ಕೊನೆಗೂ ಬಂದವು ರಷ್ಯಾ ರಣಹದ್ದುಗಳು!

7

ಕೊನೆಗೂ ಬಂದವು ರಷ್ಯಾ ರಣಹದ್ದುಗಳು!

Published:
Updated:
ಕೊನೆಗೂ ಬಂದವು ರಷ್ಯಾ ರಣಹದ್ದುಗಳು!

ಬೆಂಗಳೂರು: ಜಗತ್ಪ್ರಸಿದ್ಧ ರಷ್ಯನ್ ನೈಟ್ಸ್ ತಂಡ ಯಲಹಂಕ ಆಗಸದಲ್ಲಿ ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡಾಗ ವಿಮಾನವನ್ನೇ ಮುಟ್ಟುವಂತಹ ಚಪ್ಪಾಳೆ ಸದ್ದು. ಬಿಲ್ಲಿನಿಂದ ಹೊರಟ ಬಾಣಗಳಂತೆ ಶರವೇಗದಲ್ಲಿ ಹೊರಟಿದ್ದ ತಂಡದ ಐದೂ `ರಣಹದ್ದು'ಗಳು ಎಲ್ಲರ ಕಣ್ಣುಗಳನ್ನೂ ತಮ್ಮತ್ತ ಸೆಳೆದುಬಿಟ್ಟವು.ಕೋಳಿಯೊಂದು ತನ್ನ ಮರಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಬರುವಂತೆ ಸುಖೋಯ್-27ಯುಬಿ ಯುದ್ಧ ವಿಮಾನ ತನ್ನ ಎಡ-ಬಲ ಬದಿಯಲ್ಲಿ ತಲಾ ಎರಡರಂತೆ ಎಸ್‌ಯು-27ಪಿ ವಿಮಾನಗಳನ್ನು ಕರೆದುಕೊಂಡು ಬರುತ್ತಿತ್ತು. `ಈ ಸಲದ ಪ್ರದರ್ಶನದಲ್ಲಿ ರಷ್ಯಾ ತಂಡ ಬರುವುದು ಅನುಮಾನ' ಎಂಬ ಊಹಾಪೋಹದ ನಡುವೆಯೇ ತೂರಿಬಂದ `ನೈಟ್ಸ್' ವೀಕ್ಷಕರಲ್ಲಿ `ಇದೇನು ಹಗಲು ಕನಸೆ' ಎನ್ನುವ ಭ್ರಮೆ ಮೂಡಿಸಿತ್ತು.ವಾಯುಪಡೆ ನೆಲೆ ಮೇಲೆ ಒಟ್ಟಾಗಿ ಎರಡು ಸುತ್ತು ಹೊಡೆದ ಈ ತಂಡ, ಸಿಡಿಲಬ್ಬರದ ಸದ್ದು ಹೊರಡಿಸಿ ನೆಲದ ಮೇಲೆ ಇದ್ದವರಲ್ಲೂ ನಡುಕ ಹುಟ್ಟಿಸಿದವು. ತಮ್ಮ ಅಪೂರ್ವ ವಿನ್ಯಾಸದಿಂದ ಎಲ್ಲರ ನೋಟಗಳು ತಮ್ಮನ್ನೇ ಹಿಂಬಾಲಿಸುವಂತೆ ಮಾಡಿದವು. ಬಳಿಕ ಬಾನಂಗಳದಲ್ಲಿ ಒಂದೊಂದು ದಿಕ್ಕಿನಲ್ಲಿ ಒಂದರಂತೆ ಚಿಮ್ಮಿ ಹೊರಟು ಕಣ್ಮರೆಯಾದವು. `ಆಯ್ಯೋ, ಎಲ್ಲಿ ಹೋದವು ಈ ಅಪರೂಪದ ಬಾನಾಡಿಗಳು' ಎಂದು ಹುಡುಕಾಟ ನಡೆಸಿದಾಗ ಕೆಳಗೆ ರನ್‌ವೇ ಮೇಲೆ ಒಂದೊಂದಾಗಿ `ಭರ್ರ‌್‌' ಎಂದು ಓಡಿಬಂದವು. ಶುಭ್ರ ಬಿಳಿ, ದಟ್ಟನೀಲಿ ಮತ್ತು ಕಡುಗೆಂಪು ಬಣ್ಣವನ್ನು ಈ ವಿಮಾನಗಳು ಮೈಮೇಲೆ ಬಳಿದುಕೊಂಡಿದ್ದವು. ರನ್‌ವೇ ಪಕ್ಕ ನೆರೆದಿದ್ದ ಭಾರಿ ಸಂಖ್ಯೆ ವೀಕ್ಷಕರು `ನೈಟ್ಸ್' ತಂಡದ ಸದಸ್ಯರತ್ತ ಧಾವಿಸಿದರು. ಬಲು ಗತ್ತಿನಿಂದ ನಿಂತಿದ್ದ ಅವುಗಳ ವೈಭವ ಕಣ್ತುಂಬಿಕೊಂಡರು.`ಇವತ್ತು ಪ್ರದರ್ಶನ ಇದೆಯೇ' ಎನ್ನುವ ಪ್ರಶ್ನೆ ಪ್ರವಾಹದ ರೀತಿಯಲ್ಲಿ ಹರಿದುಬಂತು. ದೆಹಲಿ ಹತ್ತಿರದ ಭಾರತೀಯ ವಾಯುನೆಲೆಯಿಂದ ಎರಡು ಗಂಟೆಗಳಿಗೂ ಅಧಿಕ ಕಾಲ ಹಾರಾಟ ನಡೆಸಿ ಬಂದಿದ್ದ ಪೈಲಟ್‌ಗಳು ವಿಶ್ರಾಂತಿ ಬಯಸಿದ್ದರು.ನೈಟ್ಸ್ ಆಟ ನೋಡುವ ತವಕದಲ್ಲಿದ್ದ ಜನರಿಗೆ `ಶನಿವಾರದಿಂದ ಈ ತಂಡ ಪ್ರದರ್ಶನ ನೀಡಲಿದೆ' ಎಂದು ಸಂಘಟಕರು ನಿರಾಸೆ ಉಂಟು ಮಾಡಿದರು. `ಮತ್ತೆ ಟಿಕೆಟ್ ತೆಗೆದುಕೊಳ್ಳಬೇಕು ನಿಜ. ಆದರೆ, ರಷ್ಯನ್ ತಂಡದ ಆ ರುದ್ರ ರಮಣೀಯ ಸಾಹಸವನ್ನು ನಾವು ಮಿಸ್ ಮಾಡಿಕೊಳ್ಳಲು ಸಿದ್ಧವಿಲ್ಲ. ಶನಿವಾರ ಪುನಃ ಬರುತ್ತೇವೆ' ಎಂಬ ಮಾತು ಹಲವರಿಂದ ಕೇಳಿಬಂತು.1991ರ ಏಪ್ರಿಲ್ 5ರಂದು ರಚನೆಯಾದ ರಷ್ಯನ್ ನೈಟ್ಸ್ ತಂಡ, ಯುರೋಪ್, ಅಮೆರಿಕ ಮತ್ತು ಏಷ್ಯಾ ಮೂರೂ ವಲಯದಲ್ಲಿ ತನ್ನ ಮೈನವಿರೇಳಿಸುವ ಸಾಹಸದಿಂದ ಪ್ರಖ್ಯಾತವಾಗಿದೆ. ಬ್ಯಾಲೆ ನೃತ್ಯ ಪ್ರದರ್ಶಿಸುವ ರಷ್ಯನ್ ಬಾಲೆಯರಂತೆ ಈ ತಂಡ, ಆಕಾಶವನ್ನೇ ತನ್ನ ಆಡಂಬೋಲ ಮಾಡಿಕೊಂಡು ಕುಣಿದಾಡುತ್ತದೆ, ನೆಗೆಯುತ್ತದೆ, ಸಿಕ್ಕ-ಸಿಕ್ಕಲ್ಲಿ ಲಾಗ ಹಾಕುತ್ತದೆ, ನೆಲಮಟ್ಟದಲ್ಲಿ ಹಾರುತ್ತದೆ, ರಾಕೆಟ್‌ನಂತೆ 90 ಡಿಗ್ರಿ ಕೋನದಲ್ಲಿ ಮೇಲಕ್ಕೆ ಓಡುತ್ತದೆ.ಇಂತಹದ್ದೇ ಪ್ರದರ್ಶನ ನೀಡುವಾಗ ಎರಡು ಸುಖೋಯ್‌ಗಳ ಮಧ್ಯೆ ಅಪಘಾತ ಸಂಭವಿಸಿ ಪೈಲಟ್ ಒಬ್ಬರು ಮೃತಪಟ್ಟ ದುರಂತ ಇತಿಹಾಸವೂ ಈ ತಂಡದ ಕಹಿನೆನಪಿನ ಖಜಾನೆಯಲ್ಲಿದೆ.ಮಾಸ್ಕೊ ಹತ್ತಿರದ ಕ್ಯುಬಿಂಕಾ ಎಂಬಲ್ಲಿ ನೆಲೆ ಹೊಂದಿರುವ ಈ ತಂಡ, ನಾಲ್ಕು ಸುಖೋಯ್ ಎಸ್‌ಯು-27ಪಿ ಮತ್ತು ಎರಡು ಸುಖೋಯ್ ಎಸ್‌ಯು-27ಯುಬಿ ಯುದ್ಧ ವಿಮಾನಗಳನ್ನು ಹೊಂದಿದೆ. ಆದರೆ, `ಏರೋ ಇಂಡಿಯಾ' ಪ್ರದರ್ಶನಕ್ಕೆ ನಾಲ್ಕು ಎಸ್‌ಯು-27ಪಿ, ಒಂದು ಎಸ್‌ಯು-27ಯುಬಿ ವಿಮಾನ ಮಾತ್ರ ಆಗಮಿಸಿವೆ.ಮಾಸ್ಕೊದಿಂದ ಹೊರಡುವಾಗ ದಟ್ಟವಾದ ಮಂಜು ಕವಿದಿದ್ದರಿಂದ ಈ ತಂಡದ ಪ್ರಯಾಣ ವಿಳಂಬವಾಯಿತು. ದೆಹಲಿ ಹತ್ತಿರದ ಹಿಂಡಸ್ ವಾಯುನೆಲೆಯಲ್ಲಿ ಬೀಡುಬಿಟ್ಟಾಗ ತಾಂತ್ರಿಕ ದೋಷವೂ ಕಾಣಿಸಿಕೊಂಡಿದ್ದರಿಂದ `ನೈಟ್ಸ್' ಎರಡು ದಿನ ತಡವಾಗಿ ಪ್ರದರ್ಶನಕ್ಕೆ ಬರುವಂತಾಯಿತು ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry