ಕೊನೆಗೂ ಪರಿವಾರಕ್ಕೆ ಸಿಕ್ಕ ಯಜಮಾನ?

7

ಕೊನೆಗೂ ಪರಿವಾರಕ್ಕೆ ಸಿಕ್ಕ ಯಜಮಾನ?

Published:
Updated:

ಲಖನೌ: `ಉತ್ತರ ಪ್ರದೇಶ್ ಕಾ ಭವಿಷ್ಯ್ ಆಪ್ ಕಾ ಹಾಥ್ ಮೈ ಹೈ~ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿ ಕೂಗಿಕೂಗಿ ಹೇಳುತ್ತಿದ್ದರೆ, ನನ್ನ ಪಕ್ಕದಲ್ಲಿದ್ದ ಪತ್ರಕರ್ತ ಮಿತ್ರನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಸಣ್ಣದನಿಯಲ್ಲಿ ಕೀಟಲೆ ಮಾಡಿ ನಕ್ಕ. ಪತ್ರಕರ್ತರು ಕೂತಿದ್ದ ಆವರಣದೊಳಗೆ ನುಗ್ಗಿಬಂದು `ರಾಹುಲ್ ಜಿಂದಾಬಾದ್~ ಎಂದು ಕಿರಿಚಾಡುತ್ತಿದ್ದವರು ಕೂಡಾ ಕೋಪ ಮಾಡಿಕೊಳ್ಳಲಿಲ್ಲ, ಅವರೂ ನಕ್ಕು ಸಹಮತ ಸೂಚಿಸಿದವರಂತೆ ತಲೆಯಾಡಿಸಿದರು.ಆದರೆ ಇದು ಪೂರ್ಣ ಸತ್ಯ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನೆಹರೂ ಕುಟುಂಬದ ಮಹತ್ವವನ್ನು ಸರಿಯಾಗಿ ಅರ್ಥಮಾಡಿಕೊಂಡವರ‌್ಯಾರೂ `ಉತ್ತರಪ್ರದೇಶದ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಭವಿಷ್ಯ ಅಡಗಿದೆ~ ಎನ್ನುವುದನ್ನು ಒಪ್ಪಲು ಸಾಧ್ಯ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಇಲ್ಲಿಗೆ ಬಂದಿದ್ದ ನಾನೇ ಈ ರೀತಿ `ಭವಿಷ್ಯ~ ಬರೆದಿದ್ದ ನೆನಪು. ಆದರೆ ಏನಾಯಿತು? ಕೊನೆಗೂ ಕಾಂಗ್ರೆಸ್ ಪಕ್ಷ ಗೆದ್ದದ್ದು 403ರಲ್ಲಿ 25 ಸ್ಥಾನ. ಅದರಿಂದ ರಾಹುಲ್‌ಗಾಂಧಿ ಭವಿಷ್ಯ ಮುಳುಗಿ ಬಿಟ್ಟಿತೇ? ಎರಡುವರ್ಷಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅದೇ ರಾಹುಲ್‌ಗಾಂಧಿ ತಾರಾ ಪ್ರಚಾರಕ. ಆ ಚುನಾವಣೆಯಲ್ಲೇನೋ ಕಾಂಗ್ರೆಸ್ ಸ್ವಲ್ಪ ಚೇತರಿಸಿಕೊಂಡಿತು. ಆದರೆ ಬಿಹಾರ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಸಂಪೂರ್ಣ ವಿಫಲರಾದರು. ಈಗ ಮತ್ತೆ ಉತ್ತರಪ್ರದೇಶದ ಭವಿಷ್ಯ ಬದಲಾವಣೆ ಮಾಡಲು ಹೊರಟಿದ್ದಾರೆ. ಈ ಚುನಾವಣೆಯಲ್ಲಿ ಸೋತರೂ ಪಕ್ಷದೊಳಗೆ ರಾಹುಲ್ ಸ್ಥಾನಮಾನದಲ್ಲಿ ದೊಡ್ಡ ಬದಲಾವಣೆ ಆಗಲಾರದು. ಆದರೆ ಪಕ್ಷದ ಭವಿಷ್ಯ? ಅದು ರಾಹುಲ್ ಹೆಗಲ ಮೇಲಿದೆ.ರಾಹುಲ್‌ಗಾಂಧಿ ಇಲ್ಲಿಯ ವರೆಗೆ ಹೆಚ್ಚಿನ ಬಾರಿ ಸುದ್ದಿ ಮಾಡಿದ್ದು ತಪ್ಪು ಕಾರಣಗಳಿಗಾಗಿ. ಅದು ಅಂಕಗಳ ಅರ್ಹತೆ ಇಲ್ಲದೆ ಕ್ರೀಡಾ ಕೋಟಾದಲ್ಲಿ ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಸೀಟು ಪಡೆದ ವಿವಾದ ಇರಬಹುದು, ಇಲ್ಲವೇ ಕೇರಳದ ವಿಲಾಸಿ ಹೊಟೇಲ್‌ನಲ್ಲಿ ಗೆಳತಿಯೊಡನೆ ತಂಗಿದ್ದ ಕಾರಣಕ್ಕೆ ಎದುರಿಸಿದ ಅಪವಾದ ಇರಬಹುದು. ಲೋಕಸಭಾ ಸದಸ್ಯರಾಗಿಯೂ ಲಿಖಿತ ಭಾಷಣಗಳ ಓದಿಗಷ್ಟೇ ಇವರ ಸಾಧನೆ ಸೀಮಿತವಾಗಿತ್ತು. ಹಿಂದಿನ ಚುನಾವಣೆಗಳಲ್ಲಿನ ಪ್ರಚಾರದಲ್ಲಿಯೂ ಅವರು ಎಡವಟ್ಟು ಮಾಡಿಕೊಂಡಿದ್ದೇ ಹೆಚ್ಚು.ಉತ್ತರಪ್ರದೇಶದಲ್ಲಿ ಪಕ್ಷಕ್ಕಿಂತಲೂ ಹೆಚ್ಚಾಗಿ ರಾಹುಲ್‌ಗಾಂಧಿ ತನ್ನನ್ನು ಸಾಬೀತುಪಡಿಸುವ ಒತ್ತಡಕ್ಕೆ ಸಿಕ್ಕಿದ್ದಾರೆ. ಅದು ಅವರ ಆಕ್ರಮಣಕಾರಿ ಪ್ರಚಾರದಲ್ಲಿಯೂ ವ್ಯಕ್ತವಾಗುತ್ತಿದೆ. ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ ಪ್ರದೇಶದಲ್ಲಿನ ಚುನಾವಣಾ ಪ್ರಚಾರವನ್ನು ಲಖನೌದಿಂದ ಪ್ರಾರಂಭಿಸಲು ಇಲ್ಲಿಗೆ ಬಂದಿದ್ದ ರಾಹುಲ್ ಬುಧವಾರ ಸಂಜೆ ಎರಡು ಕಡೆ ಭಾಷಣ ಮಾಡಿದರು. ಕಳೆದ 8-10 ದಿನಗಳಲ್ಲಿ ಅಲ್ಲಲ್ಲಿ ಅವರ ಭಾಷಣ ಕೇಳಿದವರಿಗೆ ಹೊಸತೇನು ಇರಲಿಲ್ಲ. ಆದರೆ ಹಿಂದಿನ ಚುನಾವಣೆಗಳಲ್ಲಿ ನೋಡಿದವರಿಗೆ ಈ ಬಾರಿ ಹೆಚ್ಚು ಆತ್ಮವಿಶ್ವಾಸದಿಂದ ಕೂಡಿರುವ, ಹೆಚ್ಚು ಆಕ್ರಮಣಕಾರಿಯಾದ ಮತ್ತು  ಸುಲಲಿತವಾಗಿ `ಯೂಪಿವಾಲಿ ಹಿಂದಿ~ ಮಾತನಾಡುತ್ತಿರುವ `ಹೊಸ ರಾಹುಲ್~ ಕಂಡಿರಬಹುದು.ಇತ್ತೀಚಿನವರೆಗೂ ಈ `ಯುವರಾಜ~ ನನ್ನು ರೂಪದಲ್ಲಿ ರಾಜೀವ್‌ಗಾಂಧಿಗೆ ಹೋಲಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ನಡವಳಿಕೆಯಲ್ಲಿ `ಗೂಂಗಿ ಗುಡಿಯಾ~ ಎಂಬ ಆರೋಪಕ್ಕೊಳಗಾಗಿರುವ ಸೋನಿಯಾಗಾಂಧಿಯವರಿಗೆ ಹೋಲಿಸಿ ನಿರಾಶೆ ವ್ಯಕ್ತಪಡಿಸುತ್ತಿದ್ದರು. ಅವರ ಒಳಮನಸ್ಸು ಎಲ್ಲೋ ರಾಹುಲ್ ತಂಗಿ ಪ್ರಿಯಾಂಕಾಗಾಗಿ ತುಡಿಯುತ್ತಿತ್ತು. ಈ ಬಾರಿ ಅವರು ರಾಹುಲ್ ಭಯ್ಯಾನಿಗಾಗಿ ಜೈಕಾರ ಹಾಕುತ್ತಿದ್ದಾರೆ. ಈ ಚುನಾವಣಾ ಪ್ರಚಾರದಲ್ಲಿ ರಾಹುಲ್‌ಗಾಂಧಿ ಸಭೆಗೆ ಸೇರುತ್ತಿರುವ ಜನ ಕೂಡಾ ಕಾಂಗ್ರೆಸ್ ಪಕ್ಷದಲ್ಲಿ  ನಿರೀಕ್ಷೆಯನ್ನು ಹುಟ್ಟಿಸಿರಬಹುದು.  ಇಲ್ಲಿ ಸಭೆ ನಡೆದ ಸುಮಾರು ಅಂದಾಜು 3-4 ಸಾವಿರ ಪ್ರೇಕ್ಷಕರು ಸೇರಬಹುದಾದ ಡಿಎವಿ ಶಾಲಾಮೈದಾನ ಹೆಚ್ಚು ಕಡಿಮೆ ತುಂಬಿತ್ತು. ಈ  ಪ್ರೇಕ್ಷಕರಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಯುವಕರೇ ಬಹುಸಂಖ್ಯೆಯಲ್ಲಿ ಇದ್ದದ್ದು ಕೂಡಾ ಹೊಸ ಬೆಳವಣಿಗೆ. ಇದಕ್ಕೆ ಸರಿಯಾಗಿ ರಾಹುಲ್‌ಗಾಂಧಿ ನಿರುದ್ಯೋಗ ಮತ್ತು ವಲಸೆಯ ಸಮಸ್ಯೆ, ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿಯುವಿಕೆ ಹಾಗೂ ಒಟ್ಟು ಅಭಿವೃದ್ದಿಯ ಓಟದಲ್ಲಿ ಉಳಿದ ರಾಜ್ಯಗಳಿಂದ ಹಿಂದೆ ಉಳಿದಿರುವುದನ್ನು  ತಿಳಿಸುತ್ತಾ ಯುವಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. `ನಾನು ಇಂಗ್ಲಂಡ್-ಅಮೆರಿಕಗಳ ಕಾಲೇಜುಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದನ್ನು ಈ ದೇಶದ ಬಡವರು,ರೈತರು, ಮತ್ತು ದಲಿತರ ಮನೆಗಳಲ್ಲಿ ಕಲಿತಿದ್ದೇನೆ~ ಎಂದು ಹೇಳುವ ರಾಹುಲ್ ಸಾಮಾನ್ಯ ಜನತೆಯ ಜತೆ ತನ್ನನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತದಾನದ ವಯಸ್ಸನ್ನು 25ರಿಂದ 18ಕ್ಕೆ ಇಳಿಸಿದ ರಾಜೀವ್‌ಗಾಂಧಿ ಬಗ್ಗೆ 80ರ ದಶಕದಲ್ಲಿ ಯುವಸಮುದಾಯದಲ್ಲಿ ಎದ್ದಿದ್ದ ಅಭಿಮಾನದ ಅಲೆಯನ್ನು ಮತ್ತೆ ಕಾಣುವ ಆಸೆ ಕಾಂಗ್ರೆಸ್ ಪಕ್ಷಕ್ಕೆ.ಇಷ್ಟರಿಂದಲೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕಾಯಕಲ್ಪ ಪಡೆಯಲಿದೆಯೇ? ಈ ಚುನಾವಣೆಯಲ್ಲಿಯೇ ಈ ಪ್ರಶ್ನೆಗೆ ಪೂರ್ಣ ಉತ್ತರ ಸಿಗಲಾರದು. ಆದರೆ ಕಾಂಗ್ರೆಸ್ ನಾಯಕರು ಆಗಲೇ ವಿಜಯೋತ್ಸಾಹದಲ್ಲಿದ್ದಾರೆ.ಉತ್ತರಪ್ರದೇಶದ ಜತೆ ನೆಹರೂ ಕುಟುಂಬಕ್ಕೆ ಕರುಳಬಳ್ಳಿಯ ಸಂಬಂಧ ಇದೆ. ಅದರ ಪಾಲಿಗೆ ಇದು ಮತ್ತೊಂದು ರಾಜ್ಯ ಅಲ್ಲ, ಪ್ರತಿಷ್ಠೆಯ ಮುಂಡಾಸು. ಈ ರಾಜ್ಯ ಕೈಗೆ ಸಿಗದೆ ದೇಶ ಗೆದ್ದರೂ ಅದಕ್ಕೆ ತೃಪ್ತಿ ಸಿಗದು. ಈ ಕಾರಣದಿಂದಾಗಿಯೇ ಪರಿವಾರದ ಪ್ರತಿಷ್ಠೆಯ ಮರುಸ್ಥಾಪನೆಗಾಗಿ ಭವಿಷ್ಯದ ನಾಯಕನೆಂದೇ ಬಿಂಬಿಸಲಾಗುತ್ತಿರುವ ರಾಹುಲ್‌ಗಾಂಧಿಗೆ ಸೇನಾಪತಿಯ ಪಟ್ಟ ಕಟ್ಟಲಾಗಿದೆ. ಪಕ್ಷಕ್ಕೆ ಇಲ್ಲಿ ದೊಡ್ಡ ಗೆಲುವೆಂದರೆ ಕನಿಷ್ಠ 50 ಸ್ಥಾನ. ಇದು ಕಳೆದ ಬಾರಿಯ ಗೆಲುವಿನ ದುಪ್ಪಟ್ಟು. ಅಷ್ಟು ಗಳಿಸಿದರೆ ಕಾಂಗ್ರೆಸ್ ಪರಿವಾರಕ್ಕೆ ಹೊಸ `ಯಜಮಾನ~ಸಿಕ್ಕಿದ ಎಂದು ಹೇಳಬಹುದು. ಇಲ್ಲದಿದ್ದರೆ?

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry