ಕೊನೆಯ ಆಟದತ್ತ `ಪಲ್ಲವಿ'

7

ಕೊನೆಯ ಆಟದತ್ತ `ಪಲ್ಲವಿ'

Published:
Updated:

ಉದ್ಯಾನ ನಗರಿ, ಪಬ್ ನಗರಿ ಎನ್ನುವ ವಿಶೇಷಣಗಳ ಬೆಂಗಳೂರು `ಚಿತ್ರಮಂದಿರಗಳ ನಗರಿ' ಎಂದು ಕರೆಸಿಕೊಳ್ಳುತ್ತಿದ್ದ ಕಾಲವೂ ಇತ್ತು. 70-80ರ ದಶಕದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಆವರಣದಲ್ಲೇ ಸುಮಾರು 20 ಚಿತ್ರಮಂದಿರಗಳಿದ್ದವು. ಅಷ್ಟೂ ಚಿತ್ರಮಂದಿರಗಳೂ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿದ್ದವು. ಕನ್ನಡ ಚಿತ್ರರಂಗ ಉತ್ತುಂಗ ಸ್ಥಿತಿಯಲ್ಲಿದ್ದ ಆ ಕಾಲದಲ್ಲಿ ಪ್ರೇಕ್ಷಕರ ಕೊರತೆ ಇರಲಿಲ್ಲ.ಈ ಸುವರ್ಣ ಕಾಲಘಟ್ಟದಲ್ಲಿ, ಅಂದರೆ 1976ರ ಮಾರ್ಚ್ 6ರಂದು ನಗರದ ಸಂಪಂಗಿ ರಾಮನಗರದಲ್ಲಿ ಆರಂಭವಾದ ಚಿತ್ರಮಂದಿರ `ಪಲ್ಲವಿ'. ತನ್ನ ಸೌಂದರ್ಯ ಹಾಗೂ ಸವಲತ್ತುಗಳಿಂದ ಚಿತ್ರರಸಿಕರ ಮನಸೆಳೆದಿದ್ದ, ಕಳೆದ ಮೂರೂವರೆ ದಶಕಗಳಿಂದ ಲಕ್ಷಾಂತರ ಚಿತ್ರರಸಿಕರ ಕನಸುಗಳ ಕಣಜದಂತೆ ಕಾರ್ಯ ನಿರ್ವಹಿಸಿದ್ದ `ಪಲ್ಲವಿ' ಇದೀಗ ಕ್ಷಣಗಣನೆ ನಡೆಸುತ್ತಿದೆ. ಡಿ. 26ರಂದು ಕೊನೆಯ ಪ್ರದರ್ಶನದೊಂದಿಗೆ ಶಾಶ್ವತವಾಗಿ ತನ್ನ ಪ್ರದರ್ಶನ ನಿಲ್ಲಿಸಲಿದೆ.ಮನರಂಜನೆಗೆ ಚಿತ್ರಮಂದಿರಗಳನ್ನೇ ಆಶ್ರಯಿಸಿದ್ದ ಕಾಲದಲ್ಲಿ ಅಬಕಾರಿ ಗುತ್ತಿಗೆದಾರ ಟಿ.ಶಿವರಾಮ್ ಅವರು ಸಂಪಂಗಿರಾಮನಗರದ ಬಳಿ ಚಿತ್ರಮಂದಿರವೊಂದನ್ನು ಸ್ಥಾಪಿಸುವ ಕನಸುಕಂಡಿದ್ದರು. ಆಗಲೇ ಪ್ರದರ್ಶನ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ಅಶೋಕ್ ಶಿಂಧೆ ಹಾಗೂ ಮಲ್ಲಪ್ಪ ಶಿಂಧೆ ಅವರು ಶಿವರಾಮ್ ಅವರನ್ನು ಪ್ರೋತ್ಸಾಹಿಸಿದರೆ, ಕೆ.ಆರ್. ಪ್ರಭು ಆ ಕನಸನ್ನು ಸಾಕಾರಗೊಳಿಸಿದರು.ಆ ಕಾಲಕ್ಕೆ ಸುಸಜ್ಜಿತ ಚಿತ್ರಮಂದಿರಗಳೆಂದೇ ಖ್ಯಾತವಾಗಿದ್ದ ಸಂಗಮ್, ಅಲಂಕಾರ್, ತ್ರಿವೇಣಿ, ಸಾಗರ್ ಹಾಗೂ ಕಪಾಲಿ ಚಿತ್ರಮಂದಿರಗಳಿಗಿಂತ ಒಂದು ಕೈ ಮೇಲು ಎಂಬಂತೆ ಪಲ್ಲವಿ ಚಿತ್ರಮಂದಿರವನ್ನು ನಿರ್ಮಿಸಲಾಗಿತ್ತು. 1,211 ಆಸನಗಳುಳ್ಳ ಚಿತ್ರಮಂದಿರವನ್ನು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ವರನಟ ರಾಜ್‌ಕುಮಾರ್ ಉದ್ಘಾಟಿಸಿದ್ದರು. `ಪ್ರೇಮದ ಕಾಣಿಕೆ' ಚಿತ್ರದೊಂದಿಗೆ ಮೊದಲ ಪ್ರದರ್ಶನ ಆರಂಭಿಸಿದ `ಪಲ್ಲವಿ' ಅಲ್ಲಿಂದ ಸುಮಾರು 400 ಸಿನಿಮಾಗಳನ್ನು ಪ್ರದರ್ಶಿಸಿದೆ.`ಕನ್ನಡ ಚಿತ್ರಗಳನ್ನು ಕೇವಲ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಿಗೆ ಮಾತ್ರ ನೀಡುತ್ತ್ದ್ದಿದುದರಿಂದ ಪಲ್ಲವಿ ಚಿತ್ರಮಂದಿರ ಅನಿವಾರ್ಯವಾಗಿ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಗಳಿಗೆ ಮೀಸಲಾಯಿತು. ಮೆಜೆಸ್ಟಿಕ್‌ನಿಂದ ದೂರವಿದ್ದರೂ ಇಲ್ಲಿ ಪ್ರದರ್ಶನಗೊಂಡ ಬಹುತೇಕ ಚಿತ್ರಗಳು 50 ದಿನಕ್ಕೂ ಮೀರಿದ ಪ್ರದರ್ಶನ ಕಂಡಿವೆ. ಆರಂಭದಲ್ಲಿ ಮರು ಪ್ರದರ್ಶನ ಕಂಡ `ಮೊಘಲ್-ಎ-ಆಝಂ' ಹಾಗೂ `ಮದರ್ ಇಂಡಿಯಾ' ಚಿತ್ರಗಳು 25 ವಾರಗಳ `ಹೌಸ್‌ಫುಲ್' ಪ್ರದರ್ಶನ ಕಂಡಿವೆ. `ಶಂಕರಾಭರಣಂ' ಚಿತ್ರ 32 ವಾರಗಳ ಕಾಲ ಪ್ರದರ್ಶ ಕಂಡರೆ, `ಪಡಿಯಪ್ಪ', `ಸಾಗರ ಸಂಗಮಂ', `ಮಗಧೀರ' ಸೇರಿದಂತೆ ಒಟ್ಟು 150 ಚಿತ್ರಗಳು 25 ವಾರಗಳ ಪ್ರದರ್ಶನ ಕಂಡಿವೆ' ಎಂದು ಕೆ.ಆರ್. ಪ್ರಭು `ಪಲ್ಲವಿ'ಯ ನೆನಪುಗಳನ್ನು ಹೆಮ್ಮೆಯಿಂದ ಹೇಳುತ್ತಾರೆ.ಆರಂಭದಿಂದಲೂ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾ ಬಂದಿರುವ `ಪಲ್ಲವಿ' ಚಿತ್ರಮಂದಿರ ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರೇಕ್ಷಕರ ಅಚ್ಚುಮೆಚ್ಚಿನ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸ್ವಚ್ಛತೆ ಹಾಗೂ ಸಮಯ ಪಾಲನೆಗೆ ಹೆಸರುವಾಸಿಯಾಗಿದ್ದ ಅದು ದೇಶದಲ್ಲೇ ಅತ್ಯುತ್ತಮ ಚಿತ್ರಮಂದಿರಗಳಲ್ಲೊಂದು ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಪಲ್ಲವಿ ಚಿತ್ರಮಂದಿರದಲ್ಲಿ ಎರಡು ಬಾರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮಕ್ಕಳ ಚಿತ್ರೋತ್ಸವ ಹಾಗೂ ಬಂಗಾಳಿ ಚಿತ್ರೋತ್ಸವಗಳೂ ನಡೆದಿವೆ. ಜತೆಗೆ ಹಲವು ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಉಚಿತವಾಗಿ ಚಿತ್ರಮಂದಿರದ ಆವರಣ ನೀಡಿರುವುದೂ ಮಾಲೀಕರ ಚಿತ್ರ ಪ್ರೀತಿಗೆ ಕಾರಣ.`ಕಳೆದ ಎರಡು ವರ್ಷಗಳಿಂದ ಬಹು ಪರದೆಯ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಂದಾಗಿ ಏಕಪರದೆಯ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. 100-150 ಆಸನಗಳುಳ್ಳ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಹೆಚ್ಚಾಗಿ ಶಾಪಿಂಗ್ ಮಾಲ್‌ಗಳಲ್ಲೇ ಇರುವುದರಿಂದ ಪ್ರೇಕ್ಷಕರು ಚಿತ್ರವೀಕ್ಷಣೆಯ ಜತೆಗೆ, ಒಂದಿಷ್ಟು ಶಾಪಿಂಗ್ ಹಾಗೂ ಬೇಕಾದ ತಿನಿಸುಗಳನ್ನು ಸವಿದು ಮನೆಯತ್ತ ಮರಳುತ್ತಿದ್ದಾರೆ. ಹೀಗಾಗಿ ಕೇವಲ ಚಿತ್ರಪ್ರದರ್ಶನವನ್ನೇ ನೆಚ್ಚಿಕೊಂಡ ಸಾವಿರಕ್ಕೂ ಮೀರಿದ ಆಸನಗಳುಳ್ಳ ಚಿತ್ರ ಮಂದಿರಗಳು ವಿದ್ಯುತ್ ಶುಲ್ಕ, ತೆರಿಗೆ, ಸಿಬ್ಬಂದಿ ವೆಚ್ಚವನ್ನು ಭರಿಸುವುದೂ ಕಷ್ಟವಾಗಿದ್ದು, ತೀವ್ರ ಆದಾಯ ಕೊರತೆಯನ್ನು ಎದುರಿಸುತ್ತಿವೆ. ಚಿತ್ರ ಬಿಡುಗಡೆಯಾದ ಮೊದಲ ವಾರ ಒಂದಿಷ್ಟು ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಾರೆ. ಆದರೆ ನಂತರದ ದಿನಗಳಲ್ಲಿ ಪ್ರೇಕ್ಷಕರ ಬರ ಎದುರಿಸಬೇಕಾಗಿದೆ. ಈ ಕಾರಣದಿಂದಾಗಿ `ಪಲ್ಲವಿ' ಚಿತ್ರಮಂದಿರವನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ' ಎಂದು ಟಿ.ಶಿವರಾಮ್ ಅವರ ಪುತ್ರ ಹರಿ ಕುಮಾರ್ ಬೇಸರದಿಂದ ವಿವರಿಸುತ್ತಾರೆ.ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಗಳನ್ನು ಪ್ರದರ್ಶಿಸಿದ ಪಲ್ಲವಿ ಚಿತ್ರಮಂದಿರ ಈಚಿನ ವರ್ಷಗಳಲ್ಲಿ ತೆಲುಗು ಚಿತ್ರಗಳನ್ನೇ ಪ್ರದರ್ಶಿಸಿರುವುದು ಹೆಚ್ಚು. ಈ ಚಿತ್ರಮಂದಿರಕ್ಕೆ ಭೇಟಿ ನೀಡಿರುವ ಗಣ್ಯ ಪ್ರೇಕ್ಷಕರಲ್ಲಿ ವಿಷ್ಣುವರ್ಧನ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರೂ ಸೇರಿದ್ದಾರೆ. ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ರಾಮ್ ಚರಣ್ ತೇಜಾ, ನಾಗಾರ್ಜುನ ಮುಂತಾದ ನಟರು ಪಲ್ಲವಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಜತೆಗೆ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಕ್ಕಾಗಿ ವಾಣಿಜ್ಯ ತೆರಿಗೆಯ ಮನರಂಜನಾ ತೆರಿಗೆ ವಿಭಾಗದವರು ಚಿತ್ರಮಂದಿರಕ್ಕೆ ಪ್ರಮಾಣ ಪತ್ರ ನೀಡಿರುವುದೂ `ಪಲ್ಲವಿ'ಯ ಮುಡಿಗೆ ಮತ್ತೊಂದು ಗರಿ ಸಿಕ್ಕಿಸಿದಂತಾಗಿದೆ.`ಪಲ್ಲವಿ ಚಿತ್ರ ಮಂದಿರ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಮಾತ್ರವಲ್ಲ, 36 ವರ್ಷಗಳ ಕಾಲ ಬದುಕು ಕಂಡುಕೊಂಡಿದ್ದ 29 ಮಂದಿ ನೌಕರರನ್ನೂ ಅಗಲುತ್ತಿದೆ. ಈವರೆಗೂ ಚಿತ್ರಮಂದಿರದ ಏಳಿಗೆಗೆ ಶ್ರಮಿಸಿದ ನೌಕರರ ಜೀವನಕ್ಕೆ ತೊಂದರೆಯಾಗದಂತೆ ಹಾಗೂ ಅವರ ಕುಟುಂಬ ಭವಿಷ್ಯವನ್ನು ಗಮದಲ್ಲಿಟ್ಟುಕೊಂಡು ಅವರಿಗೆ ಪರಿಹಾರ ಹಾಗೂ ಬಾಕಿ ಹಣವನ್ನು ನೀಡಲಾಗಿದೆ' ಎಂದು ಪ್ರಭು ಅವರು ತಿಳಿಸಿದರು.ಕಾರ್ಪೋರೇಷನ್ ವೃತ್ತದ ಬಳಿ 33 ಸಾವಿರ ಚದರಡಿ ವಿಸ್ತೀರ್ಣದ `ಪಲ್ಲವಿ' ಚಿತ್ರಮಂದಿರ ಮುಂದಿನ ದಿನಗಳಲ್ಲಿ ಆಸ್ಪತ್ರೆಯಾಗಿ ಬದಲಾಗಲಿದೆ. ಟಿ.ಶಿವರಾಮ್ ಅವರು ಇಟ್ಟಿದ್ದ `ಪಲ್ಲವಿ' ಹೆಸರನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ಅದೇ ಹೆಸರಿನಲ್ಲಿ ಹತ್ತು ಅಂತಸ್ತಿನ ಸುಸಜ್ಜಿತ, ಹೈಟೆಕ್ ಆಸ್ಪತ್ರೆ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.ನೌಕರರ ಹೆಮ್ಮೆ

`ಬೇರೆ ಚಿತ್ರಮಂದಿರಗಳ ಮಾಲೀಕರು ಹೇಗಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಮಾಲೀಕರು ಮಾತ್ರ ನಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಹೀಗಾಗಿಯೇ ನಾವೆಲ್ಲರೂ ಆರಂಭವಾದಾಗಿನಿಂದ ಇಲ್ಲಿಯವರೆಗೂ ಪಲ್ಲವಿಗಾಗಿ ದುಡಿದಿದ್ದೇವೆ. ಅದಕ್ಕಾಗಿ ನಮಗೆ ಹೆಮ್ಮೆ ಇದೆ' ಎಂದು ಪಲ್ಲವಿ ಚಿತ್ರಮಂದಿರದ ನೌಕರರು ಹೆಮ್ಮೆಯಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.“ಪಲ್ಲವಿ ಚಿತ್ರಮಂದಿರ ಆರಂಭವಾಗುವ ಒಂದು ದಿನ ಮುಂಚಿತವಾಗಿ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡರು. ನರ್ತಕಿ ಹಾಗೂ ಸ್ವಪ್ನ ಚಿತ್ರ ಮಂದಿರದಲ್ಲಿ ನಮಗೆ ತರಬೇತಿ ನೀಡಲಾಗಿತ್ತು. ನಂತರ ಇಲ್ಲಿ ವೃತ್ತಿ ಜೀವನ ಆರಂಭವಾಯಿತು. ಆರಂಭವಾದಾಗ ಹಾಕಲಾಗಿರುವ ಫೋಟೊಫೋನ್ ಎಂಬ ಜಪಾನ್ ತಂತ್ರಜ್ಞಾನದ ಪ್ರೊಜೆಕ್ಟರ್ ಇನ್ನೂ ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಾಲ್ಕನಿಯಲ್ಲಿ 381, ಫಸ್ಟ್ ಕ್ಲಾಸ್‌ನಲ್ಲಿ 756 ಹಾಗೂ ಮುಂಭಾಗದಲ್ಲಿ 74 ಸುಸಜ್ಜಿತ ಆಸನ ವ್ಯವಸ್ಥೆ ಇದೆ. ಮಾಲೀಕರು ಕಾಲಕಾಲಕ್ಕೆ ಇದರ ನಿರ್ವಹಣೆಯತ್ತ ಗಮನ ಹರಿಸುತ್ತಿದ್ದರು.ಇಲ್ಲಿನ ಸಾಕಷ್ಟು ಬೆಳವಣಿಗೆಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸತ್ಯಜಿತ್ ರೇ, ವಿಷ್ಣುವರ್ಧನ್, ಬಿ. ಸರೋಜಾದೇವಿ, ಅಂಬರೀಷ್, ರವಿಚಂದ್ರನ್, ದ್ವಾರಕೀಶ್, ಜಯಪ್ರದಾ ಅವರೆಲ್ಲರೂ ಚಿತ್ರಮಂದಿರಕ್ಕೆ ಬಂದಾಗ ಹತ್ತಿರದಿಂದ ನೋಡಿದ್ದೇವೆ. ಹೊಸ ಚಿತ್ರ ಬಿಡುಗಡೆಯಾದಾಗ ಬೆಳಿಗ್ಗೆ 4-5 ಗಂಟೆಗೆ ಟಿಕೆಟ್ ಕೊಟ್ಟಿದ್ದೇವೆ. ಚಿತ್ರಮಂದಿರದ ಆವರಣದಲ್ಲಿ ನಡೆದ ಚಕ್ರವ್ಯೆಹ, ಪಲ್ಲವಿ ಅನುಪಲ್ಲವಿ, ಹೂವು ಹಣ್ಣು, ಅಸಾಧ್ಯ ಅಳಿಯ ಹಾಗೂ ಇತ್ತೀಚೆಗೆ ಶಿವರಾಜ್ ಕುಮಾರ್ ನಟನೆಯ ಕಡ್ಡಿಪುಡಿ ಚಿತ್ರದ ಚಿತ್ರೀಕರಣ ನೋಡಿದ ಅನುಭವೂ ನಮ್ಮದು.`ಚಿತ್ರಮಂದಿರಕ್ಕೆ ಬರುವ ಪ್ರತಿಯೊಬ್ಬರೂ ನಮ್ಮ ಅತಿಥಿಗಳಿದ್ದಂತೆ. ವಾರದ ಜಂಜಡಗಳಿಂದ ಹೊರಬರಲು ತಮ್ಮ ಕುಟುಂಬದವರೊಂದಿಗೆ ಇಲ್ಲಿಗೆ ಬರುತ್ತಾರೆ. ಇರುವ ಮೂರು ಗಂಟೆಯಷ್ಟು ಹೊತ್ತನ್ನು ನೆಮ್ಮದಿಯಿಂದ ಕಳೆಯಲು ಕೈಯಲ್ಲಾದ ಪ್ರಯತ್ನ ನಾವು ಮಾಡಬೇಕು. ಪ್ರೇಕ್ಷಕರೇ ತಾಳ್ಮೆ ಕಳೆದುಕೊಂಡರೂ ನಾವು ತಾಳ್ಮೆಯಿಂದ ಇರಬೇಕು ಎಂದು ಮಾಲೀಕರು ಹೇಳುತ್ತಿದ್ದರು. ಆ ಮಾತಿಗೆ ಎಂದೂ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇವೆ'.ಪ್ರತಿ ವರ್ಷ ಮಕ್ಕಳ ಸ್ಕೂಲ್ ಫೀಸ್, ವಿದ್ಯಾರ್ಥಿ ವೇತನ ಎಲ್ಲವನ್ನೂ ಮಾಲೀಕರು ನಮಗೆ ನೀಡಿದ್ದಾರೆ. ರಾಜರಾಜೇಶ್ವರಿ ದೇವಸ್ಥಾನದ ಪ್ರಸಾದ ನೀಡಿ ಬೋನಸ್ ನೀಡುತ್ತಿದ್ದರು. ಈಗ ನಮಗೆಲ್ಲ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಹೀಗಾಗಿ ಈ ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಂಡಿದ್ದೇವೆ. ಇನ್ನು ಮುಂದೆಯೂ ನಾವು ಚಿತ್ರಮಂದಿರ ಹಾಗೂ ಮಾಲೀಕರನ್ನು ಮರೆಯುವುದಿಲ್ಲ” ಎಂಬುದು ಚಿತ್ರಮಂದಿರದ ಆರಂಭದಿಂದಲೂ ದುಡಿದ ಬಸವರಾಜ್, ರಾಜಣ್ಣ, ವೈ.ಕೆ. ನಾರಾಯಣ್, ಗೋವಿಂದರಾಜ್ ಮುಂತಾದವರ ನುಡಿ.ಪ್ಲಿಮೋತ್ ಕಾರ್ ದರ್ಬಾರು

ಮುಂಚೆ ಆ ಜಾಗದಲ್ಲಿ ಸೋಪ್ ಕಾರ್ಖಾನೆಯೊಂದಿತ್ತು. ಅದೇ ಜಾಗದಲ್ಲಿ `ಪಲ್ಲವಿ' ಆರಂಭವಾಯಿತು. ಆ ಕಾಲದಲ್ಲಿ ಉದ್ದನೆಯ ಪ್ಲಿಮೋತ್ ಕಾರುಗಳೇ ಐಷಾರಾಮಿ ಎಂಬುದಾಗಿತ್ತು. ಆ ಕಾರುಗಳನ್ನು ನಿಲ್ಲಿಸಲು ಮೆಜೆಸ್ಟಿಕ್ ಪ್ರದೇಶದಲ್ಲಿ ಕೇವಲ ಅಲಂಕಾರ್ ಚಿತ್ರಮಂದಿರದಲ್ಲಿ ಮಾತ್ರ ಸಾಧ್ಯವಿತ್ತು. ಅದೇ ಸಂದರ್ಭದಲ್ಲಿ ಕಾರ್ಯಾರಂಭ ಮಾಡಿದ ಪಲ್ಲವಿ ಚಿತ್ರಮಂದಿರ ಸಾಕಷ್ಟು ಸ್ಥಳಾವಕಾಶ ಹೊಂದಿದ್ದರಿಂದ ಪ್ಲಿಮೋತ್ ಕಾರು ಹೊಂದಿದವರಿಗೆ ಚಿತ್ರ ನೋಡಲು ಎರಡನೇ ಚಿತ್ರಮಂದಿರವೊಂದು ದೊರೆತಂತಾಯಿತು.

ಮೆಜೆಸ್ಟಿಕ್‌ನಲ್ಲಿ ಸಾಕಷ್ಟು ಚಿತ್ರಮಂದಿರಗಳಿದ್ದವು. ಆದರೂ ಅವುಗಳನ್ನು ಮೀರಿಸಿದ ಐಷಾರಾಮಿ ಚಿತ್ರಮಂದಿರ ಎಂಬ ಹೆಗ್ಗಳಿಕೆ ಪಲ್ಲವಿ ಚಿತ್ರಮಂದಿರದ್ದಾಗಿತ್ತು. ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರರಾವ್ ಚಿತ್ರಗಳನ್ನು ನೋಡಲು ಪಲ್ಲವಿಗೆ ಹೋಗುತ್ತಿದ್ದೆವು. ಆಗ ಅಲ್ಲಿ ಟಿಕೆಟ್ ಬೆಲೆ ರೂ. 2.80. ವಸಂತಗೀತಂ, ಶಂಕರಾಭರಣಂ, ಯಮದೊಂಗ, ಪ್ರೇಮಾಭಿಷೇಕಂ ಇನ್ನೂ ಮುಂತಾದ ಚಿತ್ರಗಳನ್ನು ಪಲ್ಲವಿಯಲ್ಲಿ ನೋಡಿದ ಅನುಭವ ನಮ್ಮದು. ಆಗ ಈ ರಸ್ತೆಯಲ್ಲಿ ಟ್ರಾಫಿಕ್ ಈಗಿನಷ್ಟು ಇರಲಿಲ್ಲ. ಶಂಕರಾಭರಣಂ ಚಿತ್ರದ ಟಿಕೆಟ್ ಪಡೆಯಲು ಅರ್ಧ ರಸ್ತೆಯನ್ನೇ ಜನರು ಆಕ್ರಮಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈಗ ಬೇಕಾದಷ್ಟು ಉತ್ತಮ ಚಿತ್ರಮಂದಿರವಿರಬಹುದು. ಆದರೆ ಪಲ್ಲವಿಯಲ್ಲಿ ಚಿತ್ರ ನೋಡಿದ ಅನುಭವವೇ ಬೇರೆ. ಚಿತ್ರಮಂದಿರ ಮುಚ್ಚುತ್ತಿದೆ ಎಂದರೆ ನಿಜಕ್ಕೂ ಬೇಸರವೆನಿಸುತ್ತಿದೆ.

ಎಸ್.ವೇಣುಗೋಪಾಲ್, ಕಬ್ಬನ್‌ಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry