ಕೊಡವರ ನಾಡಲ್ಲಿ ನಂಗಡ ನಮ್ಮೆ

7

ಕೊಡವರ ನಾಡಲ್ಲಿ ನಂಗಡ ನಮ್ಮೆ

Published:
Updated:

ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ಅಕ್ಟೋಬರ್ 12ರಿಂದ 14ರವರೆಗೆ ವಿಶಿಷ್ಟ ಉತ್ಸವವೊಂದು ನಡೆಯಲಿದೆ. ಸಮಾಜ ಬಾಂಧವರಿಗಾಗಿ ಕೊಡವ ಸಮಾಜ ಒಕ್ಕೂಟ ಆಯೋಜಿಸಿದ ರಾಜ್ಯ ಮಟ್ಟದ ಹಾಕಿ ಪಂದ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ `ನಂಗಡ ನಮ್ಮೆ~ ಎಂದು ಹೆಸರಿಟ್ಟಿದೆ. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ, ವಿಚಾರಗೋಷ್ಠಿಗಳೂ ಇರುತ್ತವೆ.ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತಾಟ್, ಬಾಳೋಪಾಟ್, ಪರೆಯಕಳಿ, ಸಮ್ಮಂಧ ಅಡಕುವೊ, ತಾಲಿಪಾಟ್ ಮತ್ತು ಕಪ್ಪೆಯಾಟ್ ಮುಂತಾದ ಸಾಂಸ್ಕೃತಿಕ ಕಲೆಗಳನ್ನು ಇಲ್ಲಿ ನೋಡಿ ಖುಷಿ ಪಡಬಹುದು. ಆಸಕ್ತಿ ಇದ್ದರೆ ಭಾಗವಹಿಸಬಹುದು.ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರು ಕೊಡವ ಸಮಾಜವು ತನ್ನ ಶತಮಾನೋತ್ಸವ ಪ್ರಯುಕ್ತ ಕೊಡವ ಸಮಾಜ ಒಕ್ಕೂಟದ ಸಹಯೋಗದಲ್ಲಿ ಬೆಂಗಳೂರಲ್ಲಿ ಇದೇ ಮಾದರಿಯ ಸಾಂಸ್ಕೃತಿಕ ಹಬ್ಬ ಆಚರಿಸಿತ್ತು. ಈಗ ಒಕ್ಕೂಟ ಆ ಹೊಣೆ ವಹಿಸಿಕೊಂಡು ಬಾಳುಗೋಡಿನಲ್ಲಿ ಕೊಡವರ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸಲಿದೆ.

ಬಾಳುಗೋಡಿನಲ್ಲಿ

ನಾಡಿನ ವಿವಿಧೆಡೆಯ ಕೊಡವ ಸಮಾಜಗಳು ಒಂದಾಗಿ `ಕೊಡವ ಸಮಾಜ ಒಕ್ಕೂಟ~ ಎಂಬ ಸಂಘಟನೆ ಸ್ಥಾಪಿಸಿಕೊಂಡಿವೆ. ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಉತ್ತಮ ಸಾಂಸ್ಕತಿಕ ಕೇಂದ್ರವನ್ನು ನಿರ್ಮಿಸುವ ಉದ್ದೇಶ ಹೊಂದಿವೆ. ಇದರ ಅಂಗವಾಗಿ ಬಾಳುಗೋಡಿನಲ್ಲಿ ಸುಮಾರು 20 ಎಕರೆ ಭೂಮಿ ಪಡೆದಿದ್ದು, ಅಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಕೆಲಸ ನಡೆಯುತ್ತಿದೆ.ಈ ಕೇಂದ್ರಕ್ಕೆ ಸರ್ಕಾರ 2 ಕೋಟಿ ರೂ ನೆರವು ನೀಡಿದೆ. ದಾನಿಗಳ ಸಹಾಯ ಸೇರಿ ಸುಮಾರು 13 ಕೋಟಿ ರೂ ಕಟ್ಟಡದ ಯೋಜನೆ ಪ್ರಗತಿಯಲ್ಲಿದೆ. ಈಗಾಗಲೇ ಹಾಕಿ ಪಂದ್ಯಾಟಕ್ಕೆ ಎರಡು ಮೈದಾನ, ಮಹಿಳಾ ಮಕ್ಕಳ ಕೇಂದ್ರ ಕಟ್ಟಡವೂ ನಿರ್ಮಾಣವಾಗಿದೆ.ಮುಂದೆ ಬಾಳುಗೋಡಿನಲ್ಲಿ ಕೊಡವರ ಎಲ್ಲ ಸಭೆ ಸಮಾರಂಭಗಳಿಗಾಗಿ ದೊಡ್ಡ ಐನ್‌ಮನೆ ಕಟ್ಟಲಾಗುತ್ತದೆ. ಕೊಡಗಿನ ಐನ್‌ಮನೆಯ ಮೂಲ ಸ್ವರೂಪಗಳಾದ ವಿಸ್ತಾರದ ಅಂಗಣ, ಕಣ, ಕಣಕ್ಕೆ ಬೇಟಿ, ಗುರುಕಾರೋಣ ನೆಲೆ ಕೈಮಡ, ಆಲೆಪರೆ, ಮನೆಯಿಂದ ಇಳಿದು ಹೋಗುವ ಓಣಿಯಂಥ ಕಟ್ಟಡಗಳು ಇಲ್ಲಿರುತ್ತವೆ. ಕೊಡಗಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ಒಳ್ಳೆಯ ವೀಕ್ಷಣಾ ಕಟ್ಟೆ ನಿರ್ಮಾಣವಾಗಲಿದೆ.ಪರಿಸರ ಪ್ರೇಮಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಅತಿಥಿ ಗೃಹಗಳು ತಲೆ ಎತ್ತಲಿವೆ. ಕೊಡವರ ವಿಶೇಷ ಕಾರ್ಯ ಚಟುವಟಿಕೆಯ ಕೇಂದ್ರ,  ಕ್ರೀಡಾ ಹಾಸ್ಟೆಲ್, ಕೊಡಗಿನ ವಾಣಿಜ್ಯ ಬೆಳೆಗಳ ತೋಟ, ಎಲ್ಲಾ ಮರ ಗಿಡಗಳ ವನ- ಬನ, ಹಸಿರು ಬೇಲಿ, ವೀರ ಯೋಧರ ಸ್ಮಾರಕ ಇವೆಲ್ಲ ಇಲ್ಲಿರಲಿವೆ ಎನ್ನುತ್ತಾರೆ ಒಕ್ಕೂಟದ ಕಾರ್ಯದರ್ಶಿ ಬೊಳ್ಳಚಂಡ ಬಿ ಸುಬ್ಬಯ್ಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry