ಕೊನೆಗೂ ನಿರ್ಮಾಣಗೊಂಡ ಸ್ವಾಗತ ದ್ವಾರ

7

ಕೊನೆಗೂ ನಿರ್ಮಾಣಗೊಂಡ ಸ್ವಾಗತ ದ್ವಾರ

Published:
Updated:
ಕೊನೆಗೂ ನಿರ್ಮಾಣಗೊಂಡ ಸ್ವಾಗತ ದ್ವಾರ

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ರಾಜ್ಯದ ಮಧ್ಯವರ್ತಿ ಸ್ಥಳದಲ್ಲಿರುವ ಹಾವೇರಿ ನಗರದ ಜಿಲ್ಲಾ ಕೇಂದ್ರವಾಗಿ ಹದಿನಾಲ್ಕು ವರ್ಷ ಕಳೆದಿದೆ. ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾದ ರಾಷ್ಟ್ರೀಯ ಹೆದ್ದಾರಿ- 4 ಕೂಡ ನಗರದ ಮಧ್ಯದಲ್ಲಿ ಹಾಯ್ದು ಹೋಗಿದೆ.ಇಂತಹ ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಂತೆ ಹೆದ್ದಾರಿಗೆ ಊರ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಪಾಸ್ ನಿರ್ಮಾಣ ಮಾಡಿತು. ಅದಾದ ನಂತರ ಹಾವೇರಿ ನಗರ ಹೆದ್ದಾರಿಯಲ್ಲಿ ಹೋಗುವವರಿಗೆ ಹಾವೇರಿ ಅಪರಿಚಿತ ನಗರವಾಗಿಯೇ ಪರಿಣಮಿಸಿತು. ಅದಕ್ಕೆ ಕಾರಣ ಬೈಪಾಸ್‌ನಿಂದ ಹಾವೇರಿ ನಗರಕ್ಕೆ ತಿರುವು ಪಡೆದುಕೊಳ್ಳುವ ರಸ್ತೆಗಳಲ್ಲಿ ಯಾವುದೇ ಮಾರ್ಗಸೂಚಿಗಳಾಗಲಿ, ದ್ವಾರ ಬಾಗಿಲುಗಳಾಲಿ ಇಲ್ಲದಿರುವುದು.ಇದರಿಂದ ಅಪರಿಚಿತ ಪ್ರಯಾಣಿಕರಿಗೆ ಆದ ಅವಾಂತರಗಳು ಅಷ್ಟಿಷ್ಟಲ್ಲ. ಹಗಲು ಹೊತ್ತಿನಲ್ಲಿ ಜನರು ರಸ್ತೆಯ ತಿರುವು ನೋಡಿಕೊಂಡು ಹಾವೇರಿ ನಗರಕ್ಕೆ ಬಂದರೂ, ರಾತ್ರಿ ಸಮಯದಲ್ಲಿ ಮಾತ್ರ ಹಾವೇರಿಗೆ ಬರುವ ಬಹುತೇಕ ವಾಹನಗಳು ಬೈಪಾಸ್‌ನಲ್ಲಿ ಹಾಗೆ ಮುಂದೆ ಸಾಗಿ ಮೋಟೆಬೆನ್ನೂರ ಇಲ್ಲವೇ ರಾಣೆಬೆನ್ನೂರ ತಲುಪಿ ಹಾವೇರಿಗೆ ವಾಪಸ್ಸಾದ ಉದಾಹರಣೆಗಳಿವೆ.ಹದಿನಾಲ್ಕು ವರ್ಷಗಳ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೊನೆಗೂ ದ್ವಾರ ಬಾಗಿಲವನ್ನು ಅಳವಡಿಸುವ ಮೂಲಕ ಕೊನೆಗೂ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.ಯಾಲಕ್ಕಿ ಕಂಪಿನ ನಗರಕ್ಕೆ ಸ್ವಾಗತ: ಜನರು ಹತ್ತು ಹಲವು ಬಾರಿ ಮಾಡಿದ ಒತ್ತಾಯಕ್ಕೆ ಮಣಿದು ಜಿಲ್ಲಾಡಳಿತವು ಲೋಕೋಪಯೋಗಿ ಇಲಾಖೆ ಮೂಲಕ ದ್ವಾರಬಾಗಿಲನ್ನು ನಿರ್ಮಿಸಿದೆ. ಸುಮಾರು 12 ಲಕ್ಷ ರೂ. ಖರ್ಚು ಮಾಡಿ ಎರಡು ದ್ವಾರಬಾಗಿಲು ನಿರ್ಮಿಸಲಾಗಿದ್ದು, ಒಂದು ದ್ವಾರಬಾಗಿಲು ಹುಬ್ಬಳ್ಳಿ ಕಡೆಯಿಂದ ಹಾವೇರಿಗೆ ಬರುವ ಬೈಪಾಸ್ ಬಳಿ ಅಳವಡಿಸಿದ್ದರೆ, ಇನ್ನೊಂದನ್ನು ರಾಣೆಬೆನ್ನೂರ ಕಡೆಯಿಂದ ಹಾವೇರಿ ಬರುವ ನೆಲೋಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದೆ.ಈ ದ್ವಾರವನ್ನು ವಿಶಿಷ್ಟವಾಗಿ ನಿರ್ಮಿಸಿದ್ದು, ಮೂರುವರೆ ಅಡಿ ಎತ್ತರದ ಕಾಲಂ ಮೇಲೆ ಬೃಹತ್ ಕಂಬಗಳನ್ನು ನಿಲ್ಲಿಸಲಾಗಿದೆ. ಅದಕ್ಕೆ ಜಾಂಟ್ರಿಬೋರ್ಡ್ ಹಾಗೂ ವೆಟ್ರೋ ರಿಪ್ಲೇಕ್ಟರಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.ಯಾಲಕ್ಕಿ ಮಾರುಕಟ್ಟೆಗೆ ಪ್ರಸಿದ್ಧವಾಗಿರುವ ಹಾವೇರಿಯ ಯಾಲಕ್ಕಿ ಕಂಪು ಪ್ರತಿಬಿಂಬಿಸುವ ಸಲುವಾಗಿ ಬೋರ್ಡ್ ಮೇಲೆಯೂ `ಯಾಲಕ್ಕಿ ಕಂಪಿನ ಹಾವೇರಿ ನಗರಕ್ಕೆ ಸುಸ್ವಾಗತ~ ಎಂದು ಬರೆಸಲಾಗಿದೆ. ಹಿಂಬದಿಯಲ್ಲಿ ಧನ್ಯವಾದಗಳು ಪ್ರಯಾಣ ಸುಖಕರವಾಗಲಿ ಎಂದು ಪ್ರಯಾಣಿಕರನ್ನು ಹಾರೈಸಲಾಗಿದೆ.`ಬಹುದಿನಗಳಿಂದಲೂ ಹಾವೇರಿ ನಗರಕ್ಕೆ ಬರುವ ಎರಡು ರಸ್ತೆಗಳಲ್ಲಿ ದ್ವಾರಬಾಗಿಲು ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಬೇರೆ ಬೇರೆ ಕಾರಣಗಳಿಂದ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಎರಡು ದ್ವಾರಗಳನ್ನು ನಿರ್ಮಿಸುವ ಮೂಲಕ ಜಿಲ್ಲಾ ಕೇಂದ್ರದ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದೆ~ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಶೇಖರಪ್ಪ ತಿಳಿಸುತ್ತಾರೆ.`ಹಾವೇರಿ ನಗರ ಹಾಗೂ ಜಿಲ್ಲೆಯ ಜನರಿಗೆ ಹೊರತುಪಡಿಸಿ ಬೇರೆ ಊರುಗಳಿಂದ ಹಾವೇರಿ ನಗರಕ್ಕೆ ಬರುವ ಜನರಿಗೆ ಮಾತ್ರ ಹಾವೇರಿ ನಗರಕ್ಕೆ (ರಾತ್ರಿಯಲ್ಲಿ) ಬರುವ ಮಾರ್ಗ ಗೊತ್ತಾಗದೇ ಬೈಪಾಸ್‌ನಲ್ಲಿಯೇ ನೇರವಾಗಿ ಹೋಗಿಬಿಡುತ್ತಿದ್ದರು. ಈಗ ದ್ವಾರ ಬಾಗಿಲು ನಿರ್ಮಿಸಿರುವುದು ಅಪರಿಚಿತ ಪ್ರಯಾಣಿಕರು ಸಹ ಯಾವುದೇ ಗೊಂದಲವಿಲ್ಲದೇ ನೇರವಾಗಿ ಹಾವೇರಿ ನಗರಕ್ಕೆ ಬರಲು ಅನುಕೂಲವಾಗಿದೆ~ ಎಂದು ನಗರದ ನಿವಾಸಿ ಸಂಜೀವ ದೊಡ್ಡಮನಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry