತ ಕಾಫಿ ತೋಟಗಳಲ್ಲಿ ಬಾಳೆ, ಹಲಸು ದಂಡಿದಂಡಿಯಾಗಿ ಬೆಳೆದುನಿಂತಿದೆ. ಅಕ್ಕಪಕ್ಕ ಕಾವೇರಿ, ಹೇಮಾವತಿ ನದಿ ಪಾತ್ರದಲ್ಲಿ ಅಲ್ಪಸ್ವಲ್ಪ ನೀರಿದೆ. ಇದನ್ನು ಅರಸಿಕೊಂಡು ಆನೆಗಳು ಹಿಂಡು ಹಿಂಡಾಗಿ ಬರುತ್ತಿವೆ. ಆಹಾರ ಹುಡುಕಿಕೊಂಡು ಬರುವ ಆನೆಗಳ ಜೊತೆ ಮುಖಾಮುಖಿಯಾಗುವ ಮನುಷ್ಯರ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ. ಕೊಡಗಿನಲ್ಲಿ ಕಳೆದ ಹತ್ತು ದಿನಗಳಲ್ಲಿ ಇಬ್ಬರು ಆನೆ ದಾಳಿಗೆ ಸಿಲುಕಿ, ಪ್ರಾಣ ಕಳೆದುಕೊಂಡಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಮರಪಾಲದಲ್ಲಿ ದಾಸ್ ಎನ್ನುವವರು ಹಾಗೂ ಪಾಲಿಬೆಟ್ಟದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಖದೀಜ ಎನ್ನುವ ಮಹಿಳೆ ಆನೆ ದಾಳಿಗೆ ತುತ್ತಾಗಿದ್ದಾರೆ.ಇತ್ತೀಚೆಗೆ ನಾಗರಹೊಳೆ, ಅತ್ತೂರು, ಆನೆಚೌಕೂರು, ಅಯ್ಯಂಗೇರಿ, ಅತ್ತೂರು ರಕ್ಷಿತಾರಣ್ಯ, ಬಳ್ಳೂರು, ಹೇರೂರು ಕಲ್ಲೂರು, ಸಂಪಾಜೆ-ಚೆಂಬು, ಹಾರಂಗಿ ಜಲಾಶಯಕ್ಕೆ ಹೊಂದಿಕೊಂಡಂತೆ ಆನೆಕಾಡು ಅರಣ್ಯದ್ಲ್ಲಲಿ ಬೆಂಕಿ ಕಾಣಿಸಿಕೊಂಡಿತ್ತು. ದಕ್ಷಿಣ ಕೊಡಗಿನ ನಿಟ್ಟೂರು, ತಟ್ಟೆಕೆರೆ ಅರಣ್ಯದಲ್ಲಿಯೂ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿತ್ತು.

ಕಾಡಿಗೆ ಬೆಂಕಿ ಬಿದ್ದಿರುವ ಭಯದಿಂದ ಆನೆಗಳು ಜನವಸತಿ ಪ್ರದೇಶದೆಡೆ ನುಗ್ಗುವ ಸಂಭವ ಹೆಚ್ಚು. ಹಾರಂಗಿ, ಚಿಕ್ಲಿಹೊಳೆ, ಕಬಿನಿ ನದಿ ಹರಿಯುವ ಪ್ರದೇಶದ ಅಕ್ಕಪಕ್ಕ ಪ್ರದೇಶವನ್ನು ಅರಣ್ಯ ಇಲಾಖೆಯವರು ಸೂಕ್ಷ್ಮ ವಲಯವೆಂದು ಘೋಷಿಸಿ, ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ.ಮಳೆ ಬಾರದಿದ್ದರೆ ಇನ್ನಷ್ಟು ಆತಂಕ:
ಸಾಮಾನ್ಯವಾಗಿ ಪ್ರತಿವರ್ಷ ಯುಗಾದಿಯ ನಂತರ ಮಾರ್ಚ್ ತಿಂಗಳಿನಲ್ಲಿ 3-4 ದೊಡ್ಡ ಮಳೆ ಸುರಿಯುತ್ತಿತ್ತು. ಇದರಿಂದ ಅರಣ್ಯ ಪ್ರದೇಶ ಹಸಿಯಾಗಿ, ಬೆಂಕಿ ಹತ್ತಿಕೊಳ್ಳುವ ಪ್ರಸಂಗಗಳು ತಪ್ಪಿಹೋಗುತ್ತಿದ್ದವು.ಆದರೆ, ಈ ಬಾರಿ ಏಪ್ರಿಲ್ ತಿಂಗಳು ಆರಂಭವಾಗಿದ್ದರೂ ಮಳೆ ಸುರಿದಿಲ್ಲ. ಹೀಗಾಗಿ ಒಣಗಿ ಹೋಗಿರುವ ಕಾಡು ಬೆಂಕಿಗೆ ಸಲೀಸಾಗಿ ಆಹುತಿಯಾಗುವ ಆತಂಕವಿದೆ.ಎಚ್ಚರಿಕೆ ಅಗತ್ಯ: ಕಾಡಿಗೆ ಬೆಂಕಿ ಬಿದ್ದ ಬಹುತೇಕ ಸಂದರ್ಭಗಳು ಮಾನವ ನಿರ್ಮಿತವಾದುದು. ಇಂತಹ ಅವಘಡಗಳನ್ನು ತಪ್ಪಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಡಿಎಫ್‌ಒ ಕೆ.ಎಸ್. ಆನಂದ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.