ಕೊನೆಗೂ ರಾಜಾಗೆ ಜಾಮೀನು

7

ಕೊನೆಗೂ ರಾಜಾಗೆ ಜಾಮೀನು

Published:
Updated:
ಕೊನೆಗೂ ರಾಜಾಗೆ ಜಾಮೀನು

ನವದೆಹಲಿ (ಪಿಟಿಐ):  2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ 15 ತಿಂಗಳುಗಳಿಗೂ ಹೆಚ್ಚು ಕಾಲ ತಿಹಾರ್ ಜೈಲಿನಲ್ಲಿದ್ದ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಅವರಿಗೆ ದೆಹಲಿ ಸಿಬಿಐ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಪ್ರಕರಣದ ಪ್ರಮುಖ ಆರೋಪಿ ರಾಜಾ ಸಲ್ಲಿಸಿದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರಾದ ಒ.ಪಿ. ಸೈನಿ, ರೂ 20 ಲಕ್ಷದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಖಾತರಿ ನೀಡುವಂತೆ ಆದೇಶಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆಯದೆ ತಮಿಳುನಾಡಿಗೆ ಭೇಟಿ ನೀಡುವಂತಿಲ್ಲ, ದೂರಸಂಪರ್ಕ ಇಲಾಖೆಯ ಕಚೇರಿಗೆ ಭೇಟಿ ನೀಡಬಾರದು, ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು, ಪಾಸ್‌ಪೋರ್ಟ್  ಒಪ್ಪಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

`ಈ ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ಸಿಕ್ಕಿರುವಾಗ ಇವರ (ರಾಜಾ) ಬಂಧನದ ಅವಧಿ ವಿಸ್ತರಿಸುವುದರಿಂದ ಯಾವುದೇ ಉದ್ದೇಶ ಈಡೇರಿದಂತೆ ಆಗುವುದಿಲ್ಲ~ ಎಂದು ನ್ಯಾಯಾಧೀಶರು ತಮ್ಮ 14 ಪುಟಗಳ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಸಾಕ್ಷ್ಯಾಧಾರಗಳನ್ನು ತಿರುಚಲು ಯತ್ನಿಸಬಹುದು ಎಂದು ಸಿಬಿಐ, ರಾಜಾ ಅವರ ಜಾಮೀನು ಅರ್ಜಿಯನ್ನು ಪ್ರಬಲವಾಗಿ ವಿರೋಧಿಸಿತ್ತು. ಆದರೆ, ನ್ಯಾಯಾಲಯ ಸಿಬಿಐ ವಿರೋಧವನ್ನು ಮಾನ್ಯ ಮಾಡಲಿಲ್ಲ. ಷರತ್ತು ಹಾಗೂ ನಿರ್ಬಂಧದ ಮೇಲೆ ಜಾಮೀನು ಮಂಜೂರು ಮಾಡುತ್ತಿರುವುದರಿಂದ ಇಂತಹ ಸಾಧ್ಯತೆಗಳು ಇಲ್ಲ ಎಂದು ಹೇಳಿದೆ. `ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಾಧಾರಗಳು ದಾಖಲೆಯ ರೂಪದಲ್ಲಿದ್ದು, ನ್ಯಾಯಾಲಯದ ವಶದಲ್ಲಿವೆ. ಆದ್ದರಿಂದ ಸಿಬಿಐ ಎತ್ತಿರುವ ಆಕ್ಷೇಪಗಳನ್ನು ಒಪ್ಪಲು ಆಗದು~ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. 

2ಜಿ ಹಗರಣದ ಆರೋಪದ ಮೇಲೆ ಬಂಧಿತರಾಗಿದ್ದ ಇತರ 13 ಆರೋಪಿಗಳು ಜಾಮೀನು ಪಡೆದುಕೊಂಡಿದ್ದರೂ, 2011ರ ಫೆ. 2ರಂದು ಬಂಧಿತರಾದ ಡಿಎಂಕೆ ಸಂಸದ ರಾಜಾ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ.

ಇತ್ತೀಚೆಗೆಷ್ಟೇ ಜಾಮೀನು ಕೋರಿದ್ದ ರಾಜಾ, ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ನೀಡಿರುವುದರಿಂದ ತಮಗೂ ಜಾಮೀನು ಮಂಜೂರು ಮಾಡಬೇಕು ಎಂದು ವಿನಂತಿಸಿಕೊಂಡರು.

ಆರೋಪಿಗಳಲ್ಲಿ ಒಬ್ಬರಾದ ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಅವರ ಮೇಲೂ ತಮ್ಮ ಮೇಲಿರುವ ಆರೋಪಗಳಷ್ಟೇ ಗಂಭೀರ ಸ್ವರೂಪದ ಆಪಾದನೆಗಳಿವೆ. ಅವರಿಗೆ ಜಾಮೀನು ನೀಡಲಾಗಿದೆ ಎಂದು ರಾಜಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಸಂಜೆ ಬಿಡುಗಡೆಯಾದ ರಾಜಾ ದೆಹಲಿಯ ನಿವಾಸಕ್ಕೆ  ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry