ಬುಧವಾರ, ನವೆಂಬರ್ 20, 2019
20 °C

ಕೊಪಣಪುರದ ಸಾಹಿತ್ಯ ಭವನದ ಕಥೆ-ವ್ಯಥೆ

Published:
Updated:

ಕೊಪ್ಪಳ: ತಿರುಳ್ಗನ್ನಡ ನಾಡಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕಟ್ಟಿದ ಸಾಹಿತ್ಯ ಭವನ ಅಕ್ಷರಶಃ ಪಾಳು ಬೀಳುವ ಸ್ಥಿತಿಯಲ್ಲಿದೆ. ನಗರದ ಅಶೋಕ ವೃತ್ತದ ಬಳಿ ಇರುವ ಸಾಹಿತ್ಯ ಭವನದ ದುಃಸ್ಥಿತಿಯ ಕಥೆಯಿದು.ಪಟ್ಟಣಕ್ಕೊಂದು ಆಸ್ತಿಯಾಗಬೇಕಾಗಿದ್ದ ಭವನ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಾಹಿತ್ಯ ಭವನ ಇದ್ದರೂ ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಖಾಸಗಿ, ಸಂಘ ಸಂಸ್ಥೆಗಳ ಸಭಾಭವನವನ್ನು ಆಶ್ರಯಿಸುವ ಅನಿವಾರ್ಯತೆಯಿದೆ.1993ರಲ್ಲಿ ನಗರದಲ್ಲಿ ನಡೆದ 62ನೇ ಅಖಿಲ ಬಾರತ ಸಾಹಿತ್ಯ ಸಮ್ಮೇಳನ ನಡೆದಾಗ ಈ ಭವನಕ್ಕೆ ಶಂಕುಸ್ಥಾಪನೆ ನಡೆದಿತ್ತು. ಅಂದು ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿದ್ದ ರೂ 2 ಲಕ್ಷ ಮೊತ್ತದಲ್ಲಿ ಅಡಿಪಾಯ ಹಾಕಲಾಗಿತ್ತು. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಸರ್ಕಾರ ಸೇರಿದಂತೆ ವಿವಿಧ ಮೂಲಗಳ ನೆರವು ಹರಿದು ಬಂದಿತು.ಈ ಮಧ್ಯೆ ಪರಿಷತ್‌ನ ಜಿಲ್ಲಾ ಘಟಕದೊಳಗೆ ಬಂದ ಭಿನ್ನಮತ, ಸಾಹಿತಿಗಳ ನಡುವಿನ ಗುಂಪುಗಾರಿಕೆ, ಆಡಳಿತ ವ್ಯವಸ್ಥೆಯ ವಿಳಂಬ ಧೋರಣೆ ಈ ಎಲ್ಲ ಕಾರಣಗಳಿಂದ ಕಾಮಗಾರಿ ಕುಂಟುತ್ತಲೇ ಸಾಗಿತು. ಒಂದು ಹಂತಕ್ಕೆ ನಿರ್ಮಾಣವಾದ ಭವನ ತಕ್ಕಮಟ್ಟಿಗೆ ಸಾಹಿತ್ಯಿಕ ಚಟುವಟಿಕೆಗಳಿಗೆ ತೆರೆದುಕೊಂಡಿತಾದರೂ 2011ರಲ್ಲಿ ನಡೆದ ಗಂಗಾವತಿ ಸಾಹಿತ್ಯ ಸಮ್ಮೇಳನದ ಬಳಿಕ ಸಂಪೂರ್ಣ ನವೀಕರಣಗೊಂಡು ಕಂಗೊಳಿಸಿತು.ಈಗ ಹೀಗಿದೆ: ಈಗ ಭವನ ನಿರ್ವಹಣೆ ಮಾಡುವವರೇ ಇಲ್ಲವಾಗಿದೆ. ಅಪರೂಪಕ್ಕೊಂದು ಕಾರ್ಯಕ್ರಮಗಳಾಗುತ್ತವೆ. ಆಗ ಆಯೋಜಕರೇ ಇಡೀ ಭವನವನ್ನು ಸ್ವಚ್ಛಗೊಳಿಸಿ ತಮಗೆ ಬೇಕಾದಂತೆ ವ್ಯವಸ್ಥೆಗೊಳಿಸಬೇಕು. ಉಳಿದ ವೇಳೆ, ಮೂತ್ರ ವಿಸರ್ಜನೆಗೆ, ಕುಡುಕರಿಗೆ, ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವವರಿಗೆ ತಾಣವಾಗಿದೆ.ಕಿತ್ತು ಹೋದ ಛಾವಣಿ: ಛಾವಣಿಯ ಸಿಮೆಂಟ್ ಕಿತ್ತು ಸರಳುಗಳು ಗೋಚರಿಸುತ್ತಿವೆ. ಕಿಟಕಿ ಗಾಜುಗಳು ಒಡೆದಿವೆ. ಕೃತಕ ಅಲಂಕಾರಿಕ ಛಾವಣಿಯ ಥರ್ಮಾಕೋಲ್ ತುಂಡುಗಳು ಕಿತ್ತುಹೋಗಿವೆ. ವಿದ್ಯುತ್ ವ್ಯವಸ್ಥೆ ಇಲ್ಲ. ಶೌಚಾಲಯದ ದುರವಸ್ಥೆ ಕೇಳುವುದೇ ಬೇಡ.ತಳಮಹಡಿಯ ಪಾರ್ಕಿಂಗ್ ಜಾಗ ಮೂತ್ರದೊಡ್ಡಿಯಾಗಿದೆ. ಭವನದ ಕೀಲಿ ಜಿಲ್ಲಾಡಳಿತದ ಬಳಿಯಿದೆ. ನಿವೇಶನ ನಗರಸಭೆ ಒಡೆತನದಲ್ಲೇ ಇದೆ. ಭವನ ನಿರ್ಮಾಣಕ್ಕೆ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಿತ್ತು. ಹೀಗೆಲ್ಲಾ ಇದ್ದರೂ ಇದಕ್ಕೆ ನಿರ್ದಿಷ್ಟ `ಒಡೆಯರು' ಯಾರೂ ಇಲ್ಲ ಎಂದು ಹಿರಿಯ ಸಾಹಿತಿಯೊಬ್ಬರು ಹೇಳುತ್ತಾರೆ.ನಗರದಲ್ಲಿ ನಿರ್ದಿಷ್ಟ ನಗರಸಭಾ ಭವನವಾಗಲಿ, ಸಾಂಸ್ಕೃತಿಕ ಚಟುವಟಿಕೆಗೆ ಯೋಗ್ಯವೆನಿಸುವ ಕೈಗೆಟಕುವ ಭವನಗಳು ಇಲ್ಲ. ಜಿಲ್ಲಾಡಳಿತ, ನಗರಸಭೆ, ಇನ್ನಾದರೂ ಲಕ್ಷ್ಯವಹಿಸಿ ಪಾಳು ಬಿದ್ದಿರುವ ಭವನಕ್ಕೆ ಕಾಯಕಲ್ಪ ಕೊಡಬೇಕು ಎಂದು ಸಾಹಿತ್ಯಾಭಿಮಾನಿಗಳು ನಿರೀಕ್ಷಿಸಿದ್ದಾರೆ.ಮೂಲಸೌಲಭ್ಯ ಇಲ್ಲ

ನೋಡಿ ಸಮಾರಂಭ ಆಯೋಜಿಸಲು ನಿನ್ನೆ 6 ಮಂದಿ ಆಳು ತಂದು ಇಡೀ ಭವನ ಸ್ವಚ್ಛಗೊಳಿಸಿದ್ದೇವೆ. ನೀರು, ವಿದ್ಯುತ್, ಧ್ವನಿವರ್ಧಕ ಹೀಗೆ ಸಭಾ ಭವನದಲ್ಲಿರಬೇಕಾದ ಮೂಲಸೌಲಭ್ಯ ಏನೂ ಇಲ್ಲ. ಇಂಥ ಭವನವನ್ನು ಪಾಳು ಬಿಡುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡಿದ್ದಾರೆ.

-ಅಶ್ಪಾಕ್, ಮುಸ್ಲಿಂ ಸಮಾಜದ ಮುಖಂಡ (ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾಗ ಹೇಳಿದ ಮಾತು)ಕನಿಷ್ಠ ನಿರ್ವಹಣೆ ಮಾಡಲಿ

ನಗರಸಭೆಯ 200 ಮಂದಿ ಆಳುಗಳ ಪೈಕಿ ಒಂದಿಬ್ಬರನ್ನಾದರೂ ನಿರ್ವಹಣೆಗೆ ಬಿಡಲಿ. ಒಂದು ಭವನ ನಿರ್ಮಾಣಕ್ಕೆ 1993ರಿಂದ ಸಾಹಿತ್ಯ ಪರಿಷತ್ ಮೂಲಕ ಮನವಿ ಸಲ್ಲಿಸಿ ಒತ್ತಡ ಹೇರಿದ್ದೆ. ಭವನದ ಪರಿಸ್ಥಿತಿ ನೋಡುವಾಗ ನೋವೆನಿಸುತ್ತದೆ. ಆಡಳಿತಾತ್ಮಕವಾಗಿ ಭವನ ನಿರ್ದಿಷ್ಟವಾಗಿ ಯಾರಿಗೆ ಸೇರಿದ್ದು ಎಂಬ ಗೊಂದಲದ ಕಾರಣ ಸಾಹಿತ್ಯ ಪರಿಷತ್, ಸಾಹಿತ್ಯಾಭಿಮಾನಿಗಳು ಅಸಹಾಯಕರಾಗಿದ್ದೇವೆ.

- ಮಹಾಂತೇಶ ಮಲ್ಲನಗೌಡರ್, ಹಿರಿಯ ಸಾಹಿತಿ

ಪ್ರತಿಕ್ರಿಯಿಸಿ (+)