ಶುಕ್ರವಾರ, ಮೇ 14, 2021
30 °C

ಕೊಪ್ಪಳ ಉಪ ಚುನಾವಣೆ-ಇಲ್ಲಿ ಗೆದ್ದವರ ಪಕ್ಷಕ್ಕೆ ಅಲ್ಲಿ ಅಧಿಕಾರ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಚಾಮರಾಜನಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವಿಚಿತ್ರ ನಂಬಿಕೆ ಪ್ರಸಿದ್ಧ. ಅದೇ ರೀತಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹ ವಿಚಿತ್ರ ನಂಬಿಕೆಯೊಂದು ಚಾಲ್ತಿಯಲ್ಲಿದೆ.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯ ಪಕ್ಷ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ  ಹಿಡಿದಿರುವುದಿಲ್ಲ ಎಂಬುದೇ ಕ್ಷೇತ್ರದ ಜನರ ನಂಬಿಕೆಯಾಗಿದ್ದು, ಈ ಉಪಚುನಾವಣೆಯಲ್ಲಿ ಸಹ ಜನರು ಈ ವಿಷಯವಾಗಿಯೇ ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನರು ಇಂತಹ ನಿರ್ಧಾರಕ್ಕೆ ಬರಲು ಈ ಹಿಂದಿನ 5-6 ಚುನಾವಣೆಗಳ ಫಲಿತಾಂಶವೇ ಕಾರಣ ಎಂಬುದು ಸ್ಪಷ್ಟ.1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ದಿವಟರ ಆಯ್ಕೆಗೊಂಡಿದ್ದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಚುನಾಯಿತರಾದ ಸಂದರ್ಭದಲ್ಲಿ ಜನತಾ ದಳದ ಸರ್ಕಾರ ಇತ್ತು.ಇನ್ನು, 1999ರಲ್ಲಿ ಜೆಡಿಯುನಿಂದ ಕಣಕ್ಕಿಳಿದ ಸಂಗಣ್ಣ ಕರಡಿ ಜಯಭೇರಿ ಬಾರಿಸಿದಾಗ ಅತ್ತ ಅಧಿಕಾರದಲ್ಲಿ ಕಾಂಗ್ರೆಸ್ ಇತ್ತು. ಈ ಪರಂಪರೆ ಅಲ್ಲಿಗೆ ನಿಲ್ಲಲಿಲ್ಲ.

2004ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷಿಸಿದ ಸಂಗಣ್ಣ ಕರಡಿ ಸೋಲನುಭವಿಸಿದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಬಸವರಾಜ ಹಿಟ್ನಾಳ್ ಶಾಸಕರಾದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ರಚಿಸಿದ್ದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು.2008ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಜೆಡಿಎಸ್‌ನಿಂದ ಸಂಗಣ್ಣ ಕರಡಿ ಹಾಗೂ ಕೆ.ಬಸವರಾಜ ಹಿಟ್ನಾಳ್ ಸ್ಪರ್ಧಿಸಿದರು. ಆದರೆ, ಮತದಾರರು ಜೆಡಿಎಸ್‌ನ ಸಂಗಣ್ಣ ಕರಡಿ ಅವರ ಕೈಹಿಡಿದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.ಒಟ್ಟಾರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು ಶಾಸಕರಾಗುವ ಅಭ್ಯರ್ಥಿಯ ಪಕ್ಷ ಮಾತ್ರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವದಿಲ್ಲ. ಹೀಗಾಗಿ ಈ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುವುದೇ ಇಲ್ಲ ಎಂಬ ಅಭಿಪ್ರಾಯಕ್ಕೆ ಕ್ಷೇತ್ರದ ಮತದಾರರು ಬಂದಿದ್ದಾರೆ.ಈಗ ವಿಧಾನಸಭಾ ಕ್ಷೇತ್ರದ ಮತದಾರರ ಮೇಲೆ ಉಪಚುನಾವಣೆ ಹೇರಲಾಗಿದೆ.  ಸಂಗಣ್ಣ ಕರಡಿ ಗೆದ್ದರೆ ಇದೇ ಮೊದಲ ಬಾರಿಗೆ ಕ್ಷೇತ್ರದ ಶಾಸಕರು ಪ್ರತಿನಿಧಿಸುವ ಪಕ್ಷ ಆಡಳಿತದಲ್ಲಿ ಇದ್ದ ಹಾಗಾಗುತ್ತದೆ. ಬೇರೆ ಯಾರೇ ಗೆದ್ದರೂ ಮತ್ತೆ ಇತಿಹಾಸ ಪುನರಾವರ್ತನೆಯಾದಂತೆ.ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈ ಬಾರಿ ಎರಡು ವೈಶಿಷ್ಟ್ಯಗಳಿವೆ. ಇದು ಕ್ಷೇತ್ರಕ್ಕೆ ನಡೆಯುತ್ತಿರುವ ಮೊದಲ ಉಪಚುನಾವಣೆ ಎಂಬುದು ವಿಶೇಷ.

ಅಲ್ಲದೇ, ವಿರೋಧ ಪಕ್ಷದಲ್ಲಿದ್ದ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಡಳಿತಾರೂಢ ಪಕ್ಷದಿಂದ ಕಣಕ್ಕೆ ಇಳಿದಿರುವುದು ಮತ್ತೊಂದು ವಿಶೇಷ. ಹೀಗಾಗಿ ಈ ಉಪ ಚುನಾವಣೆಯ ಫಲಿತಾಂಶ ಎಲ್ಲ ದೃಷ್ಟಿಯಿಂದಲೂ ಕುತೂಹಲಕ್ಕೆ ಕಾರಣವಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.