ಶುಕ್ರವಾರ, ಜೂನ್ 18, 2021
28 °C

ಕೊಪ್ಪಳ:ಗ್ಯಾಸ್ ಟ್ರಬಲ್

ಭೀಮಸೇನ ಚಳಗೇರಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: `ಬರಗಾಲದಲ್ಲಿ ಅಧಿಕ ಮಾಸ ಬಂತು~ ಎಂಬ ಗಾದೆ ಮಾತು ನಗರದಲ್ಲಿ ಉದ್ಭವಿಸಿರುವ ಅಡುಗೆ ಅನಿಲ ಸಿಲಿಂಡರ್ ಸಮಸ್ಯೆಯನ್ನು ವಿವರಿಸುತ್ತದೆ.ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ ವಿತರಣೆ ಸಮಸ್ಯೆ  ಮೊದಲಿನಿಂದಲೂ ಇದೆ. ಅಕ್ರಮ ಸಂಪರ್ಕ ಮತ್ತು ವಿತರಣಾ ಏಜೆನ್ಸಿ ಒಂದೇ ಇರುವ ಕಾರಣ ಸಿಲಿಂಡರ್‌ಗಳ ವಿತರಣೆ ಸಮರ್ಪಕವಾಗಿಲ್ಲ. ಹೀಗಾಗಿ ನಗರದಲ್ಲಿ ಈ ಸಂಬಂಧ ಪದೇಪದೇ ಪ್ರತಿಭಟನೆ, ಸಾರ್ವಜನಿಕರ ದೂರು ಸಾಮಾನ್ಯ. ಇಂತಹ ಪರಿಸ್ಥಿತಿ ಇರುವಾಗ ಗ್ಯಾಸ್ ಟ್ಯಾಂಕರ್‌ಗಳ ಮಾಲಿಕ ಮುಷ್ಕರ ಆರಂಭವಾಗಿರುವುದು ಸಮಸ್ಯೆಯನ್ನು ಮತ್ತಷ್ಟೂ ಜಟಿಲಗೊಳಿಸಿದೆ.ನಗರದಲ್ಲಿ 18,339 ಮಂದಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಗ್ರಾಹಕರಿದ್ದಾರೆ. 575 ಜನ ಗ್ರಾಹಕರು ವಾಣಿಜ್ಯ ಸಿಲಿಂಡರ್ ಬಳಸುತ್ತಾರೆ. ವಸತಿ ನಿಲಯಗಳು ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ 633 ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ವಿತರಣಾ ಏಜೆನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಹಾಯಕ ವ್ಯವಸ್ಥಾಪಕ ಅಕ್ಬರ್ ಆಲಂ ಹೇಳುತ್ತಾರೆ.ಒಂದು ಲಾರಿಯಲ್ಲಿ 290 ಸಿಲಿಂಡರ್‌ಗಳಿರುತ್ತವೆ. ಪ್ರತಿದಿನ ಇಂತಹ ಎರಡು ಲಾರಿಗಳಷ್ಟು ಸಿಲಿಂಡರ್‌ಗಳನ್ನು ಪೂರೈಕೆ ಮಾಡಿದರೆ ವಿತರಣೆಗೆ ತೊಂದರೆ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎರಡು ದಿನಗಳಿಗೆ ಒಂದು ಲೋಡ್ ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ಆದರೆ, ಈಗ ಅಡುಗೆ ಅನಿಲ ಸಾಗಾಣಿಕೆದಾರರ ಮುಷ್ಕರ ಆರಂಭಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಗಾಗಿದೆ ಎಂದು ಹೇಳುತ್ತಾರೆ.ಈ ಮೊದಲು ಹೊಸ ಸಿಲಿಂಡರ್‌ಗಾಗಿ ನೋಂದಣಿ ಮಾಡಿಸಿದ ಗ್ರಾಹಕರಿಗೆ ಒಂದು ವಾರ ಇಲ್ಲವೇ 10 ದಿನಗಳ ಒಳಗಾಗಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು. ಈಗ ಸಿಲಿಂಡರ್‌ಗಳ ಪೂರೈಕೆ ಸಮರ್ಪಕವಾಗಿಲ್ಲ. ಆದರೆ, ನೋಂದಣಿಯೂ ನಿಂತಿಲ್ಲ. ಹೀಗಾಗಿ ಮುಷ್ಕರ ಮುಗಿದ ನಂತರವೂ ಪರಿಸ್ಥಿತಿ ಸುಧಾರಿಸಲು ಬಹಳ ದಿನಗಳು ಬೇಕಾಗುತ್ತವೆ ಎಂದು ವಿವರಿಸುತ್ತಾರೆ.ಎರಡು ತಿಂಗಳು ಹಿಂದೆ ಇದೇ ರೀತಿ ಅನಿಲ ಸಾಗಾಣಕೆದಾರರು ಮುಷ್ಕರ ನಡೆಸಿದಾಗ ಸಿಲಿಂಡರುಗಳು ಪೂರೈಕೆಯಲ್ಲಿ ತೊಂದರೆ ಉಂಟಾಗಿತ್ತು. ಆ ತೊಂದರೆಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಈಗ ಮತ್ತೆ ಮುಷ್ಕರ ಆರಂಭವಾಗಿರುವುದರಿಂದ ಪುನಃ ಸಂಕಷ್ಟ ಎದುರಿಸುವಂತಾಗಿದೆ ಎಂದು ನಿಗಮದ ಪ್ರಭಾರಿ ವ್ಯವಸ್ಥಾಕರೂ ಆಗಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅಶೋಕ ಕಲಘಟಗಿ ಹೇಳುತ್ತಾರೆ.ನಗರಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್‌ನ (ಬಿಪಿಸಿಎಲ್) ಅಧಿಕಾರಿಗಳು ಮೊದಲಿನಿಂದಲೂ ಅಡುಗೆ ಅನಿಲ ಸಿಲಿಂಡರ್‌ಗಳ ಸಾಗಾಟದಾರರ ಸಮಸ್ಯೆ ಇದೆ ಎಂಬ ಸಬೂಬು ಹೇಳುವ ಮೂಲಕ ಅಗತ್ಯ ಪ್ರಮಾಣದ ಸಿಲಿಂಡರ್‌ಗಳನ್ನು ಕಳಿಸುತ್ತಿರಲಿಲ್ಲ. ಈಗ ಅನಿಲ ಸಾಗಾಣಿಕೆದಾರರೇ ಮುಷ್ಕರ ನಡೆಸುತ್ತಿರುವಾಗ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗುತ್ತಿರುವುದು ಸಹಜ ಎಂದೂ ಹೇಳುತ್ತಾರೆ.ಆದರೆ, ನಿಗಮವು ಬಿಪಿಸಿಎಲ್‌ಗೆ ಕರಾರುವಾಕ್ಕಾಗಿ ಸಿಲಿಂಡರ್‌ಗಳಿಗೆ ಸಂಬಂಧಿಸಿದಂತೆ ಹಣವನ್ನು ಪಾವತಿಸುತ್ತಿದೆ. ಇಂದು 11,63,493 ರೂಪಾಯಿಗಳನ್ನು ಸಂದಾಯ ಮಾಡಲಾಗಿದೆ. ಇಷ್ಟಾದರೂ ಸಮರ್ಪಕವಾಗಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದು ವಿಷಾದಿಸಿದರು.ಗ್ರಾಹಕರ ದೂರು: ಮೊದಲಿನಿಂದಲೂ ನೊಂದಣಿ ಮಾಡಿಸಿದ 15-20 ದಿನಗಳ ನಂತರ ಸಿಲಿಂಡರ್ ನೀಡಲಾಗುತ್ತಿದೆ. ಈಗ ಮುಷ್ಕರದ ನೆಪದಲ್ಲಿ ಸಿಲಿಂಡರ್ ವಿತರನೆ ಮತ್ತಷ್ಟೂ ವಿಳಂಬವಾದರೆ ನಮ್ಮ ಗತಿ ಏನು ಎಂದು ಕಲ್ಯಾಣನಗರದ ನಿವಾಸಿ ಉಮಾ ಆತಂಕ ವ್ಯಕ್ತಪಡಿಸುತ್ತಾರೆ.ನಗರದಲ್ಲಿರುವ ಅಡುಗೆ ಅನಿಲ ಸಿಲಿಂಡರ್‌ಗಳ ಸಮಸ್ಯೆಯನ್ನು ನಿವಾರಿಸುವ ಗಂಭೀರ ಪ್ರಯತ್ನಗಳೇ ನಡೆದಿಲ್ಲ. ನಗರದಲ್ಲಿ ಒಂದೇ ಏಜೆನ್ಸಿ ಇರುವುದು ಸಮಸ್ಯೆ ಬಿಗಡಾಯಿಸಲು ಕಾರಣ. ಇನ್ನೊಂದು ಏಜೆನ್ಸಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದಿರುವುದು ನಮ್ಮ ದೌರ್ಭಾಗ್ಯ ಎಂದು ಸರದಾರಗಲ್ಲಿ ನಿವಾಸಿ ಗವಿಸಿದ್ಧಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.