ಭಾನುವಾರ, ನವೆಂಬರ್ 17, 2019
21 °C

ಕೊಪ್ಪಳ:ಡೆಂಗೆ ಪ್ರಕರಣ ಹೆಚ್ಚಳ

Published:
Updated:

ಕೊಪ್ಪಳ: ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳು ಕಡಿಮೆ ಎಂಬುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳುತ್ತಾರೆ. ಆದರೆ, ಇದೇ ವಾರದಲ್ಲಿ ಧಾರವಾಡದಲ್ಲಿರುವ ಎಸ್‌ಡಿಎಂ ಆಸ್ಪತ್ರೆಗೆ ತಾಲ್ಲೂಕಿನ ಮೂರು ಮಕ್ಕಳು ಡೆಂಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದ ರಕ್ತ ಪರೀಕ್ಷೆಯಿಂದ ಡೆಂಗೆ ಇರುವುದು ದೃಢಪಟ್ಟ ನಂತರವೇ ಧಾರವಾಡಕ್ಕೆ ಈ ಮಕ್ಕಳನ್ನು ಕರೆದೊಯ್ಯಲಾಗಿದ್ದು, ಇಬ್ಬರು ಈಗಾಗಲೇ ಗುಣಮುಖರಾಗಿದ್ದಾರೆ.ತಾಲ್ಲೂಕಿನ ಬೆಟಗೇರಿ ಗ್ರಾಮದ ಸೌಮ್ಯ ಚೆನ್ನಪ್ಪ ಮಾದಿನೂರು ಎಂಬ 5 ವರ್ಷದ ಬಾಲಕಿ ಹಾಗೂ ವಿನಯಕುಮಾರ್ ಚೆನ್ನಪ್ಪ ನಾಗರೆಡ್ಡಿ ಎಂಬ 6 ವರ್ಷದ ಬಾಲಕ ಧಾರವಾಡದ ಎಸ್‌ಡಿಎಂನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೊಬ್ಬ ಮಗುವಿನ ಕುರಿತು ಹೆಚ್ಚಿನ ವಿವರಗಳ ಲಭ್ಯವಾಗಿಲ್ಲ.

ಈ ಪೈಕಿ ವಿನಯಕುಮಾರ್ ಎಂಬ ಬಾಲಕ ಸಂಪೂರ್ಣ ಗುಣಮುಖನಾಗಿದ್ದು, ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಸೌಮ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ.ಶುಕ್ರವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ವಿನಯಕುಮಾರ್‌ನ ತಾತ ಶಂಕರಪ್ಪ ನಾಗರೆಡ್ಡಿ ಎಂಬುವವರು, ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳ ಹಾವಳಿ ಇಲ್ಲ ಎಂಬ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದರು.ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಜಿಲ್ಲೆಯ, ಅದರಲ್ಲೂ ಕೊಪ್ಪಳ ತಾಲ್ಲೂಕಿನ ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಏ. 4ರಂದು ನನ್ನ ಮೊಮ್ಮಗ ವಿನಯಕುಮಾರ್‌ಗೆ ಜ್ವರ ಕಾಣಿಸಿಕೊಂಡಿತು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆಯನ್ನು ಸಹ ಮಾಡಲಾಯಿತು. ಮಗುವಿಗೆ ಡೆಂಗೆ ಇರುವುದು ಈ ಪರೀಕ್ಷೆಯಿಂದ ದೃಢಪಟ್ಟಿತು. ಪ್ಲೇಟ್‌ಲೆಟ್‌ಗಳ ಸಂಖ್ಯೆ 15 ಸಾವಿರಕ್ಕೆ ಇಳಿದಿತ್ತು' ಎಂದು ವಿವರಿಸಿದರು.ವೈದ್ಯರ ಸಲಹೆ ಮೇರೆಗೆ ಮಗುವನ್ನು ತಕ್ಷಣ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಮಗುವಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತಲ್ಲದೇ, ಗುಣಮುಖನಾದ ಆತನನ್ನು ಬಿಡುಗಡೆ ಸಹ ಮಾಡಲಾಗಿದೆ ಎಂದರು.ಗ್ರಾಮದ ಸೌಮ್ಯ ಎಂಬ ಬಾಲಕಿಯೂ ಡೆಂಗೆಯಿಂದಾಗಿ ಈಗಲೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಬಾಲಕಿಯ ತಾತ ಯಂಕಾರೆಡ್ಡಿ ಮಾದಿನೂರು ತಿಳಿಸಿದರು. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತಲ್ಲದೇ, ಕಡಿಮೆಯಾಗದಿದ್ದಾಗ ಗದಗನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದೆವು. ಅಲ್ಲಿ ನಡೆದ ರಕ್ತ ಪರೀಕ್ಷೆ ನಂತರ ಡೆಂಗೆ ಇರುವುದು ದೃಢಪಟ್ಟ ನಂತರ ಮೊಮ್ಮಗಳನ್ನು ಎಸ್‌ಡಿಎಂಗೆ ದಾಖಲು ಮಾಡಿದ್ದು, ಈಗ ಗುಣಮುಖ ಹೊಂದುತ್ತಿದ್ದಾಳೆ ಎಂದರು.ಇನ್ನು, ವಾರದಲ್ಲಿ ಕನಿಷ್ಠ 4-5 ಮಕ್ಕಳಲ್ಲಿ ಡೆಂಗೆ ಇರುವುದು ಕಂಡು ಬರುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರು ಹೇಳುತ್ತಾರೆ. `ಎನ್‌ಎಸ್-1' ಎಂಬ ಅತ್ಯಾಧುನಿಕ ವಿಧಾನವನ್ನು ಬಳಸಿ ರಕ್ತವನ್ನು ಪರೀಕ್ಷಿಸಲಾಗುತ್ತದೆ. ಇದರಿಂದ ಬಹಳ ಕಡಿಮೆ ಸಮಯದಲ್ಲಿ ಡೆಂಗೆ ಇರುವುದು ದೃಢಪಡುತ್ತದೆ ಎಂದೂ ಹೇಳುತ್ತಾರೆ.ವಾರದಲ್ಲಿ 4-5 ಡೆಂಗೆ ಪ್ರಕರಣಗಳು ವರದಿಯಾಗುತ್ತಿರುವುದು ಗಂಭೀರ ವಿಷಯ. ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂಬುದಾಗಿ ಈಚೆಗೆ ಮಾಧ್ಯಮಗಳ ಮೂಲಕ ಹೇಳಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಕಾಯಾಧ್ಯಕ್ಷ ವಿಜಯಕುಮಾರ ಕವಲೂರು ಆಕ್ಷೇಪ ವ್ಯಕ್ತಪಡಿಸುತ್ತಾರೆ.ಖಾಸಗಿ ವೈದ್ಯರೊಂದಿಗೆ ಸಮನ್ವಯ ಇಲ್ಲದಿರುವುದರಿಂದ ಡೆಂಗೆ ಪ್ರಕರಣಗಳ ಕುರಿತಂತೆ ಆರೋಗ್ಯ ಇಲಾಖೆಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ಕೂಡಲೇ ಗಮನ ಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದೂ ಹೇಳಿದರು.

ಪ್ರತಿಕ್ರಿಯಿಸಿ (+)