ಶನಿವಾರ, ನವೆಂಬರ್ 16, 2019
21 °C

ಕೊನೆಗೂ ಸೆರೆ ಸಿಕ್ಕ ಶಿವ ಸಾಯಿಬಾಬಾ

Published:
Updated:

ಚಿಕ್ಕಬಳ್ಳಾಪುರ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಭಕ್ತರನ್ನು ವಂಚಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ತಾಲ್ಲೂಕಿನ ಹಾರೋಬಂಡೆ ಆಶ್ರಮದ ಶಿವ ಸಾಯಿಬಾಬಾಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಗೋರಂಟ್ಲ ಚೆಕ್‌ಪೋಸ್ಟ್ ಬಳಿ ಶಿವ ಸಾಯಿಬಾಬಾಗೆ ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು ಮಂಗಳವಾರ ಸಂಜೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.ಶಿವ ಸಾಯಿಬಾಬಾ ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗುತ್ತಿರುವ ವಿಷಯ ತಿಳಿದ ಕೂಡಲೇ ಠಾಣೆ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರಲ್ಲದೇ ವಿವಿಧ ಸಂಘಸಂಸ್ಥೆಗಳ ಸದಸ್ಯರು ಠಾಣೆ ಎದುರು ಜಮಾಯಿಸಿ ಸ್ವಾಮೀಜಿ ವಿರುದ್ಧ ಘೋಷಣೆಗಳನ್ನು ಕೂಗಿದರು.ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೆಲ ಹೊತ್ತಿನವರೆಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಭಾರಿ ಸಂಖ್ಯೆಯಲ್ಲಿ ಜಮೆಯಾಗಿದ್ದ ಜನರನ್ನು ಅಲ್ಲಿಂದ ಚದುರಿಸುವಲ್ಲಿ ಪೊಲೀಸರು ಭಾರಿ ಪ್ರಯಾಸ ನಡೆಸಬೇಕಾಯಿತು. ಲಘು ಲಾಠಿ ಪ್ರಹಾರ ಸಹ ನಡೆಸಬೇಕಾಯಿತು. ಪೊಲೀಸ್ ಠಾಣೆಯಿಂದ ನ್ಯಾಯಾಲಯದವರೆಗೆ ಸ್ವಾಮೀಜಿಯನ್ನು ಕರೆದೊಯ್ಯಲು ಪೊಲೀಸರಿಗೆ ಸಾಕುಸಾಕಾಯಿತು.

`ಆಂಧ್ರಪ್ರದೇಶದ ಗೋರಂಟ್ಲ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಶಿವ ಸಾಯಿಬಾಬಾ ಸ್ವಾಮೀಜಿ ಕೂತಿದ್ದ ವಾಹನ ಪತ್ತೆಯಾಯಿತು.ವಾಹನ ತಪಾಸಣೆ ಮಾಡಿದಾಗ, ಸ್ವಾಮೀಜಿ ಕೂತಿರುವುದು ಗೊತ್ತಾಯಿತು. ಕೂಡಲೇ ಸ್ವಾಮೀಜಿಯನ್ನು ವಶಕ್ಕೆ ತೆಗೆದುಕೊಂಡು ಪುಟ್ಟಪರ್ತಿ ಠಾಣೆಯಲ್ಲಿ ಹಾಜರುಪಡಿಸಿದೆವು.  ಸಂಜೆ ವೇಳೆಗೆ ಸ್ವಾಮೀಜಿಯನ್ನು ನಗರದ ಗ್ರಾಮಾಂತರ ಠಾಣೆಗೆ ಕರೆದುಕೊಂಡು ಬರಲಾಯಿತು. ಠಾಣೆ ಎದುರು ಭಾರಿ ಸಂಖ್ಯೆಯಲ್ಲಿ ಜನರು ಜಮೆಯಾಗಿದ್ದ ಕಾರಣ ಎಚ್ಚರಿಕೆ ವಹಿಸಿ, ಸ್ವಾಮೀಜಿಯನ್ನು ಠಾಣೆಗೆ ಕರೆ ತರಲಾಯಿತು. ಅಹಿತಕರ ಘಟನೆ ಜರುಗದಂತೆ ನಿಯಂತ್ರಿಸಲಾಯಿತು' ಎಂದು ಪೊಲೀಸರು ತಿಳಿಸಿದರು.ಮಹಿಳೆಯೊಂದಿಗೆ ಸ್ವಾಮೀಜಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾರೋಬಂಡೆ ಆಶ್ರಮದ ಎದುರು ಪ್ರತಿಭಟನೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ವಾಮೀಜಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)