ಕೊನೆಗೂ ಸಾವು ಜಯಿಸದ ಅಜಯ್

6

ಕೊನೆಗೂ ಸಾವು ಜಯಿಸದ ಅಜಯ್

Published:
Updated:

ವಿಜಾಪುರ: `ಇದು ನಮ್ಮ ದುರ್ದೈವ. ಆತ ಬಹಳ ಹಟವಾದಿ ಇದ್ದ. ತಾನೇ ಬಯಸಿ ಹೀಗೆ ಮಾಡಿಕೊಂಡ ಮೇಲೆ  ಯಾರನ್ನು ದೂರಿ ಏನು ಪ್ರಯೋಜನ? ಈ ಪ್ರಕರಣದಲ್ಲಿ ನಾವು ಯಾರನ್ನೂ ಬಲಿಪಶು ಮಾಡಲು ಬಯಸುವುದಿಲ್ಲ' ವಿದ್ಯಾರ್ಥಿ ಅಜಯ್ (10)ನ ತಂದೆ ಪ್ರಮೋದ ಜಾಧವ ಅವರ ವೇದನೆ ಮತ್ತು ದೃಢ ನಿಲುವು ಇದು.ಶಾಲೆಯಲ್ಲಿಯೇ ಮೈಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅಜಯ್ ಸಾವಿನ ಮನೆಯಿಂದ ಅಜೇಯನಾಗಿ ಬರಲಿಲ್ಲ. ಇಡೀ ಜಿಲ್ಲೆಯ ವಿದ್ಯಾರ್ಥಿ-ಶಿಕ್ಷಕರು-ಪಾಲಕ ಸಮೂಹದ ಪ್ರಾರ್ಥನೆ ಫಲಿಸಲಿಲ್ಲ. ನಾಲ್ಕು ದಿನಗಳ ಕಾಲ ಯಮಯಾತನೆ ಅನುಭವಿಸಿ ಭಾನುವಾರ ಕೊನೆಗೂ ಆತ ಸಾವಿನ ಮನೆ ಸೇರಿಬಿಟ್ಟ. ಶನಿವಾರ ರಾತ್ರಿ 12 ಗಂಟೆಗೆ ಅಜಯ್‌ನ ಉಸಿರಾಟದ ಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಂಡಿತ್ತು.ಇಡೀ ದೇಹ ಮಾಂಸದ ಮುದ್ದೆಯಂತಾಗಿತ್ತು. ಸೋಮವಾರ ಬೆಳಿಗ್ಗೆ ಆತ `ತಾನು ಬಯಸಿದ್ದ' ಸಾವಿನ ಮನೆ ಸೇರಿಬಿಟ್ಟ. ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದ ಮಗನ ಸ್ಥಿತಿ ಕಂಡು ಅತ್ತು ಅತ್ತು ತಂದೆ ಪ್ರಮೋದ-ತಾಯಿ ಪುಷ್ಪಾ ಅವರ ಕಣ್ಣೀರು ಬತ್ತಿ ಹೋಗಿದ್ದವು.`ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸ್ತೀನಿ. ಅವರನ್ನ ಆಫೀಸರ್ ಮಾಡ್ತೀನಿ' ಎಂದು ಹೇಳಿ ಮೂವರು ಮಕ್ಕಳನ್ನು ಹೊತ್ತುಕೊಂಡು ಕಡುಬಡವ ಪ್ರಮೋದ ವಿಜಾಪುರ ಸೇರಿದ್ದರು. ವಿಜಾಪುರ ಯೂನೈಟೆಡ್ ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲಿ ಗುಮಾಸ್ತನಾಗಿರುವ ಅವರ ಸಂಬಳ ಮಾಸಿಕ ರೂ 5000 ಮಾತ್ರ. ಡಂಬಳ ಅಗಸಿಯ ಪುಟ್ಟ ಬಾಡಿಗೆ ಮನೆಯ ವಾಸ.

`ನಾವು ಉಪವಾಸ ಬಿದ್ದು ಮಕ್ಕಳಿಗೆ ಶಾಲೆ ಕಲಿಸುತ್ತಿದ್ದೇವು. ಅಜಯ್ ಬಹಳ ಹಟವಾದಿ. ಕೊನೆಯ ಮಗ ಎಂದು ಮುದ್ದು ಮಾಡಿದ್ದಕ್ಕೆ ಹೀಗಾಗಿದ್ದನೋ ಏನೋ? ಪೆನ್ನು, ಪುಸ್ತಕ... ಆತ ಏನು ಬೇಡುತ್ತಾನೆ ಅದನ್ನು ಇಲ್ಲ ಎನ್ನುತ್ತಿರಲಿಲ್ಲ. ಈ ವರ್ಷವೇ ಆತನಿಗೆ ರೂ 250 ಬೆಲೆಯ ಮೂರು ಸ್ಕೂಲ್ ಬ್ಯಾಗ್ ಕೊಡಿಸಿದ್ದೆ. ಓದಿನಲ್ಲಿಯೂ ಆತ ಅಷ್ಟೇ ಚುರುಕು. ಶೇ 90-92ರಷ್ಟು ಅಂಕ ಪಡೆಯುತ್ತಿದ್ದ. ಮೇಲಾಗಿ ಆತ ಕ್ಲಾಸ್‌ನಲ್ಲಿ ಮಾನಿಟರ್ ಆಗಿದ್ದ' ಎಂದು ಪ್ರಮೋದ ಹೇಳಿದರು.`ನನ್ನ ಹಿರಿಯ ಮಗಳು ಅಂಕಿತಾ, ಇನ್ನೊಬ್ಬ ಮಗ ವಿಜಯ್ ಅವರೂ ಅಜಯ್ ಓದುತ್ತಿರುವ  ನೀಲಕಂಠೇಶ್ವರ ಶಾಲೆಯಲ್ಲಿಯೇ ಕಲಿತಿದ್ದಾರೆ. ಅಲ್ಲಿಯ ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿದೆ. ವಿನಾಕಾರಣ ಆ ಶಾಲೆ-ಶಿಕ್ಷಕರ ಮೇಲೆ ದೂರುವುದಿಲ್ಲ' ಎಂದರು.`ನೋಡಿ, ಆತ ಅದು ಹೇಗೆ ಪ್ರೀಪ್ಲಾನ್ ಮಾಡಿಕೊಂಡಿದ್ದಾನೆ. ಶಾಲೆಗೆ ಹೋಗುವಾಗಲೇ ಸೀಮೆ ಎಣ್ಣೆ-ಬೆಂಕಿ ಪೊಟ್ಟಣ ಒಯ್ದಿದ್ದಾನೆ. ಎಲ್ಲರೂ ಪ್ರಾರ್ಥನೆಗೆ ತೆರಳಿದ ಸಂದರ್ಭದಲ್ಲಿ ತಾನೊಬ್ಬನೇ ವರ್ಗ ಕೊಠಡಿಯಲ್ಲಿ ಉಳಿದು ಈ ಕೃತ್ಯವೆಸಗಿದ್ದಾನೆ. ಸಾವಿನ ಕೊನೆಯ ಕ್ಷಣದ ವರೆಗೂ ಆತ ಎದೆಗುಂದಿರಲಿಲ್ಲ. ಧ್ವನಿ ಕ್ಷೀಣಿಸಿರಲಿಲ್ಲ. ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸಹ ಆತನ ಧೈರ್ಯ ಮತ್ತು ಚುರುಕುತನ ಕಂಡು ಬೆರಗಾಗಿದ್ದರು' ಎಂದು ಮಗನ ಗುಣಗಾನ ಮಾಡಿದರು ಪ್ರಮೋದ. ತಡೆದುಕೊಂಡಿದ್ದ ದುಃಖ ಉಮ್ಮಳಿಸಿ ಬಂತು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಮುಂದೆ ಮಾತೇ ಹೊರಡಲಿಲ್ಲ...ಅಚ್ಚರಿ ತಂದಿದೆ: `ಈ ಪ್ರಕರಣದಲ್ಲಿ ಪಾಲಕರದ್ದು-ಶಿಕ್ಷಕಿಯದ್ದು ದೋಷ ಕಂಡು ಬರುತ್ತಿಲ್ಲ. ಆದರೂ ಆ ಬಾಲಕ ಏಕೆ ಹೀಗೆ ಮಾಡಿಕೊಂಡ ಎಂಬುದು ಅಚ್ಚರಿಗೆ ಕಾರಣವಾಗಿದೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪೊಲೀಸರು ಮತ್ತು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇವೆ. ಅವರ ವರದಿ ಬಂದ ನಂತರ ಒಂದು ನಿರ್ಧಾರಕ್ಕೆ ಬರುತ್ತೇವೆ' ಎಂದು ಎರಡು ದಿನಗಳಿಂದ ವಿಜಾಪುರದಲ್ಲಿಯೇ ಬೀಡು ಬಿಟ್ಟು ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಡ್ವರ್ಡ್ ಥಾಮಸ್ ಹೇಳಿದರು.`ತನ್ನ ಆತ್ಮ ಹತ್ಯೆಯ ಯತ್ನಕ್ಕೆ ಯಾರೂ ಕಾರಣವಲ್ಲ ಎಂದು ಅಜಯ್ ಆಸ್ಪತ್ರೆಯಲ್ಲಿ ನಮಗೆ ತಿಳಿಸಿದ್ದಾನೆ. ತಾನು ಗುಣಮುಖನಾಗಿ ಮತ್ತೆ ಶಾಲೆಗೆ ಹೋಗುವುದಾಗಿಯೂ ಆತ ಹೇಳಿದ್ದ' ಎಂದರು ಆಯೋಗದ ಮತ್ತೊಬ್ಬ ಸದಸ್ಯೆ ವನಿತಾ ತೊರವಿ. `ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಕೇಳಿದೆ. ಈವರೆಗೆ ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಪಾಲಕರು, ಶಾಲೆಯವರು ಅಥವಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ' ಎಂದು ಇಲ್ಲಿಯ ಎಪಿಎಂಸಿ ಪೊಲೀಸ್ ಠಾಣೆಯ ಮಹಾಂತೇಶ ಧಾಮಣ್ಣವರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry