ಶನಿವಾರ, ಜನವರಿ 25, 2020
19 °C

ಕೊನೆಯ ರಾಜಕೀಯ ಆಟಕ್ಕೆ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಸಾಕ್ಷಾತ್ ಸಮೀಕ್ಷೆ,

ಪಂಜಾಬ್,

ಬಾದಲ್ ಗ್ರಾಮ (ಲಂಬಿ): ಅದು ಹುಡುಗರಂತೆ ಓಡಾಡುವ ವಯಸ್ಸಲ್ಲ. ಹಾಗೆ ತಿರುಗಾಡಲು ದೇಹ ಸಹಕರಿಸುವುದಿಲ್ಲ. ಮನಸ್ಸು ಒಪ್ಪುವುದಿಲ್ಲ. ಆದರೆ, ಇದ್ಯಾವುದನ್ನೂ ಅವರು ಲೆಕ್ಕಿಸುವುದಿಲ್ಲ. 85ರ ಹರೆಯದಲ್ಲೂ ಯುವಕರಂತೆ ಓಡಾಡುತ್ತಾರೆ. ಗಂಟೆಗಟ್ಟಲೆ ಭಾಷಣ ಮಾಡುತ್ತಾರೆ. ಕಾರು ಹತ್ತಿ ಮುಂದಿನ ಊರಿನ ದಾರಿ ಹಿಡಿಯುತ್ತಾರೆ.ಇದು ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ದಿನಚರಿ. ಬೆಳಗಿನ ಆರು ಗಂಟೆ ಹೊತ್ತಿಗೆ ಮನೆಬಿಡುವ ಅವರು ರಾತ್ರಿ ಮರಳಿ ಗೂಡು ಸೇರುವುದು ಮಧ್ಯರಾತ್ರಿ ಹೊತ್ತಿಗೆ. ಆರೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ ಹಿರಿಯ ರಾಜಕಾರಣಿ ದೈಹಿಕವಾಗಿ ಸೋತಿಲ್ಲ. ರಾಜ್ಯದ ಮೂಲೆ ಮೂಲೆಗೂ ಹೋಗಿ ಮತದಾರರನ್ನು ಭೇಟಿ ಆಗುತ್ತಾರೆ. ಅಕಾಲಿದಳ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕಳಕಳಿಯ ಮನವಿ ಮಾಡುತ್ತಿದ್ದಾರೆ.ಸಾರ್ವಜನಿಕ ಸಭೆಗಳಿಗೆ ಸೇರುವ ನಾಲ್ಕಾರು ಸಾವಿರ ಜನ `ಬೋಲೆಸೋ ನೆಹಾಲ್, ಸತ್‌ಶ್ರೀ ಅಕಾಲ್~ (ಭಗವಂತ ಯುದ್ಧಕ್ಕೆ ಹೊರಟಿರುವ ನಮಗೆ ಶಕ್ತಿ ಕೊಡು) ಎಂಬ ಘೋಷಣೆಗಳನ್ನು ಕೂಗುತ್ತಾರೆ. ಇದರಿಂದ ಸ್ಫೂರ್ತಿ ಪಡೆಯುವ ವಯೋವೃದ್ಧ ರಾಜಕಾರಣಿ ದಣಿಯದೆ ಭಾಷಣ ಮಾಡುತ್ತಾರೆ.ಐದು ವರ್ಷದಲ್ಲಿ ಅಕಾಲಿ ಸರ್ಕಾರ ಮಾಡಿರುವ ಸಾಧನೆಗಳನ್ನು ಮತದಾರರ ಮುಂದಿಡುತ್ತಾರೆ. `ನಾನು ನಿಮ್ಮ ಮಧ್ಯೆ ಇರುವ ಮನುಷ್ಯ, ನಮಗೆ ಮತ ಕೊಡಿ~ ಎಂದು ಕೇಳುತ್ತಾರೆ. ಇವರು ಭಾಷಣ ಮಾಡುವಾಗ ವೇದಿಕೆ ಮೇಲೆ ಸ್ಟೆನ್‌ಗನ್ ಹಿಡಿದ ಭದ್ರತಾ ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ರಕ್ಷಣೆ ಕೊಡುತ್ತಾರೆ. ಮತ್ತಿಬ್ಬರು ಬೈನಾಕುಲರ್ ಒಳಗೆ ಕಣ್ಣಿಟ್ಟಿರುತ್ತಾರೆ.ಪ್ರಕಾಶ್‌ಸಿಂಗ್ ಬಾದಲ್ ಅವರಿಗೆ ಇದು `ಮಾಡು ಇಲ್ಲವೆ ಮಡಿ~ ಚುನಾವಣೆ. ಕೊನೆಯ `ರಾಜಕೀಯ ಆಟ~. ಸರ್ಕಾರ ಉಳಿಸಿಕೊಳ್ಳುವ ಜತೆಗೆ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಮೊದಲ ಸಲ ಬೀದಿಗೆ ಬಂದಿರುವ ಕುಟುಂಬ ಕಲಹದಿಂದ ಇದುವರೆಗೆ ತಮ್ಮ ಬೆಂಬಲಕ್ಕೆ ನಿಂತಿರುವ ಸ್ವಕ್ಷೇತ್ರ ಕೈಬಿಡಬಹುದೇನೋ ಎಂದು ಆತಂಕಕ್ಕೊಳಗಾಗಿದ್ದಾರೆ.`ಬಾದಲ್ ಕೋಟೆ~ ಬಿರುಕು ಬಿಟ್ಟಿದೆ. ಮುಖ್ಯಮಂತ್ರಿ ಸ್ಪರ್ಧೆ ಮಾಡಿದ ಎಲ್ಲ ಚುನಾವಣೆಗಳಲ್ಲೂ ಹೆಗಲು ಕೊಟ್ಟು ದುಡಿದಿದ್ದ ಗುರುದಾಸ್, ಅಣ್ಣನ ವಿರುದ್ಧ ಲಂಬಿಯಲ್ಲಿ `ರಣಕಹಳೆ~ ಊದಿ `ರಕ್ತ ಸಂಬಂಧಕ್ಕಿಂತಲೂ ರಾಜಕೀಯ ಮುಖ್ಯ~ ಎಂಬ ಸಂದೇಶ ಕಳುಹಿಸಿದ್ದಾರೆ. ಹಿಂದಿನ ಎರಡು ಚುನಾವಣೆಗಳಲ್ಲಿ ಹಿರಿಯ ನಾಯಕನ ವಿರುದ್ಧ ಸೋತಿದ್ದ ಮತ್ತೊಬ್ಬ ಹತ್ತಿರದ ಸಂಬಂಧಿ ಮಹೇಶಿಂದರ್ ಬಾದಲ್ ಕಾಂಗ್ರೆಸ್ ಅಭ್ಯರ್ಥಿ.ದೊಡ್ಡಪ್ಪನ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಮನ್‌ಪ್ರೀತ್‌ಸಿಂಗ್ ಕಳೆದ ವರ್ಷ ಅಕಾಲಿದಳದಿಂದ ಹೊರಬಂದು `ಪಂಜಾಬ್ ಪೀಪಲ್ ಪಾರ್ಟಿ~ (ಪಿಪಿಪಿ) ಸ್ಥಾಪಿಸಿದ್ದಾರೆ. ಈ ಪಕ್ಷ ಅಕಾಲಿದಳಕ್ಕೆ ಬೆದರಿಕೆಯೊಡ್ಡಿದೆ. ಅಕಾಲಿದಳ ಮತ್ತು ಕಾಂಗ್ರೆಸ್ ಮತ ಬ್ಯಾಂಕ್‌ಗೆ ಕೈ ಹಾಕಿದೆ. ಲಂಬಿಯಲ್ಲಿ ಗುರುದಾಸ್ ಮಗನ ಪಕ್ಷದಿಂದ ಕಣಕ್ಕಿಳಿದಿದ್ದಾರೆ.ಬಾದಲ್ ಕುಟುಂಬದಲ್ಲಿ ಹೋದ ವರ್ಷ ಅಧಿಕಾರಕ್ಕಾಗಿ ನಡೆದ ಹೋರಾಟದಿಂದ ಅಣ್ಣ-ತಮ್ಮ `ಮುಖಾಮುಖಿ~ ಆಗಿದ್ದಾರೆ. ಪ್ರಕಾಶ್‌ಸಿಂಗ್ ಬಾದಲ್ ತಮ್ಮ ಪುತ್ರ ಸುಖ್‌ಬೀರ್ ಅವರನ್ನು ಉತ್ತರಾಧಿಕಾರಿ ಎಂದು ಬಿಂಬಿಸುತ್ತಿರುವುದು ಮನ್‌ಪ್ರೀತ್ ಅಸಮಾಧಾನಕ್ಕೆ ಕಾರಣವಾಗಿದೆ. `ನಿಮ್ಮ ಬಳಿಕ ನನ್ನನ್ನು ಮುಖ್ಯಮಂತ್ರಿ ಮಾಡಿ. ಇಲ್ಲವೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡಿ~ ಎಂಬ ಮನ್‌ಪ್ರೀತ್ ಬೇಡಿಕೆಯನ್ನು ಹಿರಿಯ ಬಾದಲ್ ಕಡೆಗಣಿಸಿದ್ದರಿಂದ ಮನ್‌ಪ್ರೀತ್ ಸಿಂಗ್ ಅಕಾಲಿದಳ ತೊರೆದಿದ್ದಾರೆ, ಹೊಸ ಪಕ್ಷ ಕಟ್ಟಿ ದೊಡ್ಡಪ್ಪನಿಗೆ ವಿಪರೀತ ಕಾಟ ಕೊಡುತ್ತಿದ್ದಾರೆ.ಇದುವರೆಗಿನ ಎಲ್ಲ ಚುನಾವಣೆಗಳಲ್ಲಿ ಅಣ್ಣನ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಗುರುದಾಸ್ ಬಾದಲ್ ಅವರಿಗೆ ಲಂಬಿ ಮತದಾರರ ಒಳಸುಳಿವು, ಒಳಗುಟ್ಟುಗಳ ಅರಿವಿರುವುದು ಸಹಜವಾಗಿ ಹಿರಿಯ ರಾಜಕಾರಣಿಯನ್ನು ಚಿಂತೆಗೀಡುಮಾಡಿದೆ. ಇದೇ ಕಾರಣಕ್ಕೆ ಹಿರಿಯ ಬಾದಲ್ ಸ್ವಂತ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಉಳಿದ ಕ್ಷೇತ್ರಗಳಿಗೂ ಹೋಗುತ್ತಿದ್ದಾರೆ.`ಲಂಬಿ ಜನರಿಗೆ ಇದು ನನ್ನ ಕೊನೆಯ ಚುನಾವಣೆ~ ಎಂದು ಅವರು ಹೇಳಿ ಜನರ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.  ಸೋದರ ಗುರುದಾಸ್ ಬಿಟ್ಟು ಬೇರೆ ಯಾರೇ ಕಣಕ್ಕಿಳಿದಿದ್ದರೂ ಅವರು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮುಖ್ಯಮಂತ್ರಿ ಹೋರಾಟ ಮನೋಭಾವದ ನಾಯಕ. ಚುನಾವಣೆಗಳಿಗೆ ಹೆದರುವ ಮನುಷ್ಯರಲ್ಲ. ಮೊದಲ ಸಲ ಧೃತಿಗೆಟ್ಟಿದ್ದಾರೆ. ಮುಖ್ಯಮಂತ್ರಿ ಹೆದರಲು ಕಾರಣವಿಲ್ಲ. ರಾಜಕೀಯದಲ್ಲಿ ಅವರಿಗೆ ಶತ್ರುಗಳು ಕಡಿಮೆ. ಎಲ್ಲರೂ ಅವರ ಬಗ್ಗೆ ಒಳ್ಳೆಯ ಮಾತು ಆಡುವವರೆ. ನಾಲ್ಕು ಸಲ ಮುಖ್ಯಮಂತ್ರಿ ಆಗಿದ್ದರೂ ಯಾರಿಗೂ ಜೋರಾಗಿ ಮಾತನಾಡಿದವರಲ್ಲ ಎಂದು ಅವರನ್ನು ಹತ್ತಿರದಿಂದ ಕಂಡ ಜನ ಹೇಳುತ್ತಾರೆ.ಬಾದಲ್ ಗ್ರಾಮದಲ್ಲಿ ಅಡ್ಡಾಡಿದರೆ ಜನ ತಮ್ಮ ನಾಯಕನ ಬಗೆಗೆ ಪ್ರೀತಿ- ಗೌರವದಿಂದ ಮಾತನಾಡುವುದು ಕಂಡು ಬರುತ್ತದೆ. `ಬಾದಲ್ ಸಾಹೇಬ್ರು ಗೆಲ್ಲಬೇಕ್ರಿ. ಅವರು ಗೆಲ್ಲಲಿ ಎಂದು ಪ್ರತಿನಿತ್ಯ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ~ ಎಂದು ಬಾದಲ್ ಗ್ರಾಮದ ಮಹಿಳೆ  ಸುರೀಂದರ್ ಕೌರ್ ಹೇಳುತ್ತಾರೆ. `ಬಾದಲ್ ಬರೀ ಲಂಬಿಗೆ ಮಾತ್ರವಲ್ಲ ಇಡೀ ಪಂಜಾಬಿಗೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ~ ಎನ್ನುತ್ತಾರೆ.1947ರಲ್ಲಿ ರಾಜಕೀಯ ದೀಕ್ಷೆ ಪಡೆದಿರುವ ಮುಖ್ಯಮಂತ್ರಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು 1957ರಲ್ಲಿ. ನಾಲ್ಕು ಸಲ ಮುಖ್ಯಮಂತ್ರಿ ಆಗಿದ್ದಾರೆ. ವಿರೋಧ ಪಕ್ಷದ ನಾಯಕರಾಗಿಯೂ ದುಡಿದಿದ್ದಾರೆ.ಲೋಕಸಭೆಗೂ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ಕೌರ್ ಹೇಳುವಂತೆ ಮುಖ್ಯಮಂತ್ರಿ ತಮ್ಮ ಕ್ಷೇತ್ರಕ್ಕೆ ಬೇಕಾದಷ್ಟು ಮಾಡಿದ್ದಾರೆ. ಬಟಿಂಡ ಜಿಲ್ಲಾ ಕೇಂದ್ರದಿಂದ ಬಾದಲ್ ಗ್ರಾಮಕ್ಕೆ ನಾಲ್ಕು ಲೇನ್ ರಸ್ತೆ ಮಾಡಿಸಿದ್ದಾರೆ. ಕ್ರೀಡಾ ಸಂಕೀರ್ಣ ಕಟ್ಟಿಸಿದ್ದಾರೆ. ಕ್ಷೇತ್ರಕ್ಕೆ ಇಂಥ ಸೌಲಭ್ಯ ಇಲ್ಲ ಎನ್ನುವಂತಿಲ್ಲ. ಜನರಿಗೆ ಸಕಲವೂ ಇದೆ.   ಗುರುದಾಸ್ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ. ಆದರೆ, ಅವರಿಗೆ ಜನ ಅಪರಿಚಿತರಲ್ಲ. ಇದೇ ಭರವಸೆ ಮೇಲೆ ಮನಪ್ರೀತ್ ತಂದೆಯನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‌ನ ಮಹೇಶಿಂದರ್ ಎರಡು ಸಲ ಸೋತಿದ್ದಾರೆ. ಮೊದಲ ಸಲ 10 ವರ್ಷದ ಹಿಂದೆ ಪಕ್ಷೇತರವಾಗಿ 27,500 ಮತ ಪಡೆದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹಿರಿಯ ಬಾದಲ್ ವಿರುದ್ಧ ಬರೀ 9 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.ಬಾದಲ್ ಕುಟುಂಬ ಕಲಹದ ಲಾಭ ಪಡೆಯಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಪಿಪಿಪಿ ಅಕಾಲಿದಳಕ್ಕೆ ಮಾತ್ರವಲ್ಲ. ತಮ್ಮ ಪಕ್ಷಕ್ಕೂ ಹಾನಿ ಮಾಡಲಿದೆ ಎಂಬ ಸತ್ಯ ಈ ಪಕ್ಷದ ಮುಖಂಡರಿಗೆ ಗೊತ್ತಿದೆ. ಪಿಪಿಪಿ ಅಭ್ಯರ್ಥಿ ಎಷ್ಟು ಮತಗಳನ್ನು ಕಸಿಯುತ್ತಾರೆ ಎಂಬುದರ ಮೇಲೆ ಪ್ರಕಾಶ್‌ಸಿಂಗ್ ಬಾದಲ್ ಗೆಲುವು ನಿರ್ಧಾರವಾಗಲಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಸರಬ್ಜೀತ್‌ಸಿಂಗ್ ವಿಶ್ಲೇಷಿಸುತ್ತಾರೆ.`ಅಕಾಲಿದಳದ ಹಾದಿಗೆ ಪಿಪಿಪಿ ಅಡ್ಡಿಯಾಗಲಿದೆ. ಅಕಾಲಿದಳ ಮತಬ್ಯಾಂಕ್ ಎಲ್ಲಿದೆ, ಅದನ್ನು ಹೇಗೆ ಕದಲಿಸಬೇಕು ಎಂಬ ಗುಟ್ಟು ಪಿಪಿಪಿ ಮುಖಂಡರಿಗೆ ಗೊತ್ತಿದೆ. ಈ ಪಕ್ಷದಿಂದ ನಮಗೂ ಕೆಲವೆಡೆ ಸಮಸ್ಯೆಯಾಗುವುದು ನಿಶ್ಚತ. ಆದರೆ, ಹೆಚ್ಚು ಹೊಡೆತ ಬೀಳುವುದು ಅಕಾಲಿದಳಕ್ಕೆ ಎಂದು ಪಂಜಾಬ್ ಚುನಾವಣೆ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಡುತ್ತಾರೆ. ಈ ಮಾತು ಲಂಬಿಗೂ ಅನ್ವಯವಾಗಲಿದೆ.`ಗುರುದಾಸ್ ಸ್ಪರ್ಧೆ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಹೆಚ್ಚಿಸಿದೆ. ಎರಡು ಚುನಾವಣೆಯಲ್ಲಿ ನಾನು ಸೋತಿದ್ದೇನೆ. ಇದರಿಂದಾಗಿ ಮತದಾರರಿಗೆ ಅನುಕಂಪವಿದೆ. ಗುರುದಾಸ್ ಸ್ಪರ್ಧೆಯಿಂದ ಪ್ರಕಾಶ್ ಬಾದಲ್ ಹಾದಿ ಕಠಿಣವಾಗಿದೆ. ಹಿಂದಿನ ಚುನಾವಣೆಯಲ್ಲಿ ಸಲ ನಾನು ಸೋತಿರುವುದು ಅತ್ಯಲ್ಪ ಮತಗಳ ಅಂತರದಿಂದ. ಈ ಸಲ ಪಿಪಿಪಿ ಅಭ್ಯರ್ಥಿ ಎಷ್ಟು ಮತ ಕೀಳುವರೋ ಅಷ್ಟು ನಮಗೆ ಒಳ್ಳೆಯದು~ ಎಂಬುದು ಮಹೇಶಿಂದರ್ ನಿರೀಕ್ಷೆ.ಬಾದಲ್ ಕುಟುಂಬದ ಕಾಳಗ ದೇಶದ ಗಮನ ಸೆಳೆದಿದೆ. ಲಂಬಿ ಮತದಾರರನ್ನು ಸಂದಿಗ್ಧಕ್ಕೆ ಸಿಕ್ಕಿಸಿದೆ. ಯಾರಿಗೆ ಮತ ಹಾಕಬೇಕು ಎಂಬ ಗೊಂದಲ ಮತದಾರರಿಗೆ ಕಾಡುತ್ತಿದೆ. ಕ್ಷೇತ್ರದ ಜನ ತಮ್ಮ ಕೈಬಿಡುವುದಿಲ್ಲ ಎಂದು ಪ್ರಕಾಶ್‌ಸಿಂಗ್ ಬಾದಲ್ ಹೇಳುತ್ತಿದ್ದಾರೆ. 30ರಂದು ಈ ಹಿರಿಯ ರಾಜಕಾರಣಿ ಭವಿಷ್ಯ ತೀರ್ಮಾನವಾಗಲಿದೆ.

ಪ್ರತಿಕ್ರಿಯಿಸಿ (+)