ಸೋಮವಾರ, ಏಪ್ರಿಲ್ 12, 2021
25 °C

ಕೊಪ್ಪಳ: ಖೋಟಾ ನೋಟುಗಳ ಭರಾಟೆ

ಪ್ರಜಾವಾಣಿ ವಾರ್ತೆ / ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ನಗರದಲ್ಲಿ 500 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆ ಖೋಟಾ ನೋಟುಗಳ ಚಲಾವಣೆ ಭರದಿಂದ ಸಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿಯೇ ಸುಮಾರು 10ಕ್ಕೂ ಹೆಚ್ಚು ಖೋಟಾ ನೋಟುಗಳು ಪತ್ತೆಯಾಗಿವೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡುವ ವ್ಯವಸ್ಥಿತ ಜಾಲ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ಮಾತುಗಳು ಬಲವಾಗಿ ಕೇಳಿ  ಬರುತ್ತಿವೆ.

`ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಗೆ ಕೆಲಸ ನಿಮತ್ತ ತೆರಳಿದ್ದೆ. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಹಣ ಜಮಾ ಮಾಡಲು ಬಂದಿದ್ದರು. ಆದರೆ, 5ಕ್ಕೂ ಹೆಚ್ಚು ಜನರಿಗೆ ಬ್ಯಾಂಕ್ ಸಿಬ್ಬಂದಿ ಖೋಟಾ ನೋಟುಗಳನ್ನು ವಾಪಸು ನೀಡಿದ್ದು ಬ್ಯಾಂಕ್‌ನಲ್ಲಿ ಚರ್ಚೆಗೆ ಕಾರಣವಾಗಿತ್ತು. ಗ್ರಾಹಕರಲ್ಲಿ ಆತಂಕವನ್ನೂ ಮೂಡಿಸಿತ್ತು~ ಎಂದು ರಾಜಾ ಬಕ್ಷಿ ಎಂಬ ಗ್ರಾಹಕರು `ಪ್ರಜಾವಾಣಿ~ಗೆ ತಿಳಿಸಿದರು.

ಈಗ ಸಾಲು-ಸಾಲು ಹಬ್ಬಗಳು ಬರುತ್ತವೆ. ಶ್ರಾವಣ ಮಾಸ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ವಿಧಿಗಳು ನೆರವೇರುತ್ತವೆ. ಆ. 20ರಂದು ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬ. ಈ ಸಂದರ್ಭದಲ್ಲಿ ಬಂಧುಗಳಿಗೆ ಉಡುಗೊರೆ ನೀಡಲು, ಮಕ್ಕಳಿಗಾಗಿ ಬಟ್ಟೆ-ಬರೆ ಖರೀದಿ ಜೋರಾಗಿಯೇ ಇರುತ್ತದೆ. ಇದೇ ಅವಕಾಶವನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲಾಗುತ್ತದೆ ಎಂದು ಅಭಿಪ್ರಾಯಟ್ಟರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಖೊಟಾ ನೋಟುಗಳ ಚಲಾವಣೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇತ್ತೀಚೆಗೆ ಬ್ಯಾಂಕುಗಳಲ್ಲಿ ಖೋಟಾ ನೋಟು ಪತ್ತೆ ಹಚ್ಚುವ ಯಂತ್ರಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಖೋಟಾ ನೋಟುಗಳ ಚಲಾವಣೆ ಗೊತ್ತಾಗುತ್ತಿದೆ. ಆದರೆ, ಖೋಟಾ ನೋಟುಗಳು ಪತ್ತೆಯಾದ ನಂತರ ಯಾವುದೇ ಕಠಿಣ ಕ್ರಮ ಜರುಗುತ್ತಿಲ್ಲ. ಹೀಗಾಗಿ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳುತ್ತಿಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.

ಖೊಟಾ ನೋಟುಗಳು ಸಿಕ್ಕಾಗ ಬಹುತೇಕ ಸಂದರ್ಭಗಳಲ್ಲಿ ಅಮಾಯಕ ಗ್ರಾಹಕರೇ ಸಿಕ್ಕಿ ಬೀಳುತ್ತಾರೆ. ಹೀಗಾಗಿ ಕ್ರಮ ಕೈಗೊಳ್ಳುವುದು ಸಹ ಕಷ್ಟವಾಗುತ್ತದೆ ಎಂದೂ ಹೇಳುತ್ತಾರೆ.

ಜಾಗೃತಿ ಅಗತ್ಯ: ಕರೆನ್ಸಿ ನೋಟುಗಳನ್ನು ಪಡೆಯುವಾಗ ಪ್ರತಿಯೊಬ್ಬರು ಸರಿಯಾಗಿ ಪರಿಶೀಲನೆ ನಡೆಸಿದರೆ ಈ ಖೋಟಾ ನೋಟುಗಳ ಚಲಾವಣೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಕೆ.ವಿ.ಆರ್.ಮೂರ್ತಿ ಪ್ರತಿಪಾದಿಸುತ್ತಾರೆ.

ಖೋಟಾ ನೋಟುಗಳನ್ನು ಮುದ್ರಿಸಲು ಬಳಸುವ ಕಾಗದದ ಗುಣಮಟ್ಟ ಕಳಪೆಯಾಗಿರುತ್ತದೆ. ಅಸಲಿ ನೋಟು ಹಾಗೂ ಖೋಟಾ ನೋಟನ್ನು ಸ್ಪರ್ಶಿಸಿದಾಗ, ತೀಡಿದಾಗ ಈ ವ್ಯತ್ಯಾಸ ಕಾಣಬಹುದು. ಅಲ್ಲದೇ, ನೋಟ್‌ನಲ್ಲಿ ಅಳವಡಿಸಲಾಗಿರುವ ದಾರದ ಜಾಗೆ ಸಹ ಖೋಟಾ ನೋಟನ್ನು ಪತ್ತೆ ಹಚ್ಚಲು ನೆರವಾಗುತ್ತದೆ ಎಂದು ಹೇಳುತ್ತಾರೆ.

ಮತ್ತೊಂದು ಮಹತ್ವದ ಅಂಶವೆಂದರೆ, ನೋಟುಗಳ ಎಡ ಮೇಲ್ಭಾಗದಲ್ಲಿ ಡೈಮಂಡ್ ಆಕಾರದ ಉಬ್ಬು ಕೆತ್ತನೆ (ಇಂಟ್ಯಾಲ್ಯೊ) ಇರುತ್ತದೆ. ಈ ಭಾಗವನ್ನು ಸ್ಪರ್ಶಿಸಿಯೇ ಕುರುಡರು ನೋಟುಗಳ ಮುಖಬೆಲೆಯನ್ನು ಪತ್ತೆ ಹಚ್ಚುತ್ತಾರೆ. ಇಂತಹ ಗುರುತಿನ ವ್ಯವಸ್ಥೆ ಖೊಟಾ ನೊಟುಗಳಲ್ಲಿ ಮಾಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.