ಭಾನುವಾರ, ಜೂನ್ 13, 2021
26 °C
ಮೋದಿ ಅಲೆ ಬರೀ ಭ್ರಮೆ; ಹಸನ್‌ಸಾಬ್‌

ಕೊಪ್ಪಳ: ಕಾಂಗ್ರೆಸ್‌ ಗೆಲುವು ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ:ಲೋಕಸಭೆ ಚುನಾವಣೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಸವರಾಜ ಹಿಟ್ನಾಳ ಅವರನ್ನು ಆಯ್ಕೆ ಮಾಡಿದ ಕಾಂಗ್ರೆಸ್‌ ಹೈಕಮಾಂಡ್‌ ಕ್ರಮ ಅತ್ಯಂತ ಸೂಕ್ತವಾಗಿದೆ ಎಂದು ಇಲ್ಲಿಯ ಮಾಜಿ ಶಾಸಕ ಮತ್ತು ಕಾಂಗ್ರೆಸ್‌ ಮುಖಂಡ ಹಸನ್‌ಸಾಬ್‌ ದೊಟಿಹಾಳ ಹೇಳಿದರು.ಭಾನುವಾರ ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಸಹ ಟಿಕೆಟ್‌ಗೆ ಬಹಳಷ್ಟು ಪ್ರಯತ್ನಿಸಿದ್ದರಾದರೂ. ಆದರೆ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಆಸಕ್ತಿ ವಹಿಸಿ ಅಂತಿಮವಾಗಿ ಹಿಟ್ನಾಳ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಲು ನಿರ್ಧರಿಸಿದರು. ಕಾಂಗ್ರೆಸ್‌ನಿಂದ ಯಾರೇ ನಿಂತರೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂದರು.ಅಲ್ಲದೇ ಈ ಚುನಾವಣೆಯಲ್ಲಿ ಮೋದಿ ಅಲೆ ಎಂಬುದು ಕೇವಲ ಆ ಪಕ್ಷದ ಭ್ರಮೆ, ಸ್ವತಃ ಆರ್‌ಎಸ್‌ಎಸ್‌ನವರೇ ಮೋದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಾಜಿ ಶಾಸಕ ವ್ಯಂಗ್ಯವಾಡಿದರು.ತಮ್ಮ ಹಾಗೂ ಅಮರೇಗೌಡ ಬಯ್ಯಾಪುರ ಅವರ ನಡುವಿನ ಮನಸ್ತಾಪಕ್ಕೆ ಸಂಬಂಧಿಸಿದಂತೆ ವಿವರಿಸಿದ ಹಸನ್‌ಸಾಬ್‌, ನನ್ನ ನಿಷ್ಠೆ ಕಾಂಗ್ರೆಸ್‌ ಪಕ್ಷಕ್ಕೆ ಹೊರತು ಬೇರೆ ಯಾರಿಗೂ ಅಲ್ಲ, ಅಲ್ಲದೇ ಬಯ್ಯಾಪುರ್‌ಗೆ ಭೋಪರಾಕ್‌ ಹೇಳುವಂಥ ಅವಶ್ಯಕತೆ ಇಲ್ಲ. ನನ್ನ ಮೇಲೆ ಪಕ್ಷದ ಉಪಕಾರ ಇದ್ದು ಅದರ ಋಣ ತೀರಿಸುತ್ತೇನೆ ಎಂದರು.ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಹೋದಲ್ಲೆಲ್ಲ ಭಾಷಣ ಮಾಡಿದೆ, ಆದರೂ ರಾಜಕೀಯ ಹಗೆ ಸಾಧಿಸಲು ತಮ್ಮ ವಿರುದ್ಧ ಪಕ್ಷಕ್ಕೆ ದೂರು ನೀಡಿದ ಬಯ್ಯಾಪುರ, ಗೆದ್ದಾಗ ಮತ್ತು ಸೋತಾಗಲೂ ಅಪಪ್ರಚಾರ ನಡೆಸುವ ತಮ್ಮ ಜಾಯಮಾನ ಮುಂದುವರೆಸಿದ್ದಾರೆ ಎಂದು ಛೇಡಿಸಿದರು.ತಮ್ಮ ಮತ್ತು ಬಯ್ಯಾಪುರ ನಡುವಿನ ಭಿನ್ನಾಭಿಪ್ರಾಯ ಏನೇ ಇದ್ದರೂ ಅದು ಪಕ್ಷದ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಿಲ್ಲ, ಎಲ್ಲ ಕಾರ್ಯಕರ್ತರೂ ನಮ್ಮವರೇ ಎಂದು ಭಾವಿಸಿದ್ದೇನೆ. ಬಯ್ಯಾಪುರ ಅವರಂತೆ ದ್ವೇಷದ ರಾಜಕಾರಣ ಮಾಡದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.