ಗುರುವಾರ , ಮಾರ್ಚ್ 4, 2021
30 °C

ಕೊನೆಗೂ ತಾಯ್ನೆಲಕ್ಕೆ ಮರಳಿದ ಅನಿವಾಸಿ ಭಾರತೀಯ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊನೆಗೂ ತಾಯ್ನೆಲಕ್ಕೆ ಮರಳಿದ ಅನಿವಾಸಿ ಭಾರತೀಯ ಮಕ್ಕಳು

ನವದೆಹಲಿ (ಪಿಟಿಐ): ನಾರ್ವೆಯಲ್ಲಿ ಅಧಿಕಾರಿಗಳು ಅನಾಥಾಲಯದಲ್ಲಿ ಇರಿಸಿದ್ದ ಇಬ್ಬರು ಅನಿವಾಸಿ ಭಾರತೀಯ ಮಕ್ಕಳು ದೀರ್ಘಕಾಲದ ಕಾನೂನು ಸಮರ ಮತ್ತು ಭಾರತದ ರಾಜತಾಂತ್ರಿಕ ಒತ್ತಡದ ಪರಿಣಾಮವಾಗಿ ಕೊನೆಗೂ ಮಂಗಳವಾರ ಭಾರತಕ್ಕೆ ಹಿಂದಿರುಗಿದರು.

 

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿಕ್ಕಪ್ಪ, ಅಜ್ಜ - ಅಜ್ಜಿ, ಕುಟುಂಬ ಸದಸ್ಯರು ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪ್ರಣೀತ್ ಕೌರ್ ಮತ್ತಿತರರು ಈ ಪುಟಾಣಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು.ಅಭಿಜ್ಞಾನ (3) ಮತ್ತು ಐಶ್ವರ್ಯ (1) ಎಂಬ ಈ ಇಬ್ಬರು ಅನಿವಾಸಿ ಭಾರತೀಯ ಮಕ್ಕಳನ್ನು ನಾರ್ವೆಯ ಅನಾಥಾಲಯದ ಅಧಿಕಾರಿಗಳು ಭಾರತಕ್ಕೆ ಕರೆತಂದರು. ನಾರ್ವೆ ನ್ಯಾಯಾಲಯವು ಈ ಮಕ್ಕಳನ್ನು ಭಾರತದಲ್ಲಿನ ತಂದೆ ಕಡೆಯ ಬಂಧುಗಳಿಗೆ ಒಪ್ಪಿಸುವಂತೆ ಸೋಮವಾರ ಆಜ್ಞಾಪಿಸಿತ್ತು. ಇದರೊಂದಿಗೆ ಹಲವಾರು ತಿಂಗಳುಗಳ ಮಕ್ಕಳ ಪಾಲನಾ ವಿವಾದ ಕೊನೆಗೊಂಡಿತ್ತು.

 

ಈ ಮಕ್ಕಳನ್ನು ಭಾರತದಲ್ಲಿನ ಬಂಧುಗಳ ವಶಕ್ಕೆ ಒಪ್ಪಿಸುವಂತೆ ಭಾರತವು ಕಳೆದ ವರ್ಷವೇ ನಾರ್ವೆ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರಿತ್ತು.ಮಕ್ಕಳನ್ನು ಸ್ವಾಗತಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಮಕ್ಕಳು ಬಿಡುಗಡೆಗಾಗಿ ನಾರ್ವೆಗೆ ಧನ್ಯವಾದ ಸಮರ್ಪಿಸಿದರು. ~ಈ ಮಕ್ಕಳು ಭಾರತಕ್ಕೆ ಸೇರಿದವರು. ಅವರು ಭಾರತದ ರಾಷ್ಟ್ರೀಯರು.  ಭಾರತದ ಕುಟುಂಬ ವ್ಯವಸ್ಥೆಯ ಅಡಿಯಲ್ಲಿ ಈ ಮಕ್ಕಳನ್ನು ಅವರ ಚಿಕ್ಕಪ್ಪ  ಚೆನ್ನಾಗಿ ನೋಡಿಕೊಳ್ಳುವರೆಂಬ ವಿಶ್ವಾಸ ನನಗಿದೆ~ ಎಂದು ಕೃಷ್ಣ ಹೇಳಿದರು.ಮಾನವೀಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಗಮನಿಸಿ ಇತ್ಯರ್ಥ ಪಡಿಸಿದ್ದಕ್ಕಾಗಿ ನಾರ್ವೆ ಸರ್ಕಾರಕ್ಕೆ, ವಿಶೇಷವಾಗಿ ಅಲ್ಲಿನ ವಿದೇಶಾಂಗ ಸಚಿವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇಂತಹ ವಿವೇಕಯುತ ನಿರ್ಧಾರ ಕೈಗೊಂಡದ್ದಕ್ಕಾಗಿ ನಾನು ನಾರ್ವೆಯ ನ್ಯಾಯಾಂಗ ವ್ಯವಸ್ಥೆಯನ್ನೂ ಅಭಿನಂದಿಸುತ್ತೇನೆ. ಎಲ್ಲವೂ ಸುಖಾಂತ್ಯಗೊಂಡದ್ದು ಸಂತಸಕರ~ ಎಂದು ವಿದೇಶಾಂಗ ಸಚಿವರು ಹರ್ಷ ವ್ಯಕ್ತ ಪಡಿಸಿದರು.ನಾರ್ವೆಯ ಮಕ್ಕಳ ಕಲ್ಯಾಣ ಸಂಸ್ಥೆಯು ~ಭಾವನಾತ್ಮಕ ಸಂಬಂಧವಿಲ್ಲ~ ಎಂಬ ಕಾರಣ ನೀಡಿದ ಕಳೆದ ವರ್ಷ ಮೇ ತಿಂಗಳಲ್ಲಿ ಅನುರೂಪ ಮತ್ತು ಸಾಗರಿಕಾ ಭಟ್ಟಾಚಾರ್ಯ ದಂಪತಿಯ ವಶದಿಂದ ಈ ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿತ್ತು.ಆದರೆ ಈ ಆರೋಪವನ್ನು ನಿರಾಕರಿಸಿದ ಪಾಲಕರು ~ಇದು ಕೇವಲ ಸಾಂಸ್ಕೃತಿಕ ತಪ್ಪು ತಿಳುವಳಿಕೆಯ ಪ್ರಕರಣ ಅಷ್ಟೇ~ ಎಂದು ಹೇಳಿದ್ದರು. ಪ್ರಕರಣ ವ್ಯಾಪಕ ಪ್ರಚಾರ ಪಡೆದಾಗ ಭಾರತದ ವಿದೇಶಾಂಗ ಸಚಿವಾಲಯವು ನಾರ್ವೆ ಸರ್ಕಾರದ ಮೇಲೆ ಮಕ್ಕಳನ್ನು ಬಿಡುಗಡೆ ಮಾಡುವಂತೆ ರಾಜತಾಂತ್ರಿಕ ಒತ್ತಡ ಬೀರಿತ್ತು.ಪ್ರಧಾನಿ ಮನಮೋಹನ್ ಸಿಂಗ್ ಅವರೂ ಕಳೆದ ತಿಂಗಳು ಪರಮಾಣು ಭದ್ರತಾ ಶೃಂಗದಲ್ಲಿ ಪಾಲ್ಗೊಳ್ಳಲು ನಾರ್ವೆಗೆ ತೆರಳಿದ್ದಾಗ ಅಲ್ಲಿನ ಪ್ರಧಾನಿ ಜೊತೆಗೆ ವಿಷಯ ಪ್ರಸ್ತಾಪಿಸಿದ್ದರು.ಹಲವಾರು ಕುತೂಹಲಕರ ತಿರುವುಗಳ ಬಳಿಕ ನಾರ್ವೆಯ ಸ್ಟಾವೆಂಜರ್ ಜಿಲ್ಲಾ ನ್ಯಾಯಾಲಯವು ಸೋಮವಾರ ಮಕ್ಕಳಾದ ಅಭಿಜ್ಞಾನ ಮತ್ತು ಐಶ್ವರ್ಯ  ಅವರನ್ನು ಅವರ ಚಿಕ್ಕಪ್ಪ ಅರುಣ್ ಭಾಷ ಭಟ್ಟಾಚಾರ್ಯ ವಶಕ್ಕೆ ಒಪ್ಪಿಸುವಂತೆ ಆಜ್ಞಾಪಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.