ಬುಧವಾರ, ನವೆಂಬರ್ 13, 2019
24 °C

ಕೊಡ್ನಾನಿಗೆ ಮರಣದಂಡನೆ: ಗುಜರಾತ್ ಸರ್ಕಾರದಿಂದ ಕೋರಿಕೆ ಸಂಭವ

Published:
Updated:

ಅಹಮದಾಬಾದ್ (ಪಿಟಿಐ): ನರೇಂದ್ರ ಮೋದಿ ಸರ್ಕಾರದ ಮಾಜಿ ಸಚಿವೆ ಮಾಯಾ ಕೊಡ್ನಾನಿ, ಭಜರಂಗದಳ ನಾಯಕ ಬಾಬು ಭಜರಂಗಿ ಮತ್ತು ಇತರ ಎಂಟು ಮಂದಿಗೆ ಮರಣ ದಂಡನೆ ವಿಧಿಸುವಂತೆ ಗುಜರಾತ್ ಸರ್ಕಾರ  ಕೋರುವ ಸಂಭವವಿದೆ.2002ರ ನರೋಡ ಪಾಟಿಯಾ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ನೀಡಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ಈ ಕೋರಿಕೆ ಮಂಡಿಸುವ ಸಂಭವ ಇದೆ.ಹೈಕೋರ್ಟಿಗೆ ಸಲ್ಲಿಸಲು ಮೇಲ್ಮನವಿ ಸಿದ್ಧ ಪಡಿಸುವ ಸಲುವಾಗಿ ಗುಜರಾತ್ ಸರ್ಕಾರದ ಕಾನೂನು ಇಲಾಖೆಯು ಮೂವರು ವಕೀಲರ ಸಮಿತಿಯೊಂದನ್ನು ರಚಿಸಿದ್ದು, ಕೊಡ್ನಾನಿ, ಭಜರಂಗಿ ಸೇರಿದಂತೆ 10 ಮಂದಿ ಅಪರಾದಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಿದ್ಧ ಪಡಿಸಲು ಈ ಸಮಿತಿಗೆ ಸೂಚಿಸಲಾಗಿದೆ ಎಂದು ಸಹಾಯಕ ಪಬ್ಲಿಕ್ ಪ್ರಾಸೆಕ್ಯೂಟರ್ ಗೌರಂಗ ವ್ಯಾಸ್ ಪಿಟಿಐಗೆ ತಿಳಿಸಿದರು. ಈ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿತ್ತು.ಕೆಳಗಿನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಕಾಲಾವಕಾಶ ಮೂರು ತಿಂಗಳುಗಳಾಗಿದ್ದರೂ, ಏಳು ತಿಂಗಳುಗಳ ಅವಧಿಯ ಬಳಿಕ ಸರ್ಕಾರವು ಮೇಲ್ಮನವಿ ಸಲ್ಲಿಸಲಿದೆ. ನಿಗದಿತ ಕಾಲಾವಧಿ ಮುಗಿದ ಬಳಿಕ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರವು ಹೈಕೋರ್ಟನ್ನು ಕೋರಲಿದೆ.10 ಮಂದಿ ಅಪರಾಧಿಗಳಿಗೆ ಮರಣದಂಡನೆ ಕೋರುವುದರ ಜೊತೆಗೆ ಜೀವಾವಧಿ ಸಜೆಗೆ ಗುರಿಯಾಗಿರುವ 22 ಮಂದಿ ಅಪರಾಧಿಗಳ ಜೀವಾವಧಿ ಸಜೆಯ 24 ವರ್ಷಗಳನ್ನು 30 ವರ್ಷಗಳಿಗೆ ಏರಿಸುವಂತೆಯೂ ಮುಂದಿನ ವಾರ ಸಲ್ಲಿಕೆಯಾಗಲಿರುವ ಮೇಲ್ಮನವಿಯಲ್ಲಿ ಕೋರಲಾಗುವುದು ಎಂದು ವ್ಯಾಸ್ ಹೇಳಿದರು.ಕಳೆದ ವರ್ಷ ಆಗಸ್ಟ್ ನಲ್ಲಿ ನೀಡಿದ ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತ್ಸ್ನಾ ಯಾಜ್ಞಿಕ್ ಅವರು ಕೊಡ್ನಾನಿಗೆ 28 ವರ್ಷಗಳ ಸೆರೆವಾಸ ವಿಧಿಸಿದರೆ, ಭಜರಂಗಿಗೆ ಜೀವಮಾನ ಪೂರ್ತಿ ಸೆರೆವಾಸ ಅನುಭವಿಸುವಂತೆ ಆಜ್ಞಾಪಿಸಿದ್ದರು. ಇತರ 8 ಮಂದಿಗೆ 31 ವರ್ಷ ಸೆರೆವಾಸ, 22 ಮಂದಿಗೆ 24 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿದ್ದರು.

ಪ್ರತಿಕ್ರಿಯಿಸಿ (+)