ಬುಧವಾರ, ನವೆಂಬರ್ 13, 2019
28 °C

ಕೊಪ್ಪಳ:ಮಲೇರಿಯಾ ಇಳಿಕೆ-ಅಧಿಕಾರಿ

Published:
Updated:

ಕೊಪ್ಪಳ: ಸೊಳ್ಳೆಗಳ ನಿಯಂತ್ರಣಕ್ಕಾಗಿ ಹಾಗೂ ಜಾಗೃತಿಗಾಗಿ ಕೈಗೊಂಡ ಕ್ರಮಗಳ ಫಲವಾಗಿ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಕಡಿವೆುಯಾಗಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಎಂ.ಎಂ.ಕಟ್ಟಿಮನಿ ಹೇಳಿದರು.ನಗರದಲ್ಲಿ ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,

2011ರಲ್ಲಿ ಜಿಲ್ಲೆಯಲ್ಲಿ 1,519 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. 2012ರ ಜನವರಿಯಿಂದ ಡಿಸೆಂಬರ್ ಅಂತ್ಯಕ್ಕೆ ಪ್ರಕರಣಗಳ ಸಂಖ್ಯೆ 821ಕ್ಕೆ ಇಳಿದಿತ್ತು. 2013ರ ಜನೆವರಿಯಿಂದ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ 101 ಪ್ರಕರಣಗಳು ದಾಖಲಾಗಿವೆ ಎಂದರು.ಕಳೆದ ವರ್ಷ ನಗರಸಭೆಯ ಸಹಕಾರ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನೆರವಿನೊಂದಿಗೆ ಸೊಳ್ಳೆ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಯತ್ನವೇ ಮಲೇರಿಯಾ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಿದರು. ಜಿಲ್ಲೆಯಲ್ಲಿ 2011ರಲ್ಲಿ 88 ಡೆಂಗೆ ಪ್ರಕರಣಗಳು ವರದಿಯಾಗಿವೆ. 76 ಪ್ರಕರಣಗಳು ಶಂಕಾಸ್ಪದವಾಗಿದ್ದರೆ, 12 ಪ್ರಕರಣಗಳು ದೃಢಪಟ್ಟಿವೆ. ಡೆಂಗೆಯಿಂದಾಗಿ 1 ಸಾವು ಸಂಭವಿಸಿದೆ ಎಂದರು.2012ರಲ್ಲಿ ಒಟ್ಟು 642 ಡೆಂಗೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 574 ಶಂಕಾಸ್ಪದ ಹಾಗೂ 61 ದೃಢಪಟ್ಟಿದ್ದರೆ, 2 ಸಾವು ಸಂಭವಿಸಿವೆ. 2013ರ ಜನೆವರಿಯಿಂದ ಮಾರ್ಚ್ 31ರ ವರೆಗೆ ಜಿಲ್ಲೆಯಲ್ಲಿ  33 ಡೆಂಗೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 32 ಶಂಕಾಸ್ಪದ ಹಾಗೂ 1 ಪ್ರಕರಣ ದೃಢಪಟ್ಟಿದೆ. ಈ ವರ್ಷ ಸಾವು ಸಂಭವಿಸಿಲ್ಲ ಎಂದು ವಿವರಿಸಿದರು. ವಾಂತಿ- ಭೇದಿ ಪ್ರಕರಣಗಳು 2012ರಲ್ಲಿ 211 ವರದಿಯಾಗಿದ್ದು, ಸಾವು ಸಂಭವಿಸಿಲ್ಲ.2012ರಲ್ಲಿ 4,270 ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು, ಸಾವು ಸಂಭವಿಸಲ್ಲ. 2013ರ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ 861 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಹಾಗೆಯೇ 2012ರಲ್ಲಿ 287 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, 4 ಸಾವು ಸಂಭವಿಸಿವೆ. 2013ರ ಮಾರ್ಚ್ ವರೆಗೆ ಹಾವು ಕಡಿತದ 30 ಪ್ರಕರಣಗಳು ವರದಿಯಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ ಎಂದರು.ಕ್ರಮ: ಜಿಲ್ಲೆಯಲ್ಲಿರುವ ನಕಲಿ ವೈದ್ಯರ ಪತ್ತೆಗೆ ಇಲಾಖೆಯ ಪ್ರಯತ್ನ ಮುಂದುವರೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಾದೇವ ಸ್ವಾಮಿ ಹೇಳಿದರು. ಗಂಗಾವತಿ, ಕುಷ್ಟಗಿ ಭಾಗದಲ್ಲಿ ದಾಳಿ ನಡೆಸಿ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಲಾಗಿದೆ ಎಂದರು.ಐಎಸ್‌ಐ ಮಾರ್ಕ್ ಹೊಂದಿರುವ 5 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಿವೆ. ಐಎಸ್‌ಐ ಪ್ರಮಾಣ ಪತ್ರ ಹೊಂದಿರದ 16 ಘಟಕಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಅದರಲ್ಲಿ 5 ಘಟಕದವರು ಇಲಾಖೆ ವಿರುದ್ಧ ಧಾರವಾಡದಲ್ಲಿರುವ ಹೈಕೋರ್ಟ್‌ನ ಸಂಚಾರಿ ಪೀಠದಲ್ಲಿ ದಾವೆ ಹೂಡಿದ್ದರು.ವಿಚಾರಣೆ ನಂತರ, ಐಎಸ್‌ಐ ಪ್ರಮಾಣಪತ್ರ ಹೊಂದಿರದ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುವಂತೆ ಸಂಚಾರಿ ಪೀಠವು ಆದೇಶ ನೀಡಿದ ಹಿನ್ನೆಲೆಯಲ್ಲಿ ಪ್ಯೂರ್, ಶಿರಡಿ, ಅಕ್ವಾ ಮಿನರಲ್ಸ್ (ರಿಯಾಜ್) ಎಂಬ ಘಟಕಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)