ಭಾನುವಾರ, ಮೇ 9, 2021
28 °C

ಕೊಪ್ಪಳ:ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಉಮೇದುವಾರರು ಸೇರಿದಂತೆ ಒಟ್ಟು 12 ಜನ ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಗಿವೆ.ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ, ಕಾಂಗ್ರೆಸ್‌ನ ಕೆ.ಬಸವರಾಜ ಹಿಟ್ನಾಳ್ ಹಾಗೂ ಜೆಡಿಎಸ್‌ನ ಪ್ರದೀಪಗೌಡ ಮಾಲಿಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೆ 8 ಜನ ಪಕ್ಷೇತರರು ಹಾಗೂ ಭಾರತೀಯ ರಿಪಬ್ಲಿಕ್ ಪಾರ್ಟಿಯ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದ್ದಾರೆ.ಇದರೊಂದಿಗೆ ಉಪ ಚುನಾವಣೆಗೆ ಒಟ್ಟು 19 ಜನ ಅಭ್ಯರ್ಥಿಗಳಿಂದ 29 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ನಾಮಪತ್ರಗಳ ಪರಿಶೀಲನೆ ಸೆ.10 ರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಸೆ.12 ಕೊನೆಯ ದಿನವಾಗಿದೆ. ಸೆ. 26ರಂದು ಮತದಾನ ನಡೆಯಲಿದೆ.ನನ್ನ ಅಗ್ನಿ ಪರೀಕ್ಷೆ-ಯಡಿಯೂರಪ್ಪ: `ಇದು ಸಂಗಣ್ಣ ಕರಡಿ ಗೆಲುವಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲ. ಇದು ನನ್ನ ಅಗ್ನಿ ಪರೀಕ್ಷೆ. ನನ್ನ ಅಧಿಕಾರಾವಧಿಯಲ್ಲಿ ಕೈಗೊಂಡ ಜನಪರ ಕಾರ್ಯಗಳ ದೃಷ್ಟಿಯಿಂದ ಇದು ನನ್ನ ಸತ್ವ ಪರೀಕ್ಷೆ. ಹೀಗಾಗಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಗೆಲ್ಲಿಸುವ ಮೂಲಕ ನನ್ನನ್ನೂ ಗೆಲ್ಲಿಸಿ~ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ  ಶುಕ್ರವಾರ ಇಲ್ಲಿ  ಮನವಿ ಮಾಡಿದರು.ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಪರ ಮತ ಯಾಚನೆಗಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ. ನಾನು ಅಪ್ಪಟ ಅಪರಂಜಿ ಇಷ್ಟರಲ್ಲಿಯೇ ಸತ್ಯ ಹೊರಬರುತ್ತದೆ. ನಾನು ನಿರ್ದೋಷಿಯಾಗಿ ಹೊರ ಬರುವ ವಿಶ್ವಾಸವಿದೆ. ಅಪರಂಜಿ ಎಂದಿಗೂ ಅಪರಂಜಿಯೇ ಹೊರತು ಕಬ್ಬಿಣದ ತುಂಡಾಗುವುದಿಲ್ಲ ಎಂದರು.ದಾಳವಾಗಿ ಸಿಬಿಐ ಬಳಕೆ- ಈಶ್ವರಪ್ಪ

ತಮ್ಮ ಪಕ್ಷಕ್ಕೆ ಕಿರುಕುಳ ನೀಡುವ ಸಲುವಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಪರ ಮತ ಯಾಚನೆಗಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಈ ಎರಡೂ ಪಕ್ಷಗಳು ಇದೇ ಮನೋಭಾವ ಮುಂದುವರಿಸಿದರೆ ಬರುವ ಚುನಾವಣೆಗಳಲ್ಲಿ ರಾಜ್ಯದ ಮತದಾರರು ಈ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಬಿಜೆಪಿ ಮುಖಂಡರ ವಿರುದ್ಧ ಸಿಬಿಐಯಿಂದ ದಾಳಿ ಮಾಡಿಸುತ್ತಿರುವುದು ಏಕೆ. ಬೆಳಗಿನ 6 ಗಂಟೆಗೆ ಹೊತ್ತಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಮಾಡಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಸಿಬಿಐ ಯಾವಾಗಿನಿಂದ ಕಾಂಗ್ರೆಸ್‌ನ ಏಜೆಂಟಾಗಿ ಕೆಲಸ ಆರಂಭಿಸಿದೆ ಎಂದು ಪ್ರಶ್ನಿಸಿದರು.ಅಕ್ರಮ ಗಣಿಗಾರಿಕೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾಡಿಲ್ಲವೇ ಎಂದ ಅವರು, ಈ ಸಂಬಂಧ ಆರೋಪ ಎದುರಿಸುತ್ತಿರುವ ಪಕ್ಷದ ಮುಖಂಡರು ಎಲ್ಲ ವ್ಯಾಜ್ಯಗಳಲ್ಲಿ ದೋಷಮುಕ್ತರಾಗಿ ಹೊರ ಬರಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.