ಕೊನೆ ಇಲ್ಲದ ಮಡೆ ಸ್ನಾನ ಎಂಬ ಅನಿಷ್ಟ ಪದ್ಧತಿಯ ವಿವಾದ

7

ಕೊನೆ ಇಲ್ಲದ ಮಡೆ ಸ್ನಾನ ಎಂಬ ಅನಿಷ್ಟ ಪದ್ಧತಿಯ ವಿವಾದ

Published:
Updated:

ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನ ಉಂಡು ಬಿಟ್ಟ ಎಂಜಲೆಲೆಯ ಮೇಲೆ ಭಕ್ತರಿಗೆ ಉರುಳು ಸೇವೆ ಸಲ್ಲಿಸಲು ಅವಕಾಶ ನೀಡುವುದಿಲ್ಲ. ದೇವರಿಗೆ ನೈವೇದ್ಯ ರೂಪದಲ್ಲಿ ಸಮರ್ಪಿಸಿದ ಅನ್ನದ ಮೇಲೆ ಉರುಳು ಸೇವೆ ನಡೆಸಲು ಅವಕಾಶ ನೀಡಲಾಗುವುದು  ಸರ್ಕಾರ ಸಲ್ಲಿಸಿದ ಈ ಪ್ರಮಾಣ ಪತ್ರಕ್ಕೆ ಕೋರ್ಟು ಅನುಮೋದಿಸಿ ಆ ಮೂಲಕ ಸದ್ಯ `ಮಡೆಸ್ನಾನ' ಎಂಬ ಆಚರಣೆಗೆ `ಎಡೆಸ್ನಾನ'  ಎನ್ನುವ ರಾಜಿ ಸೂತ್ರವನ್ನು ಸೂಚಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಯಥಾಸ್ಥಿತಿ ಮುಂದುವರಿದಿರುವುದರಿಂದ `ಮಡೆಸ್ನಾನ'ದ  ವಿವಾದ ಇನ್ನೂ ಜೀವಂತವಾಗಿದೆ.`ಮಡೆ ಸ್ನಾನ' ಆಚರಣೆಯ ಆದಿ ಮೂಲ ಹೇಗಾಗಿರಬಹುದೆನ್ನುವ ಕುತೂಹಲ ನನ್ನದು. ಬೀದಿಯಲ್ಲಿ ಉರುಳಿ ದೇಹ ದಂಡನೆಯ ಮೂಲಕ ಭಕ್ತಿಯನ್ನು ಅರ್ಪಿಸಿ ಉದ್ದೇಶಿತ ಫಲ ಪಡೆಯುವುದು ಮತ್ತು ಎಂಜಲೆಲೆಯ ಮೇಲಿನ ಉರುಳು ಸೇವೆಯಲ್ಲಿ ಫಲ ಪಡೆವ ಹಿಂದಿರುವ ಮನೋಗತಿ ಒಂದೇ ಅಲ್ಲ.`ಮಡೆಸ್ನಾನ `ಎನ್ನುವ ಜೀವ ವಿರೋಧಿ ಆಚರಣೆಯ ವಿರುದ್ಧದ ಧ್ವನಿಗೆ ತತ್‌ಕ್ಷಣದ ಪ್ರತಿರೋಧವಾಗಿ ನಿಂತವರು ಮತ-ರಾಜಕೀಯ ಪ್ರಭುತ್ವದಲ್ಲಿ ನಿಂತಿರುವ ಮೇಲ್ಜಾತಿಯವರಲ್ಲ. ಬದಲಾಗಿ ಅವರ ಚಾಣಕ್ಯಮತಿಯ ಪ್ರತಿ ತಂತ್ರಗಾರಿಕೆಗೆ ಬಲಿಯಾಗಿರುವ ಕೆಳ ಸಮುದಾಯದವರು. ಪ್ರಾಚೀನವಾಗಿ ಮಲೆಕುಡಿಯರು ಮಲೆ ಬೆಟ್ಟ ಸಾಲುಗಳಲ್ಲಿ ಬದುಕು ಕಟ್ಟಿ ಕೊಟ್ಟವರು.ಹಿರಿತಲೆಮಾರಿನಲ್ಲಿ ಆದಿಕುಕ್ಕೆ /ಕುಕ್ಯಾಲವೆಂದು ಕರೆದುಕೊಳ್ಳುವ ಈ ಹೊತ್ತಿನ ಸುಬ್ರಹ್ಮಣ್ಯದ ಮೂಲ ನಿವಾಸಿಗರಿವರು. ಇವರಿಗೂ ಈ ಕುಕ್ಕೆಗೂ ಅವಿನಾಭಾವ ಸಂಬಂಧ. ಇವರು ಇಲ್ಲಿನ ಆದಿಮೂಲದ ದೈವ ದೇವರುಗಳ ಆದ್ಯ ಆರಾಧಕರು. ಗುಡಿ ಗೋಪುರಗಳೆನ್ನುವ ಸ್ಥಾವರಗಳ ನಿರ್ಮಾಣ ಪೂರ್ವದ ಕುಕ್ಕೆಯ ಒಡೆಯರು. ಆದರೆ ಇಂದು ಇವರು ಆಡಳಿತಾತ್ಮಕ ಸಹಿತ ದೇವಸ್ಥಾನದ ಹೊರವಲಯದ ಸೇವಾ ವರ್ಗಿಗಳು.ಸರ್ಪ ಆರಾಧನೆ ಭಿನ್ನ ಆಶಯ ನೆಲೆಗಳಲ್ಲಿ ಜಗತ್ತಿನಾದ್ಯಂತ ಆರಾಧನೆಯಾಗುತ್ತದೆ. ಸಾಂಸ್ಕೃತಿಕ ದಕ್ಷಿಣ ಕನ್ನಡದಲ್ಲಿ ನಾಗಾರಾಧನೆ ಆದಿಮವಾಗಿ  `ಫಲವಂತಿಕೆ'ಯ ಸಂಕೇತವಾಗಿರುವ ಆರಾಧನೆ. ದಕ್ಷಿಣ ಕನ್ನಡದಲ್ಲಿ ನಾಗನನ್ನು ವೈದಿಕೇತರ ಸಮುದಾಯಗಳು  ಸುಬ್ರಾಯನೆಂದು ಕರೆದು ಬ್ರಾಹ್ಮಣನನ್ನು ನಾಗನ ಪ್ರತಿರೂಪವೆಂದೂ ಭಾವುಕವಾಗಿ ನಂಬುತ್ತಾರೆ.ಹಾಗೆಂದು ಅವರಿಗೆ ಸುಬ್ರಾಯನೆಂದರೆ ಸ್ಕಂದಪುರಾಣ ಪ್ರಣೀತ ಈಗ ಕುಕ್ಕೆಯಲ್ಲಿ ವ್ಯಕ್ತನಾಗುವ ಶಿವಕುಮಾರ ಕಾರ್ತಿಕೇಯ, ದೇವ ಸೇನಾನಿ ಕುಮಾರ ಷಣ್ಮುಖನಲ್ಲ. ಅವರ ಪ್ರಾಗ್ ಕಲ್ಪನೆಯಲ್ಲಿ  ಕುಲಲಾಂಛನ ವಾಗಿ, ಸಂಪತ್ತಿನ ಒಡೆಯ, ಅದರ ಫಲದಾಯಕ, ನಿಧಿ ಕಾಯುವ ಕ್ಷೇತ್ರಪಾಲ.ಮಲೆಬೆಟ್ಟ ಕಾಡಿನಿಂದಾವೃತವಾದ ಕುಕ್ಕೆಯಲ್ಲಿ  ಸರ್ಪವಾಸಿಯಾಗಿರುವುದು ಸಹಜ. ಇದನ್ನೇ ಆದಿಮೂಲದಲ್ಲಿ ಹುತ್ತ ಸಹಿತವಾದ ಬನದಲ್ಲಿ ಆರಾಧಿಸಿರುವ ಪುರಾವೆಯಾಗಿ ಈಗಿನ ಮುಖ್ಯ ದೇವಸ್ಥಾನದ ಅನತಿ ದೂರದಲ್ಲಿರುವ ಆದಿ ಕುಕ್ಕೆಯೇ ಗಮನೀಯವಾಗಿದೆ. ದೇವಸ್ಥಾನಕ್ಕೆ ಹೋಗದಿದ್ದರೂ ಪರವಾಗಿಲ್ಲ ಆದಿ ಸುಬ್ರಹ್ಮಣ್ಯಕ್ಕೆ ಹೋಗಲೇ ಬೇಕೆನ್ನುವುದು ನಾಗಾರಾಧಕ ಸಮುದಾಯದ ನಂಬಿಕೆ. ಆದಿ ಕುಕ್ಕೆಯಲ್ಲಿ ಇಂದಿಗೂ ಹುತ್ತದ `ಮೃತ್ತಿಕೆ'ಯನ್ನೇ ಪ್ರಸಾದವಾಗಿ ಕೊಡುತ್ತಿರುವುದು ರೂಢಿ. ಇದು ಮಣ್ಣಿಗೂ ನಾಗನಿಗೂ ಮತ್ತು ಅಲ್ಲಿ ಬದುಕು ಕಟ್ಟಿಕೊಂಡವರಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ.ವೈದಿಕೇತರರ ಆರಾಧನೆಗಳಲ್ಲಿ ಲೋಕದೃಷ್ಟಿ  ಪ್ರಧಾನ. ಹಾಗಾಗಿ ಮೈ ಚರ್ಮ ಸಂಬಂಧಿ ರೋಗಗಳಿಗೆ  ಮಣ್ಣಲ್ಲಿ ಮದ್ದು  ಕಂಡಲ್ಲಿ ಆಶ್ಚರ್ಯವಿಲ್ಲ. ಈ ದೃಷ್ಟಿಯಲ್ಲಿ ಜಗತ್ತಿನಾದ್ಯಂತ ಸಾಮೂಹಿಕವಾಗಿ ಮಣ್ಣಲ್ಲಿ ಉರುಳುವುದಿದೆ. ಹಾಗೆಂದು ಅಲ್ಲಿ ಅವರು ಬ್ರಾಹ್ಮಣರ ಎಂಜಲೆಲೆಯಲ್ಲಿ ಉರುಳುವುದಿಲ್ಲ. ನನ್ನ ತಾಯಿ ಮೈ ಮೇಲಿನ  `ಬಿಳಿಮಚ್ಚೆ'ಗೆ ಗದ್ದೆ ಕೆಸರಲ್ಲಿ ಉರುಳುವಂತೆ ಹೇಳಿದ್ದು, ನಾನು ಉರುಳಿದ್ದು ನನಗಿನ್ನೂ ನೆನಪಿದೆ. ಒಟ್ಟಾರೆ ಈ ಉರುಳುವಿಕೆಯಲ್ಲಿ  ಭೌತಿಕ ಮತ್ತು ಮಾನಸಿಕ ಸೌಖ್ಯದ ಕಲ್ಪನೆ ನಿಜವಿರಬಹುದು.ಇಲ್ಲಿಗೆ ದೈವಿಕತೆಯ ಬಲ ಸೇರಿದರೆ ಅದು ಇನ್ನಷ್ಟು ಗಟ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಬ್ರಾಯನ ಹುತ್ತ ಸಹಿತವಾದ ಬನದ ಬಳಿಯ ಮಣ್ಣಲ್ಲಿ  ಹೊರಳಾಡುವ ಪದ್ಧತಿ ರೂಢಿಯಾಗಿರುವುದು ಸತ್ಯಕ್ಕೆ ಸಮೀಪವಾಗಿದೆ. `ಮಡ್ ಥೆರಪಿ' ಆಯುರ್ವೇದ ಪದ್ಧತಿಯಲ್ಲೂ ಗಮನೀಯ.ಈಗಿನ ಕುಕ್ಕೆಯಲ್ಲಿ  ಪ್ರಸಿದ್ಧ ದೇವನಾಗಿರುವ ಕುಮಾರನಿಗಿಂತ ಪೂರ್ವದಲ್ಲಿ ಈಗ ಹೊರಭಾಗದಲ್ಲಿರುವ ಲಿಂಗರೂಪಿ ಶಿವನಿಗೇ ಪ್ರಾಶಸ್ತ್ಯ. ಸ್ಥಳೈತಿಹ್ಯ ಪ್ರಕಾರ ಮೊದಲು ಲಿಂಗ ಸಿಕ್ಕಿರುವುದು ಮಲೆ ಕುಡಿಯ ಕುಕ್ಕನೆನ್ನುವ ಬಾಲಕನಿಗೆ. ಬಳಿಕ ಇಲ್ಲಿನ ಬೆಟ್ಟ ಗಹ್ವರಗಳಲ್ಲಿ ಸಿದ್ಧಿ ಸಾಧನೆಯ ತಪಸ್ಸಿಗರಾಗಿದ್ದ ಕೌಳ/ನಾಥಸಿದ್ದರು ಬುಟ್ಟಿಯಲ್ಲಿಟ್ಟು ಈ ಲಿಂಗವನ್ನು ಆರಾಧಿಸಿದ್ದರಿಂದ ಕುಕ್ಕೆ ಲಿಂಗವಾಯಿತೆಂದು ಜನಪದರ ಗ್ರಹಿಕೆ. ಮುಂದೆ ಸಂಭವಿಸಿದ್ದೆಲ್ಲ ವೈದಿಕ-ಶೈವ-ವೈಷ್ಣವ ಮತಗಳ ಶ್ರೇಷ್ಟತೆಯ ಪೈಪೋಟಿ.ಇವೆಲ್ಲವನ್ನು ಆದಿ ಕುಕ್ಕೆ ಗುಡಿ-ಗೋಪುರ-ಮಠವೆನ್ನುವ ಸ್ಥಾವರರೂಪಿ ಈಗಿನ ಸುಬ್ರಹ್ಮಣ್ಯವಾದ ಚರಿತ್ರೆಯಲ್ಲಿ ಮತ್ತು ಅಲ್ಲಿನ ಭೌತಿಕ-ಸಾಂಸ್ಕೃತಿಕ ಸಂರಚನೆಗಳಲ್ಲಿ ತಿಳಿಯಲು ಅವಕಾಶವಿದೆ.  ಲಿಖಿತ ಆಕರಗಳಲ್ಲಿ ಕುಕ್ಕೆ 9ನೇ ಶತಮಾನದಷ್ಟು ಹಿಂದಕ್ಕೆ ದಾಖಲಾಗುತ್ತದೆ. ಬಹುಶಃ ಶಂಕರಾಚಾರ‌್ಯರ ತರುವಾಯ ಪ್ರಸಿದ್ಧಿ ಪಡೆದ ಕಾರಣಕ್ಕಾಗಿ ಇರಬೇಕು.ಪ್ರಭು ಶಕ್ತಿ ಮತ್ತು ಮತ ಶಕ್ತಿಗಳ ಅನುಸಂಧಾನದೊಂದಿಗೆ ಊರ್ಜಿತಾವಸ್ಥೆಗೆ ಬಂದಂತೆ ಕುಕ್ಕೆ ಒಂದು ಬಗೆಯ ಸಂಘರ್ಷ ನೆಲೆಯನ್ನುಳಿಸಿಕೊಂಡಿದೆ. ವೈದಿಕ ಪುರಾಣ ಸಹಿತ ಇತರ ಲಿಖಿತ ಚರಿತ್ರೆಯನ್ನುಳಿದಂತೆಯೂ ಕುಕ್ಕೆಗೆ ಪ್ರತ್ಯೇಕ ಮೌಖಿಕವಾದ ಚರಿತ್ರೆಯೂ ಇದೆ. ಕುಕ್ಕೆ ದೇವಸ್ಥಾನದೆದುರು ಕೊಡಿಮರ ಹಾಕುವ ದಂಬೆಕಲ್ಲು ಇದೆ. ಜಾತ್ರೆಯಲ್ಲಿ ಕೊಡಿಮರ ಹಾಕಿ ಧ್ವಜ ಏರಿಸುವ ಕ್ರಮವಿಲ್ಲ. ಬದಲಾಗಿ ಅನ್ನದ ಕೊಪ್ಪರಿಗೆ ಏರಿಸುವುದು ರೂಢಿ.ಮತ ಸಂಬಂಧಿ ಸಂಘರ್ಷಗಳು ಮಧ್ಯಕಾಲಿನ ಕರ್ನಾಟಕದ ಸಂದರ್ಭದಲ್ಲಿ, ಶೈವ-ಬೌದ್ಧ-ಜೈನ-ವೈಷ್ಣವಗಳೊಂದಿಗೆ ಸಂಭವಿಸಿದ್ದು ಸ್ಪಷ್ಟ. ಅದು ಚರಿತ್ರೆಯಲ್ಲಿ ಮಾತ್ರ ಸಾಮರಸ್ಯವೆನ್ನುವ ತಂತ್ರಗಾರಿಕೆಯಲ್ಲಿ ಸಮನ್ವಯವಾಗಿದೆ. ಸಮನ್ವಯವೆನ್ನುವುದು `ಪ್ರಭುತ್ವ' ವನ್ನು ಬಲಿಷ್ಠವಾಗಿಸುವ  ಹಿಡನ್ ಅಜೆಂಡ . ರಾಜಕಾರಣಿಗಳ ಒಲವು ಗಳಿಸಿದ ಮತಗಳು ತಮ್ಮ ತತ್ವಗಳನ್ನು ಜಾಣ್ಮೆಯಿಂದ ಬಹುಸಂಖ್ಯಾತ ಸಮುದಾಯದೆಡೆ ಮುಟ್ಟಿಸುವಲ್ಲಿ ಸಫಲವಾಗಿವೆ.ಶಂಕರಾಚಾರ‌್ಯರ ಕಾಲದಲ್ಲಿ ವೈದಿಕ ವೇದಾಂತವನ್ನು ಕ್ರಮಬದ್ಧಗೊಳಿಸಿದ್ದು, ಭಾಗವತ ಮತವನ್ನು ಖಂಡಿಸಿದ್ದು, ಶೈವ ಶಾಖೆಗಳಾದ ಕಾಳಾಮುಖ, ಕಾಪಾಲಿಕ, ಲಕುಲೀಶ ಪಾಶುಪತಗಳನ್ನು ಸಾತ್ವಿಕ ನೆಲೆಯಲ್ಲಿ ಶೈವ-ಶಾಕ್ತ ಕೇಂದ್ರಗಳಲ್ಲಿ ಸಮನ್ವಯ ಗೊಳಿಸಿದ್ದು/ ಸ್ಥಾನಾಂತರಗೊಳಿಸಿದ್ದು; ಇದಾದ ಬಳಿಕ ಭಾಗವತ ಮತವನ್ನು ಕಟುವಾಗಿ ಖಂಡಿಸಿದ್ದನ್ನು ಭಾಗವತ ಮಧ್ವರು ಮತ್ತು ಅನುಯಾಯಿಗಳು ಹರಿ ಸರ್ವೋತ್ತಮನೆಂದು ಸಮರ್ಥಿಸಿ ರಕ್ಷಿಸಿದ್ದೆಲ್ಲವೂ ಕರ್ನಾಟಕದಲ್ಲಿ ಗತಿಸಿದ ಮೌನ ಸಂಘರ್ಷದ ಮಾದರಿಗಳಾಗಿವೆ. ಈ ಪ್ರಕ್ರಿಯೆಯ ಛಾಪು ದ.ಕ. ಜಿಲ್ಲೆಯ ಕುಕ್ಕೆಯಲ್ಲೂ ಖಚಿತವಾಗಿ ಗೋಚರಿಸುತ್ತಿದೆ.ಕುಕ್ಕೆಯಲ್ಲಿ  ನಾಗಾರಾಧನೆಯನ್ನುಳಿದಂತೆ ಪ್ರಾಚೀನವಾದ ಆರಾಧನೆಯೆಂದರೆ ಶೈವದ ಕೌಳ/ನಾಥಸಿದ್ಧರ ಲಿಂಗಾರಾಧನೆ. ಬಳಿಕ ಶಂಕರಾಚಾರ‌್ಯರ ಪಂಚಾಯತ ಪ್ರಕಾರದ ಶಿವ-ಶಕ್ತಿ, ಗಾಣಪತ್ಯ-ಶಾಕ್ತಾರ, ವಿಷ್ಣು ಆರಾಧನೆ. ಆನಂದ ತೀರ್ಥರಾಗಿದ್ದ ಮಧ್ವಾಚಾರ್ಯರು ತನ್ನ ಜೀವಿತದಲ್ಲಿ ಉಡುಪಿಯಿಂದ ಮೊದಲುಗೊಂಡು ಕುಕ್ಕೆಯ ಮೂಲಕ ಸಾಂಸ್ಕೃತಿಕ ತುಳುನಾಡಿನ ದಕ್ಷಿಣದ ಕುಂಬ್ಳೆಯವರೆಗೆ ಎರಡು ಬಾರಿ ಮತ ದಿಗ್ವಿಜಯ ನಡೆಸಿದ್ದಾರೆ.ಇದರ ಪ್ರಧಾನ ಉದ್ದೇಶ ಕಾಳಾಮುಖ/ಸ್ಥಾನಪತಿಗಳ ಮೂಲಕ ಶಂಕರರು ಸ್ಥಾಪಿಸಿದ ಶಿವಸ್ಥಾನಗಳಲ್ಲಿ  ವಿಷ್ಣು  ಸಾನ್ನಿಧ್ಯಗಳನ್ನು ನೆಲೆಗೊಳಿಸುವ, ಶಿವ ಮಂಗಳಗಳನ್ನು ವಿಷ್ಣು ಮಂಗಳಗಳನ್ನಾಗಿ ಸುವುದಾಗಿತ್ತು. ಇದೇ ಕಾಲಘಟ್ಟದಲ್ಲಿ ತುಳುವರ ಭೂತಾರಾಧನೆಯಲ್ಲಿ ವೈಷ್ಣವ ನಿಷ್ಪನ್ನ ಉಲ್ಲಾಕುಳೆನ್ನುವ ದೈವಗಳು ಸೇರ್ಪಡೆಯಾದುದು ಕಾಕತಾಳೀಯವಲ್ಲ; ಉದ್ದೇಶಿತ.  ಈ ಮೂಲಕ ವೈಷ್ಣವ ಭಾಗವತ ತತ್ವವನ್ನು ವೈದಿಕೇತರ ಸಮುದಾಯಗಳಿಗೆ ತಲುಪಿಸುವ ಪ್ರಯತ್ನವಾಗಿದೆ. ಇಂತಹ ಹಲವು ಸಾಂಸ್ಕೃತಿಕ ಮಾದರಿಗಳಲ್ಲಿ ಜನರ ನಂಬಿಕೆಯನ್ನು ವೈದಿಕರು ಸ್ವರಕ್ಷಣೆಗಾಗಿ ಬಳಸಿಕೊಂಡದ್ದು ಗೋಚರಿಸುತ್ತದೆ.ಆದಿ ಕುಕ್ಕೆಯ ಮೂಲ ನಾಗಾರಾಧನೆಯ ಹಿಂದಿರುವ ಸಮುದಾಯದ ಲೋಕದೃಷ್ಟಿ, ನಂಬಿಕೆಯನ್ನು ಶಿವಕುಮಾರ ಸುಬ್ರಹ್ಮಣ್ಯನಿಗೆ ಅನ್ವಯಿಸಿ, ಲಿಂಗರೂಪಿ ಶಿವನ ಆರಾಧನೆಯಾಗುತ್ತಿದ್ದ ಸ್ಥಳದಲ್ಲಿ ಅವನಿಗೆ ಪ್ರಾಶಸ್ತ್ಯ ನೀಡಲಾಗಿದೆ. ಈ ಮೂಲಕ ನಾಗಬನದಲ್ಲಿ ಇದ್ದಿರಬಹುದಾದ  ಮಣ್ಣಿನಲ್ಲಿ ಉರುಳುವ ಆಚರಣೆಯನ್ನು ದೇವಸ್ಥಾನದ ಪ್ರಾಂಗಣಕ್ಕೆ ಸ್ಥಾನಾಂತರಿಸಲಾಗಿದೆ.ಮೂಲದ್ಲ್ಲಲಿಲ್ಲದ  `ಮಡೆಸ್ನಾನ' ಎನ್ನುವ ಒಂದು ಸಮುದಾಯಕ್ಕೆ ಸಂಬಂಧಿಸಿದ ಮಡಿ-ಶ್ರೇಷ್ಠತೆಯ ಪರಿಕಲ್ಪನೆಯನ್ನು ಕಾಲಾನುಗತಿಯಲ್ಲಿ ಹೊಂದಿಸಲಾಗಿದೆ. ವೇದ ಮೂಲದ ವೈದಿಕರ ಎಂಜಲೆಲೆಯ, ಹಾಸು ಕಲ್ಲಿನ ಪ್ರಾಂಗಣದಲ್ಲಿ ಮಡೆಸ್ನಾನ ನಡೆಯುವುದೇ ಅನೌಚಿತ್ಯ. ಯಾಕೆಂದರೆ ಚರ್ಮದ ಆರೋಗ್ಯ ರಕ್ಷಿಸುವ ರೋಗನಿರೋಧಕ ಸತ್ವ ಎಂಜಲೆಲೆಗಾಗಲೀ, ಕಲ್ಲಿಗಾಗಲಿ ಇರುವುದಕ್ಕಿಂತ ಮಣ್ಣಿಗಿರುವುದೇ ಹೆಚ್ಚು ಸತ್ಯ.ಮತ ಸಂಬಂಧವಾಗಿ ಹಲವು ಸ್ಥಿತ್ಯಂತರದ ಹೊಂದಾಣಿಕೆಯನ್ನು ಕಂಡ ಶೈವ ಕೇಂದ್ರವಾಗಿರುವ ಕುಕ್ಕೆಯಲ್ಲಿ ವಾಸ್ತವವಾಗಿ ಪ್ರಸಾದರೂಪವಾಗಿ ಭಕ್ತರಿಗೆ ಸಲ್ಲಬೇಕಾದ ಶಿವಪ್ರಿಯ ವಿಭೂತಿ, ಬಿಲ್ವ, ತುಂಬೆ ಹೂವಿನ ಬದಲು ಹರಿಪ್ರಿಯ ಗಂಧ, ತುಳಸಿಯನ್ನು ಹೊಂದಿಸಲಾಗಿರುವಾಗ `ಮಡೆಸ್ನಾನ' ಎನ್ನುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿರಾಕರಿಸುವುದು ಕಷ್ಟವೇನಲ್ಲ. ವ್ಯಕ್ತಿ ಸ್ವಾಭಿಮಾನಕ್ಕೆ ಪೂರಕವಾಗಿರುವ ಪ್ರಜಾಪ್ರಭುತ್ವವಾದಿ ಆಧುನಿಕ ಸಂದರ್ಭಕ್ಕೆ ಮಡೆಸ್ನಾನ ಗೌರವ ತರುವಂತಹದ್ದಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry