ಕೊಡ ನೀರಿಗಾಗಿ ಆಳುದ್ದ ತಗ್ಗಿನಲ್ಲಿ ಹರಸಾಹಸ

7

ಕೊಡ ನೀರಿಗಾಗಿ ಆಳುದ್ದ ತಗ್ಗಿನಲ್ಲಿ ಹರಸಾಹಸ

Published:
Updated:
ಕೊಡ ನೀರಿಗಾಗಿ ಆಳುದ್ದ ತಗ್ಗಿನಲ್ಲಿ ಹರಸಾಹಸ

ನಿಂಬಾಳ (ತಾ.ಇಂಡಿ): `ಕೊಡ ನೀರಿಗಾಗಿ ಆಳುದ್ದ ತಗ್ಗಿನಲ್ಲಿ ಇಳಿದು ಹರಸಾಹಸ ಪಡುವ ಪ್ರಸಂಗ ಬಂದಿದೆ. ಒಂದು ಕಿಲೋ ಮೀಟರ್ ದೂರದ ತೋಟದ ಬಾವಿಗಳಲ್ಲಿ ಇಳಿದು ನೀರು ತರಬೇಕಾಗಿದೆ. ಇಡೀ ದಿವಸ ಕುಡಿಯುವ ನೀರು ಸಂಗ್ರಹಿಸುವುದೇ ನಮ್ಮ ಮುಖ್ಯ ಕೆಲಸವಾಗಿಬಿಟ್ಟಿದೆ. ಇಂತಹ ಪರಿಸ್ಥಿತಿ ನಮ್ಮೂರಿಗೆ ಎಂದೂ ಬಂದಿರಲಿಲ್ಲ~ ಎಂದು ಗ್ರಾಮದ ಮಹಿಳೆಯರಾದ ಜೈಬು ಗಿರಿಗಾಂವ, ಲಾಲೂಬಿ ಹಲಸಂಗಿ, ರತ್ನಾಬಾಯಿ ಬಜಂತ್ರಿ, ಐಸೂ ಗುಡ್ಡದ, ರಾಜನಬಿ ಮುಲ್ಲಾ ತಮ್ಮೂರು ಎದುರಿಸುತ್ತಿರುವ ನೀರಿನ ಸಮಸ್ಯೆ  ವಿವರಿಸಿದರು.`ಎಂತಹ ಬರಗಾಲ ಬಿದ್ದರೂ ನಮ್ಮೂರಾಗಿನ ಬಾವಿ ಬತ್ತಿರಲಿಲ್ಲ. ಆದರೆ, ಈ ವರ್ಷ ಮಾತ್ರ ಒಣಗಿವೆ. ಇದರಿಂದ ನಮಗ ನೀರಿನ ಅಭಾವ ಆಗಿದೆ~ ಎಂದು ವೃದ್ಧೆ ಶಾಂತಾಬಾಯಿ ಹೇಳಿದರು.`ಸರ್ಕಾರ ನೀರಿನ ಟ್ಯಾಂಕರ್ ಹಚ್ಚಿ ನೀರ ಹಾಕತೈತಿ. ದಿನಾ ನಾಕ ಟ್ಯಾಂಕರ್ ನೀರ ತರತಾರ. ಅದನ್ನು ತಗೋಳಾಕ ಜನಾ ಹೊಡದ್ಯಾಡತಾರ. ಶ್ರೀಮಂತರ ಮಕ್ಳು ಉದ್ದಂದು ಪೈಪ್ ತಂದು ನೀರಿನ ಟ್ಯಾಂಕ್‌ನ್ಯಾಗ್ ಬಿಡತಾರ, ತೋಟಿಲೆ ನೀರು ಬಿಡೊತನ್ಕಾ ತಾಳಂಗಿಲ್~ ಎಂದು ನಿಂಗವ್ವ ಅಸಾಯಕತೆ ವ್ಯಕ್ತಪಡಿಸಿದರು.`ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಬಾಗಾಯತ, ಮೈನೂದ್ದಿನ ಬಾಗಾಯತ, ಸಿದ್ದು ತಡ್ಲಗಿ, ಗಂಗಾಬಾಯಿ ನಿಂಬಾಳಕರ ಅವರು ತಹಶೀಲ್ದಾರ ಬಳಿ ಕುಳಿತು ನಿಂಬಾಳ (ಕೆಡಿ), ನಿಂಬಾಳ (ಬಿಕೆ), ನಿಂಬಾಳ (ಆರ್‌ಎಸ್) ಮತ್ತು ನಿಂಬಾಳ (ಎಲ್‌ಟಿ) ಗಳಿಗೆ ಒಟ್ಟು 4 ನೀರಿನ ಟ್ಯಾಂಕರ್‌ಗಳನ್ನು ಹಚ್ಚಿದ್ದಾರೆ. ಈ ಟ್ಯಾಂಕರ್‌ಗಳು ಪ್ರತಿ ದಿನ ನಾಲ್ಕು ಸಲ ನೀರು ಸರಬರಾಜು ಮಾಡುತ್ತಿವೆ.

 

ಮನುಷ್ಯರು ಟ್ಯಾಂಕರ್ ಬಂದ ತಕ್ಷಣವೇ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ, ಊರೊಳಗಿನ ಜಾನುವಾರುಗಳಿಗೆ, ಹಕ್ಕಿ-ಪಕ್ಷಿಗಳಿಗೆ ಕುಡಿಯಲು ಎಲ್ಲೂ ಒಂದು ಹನಿ ನೀರು ಸಿಗುತ್ತಿಲ್ಲ~ ಎಂದು ಬಸವರಾಜ ವಡ್ಡರ ಹೇಳಿದರು.`ಎಂದೂ ಬತ್ತದ ನಮ್ಮೂರ ಹಳ್ಳ, ಕೆರಿ ಬತ್ತಿಹೋಗಿವೆ. ಗ್ರಾಮದ ಸಮೀಪದಲ್ಲಿರುವ ರಾನಡೆ ಆಶ್ರಮದಲ್ಲಿಯ ಕೊಳವೆ ಬಾವಿಯೂ ಈ ವರ್ಷ ಬತ್ತಿದೆ. ಆಶ್ರಮಕ್ಕೆ ಮಹಾರಾಷ್ಟ್ರದಿಂದ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದಿದೆ~ ಎಂದು ಗ್ರಾಮದ ಹಿರಿಯರಾದ ಬಸವರಾಜ ಮೋರೆ, ಗುಂಡಪ್ಪ ರೂಗಿ, ಗಜಾಸೂರ ಗುಡ್ಡದ, ಸಿದ್ಧಲಿಂಗ ಅವಟಿ, ಶ್ರೀಶೈಲ ವಂದಾಲ, ಶಿವರಾಜ ಹಂಜಗಿ ಹೇಳಿದರು.ನಿಂಬಾಳ ರೈಲ್ವೆ ನಿಲ್ದಾಣದಲ್ಲಿಯೂ ಸಹ ಕುಡಿಯುವ ನೀರಿಲ್ಲ. ಅಲ್ಲಿಯೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಗ್ರಾಮದ ಎಸ್.ಎನ್. ಬಿರಾದಾರ ಕಳೆದ ಒಂದು ತಿಂಗಳ ಹಿಂದೆ ಕೊರೆಸಿದ ಕೊಳವೆ ಬಾವಿಗೆ ಸಾಕಷ್ಟು ನೀರಿದೆ. ಅವರು ನೀರು ಕೊಡಲು ಒಪಿಕೊಂಡಿದ್ದರಿಂದ ಅವರ ಬಾವಿಯಿಂದ ನೀರಿನ ಟ್ಯಾಂಕರ್‌ಗಳು ನೀರು ಸರಬರಾಜು ಮಾಡುತ್ತಿವೆ. ಇದರಿಂದ ತಕ್ಕಮಟ್ಟಿಗೆ ನೀರು ಸಿಗುತ್ತಿದೆ.ನಿಂಬಾಳ (ಬಿಕೆ) ಗ್ರಾಮದಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಸರ್ಕಾರ ಎರಡು ತಿಂಗಳ ಹಿಂದೆ ಒಂದು ಕೊಳವೆ ಬಾವಿ ಕೊರೆದಿದೆ. ಅಲ್ಲಿ ಸಾಕಷ್ಟು ನೀರಿತ್ತು. ಆದರೆ, ಇತ್ತೀಚೆಗೆ ನೀರು ಕಡಿಮೆಯಾಗಿದ್ದರಿಂದ ನಿಂಬಾಳ (ಬಿಕೆ) ಗ್ರಾಮಕ್ಕೂ ಸಹ ಟ್ಯಾಂಕರ್ ನೀರೇ ಆಸರೆಯಾಗಿದೆ.

ಗ್ರಾಮದ ನಾಲ್ಕು ಕೊಳವೆ ಬಾವಿಗಳು, ಎರಡು ಸೇದುವ ಬಾವಿಗಳು ಸಂಪೂರ್ಣ ಬತ್ತಿಹೋಗಿವೆ.`ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಬೇಕು~ ಎಂದು ಗ್ರಾಮದ  ಸರಸ್ವತಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲಾ ಬಿರಾದಾರ, ಕಾರ್ಯದರ್ಶಿ ಸಂಗೀತಾ ಹೊನಮಾನೆ, ಸದಸ್ಯರಾದ ಗಿರಿಜಾಬಾಯಿ ಬಿರಾದಾರ ಮತ್ತು ಭಾಗೀರಥಿ ಹೂಗಾರ ಆಗ್ರಹಿಸಿದರು.`ಮುಂಗಾರಿ,  ಹಿಂಗಾರಿ ಎರಡೂ ಮಳೆಗಳು ಕೈಕೊಟ್ಟಿವೆ. ಇದರಿಂದ ರೈತ ಸಾಕಷ್ಟು ಹಾನಿ ಅನುಭವಿಸಿದ್ದಲ್ಲದೆ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಪ್ರಸಂಗ ಬಂದಿದೆ. ಇದಕ್ಕೆ ಸರ್ಕಾರ ಕ್ರಮ ಜರುಗಿಸಬೇಕು~ ಎಂದು ಮನವಿ ಮಾಡಿದರು ಗ್ರಾಮದ ಹಿರಿಯರಾದ ಬಸವರಾಜ ವಡ್ಡರ, ಈರಪ್ಪ ವಡ್ಡರ, ಗಿಡಗಂಟಿ ಇತರರು.ಮಾಹಿತಿಗೆ ಸಂಪರ್ಕಿಸಿ

ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ. ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ್   ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ.

 ದೂರವಾಣಿ ಸಂಖ್ಯೆ: 08352- 221515, ಮೊ: 9448470153

(ಗಣೇಶ ಚಂದನಶಿವ) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry