ಭಾನುವಾರ, ಜೂನ್ 13, 2021
20 °C

ಕೊನೆ ಕಾಣದ ಉಕ್ರೇನ್ ಬಿಕ್ಕಟ್ಟು

ಸುಧೀಂದ್ರ ಬುಧ್ಯ,ಸಿನ್ಸಿನಾಟಿ,ಅಮೆರಿಕ Updated:

ಅಕ್ಷರ ಗಾತ್ರ : | |

ಉಕ್ರೇನಿನ್‌ನಲ್ಲಿ ಕಳೆದ ನವೆಂಬರ್ ತಿಂಗಳಿಂದ ನಡೆದ ಬೆಳವಣಿಗೆಗಳು ಈಗ ಆತಂಕಕಾರಿ ಸ್ಥಿತಿ ತಲುಪಿದೆ.  ರಷ್ಯಾ ತನ್ನ ಸೇನೆಯನ್ನು ಉಕ್ರೇನ್ ಆಡಳಿತಕ್ಕೆ ಒಳಪಟ್ಟ ಕ್ರಿಮಿಯಾ ದ್ವೀಪದಲ್ಲಿ ಜಮಾವಣೆ ಮಾಡಿದ್ದು, ಕಳೆದ ಗುರುವಾರ ವಿಶ್ವಸಂಸ್ಥೆಯ ವಿಶೇಷ  ಪ್ರತಿನಿಧಿ ಅಲ್ಲಿಗೆ ಭೇಟಿ ನೀಡಿದಾಗ 10ರಿಂದ 15 ಮಂದಿ ಶಸ್ತ್ರಧಾರಿಗಳು ಏಕಾಏಕಿ ಬಂದು ಅವರ ಎದುರು ನಿಂತಿದ್ದರು. ಬೆದರಿದ ಅವರು ಓಡಿ ಹೋಗಿ ಕೆಫೆಯೊಂದರ ಒಳಗೆ ಅವಿತುಕೊಂಡ ಘಟನೆ ನಡೆದಿತ್ತು. ಇದಾದ ಬಳಿಕ ಅವರನ್ನು ಅಪಹರಿಸಲಾಗಿದೆ ಎಂದು ಗಾಳಿಸುದ್ದಿ ಹರಡಿ ಆತಂಕ ಉಂಟಾಗಿತ್ತು.ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಲ್ಲಿನ ಪರಿಸ್ಥಿತಿಯಿಂದ ಕಳವಳಗೊಂಡು ಮೂರು ದಿನಗಳಲ್ಲೇ ನಾಲ್ಕು ಬಾರಿ ಸಭೆ ಸೇರಿ ಚರ್ಚಿಸಿತ್ತು. ಇದಾದ ಬಳಿಕ ಅಮೆರಿಕ ಅಧ್ಯಕ್ಷ ಒಬಾಮ ‘ರಷ್ಯಾ ಉಕ್ರೇನಿನ ಮೇಲೆ ಅತಿಕ್ರಮಣ ಮಾಡುವುದು ಸರಿಯಲ್ಲ, ರಷ್ಯಾ ತಪ್ಪು ಹೆಜ್ಜೆ ಇಡುತ್ತಿದೆ. ಉಕ್ರೇನನ್ನು ಅದರಷ್ಟಕ್ಕೆ ಬಿಟ್ಟು ಕ್ರಿಮಿಯಾದಿಂದ ಸೇನೆಯನ್ನು ವಾಪಾಸ್ ಕರೆಸಿಕೊಳ್ಳದಿದ್ದರೆ ಆರ್ಥಿಕ, ವ್ಯಾವಹಾರಿಕ ದಿಗ್ಬಂಧನ ಹೇರುವ ಬಗ್ಗೆ ಗಂಭೀರವಾಗಿ ಯೋಚಿಸಲಾಗುವುದು’ ಎಂದು ಹೇಳಿದ್ದರು. ಇತ್ತೀಚಿನ ಬೆಳವಣಿಗೆ ಎಂದರೆ, ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಪರಿಹಾರಕ್ಕೆ ಆಸಕ್ತಿ ತೋರಿದ್ದಾರೆ.ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಆದರೆ ಉಕ್ರೇನ್ ಸಹಾಯ ಯಾಚಿಸಿದ್ದರಿಂದಲೇ ನಾವು ಮಧ್ಯಪ್ರವೇಶಿಸಲು ತೀರ್ಮಾನಿಸಿದ್ದು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಜೊತೆಗೆ ರಷ್ಯಾ ಯುದ್ಧ ಕ್ಷಿಪಣಿಗಳ ಪರೀಕ್ಷೆಯನ್ನು ಮುಂದುವರಿಸಿದೆ. ಅಮೆರಿಕ ಸದ್ಯದಲ್ಲಿಯೇ ನೆರೆಯ ಪೋಲಂಡ್‌ಗೆ 12 ಎಫ್–16 ಯುದ್ಧ ವಿಮಾನಗಳನ್ನು ಮತ್ತು 300 ಸೈನಿಕರನ್ನು ಕಳುಹಿಸಲಿದೆ. ಇದರ ಉದ್ದೇಶ ಸಮರಾಭ್ಯಾಸ ಎಂದು ಅದು ಹೇಳಿಕೊಂಡಿದ್ದರೂ ಉಕ್ರೇನ್ ಬೆಳವಣಿಗೆ ಗಮನಿಸಿದರೆ ಅದನ್ನು ಬೇರೆ ಉದ್ದೇಶಕ್ಕೆ ಬಳಸುವ ಸಾಧ್ಯತೆ ಇದೆ ಎಂದು  ಪೋಲಂಡಿನ ರಕ್ಷಣಾ ಸಚಿವರೇ ಪರೋಕ್ಷವಾಗಿ ಹೇಳಿದ್ದಾರೆ.ಜಗತ್ತಿನ ಎರಡು ದೈತ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ ಹೀಗೆ ಪರಸ್ಪರ ಮುಖ ಕೆಂಪು ಮಾಡಿಕೊಂಡಿರುವುದಕ್ಕೆ ಕಾರಣವಾದ ಉಕ್ರೇನ್ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕಳೆದ ಹತ್ತು ವರ್ಷಗಳಲ್ಲಿ ಉಕ್ರೇನಿನಲ್ಲಾದ ಬದಲಾವಣೆಗಳತ್ತ ಗಮನ ಹರಿಸಬೇಕು. ಉಕ್ರೇನಿನಲ್ಲಿ ಈ ಹತ್ತು ವರ್ಷಗಳಲ್ಲೇ ಎರಡು ಕ್ರಾಂತಿಗಳಾಗಿವೆ. 2004ರಲ್ಲಿ ನಡೆದ ಅಲ್ಪಾವಧಿಯ, ಆದರೆ ಮಹತ್ವದ ಬದಲಾವಣೆಗೆ ಕಾರಣವಾದ ‘ಕಿತ್ತಳೆ ಕ್ರಾಂತಿ’ ಮತ್ತು 2013ರ ನವೆಂಬರ್‌ನಲ್ಲಿ ಪ್ರಾರಂಭವಾಗಿ ಇದೀಗ ಯುದ್ಧದ ಭೀತಿ ತಂದೊಡ್ಡಿರುವ ಜನಾಕ್ರೋಶ ಮತ್ತು ಅರಾಜಕತೆ. ಈಗ ಉಂಟಾಗಿರುವ ಉಕ್ರೇನ್ ಬಿಕ್ಕಟ್ಟು ಮೇಲ್ನೋಟಕ್ಕೆ ಅಮೆರಿಕ ಬೆಂಬಲಿತ ಯುರೋಪ್ ಒಕ್ಕೂಟ ಮತ್ತು ರಷ್ಯಾ ನಡುವಿನ ಪ್ರತಿಷ್ಠೆಯ, ಮುಸುಕಿನ ಗುದ್ದಾಟದ ಭಾಗವಾಗಿ ಹೊರಹೊಮ್ಮಿದ ಸಂಕಷ್ಟದಂತೆ ಭಾಸವಾದರೂ ಇದಕ್ಕೆ ಪುಷ್ಟಿ ನೀಡುವ ಇತರ ಸಂಗತಿಗಳೂ ಇವೆ.ಉಕ್ರೇನ್ ಹಿನ್ನೆಲೆ

ಉಕ್ರೇನ್ ಪದದ ಅರ್ಥವೇ ಗಡಿಪ್ರದೇಶ ಎಂಬುದಾಗಿದೆ. 1991ರಲ್ಲಿ ಸೋವಿಯತ್ ಒಕ್ಕೂಟ ಒಡೆದು ಬಿಡಿ ರಾಷ್ಟ್ರಗಳು ನಿರ್ಮಾಣವಾದಾಗ ಸ್ವಾತಂತ್ರ್ಯ ಗಳಿಸಿಕೊಂಡ ನಾಲ್ಕೂವರೆ ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ರಾಷ್ಟ್ರ ಉಕ್ರೇನ್. ಉಕ್ರೇನಿನ ಪೂರ್ವ ಮತ್ತು ಉತ್ತರ ಭಾಗಗಳು ರಷ್ಯಾಕ್ಕೆ ಅಂಟಿಕೊಂಡೇ ಇವೆ. ಪಶ್ಚಿಮದಲ್ಲಿ ಪೋಲಂಡ್ ತಾಗಿಕೊಂಡಿದೆ. ರೊಮೇನಿಯಾ, ಸ್ಲೊವೇಕಿಯಾ, ಹಂಗೇರಿ, ಬೆಲಾರಸ್ ದೇಶಗಳು ಉಕ್ರೇನಿಗೆ ತಗುಲಿ ಕೊಂಡಿರುವ ಇತರ ದೇಶಗಳು. ಉಕ್ರೇನಿನ ಈ ಭೌಗೋ­ಳಿಕ ಸಂರಚನೆ ಇಡೀ ದೇಶವನ್ನು ಭಾಷೆ, ವ್ಯವಹಾರ, ಸಂಬಂಧಗಳ ದೃಷ್ಟಿಯಿಂದ ಎರಡು ವಿಭಾಗಗಳನ್ನಾಗಿಸಿದೆ.ಪಶ್ಚಿಮ ಉಕ್ರೇನ್ ಪೋಲಂಡ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ರಷ್ಯನ್ನರೇ ಅಧಿಕ ಸಂಖ್ಯೆಯಲ್ಲಿರುವ ಪೂರ್ವ ಮತ್ತು ಉತ್ತರ ಉಕ್ರೇನ್ ರಷ್ಯಾದೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತದೆ. ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದಲೂ ಉಕ್ರೇನ್ ಎರಡು ಭಾಗವಾಗಿಯೇ ಕಾಣುತ್ತದೆ. ಪಶ್ಚಿಮ ಉಕ್ರೇನ್ ಜನರಲ್ಲಿ ಹೆಚ್ಚಿನವರ ಭಾಷೆ ಉಕ್ರೇನಿಯನ್ ಆಗಿದ್ದರೆ, ರಷ್ಯಾ ಗಡಿಯಲ್ಲಿರುವ ಜನರ ಭಾಷೆ ರಷ್ಯನ್ ಆಗಿದೆ. ಈ ವಿಭಾಗಗಳು ಏರ್ಪಟ್ಟಿರುವುದರಿಂದ ದೇಶ ರೂಪುಗೊಂಡು ಸುಮಾರು 25 ವರ್ಷವಾಗುತ್ತಾ ಬಂದಿದ್ದರೂ ಆಂತರಿಕ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದರ ಜೊತೆಗೆ ಆಡಳಿತಾತ್ಮಕವಾಗಿ ಉಕ್ರೇನ್ ಒಮ್ಮೆ ರಷ್ಯಾ ಮಾದರಿಯ ಕಮ್ಯುನಿಸ್ಟ್‌ಸರ್ವಾಧಿಕಾರ ವ್ಯವಸ್ಥೆ­ಯತ್ತಲೂ ಮತ್ತೊಮ್ಮೆ ಪಶ್ಚಿಮ ದೇಶಗಳ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆಯ ಕಡೆಗೂ ವಾಲುತ್ತಾ ಒಂದು ಸ್ಥಿರ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಲ್ಲಿ ಸೋತಿದೆ.2004ರಲ್ಲಿ ನಡೆದ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯ ವೇಳೆ ದೊಡ್ಡ ಜನಾಂದೋಲನವೊಂದು ಪ್ರಾರಂಭವಾಗಿತ್ತು. ಪ್ರಸ್ತುತ ಉಕ್ರೇನ್‌ನ  ಪದಚ್ಯುತ ಅಧ್ಯಕ್ಷ ವಿಕ್ಟರ್ ಯನು ಕೋವಿಚ್ ಆಗ ಪ್ರಧಾನಿಯಾಗಿದ್ದರು ಮತ್ತು ಲಿಯೋನಿಡ್ ಕುಚ್ಮಾ ಅಧ್ಯಕ್ಷರಾಗಿದ್ದರು. ಯನುಕೋವಿಚ್ ಅವರ ದುರಾಡಳಿತ ಮತ್ತು ಉಕ್ರೇನಿನ ಆರ್ಥಿಕ ಸಂಕಷ್ಟದಿಂದ ಬೇಸತ್ತ ಜನ ರಸ್ತೆಗೆ ಧುಮುಕಿ ಪ್ರತಿಭಟಿಸಿದ್ದರು. ಸುಮಾರು ಎರಡು ತಿಂಗಳು ನಿರಂತರವಾಗಿ ಪ್ರತಿಭಟನೆಗಳು ನಡೆದವು. ರಷ್ಯಾ ಪರ ಒಲವುಳ್ಳ ಯನುಕೋವಿಚ್ ಸರ್ವಾಧಿಕಾರಿ ಧೋರಣೆಗೆ ಹೆಸರಾದವರು. ಪತ್ರಿಕಾ ಸ್ವಾತಂತ್ರ್ಯವನ್ನು  ಹತ್ತಿಕ್ಕಿದವರು.ಪ್ರಸಿದ್ಧ ಪತ್ರಕರ್ತರೊಬ್ಬರ ಕೊಲೆಯ ಹಿಂದೆಯೂ ಅವರ ಕೈವಾಡವಿದೆ ಎಂಬ ಆರೋಪವಿತ್ತು. 2004ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯನುಕೋವಿಚ್ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ್ದರು. ಆಗ ಪ್ರತಿಸ್ಪರ್ಧಿ ಅಭ್ಯರ್ಥಿ ವಿಕ್ಟರ್ ಯೊಶ್ಚೆಂಕೊರಿಗೆ ವಿಷ ಉಣಿಸಿ ಕೊಲ್ಲುವ ಪ್ರಯತ್ನ ನಡೆದಿತ್ತು. ವಿಷ ಪ್ರಾಶನದಿಂದ ಯೊಶ್ಚೆಂಕೊ ತೀವ್ರ ಅಸ್ವಸ್ಥಗೊಂಡಿದ್ದರು. ಆಗ ಆಡಳಿತವನ್ನು ದುರುಪಯೋಗ ಪಡಿಸಿಕೊಂಡ ಯನುಕೋವಿಚ್ ಚುನಾವಣಾ ಅಕ್ರಮಗಳನ್ನು ನಡೆಸಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾದರು.ಆದರೆ ಜನ ಸಿಟ್ಟಿಗೆದ್ದು ಪ್ರತಿಭಟಿಸಿದರು. ವಿಕ್ಟರ್ ಯೊಶ್ಚೆಂಕೊ ಅವರ ನೇತೃತ್ವದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಸ್ವಾತಂತ್ರ್ಯ ಚೌಕದಲ್ಲಿ ಲಕ್ಷಾಂತರ ಜನ ಜಮಾಯಿಸಿದರು. ಬೆಳಕಿನ ಮತ್ತು ಬದಲಾವಣೆಯ ಸಂಕೇತವಾದ ಕಿತ್ತಳೆ ಬಣ್ಣದ ಹಣೆಪಟ್ಟಿ, ಫಲಕಗಳನ್ನು ಹಿಡಿದು, ಅಗತ್ಯ ವಸ್ತುಗಳನ್ನು ಜೊತೆಯಲ್ಲೇ ತಂದು ಸ್ವಾತಂತ್ರ್ಯ ಚೌಕದಲ್ಲೇ ಟೆಂಟು ಎಬ್ಬಿಸಿ ಮೊಕ್ಕಾಂ ಹೂಡಿದರು. ‘ಕಿತ್ತಳೆ ಕ್ರಾಂತಿ’ಯ ಕೊನೆಗೆ ಉಕ್ರೇನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಚುನಾವಣಾ ಅಕ್ರಮಗಳು ಸಾಬೀತಾಗಿ, ಯನುಕೋವಿಚ್‌ರನ್ನು ಪದಚ್ಯುತಿಗೊಳಿಸಿ ಮರು ಚುನಾವಣೆ ನಡೆಸಲಾಯಿತು. ಮರು ಚುನಾವಣೆಯಲ್ಲಿ ವಿಕ್ಟರ್ ಯೊಶ್ಚೆಂಕೊ ಜಯಗಳಿಸಿ ಅಧ್ಯಕ್ಷರಾದರು. ಯೂಲಿಯಾ ಟೈಮೊ­ಶ್ಯಾಂಕೊ ಪ್ರಧಾನಿಯಾಗಿ ಅಧಿಕಾರ ವಹಿಸಿ­ಕೊಂಡರು.ಯೂರೋಪ್ ಒಕ್ಕೂಟದ ಕಡೆ ಒಲವಿದ್ದ ಯಾಶ್ಚೆಂಕೊ ಸುಮಾರು ಐದು ವರ್ಷಗಳ ಕಾಲ ಉಕ್ರೇನ್ ಅಧ್ಯಕ್ಷ­ರಾಗಿದ್ದರಾದರೂ ಸುಧಾರಣೆ­ಗ­ಳೇನೂ ಸಾಧ್ಯವಾಗಲಿಲ್ಲ. ಪೂರ್ವ ಮತ್ತು ಪಶ್ಚಿಮ ಉಕ್ರೇನ್ ಬೆಸೆದುಕೊಳ್ಳಲಿಲ್ಲ. ಆರ್ಥಿಕತೆ ಸುಧಾರಿಸಲಿಲ್ಲ. ಯೊಶ್ಚೆಂಕೋ ಅಧಿಕಾರಾವಧಿಯಲ್ಲೂ ಭ್ರಷ್ಟತೆ, ದುರಾಡಳಿತದ ಮಾತು ಕೇಳಿ ಬಂತು. ರಷ್ಯಾ ಪರ ಒಲವುಳ್ಳ ಗುಂಪಿನ ಪ್ರತಿಭಟನೆಗಳು, ಗಲಭೆಗಳು ಮುಂದುವರಿದವು.ಅಧ್ಯಕ್ಷರಾಗಿ ಯನುಕೋವಿಚ್

ನಂತರ 2010ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯನುಕೋವಿಚ್ ಜಯಗಳಿಸಿ ಉಕ್ರೇನ್ ಅಧ್ಯಕ್ಷರಾದರು. ಸೇಡಿನ ರಾಜಕಾರಣದ ಭಾಗವಾಗಿ ಇಂಧನ ಒಪ್ಪಂದದ ಅಕ್ರಮಕ್ಕೆ ಸಂಬಂಧಿಸಿದಂತೆ ಯೂಲಿಯಾ ಯಾಶ್ಚೆಂಕೊರನ್ನು ಬಂಧಿಸಿ ಏಳು ವರ್ಷಗಳ ಶಿಕ್ಷೆಗೆ ಒಳಪಡಿಸಿದರು. ಉಕ್ರೇನ್ ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಮಾದರಿ ಆಡಳಿತಕ್ಕೆ ಹೊರಳುವಂತಾಯಿತು. ತಮ್ಮ ವಿರುದ್ಧ ಟೀಕಿಸಿದ್ದ ಮಾಧ್ಯಮಗಳನ್ನು ಮಟ್ಟಹಾಕಿದರು, ವೆಬ್‌­ಸೈಟು­ಗಳನ್ನು ಮುಚ್ಚಿಸಿದರು. ಪ್ರಮುಖ ಹುದ್ದೆಗಳಲ್ಲಿ ತಮ್ಮ ನಿಷ್ಠರನ್ನು ಕುಳ್ಳಿರಿಸಿದರು. ಯನುಕೋವಿಚ್ ಮಗನ ಆಸ್ತಿ ನಾಲ್ಕು ವರ್ಷದಲ್ಲಿ ಮೂರು ಪಟ್ಟು ಬೆಳೆಯಿತು.ರಷ್ಯಾದೊಂದಿಗೆ ಇಂಧನ ಒಪ್ಪಂದಕ್ಕೆ ಸಹಿ ಮಾಡಿದರು. ಯೂರೋಪ್ ಒಕ್ಕೂಟವನ್ನು ದೂರವಿಟ್ಟು, ರಷ್ಯಾದೊಂದಿಗೇ ಹೆಚ್ಚು ಗುರುತಿಸಿ­ಕೊಂಡರು. ಈ ಎಲ್ಲಾ ನಡೆಗಳೂ ಪಶ್ಚಿಮ ರಾಷ್ಟ್ರದೆಡೆಗೆ ಒಲವುಳ್ಳ ಉಕ್ರೇನಿಯರನ್ನು ಕೆರಳಿಸಿತು. ಕಳೆದ ನವೆಂಬರಿನಲ್ಲಿ ಯನುಕೊವಿಚ್ ಯೂರೋಪ್ ಒಕ್ಕೂಟ­ದೊಂದಿಗಿನ ಒಪ್ಪಂದ ಮುರಿದದ್ದೇ ನೆಪವಾಗಿ ದಂಗೆಗಳು ಪ್ರಾರಂಭವಾದವು. ಘರ್ಷಣೆಗಳು ನಡೆದು ಸಾವು ನೋವುಗಳಾದವು. ಕೊನೆಗೆ ವಿಕ್ಟರ್ ಯೊಶ್ಚೆಂಕೊ ಪದಚ್ಯುತರಾದರು.ಉಕ್ರೇನಿನ ಅಶಾಂತಿಗೆ ಆ ದೇಶದ ಒಳ ಬೇಗುದಿ, ದುರಾಡಳಿತದ ಜೊತೆ ಬಾಹ್ಯ ಪ್ರಚೋದನೆಗಳೂ ಸೇರಿಕೊಂಡಿವೆ. ಮೊದಲೇ ಭಾಷೆ, ಸಂಸ್ಕೃತಿ, ವ್ಯವಹಾರದ ದೃಷ್ಟಿಯಿಂದ ವಿಭಜನೆ ಗೊಂಡಿದ್ದ ಉಕ್ರೇನನ್ನು ಇತ್ತ ರಷ್ಯಾ ಅತ್ತ ಯೂರೋಪ್ ರಾಷ್ಟ್ರಗಳು ತಮ್ಮ ಪ್ರಭಾವವನ್ನು ವಿಸ್ತರಿಸಲು ಬಳಸಿ ಕೊಂಡವು. ಇತ್ತೀಚಿನ ವರ್ಷಗಳಲ್ಲಿ ಉಕ್ರೇನನ್ನು ತಮ್ಮತ್ತ ಸೆಳೆದುಕೊಳ್ಳಲು ಈ ರಾಷ್ಟ್ರಗಳು ತೀವ್ರ ಒತ್ತಡ ಹೇರಿದ್ದವು. ಉಕ್ರೇನಿನ ಆರ್ಥಿಕ ಸಂಕಷ್ಟಕ್ಕೆ ನೆರವು ನೀಡುವ ಆಮಿಷ ತೋರಿ ರಷ್ಯಾ ತಾನೇ ಮಾಡಿ ಕೊಂಡಿರುವ ಆಗಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ರಾಷ್ಟ್ರಗಳ ಆರ್ಥಿಕ ಒಕ್ಕೂಟ ಇಯು (ಯೂರೇಸಿಯನ್ ಎಕನಾಮಿಕ್ ಯೂನಿಯನ್)ಗೆ ಉಕ್ರೇನನ್ನು ಸೇರುವಂತೆ ಒತ್ತಾಯಿಸಿತು.ಇದಕ್ಕೆ ತಡೆಯಾಗಿ ಯೂರೋಪಿಯನ್ ಒಕ್ಕೂಟದಿಂದಲೂ ಉಕ್ರೇನಿಗೆ ಆಹ್ವಾನ ಬಂತು. ನ್ಯಾಟೋ ಸದಸ್ಯತ್ವ ಮತ್ತು ಅಗತ್ಯ ಹಣಕಾಸಿನ ನೆರವಿನ ಆಮಿಷವೂ ಜೊತೆಯಾಯಿತು. ಉಕ್ರೇನ್ ಒಂದೋ ರಷ್ಯಾದತ್ತ ಅಥವಾ ಯೂರೋಪಿಯನ್ ಒಕ್ಕೂಟದತ್ತ ದೃಢ ಹೆಜ್ಜೆ ಇಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆದರೆ ಆಯ್ಕೆ ಸುಲಭದ್ದಾಗಿರಲಿಲ್ಲ. ಉಕ್ರೇನ್ ಅದಾಗಲೇ ರಷ್ಯಾ ಸಾಲದ ಸುಳಿಯಲ್ಲಿತ್ತು, ಇಂಧನಕ್ಕೂ ಪೂರ್ಣಾವಲಂಬನೆ ರಷ್ಯಾದ ಮೇಲೆಯೇ ಇತ್ತು. ಈ ಬಾಹ್ಯ ಒತ್ತಡಗಳು ಮತ್ತು ಆಮಿಷಗಳು ಒಳಬೇಗುದಿಯನ್ನು ಉಲ್ಬಣಗೊಳಿಸಿದವು.ಇದೀಗ ಉಕ್ರೇನಿಗೆ ಹೆಚ್ಚು ಆಯ್ಕೆಗಳಿದ್ದಂತೆ ಕಾಣುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ರಾಜಕೀಯ ಸ್ಥಿರತೆಯೂ ಸಾಧ್ಯವಾಗುತ್ತಿಲ್ಲ. ಅರಾಜಕತೆ ಮುಂದುವರಿದೇ ಇದೆ. ಜಾಗತಿಕ ಶಕ್ತಿಗಳ ಒತ್ತಡಕ್ಕೆ ಮಣಿದು ರಷ್ಯಾ ಕ್ರಿಮಿಯಾದಿಂದ ಸೇನೆಯನ್ನು ಹಿಂದೆ ಕರೆಸಿಕೊಂಡು, ಎಲ್ಲೆಡೆಯಿಂದಲೂ ಆರ್ಥಿಕ ನೆರವು ಉಕ್ರೇನಿಗೆ ಹರಿದುಬಂದರೆ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಬಹುದು.ಆದರೆ ಉಕ್ರೇನಿನಲ್ಲಿ ಶಾಂತಿ ನೆಲೆಸಬೇಕಾದರೆ ಸಾಂಪ್ರದಾಯಿಕ ರಷ್ಯನ್ ಮತ್ತು ಉಕ್ರೇನಿಗಳ ಮಧ್ಯೆ ಸಾಮರಸ್ಯ ಮೂಡಬೇಕು. ಅದು ಕಷ್ಟವೇ. ಜೊತೆಗೆ ಯೂರೋಪಿಯನ್ ಒಕ್ಕೂಟ ಮತ್ತು ರಷ್ಯಾಗಳು ಉಕ್ರೇನನ್ನು ಅದರಷ್ಟಕ್ಕೆ ಬಿಡಬೇಕು. ಆದರೆ ರಷ್ಯಾ ಅಧ್ಯಕ್ಷ ಪುಟಿನ್ ಸರ್ವಾಧಿಕಾರಿ ಧೋರಣೆಯವರು, ರಷ್ಯಾದ ಹಿಡಿತವನ್ನು ನೆರೆಯ ರಾಷ್ಟ್ರಗಳಲ್ಲಿ ವಿಸ್ತರಿಸಲು ಆಸಕ್ತಿ ತೋರಿದವರು.ರಷ್ಯಾ ಆರು ವರ್ಷಗಳ ಹಿಂದೆ ಜಾರ್ಜಿಯಾ ಮೇಲೆ ದಾಳಿ ಮಾಡಿದ್ದು, ಇದೀಗ ಉಕ್ರೇನಿನ ಮೇಲೆ ಕಣ್ಣಿಟ್ಟಿರುವು­ದನ್ನು ನೋಡಿದರೆ ಆ ರಾಷ್ಟ್ರಕ್ಕೆ ತನ್ನ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವ ಉಮೇದಿದ್ದಂತೆ ತೋರುತ್ತದೆ. ಆ ಉಮೇದಿಗೆ ತಣ್ಣೀರೆರಚಲು ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟಗಳೂ ಪ್ರಯತ್ನಿಸು­ತ್ತವೆ. ಒಟ್ಟಿನಲ್ಲಿ ದೈತ್ಯ ರಾಷ್ಟ್ರಗಳ ವಿಸ್ತರಣೆಯ ದಾಹಕ್ಕೆ, ಕುಮ್ಮಕ್ಕಿಗೆ, ಪ್ರತಿಷ್ಠೆಗೆ, ವ್ಯಾವಹಾರಿಕ ಸ್ವಾರ್ಥಕ್ಕೆ ಪುಟ್ಟ ರಾಷ್ಟ್ರವೊಂದು ನೆಮ್ಮದಿ ಕಳೆದುಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.