ಕೊನೆಗೂ ಪತ್ತೆಯಾದ ಮಗು ರಿಯಾನ್ ಶವ

7

ಕೊನೆಗೂ ಪತ್ತೆಯಾದ ಮಗು ರಿಯಾನ್ ಶವ

Published:
Updated:

ಬೆಂಗಳೂರು: ನಗರದ ರೂಪೇನಾ ಅಗ್ರಹಾರದ ಗುಲ್ಬರ್ಗ ಕಾಲೊನಿಯಿಂದ ನಾಪತ್ತೆಯಾಗಿದ್ದ ಮಗು ರಿಯಾನ್ ಪಾಷಾನ ಶವ ಆತನ ಮನೆಯ ಸಮೀಪದ ಚರಂಡಿಯಲ್ಲಿ ಶನಿವಾರ ಪತ್ತೆಯಾಗಿದೆ.ರಿಯಾನ್ ಮನೆಯ ಮುಂದಿನ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ. ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ದೋಬಿಘಾಟ್ ಬಳಿಯ ಚರಂಡಿಯಲ್ಲಿ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಲ್ಬರ್ಗ ಕಾಲೊನಿ ನಿವಾಸಿ ಸಿದ್ದಿಕ್ ಪಾಷಾ ಮತ್ತು ಜಬೀನ್ ತಾಜ್ ಎಂಬ ದಂಪತಿಯ ಮೂರು ವರ್ಷದ ಮಗು ರಿಯಾನ್ ಫೆ.14ರಿಂದ ಕಾಣೆಯಾಗಿದ್ದ. ಆತ ಮನೆಯ ಮುಂದಿನ ಚರಂಡಿಗೆ ಬಿದ್ದಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಎರಡು ದಿನಗಳ ಕಾಲ ಚರಂಡಿಯಲ್ಲಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.ಜಬೀನ್ ಅವರು ರಿಯಾನ್‌ಗೆ ಊಟ ಮಾಡಿಸಿ, ನೀರು ತರಲು ಮನೆಯೊಳಗೆ ಹೋಗಿದ್ದ ಸಂದರ್ಭದಲ್ಲಿ ಆತ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ.ಮಡಿವಾಳ ಕೆರೆಯಲ್ಲಿ ಮೀನು ಸಾಕಣೆ ಮಾಡುವ ವ್ಯಕ್ತಿಯೊಬ್ಬರು ಬೆಳಿಗ್ಗೆ ಕೆರೆಯ ಬಳಿ ಹೋಗುತ್ತಿದ್ದ ವೇಳೆ ಚರಂಡಿಯ ತ್ಯಾಜ್ಯದ ನಡುವೆ ಬಿದ್ದಿದ್ದ ಮಗುವಿನ ಶವವನ್ನು ನಾಯಿಯೊಂದು ಎಳೆದಾಡುತ್ತಿದ್ದುದನ್ನು ನೋಡಿದರು. ಬಳಿಕ ಅವರು ಆ ವಿಷಯವನ್ನು ಸ್ಥಳೀಯರಿಗೆ ತಿಳಿಸಿದರು. ಸ್ಥಳೀಯರು ಚರಂಡಿಯ ಬಳಿ ತೆರಳಿ ರಿಯಾನ್‌ನ ಗುರುತು ಪತ್ತೆ ಹಚ್ಚಿದರು ಎಂದು ಪೊಲೀಸರು ಹೇಳಿದ್ದಾರೆ.ಬಿಬಿಎಂಪಿ ಆಯುಕ್ತರು ಮತ್ತು ಮೇಯರ್ ಸ್ಥಳಕ್ಕೆ ಭೇಟಿ ನೀಡುವವರೆಗೂ ಮಗುವಿನ ಶವವನ್ನು ತೆಗೆಯಬಾರದು. ಚರಂಡಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಿಯಾನ್ ಪೋಷಕರ ರೋದನ ಮುಗಿಲು ಮುಟ್ಟಿತ್ತು.ಒಂದು ಲಕ್ಷ ಪರಿಹಾರ

‘ಮಗು ರಿಯಾನ್ ಪಾಷಾನ ಶವ ಕಾಲುವೆಯಲ್ಲಿ ಪತ್ತೆಯಾಗಿರುವುದು ದುರದೃಷ್ಟಕರ. ಮಗುವಿನ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಈ ರೀತಿಯ ದುರ್ಘಟನೆ ಸಂಭವಿಸದಂತೆ ಎಚ್ಚರ ವಹಿಸಲಾಗುವುದು. ಘಟನೆ ಹಿನ್ನೆಲೆಯಲ್ಲಿ ಇಲ್ಲಿನ ಕಾಲುವೆಗೆ ತಂತಿ ಬೇಲಿ ಅಳವಡಿಸಲು ಸೂಚಿಸಲಾಗಿದ್ದು, 55 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಶನಿವಾರವೇ ಅನುಮೋದನೆ ನೀಡಲಾಗಿದೆ’  ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry