ಶುಕ್ರವಾರ, ನವೆಂಬರ್ 15, 2019
21 °C

ಕೊನೆಗೂ ಕೂಡಿಬಂತು ಮುಹೂರ್ತ

Published:
Updated:

ಗುಲ್ಬರ್ಗ: ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಎದುರಿಸಲು ಅನೇಕ ತಿಂಗಳಿಂದ ತಯಾರಿ ನಡೆಸಿ ಪರೀಕ್ಷೆಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕೊನೆಗೂ ಒಂದು ಸಿಹಿ ಸುದ್ದಿ.ದೇಶದಾದ್ಯಂತ ಏಕ ಕಾಲದಲ್ಲಿ ಜುಲೈ 10ರಂದು ಪರೀಕ್ಷೆ ನಡೆಸಿ ಫಲಿತಾಂಶ, ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಜವಾಹರ ನವೋದಯ ವಿದ್ಯಾಲಯ ಸಮಿತಿ ನಿರ್ಧರಿಸಿದೆ.15ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹೊರೆಯಾಗುತ್ತವೆ ಎಂಬ ಕಾರಣದಿಂದ ನವೋದಯ ವಿದ್ಯಾಲಯ ಸಮಿತಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿದ್ದ ನಿರಂತರ ಕಲಿಕಾ ಮೌಲ್ಯಮಾಪನ ಪರೀಕ್ಷೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕೆಲ ಪಾಲಕರು 16 ವರ್ಷದ ವಿದ್ಯಾರ್ಥಿಗಳಿಗಿಂತ 5ನೇ ತರಗತಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನವರಾಗಿರುವುದರಿಂದ ಪ್ರವೇಶ ಪರೀಕ್ಷೆ ಹೊರೆಯಾಗುತ್ತದೆ. ಇದನ್ನು ಸಹ ರದ್ದುಪಡಿಸಬೇಕು ಎಂದು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಅಂತೆಯೇ  ಫೆಬ್ರುವರಿಯಲ್ಲಿ ನಡೆಯಬೇಕಾಗಿದ್ದ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿತ್ತು ಎಂದು ತಿಳಿದು ಬಂದಿದೆ.ನ್ಯಾಯಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಪರಿಣಾಮ ಸಂಸತ್ತಿನಲ್ಲಿ ಈ ಕುರಿತು ಗಂಭೀರ ಚರ್ಚೆಯಾಗಿ ಕೇಂದ್ರ ಸರ್ಕಾರ ಪ್ರವೇಶ ಪರೀಕ್ಷೆಯ ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದೊಂದು ಬಾರಿ ಪರೀಕ್ಷೆ ನಡೆಸಲು ಅನುಮತಿ ಕೊಡಿ ಮುಂದಿನ ಬಾರಿ ಈ ಕುರಿತಂತೆ ಸಮಗ್ರ ನೀತಿ ರೂಪಿಸಲಾಗುವುದು ಎಂದು ನ್ಯಾಯಲಯದ ಮುಂದೆ ಹೇಳಿದ ಪರಿಣಾಮ ನ್ಯಾಯಲಯ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.`ಈ ಮುಂಚೆ ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ, ಪ್ರವೇಶ ಪ್ರಕ್ರಿಯೆಯನ್ನು ಜೂನ್ 15ರೊಳಗೆ ಪೂರ್ಣಗೊಳಿಸಿ ನಿಗದಿಯಂತೆ ತರಗತಿಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಆಡಳಿತಾತ್ಮಕ ಕಾರಣಗಳಿಂದಾಗಿ ಪರೀಕ್ಷೆಗಳನ್ನು ಮುಂದೂಡಿದ್ದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗಿದೆ. ಆದರೂ ಅಗಸ್ಟ್ 15ರೊಳಗೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತರಗತಿಗಳನ್ನು ನಡೆಸಲಾಗುವುದು~ ಎಂದು ಹೋತಪೇಟೆ ಜವಾಹರ ನವೋದಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಎನ್.ಪಿ. ಬೆಟಗೇರಿ `ಪ್ರಜಾವಾಣಿ~ಗೆ ತಿಳಿಸಿದರು.`ನವೋದಯ ಪರೀಕ್ಷೆಯ ಸಿದ್ಧತೆಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ತಿಂಗಳಿಂದ ಫೆಬ್ರುವರಿವರೆಗೆ ತಯಾರಿ ಮಾಡಿಸಿದ್ದೆವು.              ಫೆಬ್ರುವರಿಯಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಗಳು ಮುಂದೂಡಿದ್ದರಿಂದ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂದು ಕಾಯ್ದು ಸಾಕಾಗಿದೆ. ಈಗ ಪರೀಕ್ಷೆಯ ದಿನಾಂಕ ನಿಗದಿಯಾಗಿದೆ. ಜೂನ್ 20ರ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರವೇಶ ಪತ್ರ ಪಡೆಯಬಹುದು ಎಂಬುದು ತಿಳಿದು ಸಂತೋಷವಾಗಿದೆ. ವಿದ್ಯಾರ್ಥಿಗಳು ಮತ್ತೆ ವಿಷಯಗಳ ಕುರಿತು ಪುನರ್ ಮನನ ಮಾಡಬೇಕಾದ ಅವಶ್ಯಕತೆ ಇದೆ~ ಎಂದು ಹೇಳುತ್ತಾರೆ ಶಿಕ್ಷಕ ಇಫ್ತಾಕರ್ ಅಲಿ.`ನನ್ನ ಮಗ ನವೋದಯ ಪ್ರವೇಶ ಪರೀಕ್ಷೆಗಾಗಿ ಸಾಕಷ್ಟು ಅಭ್ಯಾಸ ಮಾಡ್ದ್ದಿದ. ನವೋದಯ ಪರೀಕ್ಷೆಗೆ ಕಾಯ್ದು ಸುಸ್ತಾಗಿ ಬೇರೆ ಶಾಲೆಗೆ ಅಡ್ಮಿಶನ್ ಮಾಡಿಸಿದ್ದೇನೆ. ಈಗ ಪರೀಕ್ಷೆ ದಿನಾಂಕ ನಿಗದಿಯಾಗಿದೆ ಮತ್ತೆ ಆ ವಿಷಯಗಳ ಕುರಿತು ಮಗನಿಗೆ ಪುನರ್ ಮನನದ ತಯಾರಿ ಮಾಡಿಸಿ ಪರೀಕ್ಷೆಗೆ ಸಿದ್ಧಗೊಳಿಸಬೇಕಿದೆ~ ಎಂದು ಹೇಳುತ್ತಾರೆ ಪಾಲಕ ಬಂಗಾರೆಪ್ಪ.ಯಾವುದೇ ಕಾರಣಗಳಿರಲಿ ಅಂತೂ ಪರೀಕ್ಷೆಗೆ ಮಹೂರ್ತ ಕೂಡಿ ಬಂದಿರುವುದು ಪಾಲಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಂತೋಷ ತಂದಿದೆ.

ಪ್ರತಿಕ್ರಿಯಿಸಿ (+)