ಕೊನೆಗೂ ಬಂತು ಮೆಟ್ರೊ

7

ಕೊನೆಗೂ ಬಂತು ಮೆಟ್ರೊ

Published:
Updated:

ಬಹು ನಿರೀಕ್ಷಿತ `ನಮ್ಮ ಮೆಟ್ರೊ~ ಇಂದಿನಿಂದ ನನಸಾಗುತ್ತಿದೆ. ಮೆಟ್ರೊ ಯೋಜನೆಯಂತೆ ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ `ರೀಚ್-1~ ಕಾಮಗಾರಿಯೆಲ್ಲ ಸಕಾಲದಲ್ಲಿ ಮುಗಿದಿದ್ದರೆ ಕಳೆದ ಡಿಸೆಂಬರ್‌ನಿಂದಲೇ ಈ ಮಾರ್ಗ ಸಾರ್ವಜನಿಕರಿಗೆ ಲಭ್ಯವಾಗಬೇಕಿತ್ತು. ಹಲವು ಬಾರಿ ನೀಡಿದ ಗಡುವಿನ ನಂತರ ಕೊನೆಗೂ ಮೆಟ್ರೊ ರೈಲು ಸಾರ್ವಜನಿಕರ ಸಂಚಾರಕ್ಕೆ ತೆರೆದುಕೊಳ್ಳುತ್ತಿರುವುದು ಸ್ವಾಗತಾರ್ಹ.

 

ಕೆಲವು ತಿಂಗಳಿಂದ ಸುಮಾರು ಎರಡೂವರೆ ಸಾವಿರ ಕಿ.ಮೀನಷ್ಟು ಪ್ರಾಯೋಗಿಕ ಸಂಚಾರ ನಡೆಸಿರುವ ಸುಸಜ್ಜಿತ ಮೆಟ್ರೊ ರೈಲಿನ ಸಂಚಾರ ಭಾಗ್ಯ ಸದ್ಯಕ್ಕೆ ಬೆಂಗಳೂರಿನ ಒಂದು ಭಾಗಕ್ಕೆ ದೊರೆತಂತಾಗಿದೆ. ನಗರದಾದ್ಯಂತ ನರಕವಾಗಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಕೈಗೊಂಡಿರುವ ಈ ಸಾರಿಗೆ ಸೌಲಭ್ಯದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಜನರು ನರಕಯಾತನೆ ಅನುಭವಿಸುತ್ತಿರುವುದನ್ನು ಗಮನಿಸಿ ಉಳಿದ ಭಾಗಗಳ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಅವಶ್ಯಕತೆ ಇದೆ.ಯೋಜನಾಬದ್ಧವಲ್ಲದ ಮತ್ತು ನೂರಾರು ಹಳ್ಳಿಗಳು ಸೇರಿ ಅಭಿವೃದ್ಧಿಯಾಗಿರುವ ಮಹಾನಗರದಲ್ಲಿ ಮೆಟ್ರೊದಂತಹ ಯೋಜನೆ ಜಾರಿಗೊಳ್ಳುವುದು ಸುಲಭವೇನಲ್ಲ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಬಂದ ಆಕ್ಷೇಪಣೆಗಳು, ಕೆಲವರು ನ್ಯಾಯಾಲಯದ ಕಟಕಟೆ ಹತ್ತಿದ್ದು, ಯೋಜನೆಯಲ್ಲಿ ಹಲವಾರು ಕಡೆಗಳಲ್ಲಿ ಆದ ಮಾರ್ಪಾಟು, ಟೆಂಡರ್ ಪ್ರಕ್ರಿಯೆ ಮತ್ತು ಹಣ ಬಿಡುಗಡೆಯಲ್ಲಾದ ವಿಳಂಬ ಮುಂತಾದ ಕಾರಣಗಳಿಂದ `ನಮ್ಮ ಮೆಟ್ರೊ~ ರೈಲು ತಡವಾಗಿ ಬಂದಿದೆ.ಮೆಟ್ರೊ ಬರುವ ಎಲ್ಲ ಕಡೆಗಳಲ್ಲೂ ಕಾಮಗಾರಿ ಪ್ರಾರಂಭವಾಗಿದೆ.   ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆವರೆಗಿನ ಪೂರ್ವ- ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿರುವುದು ಸಮಾಧಾನಕರ. ಇದರಂತೆಯೇ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯಂತೆ ಶೇಷಾದ್ರಿಪುರಂನ ರಾಜೀವ್‌ಗಾಂಧಿ ವೃತ್ತದಿಂದ ಚಾಮರಾಜಪೇಟೆಯ ಮಕ್ಕಳ ಕೂಟದವರೆಗೆ ಸುರಂಗ ಮಾರ್ಗದ ಕಾಮಗಾರಿಯೂ ವಿಳಂಬವಿಲ್ಲದೆ ನಡೆಯಬೇಕಿದೆ.

 

ಆದರೆ ಮೆಟ್ರೊ ಕಾಮಗಾರಿಯಿಂದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ರಸ್ತೆಪಕ್ಕದ ಮನೆಗಳಲ್ಲಿ ವಾಸಿಸುವ ಜನರು ಅನುಭವಿಸುತ್ತಿರುವ ಸಂಕಷ್ಟ ಹೇಳತೀರದು. ಯೋಜನೆ ಆರಂಭಿಸುವ ಮುನ್ನ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿ ಪಡಿಸಬೇಕಾಗಿದ್ದುದು ಸರ್ಕಾರದ ಕರ್ತವ್ಯವಾಗಿತ್ತು.ಇದರಿಂದ ಜನರಿಗೆ ಮಾತ್ರವಲ್ಲದೆ, ಕಾಮಗಾರಿಯೂ ತ್ವರಿತಗತಿಯಲ್ಲಿ ನಡೆಯಲು ಸಾಧ್ಯವಿತ್ತು. ಮೊದಲೇ ಕಿರಿದಾಗಿದ್ದ ರಸ್ತೆಗಳಲ್ಲಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದ ವಾಹನಗಳ ಸುಗಮ ಸಂಚಾರಕ್ಕೆ ಇಕ್ಕಟ್ಟಾಗಿದೆ.

ರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ವಾಹನ ಸಂಚರಿಸಲು ಕಷ್ಟ, ಮಾತ್ರವಲ್ಲ ಪಾದಚಾರಿಗಳಿಗೆ ಓಡಾಡಲೂ ಅವಕಾಶ ಇಲ್ಲ. ಈ ವಿಷಯದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಮಹಾನಗರ ಪಾಲಿಕೆ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಇದೇನೇ ಇರಲಿ, ಸದ್ಯ ನಗರದ ಒಂದು ಭಾಗದಲ್ಲಾದರೂ ಮೆಟ್ರೊ ರೈಲು ಸಂಚಾರ ಆರಂಭಿಸಿರುವುದು ನೆಮ್ಮದಿ ತರುವ ಸಂಗತಿ. ಇನ್ನು ಉಳಿದ ಭಾಗದ ಕಾಮಗಾರಿಯನ್ನು ಜರೂರಾಗಿ ಮುಗಿಸುವತ್ತ ಬಿಎಂಆರ್‌ಸಿಎಲ್ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry