ಶನಿವಾರ, ಮೇ 15, 2021
25 °C

ಕೊಡ ನೀರಿಗೂ ಹಾಹಾಕಾರ...

ಪ್ರಜಾವಾಣಿ ವಾರ್ತೆ/ ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಕೊಡ ನೀರಿಗೂ ಹಾಹಾಕಾರ...

ಭೀಮಳ್ಳಿ (ಗುಲ್ಬರ್ಗ ತಾ.): ನಿಮಿಷ ಕೂಡ ಹೊರಗೆ ನಿಲ್ಲಲು ಅಸಾಧ್ಯವಾದ ಸುಡು ಬಿಸಿಲು. ಜಿಲ್ಲಾ ಕೇಂದ್ರ ಗುಲ್ಬರ್ಗದಲ್ಲಿ ಅತ್ತ ಸಚಿವರು, ಅಧಿಕಾರಿಗಳ ಸಭೆ ನಡೆಯುತ್ತಿದ್ದರೆ, ಇತ್ತ ನೀರಿಗಾಗಿ ಊರ ಹೊರಗಿನ ಬೋರ್‌ವೆಲ್‌ಗೆ ಖಾಲಿ ಕೊಡ ಹೊತ್ತು ಮಹಿಳೆಯರು- ಮಕ್ಕಳು ತೆರಳುತ್ತಿದ್ದರು. ನೀರು ಖಚಿತವಾಗಿ ಸಿಕ್ಕೀತೆ?“ರಾತ್ರಿಯಿಂದಾನೂ ಕಾಯ್ಲಿಕ್ಕೆ ಹತ್ತೀವ್ರಿ... ಈಗಷ್ಟ ಕರೆಂಟ್ ಬಂದಾದ್ರಿ. ನೀರ ಸಿಗ್ತಾದ ಅಂತ ಹೋಗ್ಬಕಾಗ್ಯಾದ್ರಿ” ಎಂದು ಖಾಲಿ ಕೊಡಗಳೊಂದಿಗೆ ಚಿಂತೆಯನ್ನೂ ಹೊತ್ತು ನಡೆದಿದ್ದು, ಮುನೀರಾಬಿ. ಇದು ಈಕೆಯೊಬ್ಬಳ ಸಂಕಟವಲ್ಲ; ಊರಿನ ಎಲ್ಲ ಜನರದೂ.ಗುಲ್ಬರ್ಗದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಭೀಮಳ್ಳಿ ಗ್ರಾಮ ನೀರಿನ ಕೊರತೆಗೆ ಸಿಕ್ಕು ತತ್ತರಿಸಿದೆ. ಅಂತರ್ಜಲ ಮಟ್ಟ ಕುಸಿದ ಕಾರಣ, ಬಾವಿ- ಕೊಳವೆಬಾವಿ ಬತ್ತಿವೆ. ನೀರು ಪೂರೈಸಬೇಕಾದ ಪಂಪ್‌ಹೌಸ್ ಲೋಡ್ ಶೆಡ್ಡಿಂಗ್‌ನಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ಸುಮಾರು 8,000 ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಮೂರು ಬಾವಿಗಳಿವೆ. ಈ ಪೈಕಿ ಎರಡು ಬತ್ತಿದ್ದರೆ, ಮಠದ ಬಾವಿಯಲ್ಲಿ ಸ್ವಲ್ಪ ನೀರಿದೆ. “ಪಾರಗೋಳ್ನ ಕೆಳಾಗಿಳಿಸಿ ಚೊಂಬಿನಿಂದ ಕೊಡಕ್ಕ ನೀರು ತುಂಬಿಸಿ, ತಗೋತೀವ್ರಿ. ಎರ್ಡ್‌ ತಾಸಿನಾಗ ಎಲ್ಲ ನೀರು ಖಾಲಿಯಾದ್ರ, ಮತ್ತ ನೀರ್ ಬರ‌್ಲಿಕ್ಕ ಎರ್ಡ್‌ ತಾಸ್ ಬೇಕು” ಎಂದು ಅಶೋಕ ಭೀಮಳ್ಳಿ ಹೇಳುತ್ತಾರೆ.ಊರ ಹೊರಗಿರುವ ಬೋರ್‌ವೆಲ್‌ಗೆ ಪಂಪ್ ಅಳವಡಿಸಲಾಗಿದೆ. ಇಲ್ಲಿ ಮಹಿಳೆಯರು, ಮಕ್ಕಳು ಹಗಲಿರುಳು ನೀರಿಗಾಗಿ ಕಾಯುತ್ತ ನಿಂತಿರುತ್ತಾರೆ. ಇದೇ ಈಗ ನೀರಿನ ಪ್ರಮುಖ ಆಸರೆ. ಆದರೆ ಅಂತರ್ಜಲ ಹರಿವು ಹೆಚ್ಚು ಪ್ರಮಾಣದಲ್ಲಿಲ್ಲ.

 

ಒಂದು ತಾಸು ನೀರು ಹೊರಬಂದರೆ, ಬೋರ್ ಖಾಲಿಯಾಗುತ್ತದೆ. ಮತ್ತೆ ನೀರು ಬರಲು ಮತ್ತೊಂದು ತಾಸು ಬೇಕು. ರಾತ್ರಿ ಕರೆಂಟ್ ಬಂದರೆ ಎಲ್ಲರೂ ಇದರತ್ತ ಓಡಿ ಬರುತ್ತಾರೆ. ಮಕ್ಕಳು, ಮಹಿಳೆಯರಿಗೆ ನೀರು ತರುವುದೇ ಕೆಲಸ. ಹಗಲು ಬಿಸಿಲ ಧಗೆ; ರಾತ್ರಿ ನಿದ್ರೆ ಮಾಡದೇ ಕೊಡಗಳನ್ನು ಇಟ್ಟುಕೊಂಡು ಕಾಯಬೇಕು. “ಎರಡು ಕೊಡ ನೀರ್ ಸಿಗ್ಲಿಕ್ಕೆ ಮುಂಜಾನಿಂದ ಕಾಯ್ದೀನಿ ನೋಡ್ರಿ” ಎಂದು ಚಂದ್ರಭಾಗಾ ಭಾಗೋಡಿ ಹೇಳುವುದು ಸಮಸ್ಯೆಯ ಭೀಕರತೆಗೆ ನಿದರ್ಶನವಾಗಿದೆ.ಪ್ರತ್ಯೇಕ ವಿದ್ಯುತ್ ಮಾರ್ಗ: ಬೋಸಗಾ ಕೆರೆಯಿಂದ ಭೀಮಳ್ಳಿಗೆ ನೀರು ಪೂರೈಕೆಗೆ ಕೊಳವೆಮಾರ್ಗ ಅಳವಡಿಸಲಾಗಿದೆ. ಅಲ್ಲಿರುವ ಪಂಪ್‌ಹೌಸ್‌ನಿಂದ ನೀರು ಗ್ರಾಮದ ಟ್ಯಾಂಕ್ ತಲುಪುವ ಹೊತ್ತಿಗೆ ಕರೆಂಟ್ ಕಡಿತವಾದರೆ, ಮತ್ತೆ ಪಂಪ್‌ಹೌಸ್‌ಗೆ ಹೋಗಿ ಚಾಲೂ ಮಾಡಬೇಕು. ಹೀಗಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ನೀರಿನ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ.

 

“ಪಂಪ್‌ಹೌಸ್‌ಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಸಿದರೆ ಭೀಮಳ್ಳಿ, ತಾಜಸುಲ್ತಾನಪುರ, ಸೈಯದ್ ಚಿಂಚೋಳಿ, ಕೆರೆಬೋಸ್ಗಾ ಹಾಗೂ ಅಷ್ಟಗಿ ಗ್ರಾಮಗಳಿಗೆ ಅಬಾಧಿತವಾಗಿ ನೀರು ಪೂರೈಕೆಯಾಗಲಿದೆ. ಜನರು ಅನುಭವಿಸುತ್ತಿರವ ತೊಂದರೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಈ ಬಗ್ಗೆ ಸಚಿವರು, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಕಾಂಗ್ರೆಸ್ ಮುಖಂಡ ಪವನಕುಮಾರ ವಳಕೇರಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.ನಿರ್ಲಕ್ಷ್ಯ- ಖಂಡನೀಯ: ಗ್ರಾಮದಲ್ಲಿ ನೀರಿಗಾಗಿ ಇಷ್ಟೊಂದು ಹಾಹಾಕಾರ ಉಂಟಾಗಿದ್ದರೂ ಈವರೆಗೆ ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಭೇಟಿ ನೀಡಿಲ್ಲ. ಗ್ರಾಮಸ್ಥರು ಒಂದು ಬಿಂದಿಗೆ ನೀರಿಗಾಗಿ ಪರಿತಪಿಸುತ್ತಿರುವಾಗ ಸಚಿವರು ಹಾಗೂ ಅಧಿಕಾರಿಗಳು ನೀರಿನ ತೀವ್ರ ಕೊರತೆ ಎಲ್ಲೂ ಇಲ್ಲವೇ ಇಲ್ಲ ಎಂಬಂತೆ ಸುಮ್ಮನೇ ಕುಳಿತಿರುವುದು ಖಂಡನೀಯ ಎಂದು ಗುಲ್ಬರ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.ಬೋಸಗಾ ಕೆರೆಯಿಂದ ಟ್ಯಾಂಕ್‌ಗೆ ನೀರು ಕೊಳವೆ ಮೂಲಕ ಸಾಗುವಾಗ ಗ್ರಾಮದ ಇನ್ನೊಂದು ತುದಿಯಲ್ಲಿರುವ ಜನರು ಪೈಪ್ ಒಡೆದು ಹಾಕಿದ ಘಟನೆ ನಡೆಯುತ್ತಿವೆ. “ಟ್ಯಾಂಕ್‌ನಿಂದ ಊರಿನ ಮೇಲ್ಭಾಗದ ಜನರಿಗೆ ಮಾತ್ರ ನೀರು ಸಿಗುತ್ತದೆ. ಆದರೆ ಕೊಳವೆ ಹೋಗಿರುವುದು ನಮ್ಮ ಏರಿಯಾದಲ್ಲಿ. ನಮಗೇ ನೀರು ಕೊಡದಿದ್ದರೆ ಹೇಗೆ?” ಎಂದು ಮಮತಾ ಪ್ರಶ್ನಿಸುತ್ತಾರೆ.ಜನರ ಬವಣೆ ಒಂದು ರೀತಿಯದಾದರೆ, ಜಾನುವಾರುಗಳು ಅನುಭವಿಸುತ್ತಿರುವ ತಾಪ ಇನ್ನೊಂದು ಬಗೆಯದು. ಊರ ಸುತ್ತ ಎಲ್ಲೂ ನೀರಿಲ್ಲ. ಜನರಿಗೇ ಕುಡಿಯಲು ನೀರು ದೊರಕದ ಸ್ಥಿತಿ ಇರುವಾಗ, ಮೂಕಪ್ರಾಣಿಗಳ ವೇದನೆ ಊಹಿಸಲೂ ಅಸಾಧ್ಯ. ಈ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆಂದು ಸರ್ಕಾರ ಒಟ್ಟು 26 ಕೊಳವೆಬಾವಿ ಕೊರೆಸಿದೆ; ಆದರೆ ಒಂದರಲ್ಲೂ ನೀರಿಲ್ಲ. ಬೋಸಗಾ ಕೆರೆಯೊಂದೇ ಜೀವನಾಧಾರ.ಗ್ರಾಮಸ್ಥರ ಆಹ್ವಾನ!: “ನೀರಿಗಾಗಿ ನಾವು ಪಡುವ ತಾಪತ್ರಯ ನೋಡಿ. ಅಲ್ಲಿ ಮಿನಿಸ್ಟರ್‌ಗಳು, ಎಂಎಲ್‌ಎ, ಆಫೀಸರ್ ಎಲ್ಲ ಎಸಿ ರೂಮಿನಾಗ ಕೂತು ಮೀಟಿಂಗ್ ಮಾಡ್ತಾರೆ. ನೀರಿನ ಸಮಸ್ಯೆ ಅಷ್ಟೊಂದು ಇಲ್ಲ ಅಂತ ಡಿಸಿ ಹೇಳ್ತಾರೆ. ಒಂದ್ ಕೊಡ ನೀರು ತರ‌್ಲಿಕ್ಕ ನಾವು ಉರಿಬಿಸಿಲಾಗ ಹೀಂಗ್ ಹೋಗೋದು ನೋಡ್ಲಿಕ್ಕಾದ್ರೂ ಅವರು ನಮ್ಮೂರಿಗೆ ಬರಬೇಕು” ಎಂದು ತಾಪಂ ಮಾಜಿ ಸದಸ್ಯ ಸರ್ದಾರ್ ಪಟೇಲ್ ಆಹ್ವಾನ ನೀಡುತ್ತಾರೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.